Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಫೆಸದವರಿಗೆ 6 - ಕನ್ನಡ ಸತ್ಯವೇದವು J.V. (BSI)

1 ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ.

2 ವಾಗ್ದಾನ ಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ - ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು;

3 ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂವಿುಯ ಮೇಲೆ ಬಹುಕಾಲ ಬದುಕುವಿ.

4 ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿ ಸಲಹಿರಿ.

5 ದಾಸತ್ವದಲ್ಲಿರುವವರೇ, ಈ ಲೋಕದಲ್ಲಿ ನಿಮಗೆ ಯಜಮಾನರಾಗಿರುವವರಿಗೆ ಕ್ರಿಸ್ತನಿಗೆಂದು ಮನೋಭೀತಿಯಿಂದ ನಡುಗುವವರಾಗಿಯೂ ಸರಳಹೃದಯರಾಗಿಯೂ ವಿಧೇಯರಾಗಿರ್ರಿ.

6 ಮನುಷ್ಯರನ್ನು ಮೆಚ್ಚಿಸುವವರು ಮಾಡುವ ಪ್ರಕಾರ ಯಜಮಾನರು ನೋಡುತ್ತಿರುವಾಗ ಮಾತ್ರ ಸೇವೆಮಾಡದೆ ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿಸಿರಿ.

7 ಮನುಷ್ಯರಿಗೋಸ್ಕರವಲ್ಲ, ಕರ್ತನಿಗೋಸ್ಕರ ಸೇವೆಮಾಡುತ್ತೇವೆಂದು ಚಿತ್ತಪೂರ್ವಕವಾಗಿ ಸೇವೆಮಾಡಿರಿ.

8 ಯಾಕಂದರೆ ಒಬ್ಬನು ದಾಸನಾಗಲಿ ಸ್ವತಂತ್ರನಾಗಲಿ ತಾನು ಯಾವ ಸತ್ಕಾರ್ಯವನ್ನು ಮಾಡುತ್ತಾನೋ ಅದರ ಪ್ರತಿಫಲವನ್ನು ಕರ್ತನಿಂದ ಹೊಂದುವನೆಂಬದನ್ನು ನೀವು ತಿಳಿದವರಾಗಿಯೇ ಇದ್ದೀರಿ.

9 ಯಜಮಾನರೇ, ನಿಮ್ಮ ಕೈಕೆಳಗಿರುವ ದಾಸರ ವಿಷಯದಲ್ಲಿ ಅದೇ ರೀತಿಯಾಗಿ ನಡೆಯಿರಿ. ಪರಲೋಕದಲ್ಲಿ ನಿಮಗೂ ಅವರಿಗೂ ಯಜಮಾನನಾಗಿರುವಾತನು ಇದ್ದಾನೆಂತಲೂ ಆತನಲ್ಲಿ ಪಕ್ಷಪಾತವಿಲ್ಲವೆಂತಲೂ ತಿಳಿದು ನಿಮ್ಮ ದಾಸರನ್ನು ಬೆದರಿಸುವ ಪದ್ಧತಿಯನ್ನು ಬಿಟ್ಟುಬಿಡಿರಿ.


ಕ್ರೈಸ್ತರು ನಡಿಸುವ ಯುದ್ಧದಲ್ಲಿ ದೇವರು ಕೊಡುವ ಸರ್ವಾಯುಧಗಳು ಅವಶ್ಯವಾಗಿವೆ

10 ಕಡೇ ಮಾತೇನಂದರೆ, ನೀವು ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡವರಾಗಿ ಬಲಗೊಳ್ಳಿರಿ.

11 ಸೈತಾನನ ತಂತ್ರೋಪಾಯಗಳನ್ನು ನೀವು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳಿರಿ.

12 ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.

13 ಆದದರಿಂದ ಕಠಿನ ಯುದ್ಧವು ನಡೆಯುವ ದಿವಸದಲ್ಲಿ ಆ ವೈರಿಗಳನ್ನು ಎದುರಿಸುವದಕ್ಕೂ ಮಾಡಬೇಕಾದದ್ದೆಲ್ಲವನ್ನು ಮಾಡಿ ಜಯಶಾಲಿಗಳಾಗಿ ನಿಲ್ಲುವದಕ್ಕೂ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ತೆಗೆದುಕೊಳ್ಳಿರಿ.

14 ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಂಡು ನೀತಿಯೆಂಬ ವಜ್ರಕವಚವನ್ನು ಧರಿಸಿಕೊಂಡು

15 ಸಮಾಧಾನದ ವಿಷಯವಾದ ಸುವಾರ್ತೆಯನ್ನು ತಿಳಿಸುವದರಲ್ಲಿ ಸಿದ್ಧವಾದ ಮನಸ್ಸೆಂಬ ಕೆರಗಳನ್ನು ಮೆಟ್ಟಿಕೊಂಡು ನಿಲ್ಲಿರಿ.

16 ಮತ್ತು ನಂಬಿಕೆಯೆಂಬ ಗುರಾಣಿಯನ್ನು ಹಿಡುಕೊಳ್ಳಿರಿ; ಅದರಿಂದ ನೀವು ಕೆಡುಕನ ಅಗ್ನಿಬಾಣಗಳನ್ನೆಲ್ಲಾ ಆರಿಸುವದಕ್ಕೆ ಶಕ್ತರಾಗುವಿರಿ.

17 ಇದಲ್ಲದೆ ರಕ್ಷಣೆಯೆಂಬ ಶಿರಸ್ತ್ರಾಣವನ್ನು ಇಟ್ಟುಕೊಂಡು ಪವಿತ್ರಾತ್ಮನು ಕೊಡುವ ದೇವರ ವಾಕ್ಯವೆಂಬ ಕತ್ತಿಯನ್ನು ಹಿಡಿಯಿರಿ.

18 ನೀವು ಪವಿತ್ರಾತ್ಮಪ್ರೇರಿತರಾಗಿ ಎಲ್ಲಾ ಸಮಯಗಳಲ್ಲಿ ಸಕಲವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. ಇದರಲ್ಲಿ ಪೂರ್ಣ ಸ್ಥಿರಚಿತ್ತರಾಗಿದ್ದು ದೇವಜನರೆಲ್ಲರ ವಿಷಯದಲ್ಲಿ ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ.

19 ನನಗೋಸ್ಕರ ಸಹ ಪ್ರಾರ್ಥನೆಮಾಡಿರಿ. ನಾನು ಬಾಯಿ ತೆರೆಯುವಾಗ ಪೂರ್ವಕಾಲದಲ್ಲಿ ಗುಪ್ತವಾಗಿದ್ದ ಸುವಾರ್ತಾಸತ್ಯಾರ್ಥವನ್ನು ಭಯವಿಲ್ಲದೆ ತಿಳಿಸುವದಕ್ಕೆ ಬೇಕಾದ ಮಾತನ್ನು ದೇವರು ನನಗೆ ಅನುಗ್ರಹಿಸಬೇಕೆಂದು ಪ್ರಾರ್ಥಿಸಿರಿ.

20 ಆ ಸತ್ಯಾರ್ಥದ ನಿವಿುತ್ತವೇ ರಾಯಭಾರಿಯಾದ ನಾನು ಬೇಡಿಯಲ್ಲಿ ಬಿದ್ದಿದ್ದೇನಲ್ಲಾ, ಅದರ ವಿಷಯದಲ್ಲಿ ಧೈರ್ಯವಾಗಿ ಮಾತಾಡುವ ಹಂಗಿನಲ್ಲಿದ್ದೇನೆ; ಹಾಗೆಯೇ ನಾನು ಮಾತಾಡಬೇಕೆಂದು ನನಗೋಸ್ಕರ ಬೇಡಿಕೊಳ್ಳಿರಿ.


ಕಡೇ ಮಾತುಗಳು

21 ನನ್ನ ಸಂಗತಿಗಳು ನಿಮಗೆ ಸಹ ಗೊತ್ತಾಗುವ ಹಾಗೆ ಪ್ರಿಯ ಸಹೋದರನೂ ಕರ್ತನಲ್ಲಿ ನಂಬಿಗಸ್ತನಾದ ಸೇವಕನೂ ಆಗಿರುವ ತುಖಿಕನು ನಿಮಗೆ ಎಲ್ಲವನ್ನೂ ತಿಳಿಸುವನು.

22 ನೀವು ನಮ್ಮ ಸಮಾಚಾರವನ್ನು ತಿಳುಕೊಳ್ಳುವ ಹಾಗೆಯೂ ಅವನು ನಿಮ್ಮ ಹೃದಯಗಳನ್ನು ಸಂತೈಸುವ ಹಾಗೆಯೂ ಅವನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.

23 ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ಶಾಂತಿಯೂ ನಂಬಿಕೆಯಿಂದ ಕೂಡಿದ ಪ್ರೀತಿಯೂ ಸಹೋದರರಿಗೆ ಆಗಲಿ.

24 ನಮ್ಮ ಕರ್ತನಾದ ಯೇಸು ಕ್ರಿಸ್ತನನ್ನು ನಿರಂತರವಾದ ಪ್ರೀತಿಯಿಂದ ಪ್ರೀತಿಸುವವರೆಲ್ಲರ ಮೇಲೆ ದೇವರ ಕೃಪೆಯು ಇರಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು