ಎಸ್ತೇರಳು 4 - ಕನ್ನಡ ಸತ್ಯವೇದವು J.V. (BSI)ಅರಸನ ಹತ್ತಿರ ಹೋಗಿ ಯೆಹೂದ್ಯರಿಗೋಸ್ಕರ ಬಿನ್ನಹಮಾಡುವದಕ್ಕೆ ಮೊರ್ದೆಕೈಯು ಎಸ್ತೇರಳನ್ನು ಸಮ್ಮತಿಪಡಿಸಿದ್ದು 1 ಮೊರ್ದೆಕೈಯು ನಡೆದದ್ದನ್ನೆಲ್ಲಾ ಕೇಳಿದಾಗ ಬಟ್ಟೆಗಳನ್ನು ಹರಕೊಂಡು ಗೋಣಿತಟ್ಟನ್ನು ಕಟ್ಟಿಕೊಂಡು ಬೂದಿಯನ್ನು ಹಾಕಿಕೊಂಡು ಪಟ್ಟಣದ ಮಧ್ಯದಲ್ಲಿ ಹೋಗುತ್ತಾ ದುಃಖಾತಿಶಯದಿಂದ ಗೋಳಾಡಿ 2 ಅರಮನೆಯ ಹೆಬ್ಬಾಗಲಿನ ಮುಂದೆ ಬಂದನು; ಗೋಣಿತಟ್ಟು ಕಟ್ಟಿಕೊಂಡವರು ಒಳಗೆ ಹೋಗಬಾರದೆಂದು ಅಪ್ಪಣೆಯಾಗಿತ್ತು. 3 ಯಾವ ಯಾವ ಸಂಸ್ಥಾನಗಳಲ್ಲಿ ಅರಸನ ಆಜ್ಞೆಯೂ ನಿರ್ಣಯವೂ ಪ್ರಕಟವಾದವೋ ಅಲ್ಲೆಲ್ಲಾ ಯೆಹೂದ್ಯರೊಳಗೆ ಮಹಾದುಃಖವೂ ಉಪವಾಸರೋದನ ಪ್ರಲಾಪಗಳೂ ಉಂಟಾದವು. ಅನೇಕರು ಗೋಣಿತಟ್ಟನ್ನು ಹಾಸಿ ಬೂದಿಹಾಕಿಕೊಂಡು ಅದರ ಮೇಲೆ ಕೂತರು. 4 ಎಸ್ತೇರಳ ಸೇವಕಿಯರೂ ಕಂಚುಕಿಗಳೂ ರಾಣಿಯಾದ ಆಕೆಯ ಬಳಿಗೆ ಬಂದು ಅದನ್ನು ತಿಳಿಸಿದಾಗ ಆಕೆಯು ಬಹಳವಾಗಿ ಕಳವಳಗೊಂಡು ಮೊರ್ದೆಕೈಗೆ ವಸ್ತ್ರಗಳನ್ನು ಕಳುಹಿಸಿ - ಗೋಣಿತಟ್ಟನ್ನು ತೆಗೆದುಬಿಟ್ಟು ಇವುಗಳನ್ನು ಧರಿಸಿಕೋ ಎಂದು ಹೇಳಿಸಿದಳು; ಆದರೆ ಅವನು ಅವುಗಳನ್ನು ಸ್ವೀಕರಿಸಲಿಲ್ಲ. 5 ಆಗ ಆಕೆ ಅರಸನಿಂದ ತನ್ನ ಸೇವೆಗೋಸ್ಕರ ನೇವಿುಸಲ್ಪಟ್ಟಿದ್ದ ಹತಾಕನೆಂಬ ರಾಜಕಂಚುಕಿಯನ್ನು ಕರಿಸಿ - ನೀನು ಮೊರ್ದೆಕೈಯ ಬಳಿಗೆ ಹೋಗಿ ಇದೇನು, ಯಾಕೆ ಎಂದು ವಿಚಾರಿಸಿಕೊಂಡು ಬಾ ಎಂದು ಹೇಳಿಕಳುಹಿಸಿದಳು. 6 ಹತಾಕನು ಅರಮನೆಯ ಬಾಗಲಿನ ಮುಂದಿರುವ ಪಟ್ಟಣದ ಬೈಲಿಗೆ ಮೊರ್ದೆಕೈಯ ಹತ್ತಿರ ಹೋದಾಗ 7 ಮೊರ್ದೆಕೈಯು ತನಗೆ ಸಂಭವಿಸಿದದ್ದೆಲ್ಲವನ್ನೂ ಹಾಮಾನನು ಯೆಹೂದ್ಯರನ್ನು ನಾಶಮಾಡಲು ಅಪ್ಪಣೆಪಡಕೊಳ್ಳುವದಕ್ಕಾಗಿ ರಾಜಭಂಡಾರಕ್ಕೆ ತೂಕಮಾಡಿ ಕೊಡುತ್ತೇನೆಂದು ವಾಗ್ದಾನಮಾಡಿದ ಸರಿಯಾದ ಹಣದ ಗಂಟು ಇಷ್ಟೆಂಬದನ್ನೂ ಅವನಿಗೆ ತಿಳಿಸಿದ್ದಲ್ಲದೆ 8 ತಮ್ಮನ್ನು ಸಂಹರಿಸುವದಕ್ಕೋಸ್ಕರ ಶೂಷನಿನಲ್ಲಿ ಪ್ರಕಟವಾದ ರಾಜಶಾಸನದ ಒಂದು ಪ್ರತಿಯನ್ನು ಕೊಟ್ಟು - ಇದನ್ನು ಎಸ್ತೇರಳಿಗೆ ತೋರಿಸಿ ವಿವರಿಸು; ಮತ್ತು ಆಕೆಯು ಅರಸನ ಬಳಿಗೆ ಹೋಗಿ ಅವನು ಕೃಪೆ ತೋರಿಸುವಂತೆ ಅವನ ಸನ್ನಿಧಿಯಲ್ಲಿ ತನ್ನ ಜನರಿಗೋಸ್ಕರ ಬಿನ್ನಹ ಮಾಡಲಿ ಎಂದು ಹೇಳಿಕಳುಹಿಸಿದನು. 9 ಹತಾಕನು ಹಿಂದಿರುಗಿ ಬಂದು ಎಸ್ತೇರಳಿಗೆ ಮೊರ್ದೆಕೈಯ ಮಾತುಗಳನ್ನು ತಿಳಿಸಲು 10 ಎಸ್ತೇರಳು ಅವನನ್ನು ತಿರಿಗಿ ಮೊರ್ದೆಕೈಯ ಹತ್ತಿರ ಕಳುಹಿಸಿ - 11 ಅರಸನು ಕರಿಸಿದರೆ ಹೊರತು ಅವನ ಬಳಿಗೆ ಒಳಗಣ ಪ್ರಾಕಾರಕ್ಕೆ ಹೋಗುವವರು ಮರಣದಂಡನೆಗೆ ಪಾತ್ರರಾಗುವರು ಎಂಬ ಒಂದೇ ನಿಯಮವು ಎಲ್ಲಾ ಸ್ತ್ರೀ ಪುರುಷರಿಗುಂಟು; ಯಾರ ಕಡೆಗೆ ಅವನು ತನ್ನ ಸುವರ್ಣದಂಡವನ್ನು ಚಾಚುವನೋ ಅವರು ಮಾತ್ರ ಜೀವದಿಂದುಳಿಯುವರೆಂಬದು ಅರಸನ ಎಲ್ಲಾ ಸೇವಕರಿಗೂ ಸಂಸ್ಥಾನಗಳ ಎಲ್ಲಾ ಜನರಿಗೂ ಗೊತ್ತುಂಟಲ್ಲಾ; ನನಗಂತೂ ಮೂವತ್ತು ದಿನಗಳಿಂದ ಅರಸನ ಬಳಿಗೆ ಹೋಗುವದಕ್ಕೆ ಆಮಂತ್ರಣವಾಗಲಿಲ್ಲ ಎಂದು ಹೇಳಿಸಿದಳು. 12 ಹತಾಕನು ಎಸ್ತೇರಳ ಮಾತುಗಳನ್ನು ಮೊರ್ದೆಕೈಗೆ ತಿಳಿಸಿದಾಗ 13 ಅವನು ತಿರಿಗಿ ಎಸ್ತೇರಳಿಗೆ - ಯೆಹೂದ್ಯರೆಲ್ಲಾ ನಾಶವಾದರೂ ನಾನೊಬ್ಬಳು ಅರಮನೆಯಲ್ಲಿರುವದರಿಂದ ಉಳಿಯುವೆನು ಎಂದು ಭಾವಿಸಿಕೊಳ್ಳಬೇಡ. 14 ನೀನು ಈಗ ಸುಮ್ಮನಿದ್ದು ಬಿಟ್ಟರೆ ಬೇರೆ ಕಡೆಯಿಂದ ಯೆಹೂದ್ಯರಿಗೆ ಸಹಾಯವೂ ವಿಮೋಚನೆಯೂ ಉಂಟಾದಾವು; ನೀನಾದರೋ ನಿನ್ನ ತಂದೆಯ ಮನೆಯವರೊಡನೆ ನಾಶವಾಗುವಿ. ಇದಲ್ಲದೆ ನೀನು ಇಂಥ ಸಂದರ್ಭಕ್ಕಾಗಿಯೇ ಪಟ್ಟಕ್ಕೆ ಬಂದಿರಬಹುದು, ಯಾರು ಬಲ್ಲರು ಎಂದು ಹೇಳಿ ಕಳುಹಿಸಿದನು. 15-16 ಆಗ ಎಸ್ತೇರಳು - ನೀನು ಹೋಗಿ ಶೂಷನಿನಲ್ಲಿ ಸಿಕ್ಕುವ ಎಲ್ಲಾ ಯೆಹೂದ್ಯರನ್ನು ಕೂಡಿಸು; ನೀವೆಲ್ಲರೂ ಮೂರು ದಿನ ಹಗಲಿರುಳು ಅನ್ನಪಾನಗಳನ್ನು ಬಿಟ್ಟು ನನಗೋಸ್ಕರ ಉಪವಾಸ ಮಾಡಿರಿ; ಅದರಂತೆ ನಾನೂ ನನ್ನ ಸೇವಕಿಯರೊಡನೆ ಉಪವಾಸದಿಂದಿರುವೆನು. ಅನಂತರ ನಾನು ವಿಧಿ ಮೀರಿ ಅರಸನ ಬಳಿಗೆ ಹೋಗುವೆನು, ಸತ್ತರೆ ಸಾಯುತ್ತೇನೆ ಎಂದು ಮೊರ್ದೆಕೈಗೆ ಮರಳಿ ಹೇಳಿಸಿದಳು. 17 ಮೊರ್ದೆಕೈಯು ಹಿಂದಿರುಗಿ ಹೋಗಿ ಎಸ್ತೇರಳು ಹೇಳಿದಂತೆಯೇ ಮಾಡಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India