Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಫೆಸದವರಿಗೆ 5 - ಕನ್ನಡ ಸತ್ಯವೇದವು J.V. (BSI)

1 ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷವಿುಸಿದನಲ್ಲಾ; ಆದದರಿಂದ ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ.

2 ಕ್ರಿಸ್ತನು ನಿಮ್ಮನ್ನು ಪ್ರೀತಿಸಿ ನಮ್ಮೆಲ್ಲರಿಗೋಸ್ಕರ ತನ್ನನ್ನೇ ದೇವರಿಗೆ ಸುಗಂಧವಾಸನೆಯಾದ ಕಾಣಿಕೆಯಾಗಿಯೂ ಯಜ್ಞವಾಗಿಯೂ ಸಮರ್ಪಿಸಿಕೊಂಡ ಪ್ರಕಾರ ನೀವೂ ಪ್ರೀತಿಯಲ್ಲಿ ನಡೆದುಕೊಳ್ಳಿರಿ.

3 ಜಾರತ್ವ ಯಾವ ವಿಧವಾದ ಬಂಡುತನ ದ್ರವ್ಯಾಶೆ ಇವುಗಳ ಸುದ್ದಿಯಾದರೂ ನಿಮ್ಮಲ್ಲಿ ಇರಬಾರದು; ಇವುಗಳಿಗೆ ದೂರವಾಗಿರುವದೇ ದೇವಜನರಿಗೆ ಯೋಗ್ಯವಾದದ್ದು.

4 ಹೊಲಸು ಮಾತು ಹುಚ್ಚು ಮಾತು ಕುಚೋದ್ಯ ಮಾತು ಇವು ಬೇಡ, ಅಯುಕ್ತವಾಗಿವೆ;

5 ಇವುಗಳನ್ನು ಬಿಟ್ಟು ದೇವರಿಗೆ ಉಪಕಾರಸ್ತುತಿ ಮಾಡುವದು ಉತ್ತಮ. ಜಾರರು ದುರಾಚಾರಿಗಳು ವಿಗ್ರಹಾರಾಧಕರಂತಿರುವ ಲೋಭಿಗಳು ಇವರಲ್ಲಿ ಒಬ್ಬರಿಗಾದರೂ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯತೆ ಇಲ್ಲವೇ ಇಲ್ಲವೆಂದು ನೀವು ಚೆನ್ನಾಗಿ ಬಲ್ಲಿರಲ್ಲವೇ.

6 ಹುರುಳಿಲ್ಲದ ಮಾತುಗಳನ್ನಾಡುವವರಿಗೆ ಕಿವಿಗೊಟ್ಟು ಮೋಸಹೋಗಬೇಡಿರಿ; ಅಂಥ ಕೃತ್ಯಗಳ ನಿವಿುತ್ತದಿಂದ ದೇವರ ಕೋಪವು ಆತನಿಗೆ ಅವಿಧೇಯರಾಗಿರುವವರ ಮೇಲೆ ಬರುತ್ತದೆ.

7 ನೀವು ಅವರೊಂದಿಗೆ ಪಾಲುಗಾರರಾಗಬೇಡಿರಿ.

8 ನೀವು ಹಿಂದಿನ ಕಾಲದಲ್ಲಿ ಕತ್ತಲೆಯಾಗಿದ್ದಿರಿ, ಆದರೆ ಈಗ ನೀವು ಕ್ರಿಸ್ತನಲ್ಲಿದ್ದು ಬೆಳಕಾಗಿದ್ದೀರಿ.

9 ಬೆಳಕಿನವರಂತೆ ನಡೆದುಕೊಳ್ಳಿರಿ. ಬೆಳಕಿನ ಫಲವು ಉಪಕಾರದಲ್ಲಿಯೂ ನೀತಿಯಲ್ಲಿಯೂ ಸತ್ಯದಲ್ಲಿಯೂ ಕಾಣಿಸಿಕೊಳ್ಳುತ್ತದೆ.

10 ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬದನ್ನು ಪರಿಶೋಧಿಸಿ ತಿಳುಕೊಳ್ಳಿರಿ.

11 ಕತ್ತಲೆಗೆ ಸಂಬಂಧವಾದ ಕೃತ್ಯಗಳಿಂದ ಯಾವ ಪ್ರಯೋಜನವೂ ಬರಲಾರದು; ಅವುಗಳಲ್ಲಿ ಪಾಲುಗಾರರಾಗಿರದೆ ಅವುಗಳನ್ನು ಬೈಲಿಗೆ ತಂದು ಖಂಡಿಸಿರಿ.

12 ಆ ಜನರು ರಹಸ್ಯವಾಗಿ ನಡಿಸುವ ಕೆಲಸಗಳನ್ನು ಕುರಿತು ಮಾತಾಡುವದಾದರೂ ನಾಚಿಕೆಗೆ ಕಾರಣವಾಗಿದೆ.

13 ಬೆಳಕಿನಿಂದ ಎಲ್ಲಾ ಕೃತ್ಯಗಳ ನಿಜಗುಣ ತೋರಿಬರುತ್ತದೆ; ಅದರಿಂದ ಕೆಟ್ಟದ್ದು ಕೆಟ್ಟದ್ದೇ ಎಂದು ಕಾಣಿಸುವದು. ಪ್ರಕಟವಾಗಿರುವದೆಲ್ಲಾ ಬೆಳಕಿಗೆ ಸಂಬಂಧವಾದದ್ದು.

14 ಆದದರಿಂದ - ನಿದ್ರೆ ಮಾಡುವವನೇ, ಎಚ್ಚರವಾಗು! ಸತ್ತವರನ್ನು ಬಿಟ್ಟು ಏಳು! ಕ್ರಿಸ್ತನು ನಿನಗೆ ಪ್ರಕಾಶ ಕೊಡುವನು ಎಂದು ಹೇಳಿಯದೆ.

15 ಆದಕಾರಣ ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದರಾಗಿರದೆ ಜ್ಞಾನವಂತರಾಗಿರ್ರಿ.

16 ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.

17 ಮತ್ತು ಬುದ್ಧಿಹೀನರಾಗಿ ನಡೆಯದೆ ಕರ್ತನ ಚಿತ್ತವೇನೆಂಬದನ್ನು ವಿಚಾರಿಸಿ ತಿಳಿದವರಾಗಿರ್ರಿ.

18 ಮದ್ಯಪಾನ ಮಾಡಿ ಮತ್ತರಾಗಬೇಡಿರಿ; ಅದರಿಂದ ಪಟಿಂಗತನವು ಹುಟ್ಟುತ್ತದೆ.

19 ಆದರೆ ಪವಿತ್ರಾತ್ಮಭರಿತರಾಗಿದ್ದು ಕೀರ್ತನೆಗಳಿಂದಲೂ ಆತ್ಮಸಂಬಂಧವಾದ ಪದಗಳಿಂದಲೂ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಾ ನಿಮ್ಮ ಹೃದಯಗಳಲ್ಲಿ ಕರ್ತನಿಗೆ ಗಾನಮಾಡುತ್ತಾ ಕೀರ್ತನೆ ಹಾಡುತ್ತಾ

20 ಯಾವಾಗಲೂ ಎಲ್ಲಾ ಕಾರ್ಯಗಳಿಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಕ್ರಿಸ್ತನಿಗೆ ಭಯಪಡುವವರಾಗಿದ್ದು

21 ಒಬ್ಬರಿಗೊಬ್ಬರು ವಿನಯವುಳ್ಳವರಾಗಿ ನಡೆದುಕೊಳ್ಳಿರಿ.


ಗಂಡಹೆಂಡತಿಯರೂ ತಂದೆಗಳೂ ಮಕ್ಕಳೂ ಯಜಮಾನರೂ ದಾಸರೂ ನಡೆಯಬೇಕಾದ ರೀತಿ
( ಕೊಲೊ. 3.18—4.1 )

22 ಸ್ತ್ರೀಯರೇ, ನೀವು ಕರ್ತನಿಗೆ ಹೇಗೋ ಹಾಗೆಯೇ ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರ್ರಿ.

23 ಕ್ರಿಸ್ತನು ಸಭೆಗೆ ತಲೆಯಾಗಿರುವ ಪ್ರಕಾರವೇ ಗಂಡನು ಹೆಂಡತಿಗೆ ತಲೆಯಾಗಿದ್ದಾನೆ. ಕ್ರಿಸ್ತನೋ ಸಭೆಯೆಂಬ ದೇಹಕ್ಕೆ ರಕ್ಷಕನಾಗಿದ್ದಾನೆ.

24 ಅದಿರಲಿ; ಸಭೆಯು ಕ್ರಿಸ್ತನಿಗೆ ಹೇಗೆ ಅಧೀನವಾಗಿದೆಯೋ ಹಾಗೆಯೇ ಸ್ತ್ರೀಯರು ತಮ್ಮತಮ್ಮ ಗಂಡಂದಿರಿಗೆ ಎಲ್ಲಾ ವಿಷಯಗಳಲ್ಲಿ ಅಧೀನರಾಗಿರಬೇಕು.

25 ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ.

26 ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು.

27 ಅದನ್ನು ಕಳಂಕ ಸುಕ್ಕು ಮುಂತಾದ್ದೊಂದೂ ಇಲ್ಲದ ಕನ್ನಿಕೆಯೋ ಎಂಬಂತೆ ಪರಿಶುದ್ಧವೂ ನಿರ್ದೋಷವೂ ಮಹಿಮೆಯುಳ್ಳದ್ದೂ ಆಗಿರುವ ಸಭೆಯನ್ನಾಗಿ ತನ್ನೆದುರಿನಲ್ಲಿ ನಿಲ್ಲಿಸಿಕೊಳ್ಳಬೇಕೆಂದು ವಾಕ್ಯೋಪದೇಶ ಸಹಿತವಾದ ಜಲಸ್ನಾನವನ್ನು ಮಾಡಿಸಿ ಶುದ್ಧಮಾಡಿದನು.

28 ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ.

29 ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.

30 ಯಾವ ದೇಹಕ್ಕೆ ನಾವು ಅಂಗಗಳಾಗಿದ್ದೇವೋ ಸಭೆಯೆಂಬ ಆ ದೇಹವನ್ನು ಕ್ರಿಸ್ತನು ಹಾಗೆಯೇ ಪೋಷಿಸಿ ಸಂರಕ್ಷಿಸುತ್ತಾನಲ್ಲಾ.

31 ಇದರ ನಿವಿುತ್ತದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು ಎಂದು ಬರೆದದೆ.

32 ನಾನು ಕ್ರಿಸ್ತನಿಗೂ ಸಭೆಗೂ ಇರುವ ಸಂಬಂಧವನ್ನು ಕುರಿತು ಮಾತಾಡುತ್ತಾ ಇದ್ದೇನೆ; ಇದುವರೆಗೆ ಗುಪ್ತವಾಗಿದ್ದ ಈ ಸತ್ಯಾರ್ಥವು ಬಹು ಗಂಭೀರವಾದದ್ದು.

33 ಅದಿರಲಿ; ನಿಮ್ಮಲ್ಲಿ ಪ್ರತಿಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ ನಡೆದುಕೊಳ್ಳಬೇಕು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು