Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಸ್ತೇರಳು 6 - ಕನ್ನಡ ಸತ್ಯವೇದವು J.V. (BSI)


ಮೊರ್ದೆಕೈಗೆ ಅರಸನಿಂದ ಮಹಾಘನವುಂಟಾದದ್ದು

1 ಆ ರಾತ್ರಿಯಲ್ಲಿ ಅರಸನಿಗೆ ನಿದ್ರೆ ಬರಲಿಲ್ಲ; ಆದದರಿಂದ ಸ್ಮರಿಸತಕ್ಕ ಪೂರ್ವವೃತ್ತಾಂತಗಳ ಗ್ರಂಥವನ್ನು ಅವನು ತರಿಸಿ ಪಾರಾಯಣಮಾಡಿಸುತ್ತಿರುವಾಗ

2 ಅಹಷ್ವೇರೋಷ್ ರಾಜನನ್ನು ಕೊಲ್ಲಬೇಕೆಂದು ದ್ವಾರಪಾಲಕರಾದ ಬಿಗೆತಾನ್ ತೆರೆಷ್ ಎಂಬಿಬ್ಬರು ರಾಜಕಂಚುಕಿಗಳು ಒಳಸಂಚುಮಾಡಿದ ಸಂಗತಿಯೂ ಅದು ಮೊರ್ದೆಕೈಯ ಮುಖಾಂತರ ಬೈಲಿಗೆ ಬಂದ ಸಂಗತಿಯೂ ಅದರಲ್ಲಿ ಸಿಕ್ಕಿದವು.

3 ಆಗ ಅರಸನು - ಇದಕ್ಕಾಗಿ ಮೊರ್ದೆಕೈಗೆ ಯಾವ ಸ್ಥಾನಮಾನಗಳು ದೊರಕಿದವೆಂದು ವಿಚಾರಿಸಿದಾಗ ಅವನ ಸಾನ್ನಿಧ್ಯಸೇವಕರಾದ ಪರಿವಾರದವರು - ಏನೂ ದೊರಕಲಿಲ್ಲ ಎಂದು ಹೇಳಿದರು.

4 ಅರಸನು - ಪ್ರಾಕಾರದಲ್ಲಿ ಯಾರಿದ್ದಾರೆ ಎಂದು ಕೇಳಿದನು. ಅಷ್ಟರಲ್ಲಿ ಹಾಮಾನನೇ ತಾನು ಸಿದ್ಧಮಾಡಿಸಿದ ಗಲ್ಲಿಗೆ ಮೊರ್ದೆಕೈಯನ್ನು ನೇತುಹಾಕಿಸುವದಕ್ಕೆ ಅರಸನ ಅಪ್ಪಣೆಪಡಕೊಳ್ಳಬೇಕೆಂದು ಅರಮನೆಯ ಹೊರಗಣ ಪ್ರಾಕಾರದಲ್ಲಿ ಬಂದಿದ್ದನು.

5 ಆದದರಿಂದ ರಾಜಸೇವಕರು - ಇಗೋ, ಪ್ರಾಕಾರದಲ್ಲಿ ಹಾಮಾನನಿರುತ್ತಾನೆ ಎಂದು ಬಿನ್ನವಿಸಿದರು. ಆಗ ಅರಸನು - ಅವನು ಒಳಗೆ ಬರಲಿ ಎಂದನು.

6 ಹಾಮಾನನು ಬಂದಾಗ - ಅರಸನು ಯಾವನನ್ನು ಸನ್ಮಾನಿಸಬೇಕೆಂದು ಇಷ್ಟವುಳ್ಳವನಾಗಿರುತ್ತಾನೋ ಅಂಥವನಿಗೆ ಮಾಡತಕ್ಕದ್ದೇನು ಎಂದು ಅವನನ್ನು ಕೇಳಿದನು. ಹಾಮಾನನು - ಅರಸನು ನನ್ನನ್ನಲ್ಲದೆ ಇನ್ನಾರನ್ನು ಸನ್ಮಾನಿಸುವದಕ್ಕೆ ಇಷ್ಟವುಳ್ಳವನಾಗಿರುವನು ಅಂದುಕೊಂಡು

7 ಅರಸನಿಗೆ - ಒಬ್ಬನನ್ನು ಸನ್ಮಾನಿಸಬೇಕೆಂದು ಅರಸನಿಗೆ ಇಷ್ಟವಿದ್ದರೆ

8 ತಾನು ಧರಿಸಿಕೊಳ್ಳುವ ರಾಜವಸ್ತ್ರಗಳನ್ನೂ ಸವಾರಿಮಾಡುವ ಪಟ್ಟದ ಕುದುರೆಯನ್ನೂ ತರಿಸಿ

9 ಆ ವಸ್ತ್ರಗಳನ್ನೂ ಕುದುರೆಯನ್ನೂ ಪ್ರಧಾನರಾದ ಅರಸನ ಸರದಾರರಲ್ಲೊಬ್ಬನ ವಶಕ್ಕೆ ಕೊಟ್ಟು ಅರಸನು ಸನ್ಮಾನಿಸಬೇಕೆಂದಿರುವ ಪುರುಷನಿಗೆ ಆ ರಾಜವಸ್ತ್ರಗಳನ್ನು ಧಾರಣೆಮಾಡಿಸಿ ಅವನನ್ನು ಆ ಕುದುರೆಯ ಮೇಲೆ ಕುಳ್ಳಿರಿಸಿ ಪಟ್ಟಣದ ಮಧ್ಯದಲ್ಲಿ ಮೆರವಣಿಗೆಮಾಡಿಸುತ್ತಾ ಅವನ ಮುಂದೆ - ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ ಎಂದು ಪ್ರಕಟಣೆಮಾಡಿಸಬೇಕು ಎಂದು ಹೇಳಿದನು.

10 ಕೂಡಲೆ ಅರಸನು ಹಾಮಾನನಿಗೆ - ನೀನು ಹೇಳಿದ ವಸ್ತ್ರಗಳನ್ನೂ ಕುದುರೆಯನ್ನೂ ಬೇಗನೆ ತೆಗೆದುಕೊಂಡು ಬಂದು ಅರಮನೆಯ ಬಾಗಲಿನಲ್ಲಿ ಕೂತಿರುವ ಮೊರ್ದೆಕೈ ಎಂಬ ಯೆಹೂದ್ಯನಿಗೆ ಹಾಗೆಯೇ ಮಾಡು; ನೀನು ಹೇಳಿದವುಗಳಲ್ಲಿ ಒಂದನ್ನೂ ನೆರವೇರಿಸದೆ ಬಿಡಬೇಡ ಎಂದು ಅಪ್ಪಣೆಮಾಡಿದನು.

11 ಹಾಮಾನನು ಆ ವಸ್ತ್ರಗಳನ್ನೂ ಕುದುರೆಯನ್ನೂ ತೆಗೆದುಕೊಂಡು ಬಂದು ಮೊರ್ದೆಕೈಯನ್ನು ಭೂಷಿಸಿ ಪಟ್ಟಣದ ಮಧ್ಯದಲ್ಲಿ ಮೆರವಣಿಗೆಮಾಡಿಸಿ ಅವನ ಮುಂದೆ - ಅರಸನು ಸನ್ಮಾನಿಸಬೇಕೆಂದಿರುವವನನ್ನು ಗೌರವಿಸುವ ರೀತಿಯು ಇದೇ ಎಂದು ಪ್ರಕಟಣೆ ಮಾಡಿಸಿದನು.

12 ಮೊರ್ದೆಕೈಯು ತಿರಿಗಿ ಅರಮನೆಯ ಬಾಗಲಿಗೆ ಹೋದನು. ಹಾಮಾನನಾದರೋ ಶೋಕಾರ್ತನಾಗಿ ಮೋರೆಮುಚ್ಚಿಕೊಂಡು ಶೀಘ್ರವಾಗಿ ಮನೆಗೆ ಹೋಗಿ

13 ತನ್ನ ಹೆಂಡತಿಯಾದ ಜೆರೆಷಳ ಮತ್ತು ಎಲ್ಲಾ ಆಪ್ತರ ಮುಂದೆ ತನಗೆ ಸಂಭವಿಸಿದ್ದನ್ನೆಲ್ಲಾ ತಿಳಿಸಿದನು. ಆಗ ಅವನ ಪಂಡಿತರೂ ಹೆಂಡತಿಯೂ ಅವನಿಗೆ - ಯಾವನ ಮುಂದೆ ನಿನ್ನ ಪತನವು ಪ್ರಾರಂಭವಾಯಿತೋ ಆ ಮನುಷ್ಯನು ಯೆಹೂದಸಂತಾನದವನಾಗಿದ್ದರೆ ನೀನು ಗೆಲ್ಲಲಾರಿ, ಅವನ ಮುಂದೆ ಬಿದ್ದು ಹಾಳಾಗುವಿ ಅಂದರು.

14 ಅವರು ಇನ್ನೂ ಅವನೊಡನೆ ಮಾತಾಡುತ್ತಿರುವಾಗಲೇ ರಾಜಕಂಚುಕಿಗಳು ಬಂದು ಎಸ್ತೇರಳು ಮಾಡಿಸಿರುವ ಔತಣಕ್ಕೆ ಬೇಗಬರಬೇಕೆಂದು ಹಾಮಾನನನ್ನು ಕರೆದರು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು