ಕೀರ್ತನೆಗಳು 102 - ಕನ್ನಡ ಸತ್ಯವೇದವು J.V. (BSI)ದುಃಖಿತನಾಗಿ ಯೆಹೋವನ ಮುಂದೆ ತನ್ನ ಚಿಂತೆಗಳನ್ನು ಹೇಳಿಕೊಳ್ಳುವ ದೀನನ ಪ್ರಾರ್ಥನೆ 1 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳು; ನನ್ನ ಕೂಗು ನಿನಗೆ ಮುಟ್ಟಲಿ. 2 ನನ್ನ ಕಷ್ಟದಲ್ಲಿ ವಿಮುಖನಾಗಬೇಡ; ನನ್ನ ಮೊರೆಗೆ ಕಿವಿಗೊಡು; ನಾನು ಕೂಗಿಕೊಳ್ಳುವ ದಿನದಲ್ಲೇ ಬೇಗನೆ ಸದುತ್ತರವನ್ನು ದಯಪಾಲಿಸು. 3 ನನ್ನ ಜೀವಮಾನವು ಹೊಗೆಯಂತೆ ಮಾಯವಾಗುತ್ತದೆ. ನನ್ನ ಎಲುಬುಗಳು ಕೊಳ್ಳಿಯಂತೆ ಸುಟ್ಟು ಹೋಗುತ್ತವೆ. 4 ನನ್ನ ಹೃದಯವು ಬಿಸಿಲಿನಿಂದ ಬಾಡಿಹೋದ ಹುಲ್ಲಿನಂತಿದೆ; ಊಟವನ್ನು ಮರೆತೆನು. 5 ನಿಟ್ಟುಸುರಿನಿಂದ ನನ್ನಲ್ಲಿ ಎಲುಬು ತೊಗಲು ಮಾತ್ರ ಉಳಿದಿರುತ್ತವೆ. 6 ಅಡವಿಯ ಬಕದಂತಿದ್ದೇನೆ; ಹಾಳೂರಿನ ಗೂಗೆಯಂತಿದ್ದೇನೆ. 7 ನಿದ್ರೆಯಿಲ್ಲದವನಾಗಿ ಮನೆಮಾಳಿಗೆ ಮೇಲಿರುವ ಒಂಟಿಯಾದ ಪಕ್ಷಿಯಂತಿರುತ್ತೇನೆ. 8 ವೈರಿಗಳು ಹಗಲೆಲ್ಲಾ ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಾವೇಶವುಳ್ಳವರು ಯಾರನ್ನಾದರೂ ಶಪಿಸುವಾಗ ನನ್ನನ್ನು ದೃಷ್ಟಾಂತಮಾಡಿ ಶಪಿಸುತ್ತಾರೆ. 9 ಬೂದಿಯೇ ನನಗೆ ಆಹಾರವಾಯಿತು; ನನ್ನ ಪಾನದಲ್ಲಿ ಕಣ್ಣೀರು ವಿುಶ್ರವಾಯಿತು. 10 ಇದಕ್ಕೆಲ್ಲಾ ನಿನ್ನ ಕೋಪರೌದ್ರಗಳೇ ಕಾರಣ. ನೀನು ನನ್ನನ್ನು ಎತ್ತಿ ಒಗೆದುಬಿಟ್ಟಿದ್ದೀಯಲ್ಲಾ! 11 ನನ್ನ ಜೀವಮಾನವು ಸಂಜೆಯ ನೆರಳಿನಂತಿದೆ; ನಾನು ಬಾಡಿದ ಹುಲ್ಲಿನಂತಿದ್ದೇನೆ. 12 ಯೆಹೋವನೇ, ನೀನಾದರೋ ಸದಾ ಸಿಂಹಾಸನಾರೂಢನಾಗಿರುವಿ; ನಿನ್ನ ನಾಮವು ತಲತಲಾಂತರಕ್ಕೂ ಸ್ಮರಿಸಲ್ಪಡುವದು. 13 ನೀನು ಎದ್ದು ಚೀಯೋನನ್ನು ಕರುಣಿಸುವಿ. ಅದಕ್ಕೆ ಕೃಪೆತೋರಿಸುವ ಸಮಯ ಇದೇ; ನಿಯವಿುತಕಾಲವು ಬಂದದೆ. 14 ಅದು ಕಲ್ಲುಕುಪ್ಪೆಯಾಗಿ ಹೋಗಿದ್ದರೂ ನಿನ್ನ ಸೇವಕರಿಗೆ ಅತಿಪ್ರಿಯವಾಗಿದೆ; ಅದರ ಧೂಳಿಗೆ ಅವರು ಮರಗುತ್ತಾರೆ. 15 ಯೆಹೋವನು ಗತಿಹೀನರ ಮೊರೆಯನ್ನು ತಿರಸ್ಕರಿಸದೆ ನೆರವೇರಿಸಿದನೆಂದೂ 16 ಆತನು ಮಹಿಮೆಯಲ್ಲಿ ಬಂದು ಚೀಯೋನನ್ನು ತಿರಿಗಿ ಕಟ್ಟಿಸಿದನೆಂದೂ 17 ಜನಾಂಗಗಳು ಯೆಹೋವ ಎಂಬ ನಿನ್ನ ನಾಮಕ್ಕೂ ಭೂರಾಜರು ನಿನ್ನ ಪ್ರತಾಪಕ್ಕೂ ಭಯಪಡುವರು. 18 ಇದು ಮುಂದಣ ಸಂತಾನದವರಿಗೋಸ್ಕರ ಶಾಸನವಾಗಿರಲಿ. ಮುಂದೆ ಹುಟ್ಟುವ ಪ್ರಜೆಯು ಯಾಹುವನ್ನು ಕೊಂಡಾಡುತ್ತಾ - 19 ಯೆಹೋವನು ತನ್ನ ಮಹೋನ್ನತವಾದ ಪವಿತ್ರಸ್ಥಾನದಿಂದ ಕೆಳಕ್ಕೆ ನೋಡಿದ್ದಾನೆ; ಆತನು ಪರಲೋಕದಿಂದ ಭೂವಿುಯನ್ನು ದೃಷ್ಟಿಸಿದ್ದಾನೆ. 20 ಸೆರೆಯವರ ಗೋಳಾಟವನ್ನು ಲಕ್ಷಿಸಿ ಮರಣಪಾತ್ರರನ್ನು ಬಿಡಿಸಿ 21 ಅವರು ಚೀಯೋನಿನಲ್ಲಿ ಯೆಹೋವನಾಮವನ್ನು ವರ್ಣಿಸುವಂತೆಯೂ ಯೆರೂಸಲೇವಿುನಲ್ಲಿ ತನ್ನ ಕೀರ್ತನೆಯನ್ನು ಹಾಡುವಂತೆಯೂ ಮಾಡಿದ್ದಾನೆ. 22 ಜನಾಂಗಗಳೂ ರಾಜ್ಯಗಳೂ ಕೂಡಿಬಂದು ಇವರೊಡನೆ ಯೆಹೋವನನ್ನು ಸೇವಿಸುತ್ತವೆ ಎಂದು ಹೇಳುವದು. 23 ಆತನು ದಾರಿಯಲ್ಲಿಯೇ ನನ್ನ ಬಲವನ್ನು ಕುಂದಿಸಿದ್ದಾನೆ; 24 ನನ್ನ ಆಯುಷ್ಯವನ್ನು ಕಡಿಮೆಮಾಡಿ ಬಿಟ್ಟಿದ್ದಾನೆ. ಆದದರಿಂದ - ನನ್ನ ದೇವರೇ, ಅರ್ಧಾಯುಷ್ಯದಲ್ಲಿಯೇ ನನ್ನನ್ನು ಒಯ್ಯಬೇಡ; ನಿನ್ನ ವರುಷಗಳು ತಲತಲಾಂತರಕ್ಕೂ ಇರುತ್ತವೆ. 25 ಆದಿಯಲ್ಲಿ ನೀನು ಭೂವಿುಗೆ ಅಸ್ತಿವಾರವನ್ನು ಹಾಕಿದಿ; ಗಗನಮಂಡಲವು ನಿನ್ನ ಕೈಕೆಲಸವಾಗಿದೆ. 26 ಅವು ನಾಶವಾಗುವವು; ಆದರೆ ನೀನು ಶಾಶ್ವತವಾಗಿರುತ್ತೀ. ಅವೆಲ್ಲವೂ ವಸ್ತ್ರದಂತೆ ಹಳೆಯವಾಗುವವು. ಉಡುಪಿನಂತೆ ಅವುಗಳನ್ನು ಬದಲಿಸುತ್ತೀ; ಅವು ಮಾರ್ಪಡುವವು. 27 ನೀನಾದರೋ ಏಕರೀತಿಯಾಗಿದ್ದೀ; ನಿನ್ನ ವರುಷಗಳು ಮುಗಿದುಹೋಗುವದಿಲ್ಲ. 28 ನಿನ್ನ ಸೇವಕರ ಮಕ್ಕಳು ಬಾಳುವರು. ಅವರ ಸಂತತಿಯವರು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರುವರು ಎಂದು ಮೊರೆಯಿಡುತ್ತೇನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India