Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಎಫೆಸದವರಿಗೆ 4 - ಕನ್ನಡ ಸತ್ಯವೇದವು J.V. (BSI)


ಸಭೆಯವರಿಗೆ ನಾನಾ ವರಗಳಿದ್ದರೂ ಎಲ್ಲರು ಐಕ್ಯವಾಗಿರಬೇಕು

1 ನೀವು ದೇವರಿಂದ ಕರೆಯಲ್ಪಟ್ಟವರಾದ ಕಾರಣ ಯೋಗ್ಯರಾಗಿ ನಡೆದುಕೊಳ್ಳಬೇಕೆಂದು ಕರ್ತನ ಸೇವೆಯಲ್ಲಿ ಸೆರೆಯವನಾದ ನಾನು ನಿಮ್ಮನ್ನು ಪ್ರಬೋಧಿಸುತ್ತೇನೆ.

2 ನೀವು ಪೂರ್ಣ ವಿನಯ ಸಾತ್ವಿಕತ್ವಗಳಿಂದಲೂ ದೀರ್ಘಶಾಂತಿಯಿಂದಲೂ ಕೂಡಿದವರಾಗಿ

3 ಪ್ರೀತಿಯಿಂದ ಒಬ್ಬರನ್ನೊಬ್ಬರು ಸಹಿಸಿಕೊಳ್ಳಿರಿ. ಸಮಾಧಾನವೆಂಬ ಬಂಧನದಿಂದ ಕಟ್ಟಲ್ಪಟ್ಟವರಾಗಿದ್ದು ಪವಿತ್ರಾತ್ಮನಿಂದುಂಟಾಗುವ ಐಕ್ಯವನ್ನು ಕಾಪಾಡಿಕೊಳ್ಳುವದಕ್ಕೆ ಆಸಕ್ತರಾಗಿರಿ.

4 ನೀವೆಲ್ಲರೂ ಒಂದೇ ದೇಹಕ್ಕೆ ಸೇರಿದವರು, ಒಬ್ಬನೇ ಆತ್ಮನನ್ನು ಹೊಂದಿದವರು,

5 ಒಂದೇ ಪದವಿಯನ್ನು ನಿರೀಕ್ಷಿಸುವದಕ್ಕೆ ಕರೆಯಲ್ಪಟ್ಟವರು; ನಿಮ್ಮೆಲ್ಲರಿಗೂ ಕರ್ತನು ಒಬ್ಬನೇ, ಭರವಸವು ಒಂದೇ, ಸ್ನಾನದೀಕ್ಷೆ ಒಂದೇ.

6 ಎಲ್ಲರಿಗೂ ತಂದೆಯಾಗಿರುವ ದೇವರು ಒಬ್ಬನೇ; ಆತನು ಎಲ್ಲರ ಮೇಲಿರುವವನೂ ಎಲ್ಲರ ಮುಖಾಂತರ ಕಾರ್ಯನಡಿಸುವವನೂ ಎಲ್ಲರಲ್ಲಿ ವಾಸಿಸುವವನೂ ಆಗಿದ್ದಾನೆ.

7 ಆದರೆ ಕ್ರಿಸ್ತನು ನಮ್ಮಲ್ಲಿ ಒಬ್ಬೊಬ್ಬನಿಗೆ ಅನುಗ್ರಹಿಸಿದ ಪ್ರಕಾರವೇ ಅವನವನಿಗೆ ಕೃಪಾವರವು ದೊರಕಿದೆ.

8 ಆದದರಿಂದ - ಆತನು ಉನ್ನತಸ್ಥಾನಕ್ಕೆ ಏರಿದಾಗ ತಾನು ಜಯಿಸಿದ್ದ ಬಹುಜನರನ್ನು ಸೆರೆಹಿಡುಕೊಂಡು ಹೋಗಿ ಮನುಷ್ಯರಿಗೆ ದಾನಗಳನ್ನು ಮಾಡಿದನು ಎಂಬದಾಗಿ ಪ್ರವಾದಿಯು ಹೇಳುತ್ತಾನೆ.

9 (ಏರಿಹೋದನೆಂದು ಹೇಳಿದ್ದರಲ್ಲಿ ಭೂವಿುಯ ಅಧೋಭಾಗಕ್ಕೆ ಇಳಿದಿದ್ದನೆಂತಲೂ ಹೇಳಿದ ಹಾಗಾಯಿತಲ್ಲಾ.

10 ಇಳಿದು ಬಂದವನು ಮೇಲಣ ಎಲ್ಲಾ ಲೋಕಗಳಿಗಿಂತ ಉನ್ನತವಾಗಿ ಏರಿಹೋದವನೇ. ಆದದರಿಂದ ಸಮಸ್ತ ಲೋಕಗಳನ್ನು ತುಂಬಿದವನಾದನು.)

11 ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು.

13 ನಾವೆಲ್ಲರು ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರವೀಣತೆಗೆ ಬಂದವರಾಗಿ ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟುವ ತನಕ

12 ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೋಸ್ಕರವೂ ಆತನು ಇವರನ್ನು ಅನುಗ್ರಹಿಸಿದನು.

14 ನಾವು ಇನ್ನು ಮೇಲೆ ಕೂಸುಗಳಾಗಿರಬಾರದು; ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರಬಾರದು.

15 ಪ್ರೀತಿಯಿಂದ ಸತ್ಯವನ್ನನುಸರಿಸುತ್ತಾ ಬೆಳೆದು ಎಲ್ಲಾ ವಿಷಯಗಳಲ್ಲಿಯೂ ಕ್ರಿಸ್ತನ ಐಕ್ಯವನ್ನು ಹೊಂದುತ್ತಾ ಬರಬೇಕು.

16 ಆತನೇ ಶಿರಸ್ಸು; ದೇಹವೆಲ್ಲಾ ಆತನ ದೊರೆತನದಲ್ಲಿದ್ದು ತನ್ನಲ್ಲಿರುವ ಎಲ್ಲಾ ನರಗಳಿಂದ ಬಿಗಿಯಾಗಿ ಜೋಡಿಸಲ್ಪಟ್ಟು ಪ್ರತಿ ಅಂಗದಿಂದ ಅದರದರ ಶಕ್ತಿಯ ಪ್ರಕಾರ ಸಹಾಯ ಹೊಂದಿ ಪ್ರೀತಿಯಿಂದ ಐಕ್ಯವಾಗಿದ್ದು ಕ್ಷೇಮಾಭಿವೃದ್ಧಿಯನ್ನು ಹೊಂದುತ್ತದೆ.


ದೇವರಿಂದ ಕರಿಸಿಕೊಂಡವರು ಅಜ್ಞಾನಿಗಳ ದುರ್ನಡತೆಯನ್ನು ಬಿಟ್ಟುಬಿಟ್ಟು ಯೋಗ್ಯರಾಗಿ ನಡೆಯಬೇಕು
( ಕೊಲೊ. 3.5-17 )

17 ಆದದರಿಂದ ಅನ್ಯಜನರು ನಡೆದುಕೊಳ್ಳುವ ಪ್ರಕಾರ ನೀವು ಇನ್ನು ಮೇಲೆ ನಡೆದುಕೊಳ್ಳಬಾರದೆಂದು ಕರ್ತನಲ್ಲಿರುವವನಾಗಿ ನಿಮಗೆ ಖಂಡಿತವಾಗಿ ಹೇಳುತ್ತೇನೆ.

18 ಅವರು ನಿಷ್ಪ್ರಯೋಜನವಾದ ಬುದ್ಧಿಯುಳ್ಳವರಾಗಿ ನಡೆದುಕೊಳ್ಳುತ್ತಾರೆ; ಅವರ ಮನಸ್ಸು ಮೊಬ್ಬಾಗಿ ಹೋಗಿದೆ, ಅವರು ತಮ್ಮ ಹೃದಯದ ಕಾಠಿಣ್ಯದ ನಿವಿುತ್ತದಿಂದಲೂ ತಮ್ಮಲ್ಲಿರುವ ಅಜ್ಞಾನದ ನಿವಿುತ್ತದಿಂದಲೂ ದೇವರಿಂದಾಗುವ ಜೀವಕ್ಕೆ ಅನ್ಯರಾಗಿದ್ದಾರೆ.

19 ಅವರು ತಮ್ಮ ದುಃಸ್ಥಿತಿಗಾಗಿ ಸ್ವಲ್ಪವೂ ಚಿಂತಿಸದೆ ತಮ್ಮನ್ನು ಬಂಡುತನಕ್ಕೆ ಒಪ್ಪಿಸಿಕೊಟ್ಟು ಎಲ್ಲಾ ವಿಧವಾದ ಅಶುದ್ಧ ಕೃತ್ಯಗಳನ್ನು ಅತ್ಯಾಶೆಯಿಂದ ನಡಿಸುವವರಾಗಿದ್ದಾರೆ.

20 ನೀವಾದರೋ ಕ್ರಿಸ್ತನ ಧರ್ಮವನ್ನು ಅಂಥದೆಂದು ಕಲಿತುಕೊಳ್ಳಲಿಲ್ಲ.

21 ಆತನನ್ನೇ ಕೇಳಿದಿರಲ್ಲಾ, ಆತನಲ್ಲಿಯೇ ಉಪದೇಶವನ್ನು ಹೊಂದಿದಿರಲ್ಲಾ.

22 ಯೇಸುವಿನಲ್ಲಿರುವ ಸತ್ಯೋಪದೇಶವು ಯಾವದಂದರೆ - ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದು.

23 ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ.

24 ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.

25 ಆದಕಾರಣ ಸುಳ್ಳಾಡುವದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.

26 ಕೋಪಮಾಡಬೇಕಾದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ;

27 ಸೈತಾನನಿಗೆ ಅವಕಾಶಕೊಡಬೇಡಿರಿ.

28 ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ ಅವನಿಂದಾಗುವದು.

29 ನಿಮ್ಮ ಬಾಯೊಳಗಿಂದ ಯಾವ ಕೆಟ್ಟ ಮಾತೂ ಹೊರಡಬಾರದು; ಭಕ್ತಿಯನ್ನು ವೃದ್ಧಿಮಾಡುವಂಥ ಕಾಲೋಚಿತವಾದ ಮಾತು ಇದ್ದರೆ ಕೇಳುವವರ ಹಿತಕ್ಕಾಗಿ ಅದನ್ನು ಆಡಿರಿ.

30 ದೇವರ ಪವಿತ್ರಾತ್ಮನನ್ನು ದುಃಖಪಡಿಸಬೇಡಿರಿ; ಆತನಲ್ಲಿಯೇ ವಿಮೋಚನೆಯ ದಿನಕ್ಕಾಗಿ ಮುದ್ರೆ ಹೊಂದಿದ್ದೀರಲ್ಲಾ.

31 ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.

32 ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷವಿುಸುವವರಾಗಿಯೂ ಇರ್ರಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು