ಎಫೆಸದವರಿಗೆ 3 - ಕನ್ನಡ ಸತ್ಯವೇದವು J.V. (BSI)ಪೌಲನು ತಾನು ಮೇಲ್ಕಂಡ ಸತ್ಯಾರ್ಥವನ್ನು ಪ್ರಕಟಿಸುವದಕ್ಕೆ ನೇಮಕವಾದವನೂ ಅದರ ನಿವಿುತ್ತವೇ ಸೆರೆಬಿದ್ದವನೂ ಆಗಿದ್ದೇನೆಂದು ಹೇಳಿ ಅನ್ಯಜನರಾದ ಕ್ರೈಸ್ತರಿಗೋಸ್ಕರ ಪ್ರಾರ್ಥನೆ ಮಾಡಿದ್ದು 1 ಹೀಗಿರುವದರಿಂದ ಅನ್ಯಜನರಾಗಿರುವ ನಿಮ್ಮ ನಿವಿುತ್ತ ಕ್ರಿಸ್ತ ಯೇಸುವಿನ ಸೆರೆಯವನಾದ ಪೌಲನೆಂಬ ನಾನು ನಿಮಗೋಸ್ಕರ ಪ್ರಾರ್ಥಿಸುತ್ತೇನೆ. 2-3 ನಿಮಗೋಸ್ಕರ ನಿರ್ವಹಿಸುವದಕ್ಕಾಗಿ ದೇವರು ನನಗೆ ಕೃಪೆಯಾಗಿ ಕೊಟ್ಟ ಕೆಲಸವನ್ನೂ ಇದುವರೆಗೆ ಗುಪ್ತವಾಗಿದ್ದ ಒಂದು ಸಂಗತಿ ದೈವಪ್ರಕಟನೆಯಿಂದ ನನಗೆ ತಿಳಿಸಲ್ಪಟ್ಟಿತೆಂಬದನ್ನೂ ನೀವು ಕೇಳಿದ್ದೀರಲ್ಲಾ. 4 ಅದನ್ನು ಕುರಿತು ನಾನು ಹಿಂದೆ ಸಂಕ್ಷೇಪವಾಗಿ ಬರೆದಿದ್ದೇನೆ; ಬರೆದದ್ದನ್ನು ನೀವು ಓದಿ ನೋಡಿದರೆ ಕ್ರಿಸ್ತನ ವಿಷಯವಾದ ಮರ್ಮವನ್ನು ಕುರಿತು ನನಗಿರುವ ಗ್ರಹಿಕೆಯನ್ನು ನೀವು ತಿಳುಕೊಳ್ಳಬಹುದು. 5 ಆ ಮರ್ಮವು ಈ ಕಾಲದಲ್ಲಿ ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ಪವಿತ್ರಾತ್ಮನಿಂದ ತಿಳಿಸಲ್ಪಟ್ಟಂತೆ ಬೇರೆ ಕಾಲಗಳಲ್ಲಿದ್ದ ಜನರಿಗೆ ತಿಳಿಸಲ್ಪಡಲಿಲ್ಲ. 6 ಅದು ಯಾವದಂದರೆ, ಅನ್ಯಜನರು ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹದೊಳಗಣ ಅಂಗಗಳೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆಂಬದೇ. 7 ದೇವರು ತನ್ನ ಶಕ್ತಿಯ ಪ್ರಯೋಗದಲ್ಲಿ ನನಗೆ ಉಚಿತಾರ್ಥವಾಗಿ ಅನುಗ್ರಹಿಸಿದ ಕೆಲಸವನ್ನನುಸರಿಸಿ ನಾನು ಈ ಸುವಾರ್ತೆಗೆ ಸೇವಕನಾದೆನು. 8-9 ನಾನು ಕ್ರಿಸ್ತನ ಅಪ್ರಮೇಯವಾದ ಐಶ್ವರ್ಯದ ವಿಷಯವಾದ ಶುಭಸಮಾಚಾರವನ್ನು ಅನ್ಯಜನರಿಗೆ ಪ್ರಸಿದ್ಧಿಪಡಿಸುವ ಹಾಗೆಯೂ ಸಮಸ್ತವನ್ನು ಸೃಷ್ಟಿಸಿದ ದೇವರಲ್ಲಿ ಆದಿಯಿಂದ ಮರೆಯಾಗಿದ್ದ ಮರ್ಮವು ಪ್ರಕಟವಾಗುವ ವಿಧ ಎಂಥದೆಂದು ತಿಳಿಸುವ ಹಾಗೆಯೂ ದೇವಜನರೊಳಗೆ ಅತ್ಯಲ್ಪನಾದ ನನಗೆ ಅನುಗ್ರಹಿಸೋಣವಾಯಿತು. 10-11 ದೇವರು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ಅನಾದಿಕಾಲದಿಂದ ಮಾಡಿದ ಸಂಕಲ್ಪದ ಮೇರೆಗೆ ತನ್ನ ನಾನಾ ವಿಧವಾದ ಜ್ಞಾನವು ಪರಲೋಕದಲ್ಲಿ ರಾಜತ್ವಗಳಿಗೂ ಅಧಿಕಾರಗಳಿಗೂ ಈಗ ಕ್ರೈಸ್ತ ಸಭೆಯ ಮೂಲಕ ಗೊತ್ತಾಗಬೇಕೆಂಬದನ್ನು ಉದ್ದೇಶಿಸಿದ್ದನು. 12 ದೇವರ ಸಾನ್ನಿಧ್ಯ ಸೇರುವದಕ್ಕೆ ನಮಗಿರುವ ಭರವಸವುಳ್ಳ ಧೈರ್ಯವು ಕ್ರಿಸ್ತನಲ್ಲಿ ಇಟ್ಟಿರುವ ನಂಬಿಕೆಯ ಮೂಲಕ ಆತನಲ್ಲಿಯೇ ನಮಗೆ ಉಂಟಾಯಿತು. 13 ಆದದರಿಂದ ನಿಮ್ಮ ನಿವಿುತ್ತ ನನಗೆ ಉಂಟಾದ ಕಷ್ಟಗಳನ್ನು ನೋಡಿ ನೀವು ಧೈರ್ಯಗೆಡಬಾರದೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಈ ಕಷ್ಟಗಳು ನಿಮಗೆ ಘನವನ್ನು ಉಂಟುಮಾಡುತ್ತವಷ್ಟೆ. 14-15 ಹೀಗಿರಲಾಗಿ ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿಜನವೂ ಹೆಸರು ತೆಗೆದುಕೊಳ್ಳುತ್ತದೋ ಆ ತಂದೆಯ ಮುಂದೆ ನಾನು ಮೊಣಕಾಲೂರಿಕೊಂಡು - 16 ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ ವಿಶೇಷಬಲ ಹೊಂದಿದವರಾಗುವ ಹಾಗೆಯೂ 17 ಕ್ರಿಸ್ತನು ನಿಮ್ಮ ನಂಬಿಕೆಯ ಮೂಲಕ ನಿಮ್ಮ ಹೃದಯಗಳಲ್ಲಿ ವಾಸಮಾಡುವ ಹಾಗೆಯೂ ಆತನು ತನ್ನ ಮಹಿಮಾತಿಶಯದ ಪ್ರಕಾರ ಅನುಗ್ರಹಿಸಲಿ; 18 ನೀವು ದೇವರ ಪ್ರೀತಿಯಲ್ಲಿ ನೆಲೆಗೊಂಡು ನಿಂತು ಅದರ ಅಗಲ ಉದ್ದ ಎತ್ತರ ಆಳ ಎಷ್ಟೆಂಬದನ್ನು ದೇವಜನರೆಲ್ಲರೊಂದಿಗೆ ಗ್ರಹಿಸಲೂ 19 ಜ್ಞಾನಕ್ಕೆ ಮೀರುವ ಕ್ರಿಸ್ತನ ಪ್ರೀತಿಯನ್ನು ತಿಳುಕೊಳ್ಳಲೂ ಪೂರ್ಣಶಕ್ತರಾಗಿದ್ದು ದೇವರ ಸಂಪೂರ್ಣತೆಯ ಮಟ್ಟಿಗೂ ಪರಿಪೂರ್ಣರಾಗುವ ಹಾಗೆ ನಿಮಗೆ ದಯಪಾಲಿಸಲಿ ಎಂದು ಆತನನ್ನು ಬೇಡಿಕೊಳ್ಳುತ್ತೇನೆ. 20 ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ 21 ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದ ದೇವರಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರ. ಆಮೆನ್. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India