Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಸ್ತೇರಳು 7 - ಕನ್ನಡ ಸತ್ಯವೇದವು J.V. (BSI)


ಹಾಮಾನನಿಗೆ ಮರಣಶಿಕ್ಷೆಯಾದದ್ದೂ ಅವನ ಸ್ಥಾನಾಧಿಕಾರಗಳು ಮೊರ್ದೆಕೈಗೆ ಪ್ರಾಪ್ತವಾದದ್ದೂ

1 ಅರಸನು ಹಾಮಾನನೊಡನೆ ಎಸ್ತೇರಳ ಗೃಹಕ್ಕೆ ಔತಣಕ್ಕೋಸ್ಕರ ಬಂದನು.

2 ಅವನು ಈ ಎರಡನೆಯ ದಿನದಲ್ಲಿಯೂ ದ್ರಾಕ್ಷಾರಸಪಾನಮಾಡುತ್ತಿರುವಾಗ ಎಸ್ತೇರಳಿಗೆ - ಎಸ್ತೇರ್‍ರಾಣಿಯೇ, ನಿನ್ನ ವಿಜ್ಞಾಪನೆ ಯಾವದು, ಹೇಳು; ಅದನ್ನು ನೆರವೇರಿಸುವೆನು. ನೀನು ನನ್ನ ಅರ್ಧರಾಜ್ಯವನ್ನು ಕೇಳಿಕೊಂಡರೂ ಸರಿಯೇ, ಅದನ್ನು ನಿನಗೆ ಕೊಡುವೆನು ಎಂದು ಹೇಳಿದನು.

3 ಆಗ ಎಸ್ತೇರ್‍ರಾಣಿಯು - ಅರಸನು ನನ್ನ ಮೇಲೆ ಕಟಾಕ್ಷವಿಟ್ಟು ಸಮ್ಮತಿಸುವದಾದರೆ ನನ್ನ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಲಾಲಿಸಿ ನನ್ನ ಜೀವವನ್ನೂ ಜನಾಂಗವನ್ನೂ ಉಳಿಯಗೊಡಿಸಬೇಕು.

4 ಜನರು ನಮ್ಮನ್ನು ಕೊಂದು ಸಂಹರಿಸಿ ನಿರ್ನಾಮಗೊಳಿಸುವ ಹಾಗೆ ನಾವು ಮಾರಲ್ಪಟ್ಟೆವು. ದಾಸದಾಸಿಯರಾಗುವದಕ್ಕೆ ಮಾರಲ್ಪಟ್ಟಿದ್ದರೆ ಆ ಕಷ್ಟದ ವಿಷಯದಲ್ಲಿ ರಾಜನನ್ನು ತೊಂದರೆ ಪಡಿಸುವದು ಯೋಗ್ಯವಲ್ಲವೆಂದು ಸುಮ್ಮನಿರುತ್ತಿದ್ದೆನು ಎಂದು ಉತ್ತರಕೊಟ್ಟಳು.

5 ಅಹಷ್ವೇರೋಷ್‍ರಾಜನು ಎಸ್ತೇರ್‍ರಾಣಿಯನ್ನು - ಇಂಥ ದುಷ್ಕೃತ್ಯದ ಮೇಲೆ ಮನಸ್ಸಿಟ್ಟವನು ಯಾವನು? ಅವನೆಲ್ಲಿ ಎಂದು ಕೇಳಲು

6 ಆಕೆಯು - ನಮ್ಮನ್ನು ಬಾಧಿಸಬೇಕೆಂದಿರುವ ಹಗೆಗಾರನು ಈ ದುಷ್ಟ ಹಾಮಾನನೇ ಅಂದಳು. ಇದನ್ನು ಕೇಳಿದೊಡನೆ ಹಾಮಾನನು ಅರಸನ ಮತ್ತು ರಾಣಿಯ ಮುಂದೆ ಬೆಪ್ಪಾದನು.

7 ಅರಸನು ರೌದ್ರಾವೇಶನಾಗಿ ದ್ರಾಕ್ಷಾರಸಪಾನಮಾಡುವದನ್ನು ಬಿಟ್ಟೆದ್ದು ಅರಮನೆಯ ತೋಟಕ್ಕೆ ಹೋದನು. ಹಾಮಾನನಾದರೋ ಅರಸನಿಂದ ತನಗೆ ಕೇಡು ಸಿದ್ಧವಾಯಿತೆಂದು ತಿಳಿದು ಎಸ್ತೇರಳ ಹತ್ತಿರ ತನ್ನ ಪ್ರಾಣ ರಕ್ಷಣೆಯ ನಿವಿುತ್ತವಾಗಿ ಬಿನ್ನಹಮಾಡಲು ನಿಂತುಕೊಂಡನು.

8 ಅರಸನು ಅರಮನೆಯ ತೋಟದಿಂದ ತಾನು ದ್ರಾಕ್ಷಾರಸಪಾನ ಮಾಡಿದ ಗೃಹಕ್ಕೆ ತಿರಿಗಿ ಬಂದು ಎಸ್ತೇರಳು ಒರಗಿಕೊಳ್ಳುವ ಲೋಡಿನ ಮೇಲೆ ಹಾಮಾನನು ಬಿದ್ದುಕೊಂಡಿರುವದನ್ನು ಕಂಡು - ಇವನು ರಾಣಿಯನ್ನು ನನ್ನ ಮುಂದೆಯೇ ಅರಮನೆಯಲ್ಲಿ ಭಂಗಪಡಿಸಲೂ ಬೇಕೆಂದಿರುತ್ತಾನೋ ಅಂದನು. ಅರಸನ ಬಾಯಿಂದ ಈ ಮಾತು ಹೊರಟ ಕೂಡಲೇ ಸೇವಕರು ಹಾಮಾನನ ಮೋರೆಗೆ ಮುಸುಕು ಹಾಕಿದರು.

9 ಇದಲ್ಲದೆ ಅರಸನ ಸೇವೆಮಾಡುತ್ತಿದ್ದ ಕಂಚುಕಿಗಳಲ್ಲೊಬ್ಬನಾದ ಹರ್ಬೋನನು - ಇಗೋ ಈ ಹಾಮಾನನ ಮನೆಯ ಹತ್ತಿರ ಅರಸನ ಪ್ರಾಣರಕ್ಷಣೆಗಾಗಿ ಸಮಾಚಾರವನ್ನು ತಿಳಿಸಿದ ಮೊರ್ದೆಕೈಯನ್ನು ನೇತುಹಾಕಿಸುವದಕ್ಕೆ ಇವನಿಂದ ಸಿದ್ಧಮಾಡಲ್ಪಟ್ಟ ಐವತ್ತು ಮೊಳ ಎತ್ತರವಾದ ಗಲ್ಲು ಮರವಿರುತ್ತದಲ್ಲಾ ಅನ್ನಲು ಅರಸನು - ಇವನನ್ನು ಅದಕ್ಕೆ ನೇತುಹಾಕಿರಿ ಎಂದು ಆಜ್ಞಾಪಿಸಿದನು.

10 ಹಾಮಾನನನ್ನು ಮೊರ್ದೆಕೈಗೋಸ್ಕರ ಸಿದ್ಧಮಾಡಿದ ಗಲ್ಲಿಗೆ ಹಾಕಿದರು. ಅರಸನ ಕೋಪವೂ ಶಾಂತವಾಯಿತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು