ಎಫೆಸದವರಿಗೆ 2 - ಕನ್ನಡ ಸತ್ಯವೇದವು J.V. (BSI)ದೇವರು ಪಾಪಾತ್ಮರನ್ನು ರಕ್ಷಿಸಿ ಕ್ರಿಸ್ತನ ಜೀವದಲ್ಲಿ ಪಾಲುಗಾರರನ್ನಾಗಿ ಮಾಡಿದ್ದಕ್ಕೆ ಆತನ ಕೃಪೆಯೇ ಕಾರಣ 1 ಆತನು ಅಪರಾಧಗಳ ಮತ್ತು ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಿಮ್ಮನ್ನು ಸಹ ಬದುಕಿಸಿದನು. 2 ನೀವು ಪೂರ್ವದಲ್ಲಿ ಅಪರಾಧಗಳನ್ನೂ ಪಾಪಗಳನ್ನೂ ಮಾಡುವವರಾಗಿದ್ದು ಇಹಲೋಕಾಚಾರಕ್ಕೆ ಅನುಸಾರವಾಗಿ ನಡೆದುಕೊಂಡಿರಿ; ವಾಯುಮಂಡಲದಲ್ಲಿ ಅಧಿಕಾರನಡಿಸುವ ಅಧಿಪತಿಗೆ, ಅಂದರೆ ನಂಬಲೊಲ್ಲದವರನ್ನು ಅವಿಧೇಯತೆಗೆ ಈಗ ಪ್ರೇರೇಪಿಸುವ ಆತ್ಮನಿಗೆ ಅನುಸಾರವಾಗಿ ನಡೆದುಕೊಂಡಿರಿ. 3 ನಾವೆಲ್ಲರೂ ಪೂರ್ವದಲ್ಲಿ ಅವಿಧೇಯರಾಗಿದ್ದು ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಫೆಗಳನ್ನು ನೆರವೇರಿಸುತ್ತಾ ನಡೆದು ವಿುಕ್ಕಾದವರಂತೆ ಸ್ವಭಾವಸಿದ್ಧವಾಗಿ ದೇವರ ಕೋಪಕ್ಕೆ ಗುರಿಯಾಗಿದ್ದೆವು. 4 ಆದರೆ ಕರುಣಾನಿಧಿಯಾಗಿರುವ ದೇವರು ನಮ್ಮ ಮೇಲೆ ಮಹಾ ಪ್ರೀತಿಯನ್ನಿಟ್ಟು 5 ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ.) 6 ಬದುಕಿಸಿದ್ದಲ್ಲದೆ ತಾನು ಕ್ರಿಸ್ತ ಯೇಸುವಿನಲ್ಲಿ ನಮಗೆ ಮಾಡುವ ಉಪಕಾರದ ಮೂಲಕ ತನ್ನ ಅಪಾರವಾದ ಕೃಪಾತಿಶಯವನ್ನು 7 ಮುಂದಣ ಯುಗಗಳಲ್ಲಿ ತೋರಿಸಬೇಕೆಂದು ಕ್ರಿಸ್ತ ಯೇಸುವಿನಲ್ಲಿರುವ ನಮ್ಮನ್ನು ಆತನೊಂದಿಗೆ ಎಬ್ಬಿಸಿ ಪರಲೋಕದಲ್ಲಿ ಆತನೊಂದಿಗೆ ಕೂಡ್ರಿಸಿದ್ದಾನೆ. 8 ನಂಬಿಕೆಯ ಮೂಲಕ ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ. ಆ ರಕ್ಷಣೆಯು ನಿಮ್ಮಿಂದುಂಟಾದದ್ದಲ್ಲ, ಅದು ದೇವರ ವರವೇ. 9 ಅದು ಪುಣ್ಯಕ್ರಿಯೆಗಳಿಂದ ಉಂಟಾದದ್ದಲ್ಲ; ಆದದರಿಂದ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ. 10 ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇವಿುಸಿದನು. ಯೆಹೂದ್ಯರಿಗೆ ಉಂಟಾದ ಎಲ್ಲಾ ವಾಗ್ದಾನಗಳಲ್ಲಿ ಅನ್ಯಜನಗಳು ಕ್ರಿಸ್ತನ ಮುಖಾಂತರ ಸಮಭಾಗಿಗಳಾದರೆಂದು ಬೋಧನೆ ( ಕೊಲೊ. 1.21-29 ) 11 ನೀವು ಜನ್ಮದಿಂದ ಅನ್ಯಜನರಾಗಿದ್ದೀರಿ; ಶರೀರದಲ್ಲಿ ಕೈಯಿಂದ ಸುನ್ನತಿಮಾಡಿಸಿಕೊಂಡು ಸುನ್ನತಿಯವರೆನಿಸಿಕೊಳ್ಳುವವರು ನಿಮ್ಮನ್ನು ಸುನ್ನತಿಯಿಲ್ಲದವರೆಂದು ಹೇಳುತ್ತಾರೆ. 12 ನೀವು ಪೂರ್ವಕಾಲದಲ್ಲಿ ಕ್ರಿಸ್ತನನ್ನು ಸೇರದವರಾಗಿದ್ದು ಇಸ್ರಾಯೇಲ್ಯ ಹಕ್ಕಿನಲ್ಲಿ ಪಾಲಿಲ್ಲದವರೂ [ಅಬ್ರಹಾಮನಿಗೆ ಉಂಟಾದ] ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಸೇರದವರೂ ಈ ಲೋಕದಲ್ಲಿ ಯಾವ ನಿರೀಕ್ಷೆಯಿಲ್ಲದವರೂ ದೇವರನ್ನರಿಯದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ. 13 ಈಗಲಾದರೋ ಮೊದಲು ದೂರವಾಗಿದ್ದ ನೀವು ಕ್ರಿಸ್ತ ಯೇಸುವನ್ನು ಸೇರಿದವರಾಗಿದ್ದು ಆತನ ರಕ್ತದ ಮೂಲಕ ಸಮೀಪಸ್ಥರಾದಿರಿ. 14 ನಿಮ್ಮನ್ನೂ ನಮ್ಮನ್ನೂ ಒಂದು ಮಾಡಿದವನಾದ ಆತನೇ ನಮಗೆ ಸಮಾಧಾನಕರ್ತೃವಾಗಿದ್ದಾನೆ. ಆತನು ತನ್ನ ಶರೀರವನ್ನು ಸಮರ್ಪಿಸಿದ್ದರಲ್ಲಿ ವಿಧಿರೂಪವಾದ ಆಜ್ಞೆಗಳುಳ್ಳ ಧರ್ಮಶಾಸ್ತ್ರವನ್ನು ತೆಗೆದುಹಾಕಿ ಇದ್ದ ದ್ವೇಷವನ್ನು ಮುಗಿಸಿ ನಮ್ಮನ್ನು ಅಗಲಿಸಿದ ಅಡ್ಡಗೋಡೆಯನ್ನು ಕೆಡವಿಹಾಕಿದನು. 15 ಆತನು ಸಮಾಧಾನಮಾಡುವವನಾಗಿ ಉಭಯರನ್ನೂ ತನ್ನಲ್ಲಿ ಒಬ್ಬ ನೂತನಪುರುಷನನ್ನಾಗಿ ನಿರ್ಮಿಸಿದ್ದಾನೆ; 16 ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಆ ಶಿಲುಬೆಯ ಮೂಲಕ ಉಭಯರನ್ನೂ ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನಪಡಿಸಿದ್ದಾನೆ. 17 ಇದಲ್ಲದೆ ಆತನು ಬಂದು ದೂರವಾಗಿದ್ದ ನಿಮಗೂ ಸಮಾಧಾನವನ್ನು ಮತ್ತು ಸಮೀಪವಾಗಿದ್ದವರಿಗೂ ಸಮಾಧಾನವನ್ನು ಸಾರಿದನು. 18 ಆತನ ಮೂಲಕ ನಾವೂ ನೀವೂ ಒಬ್ಬ ಆತ್ಮನನ್ನೇ ಹೊಂದಿದವರಾಗಿ ತಂದೆಯ ಬಳಿಗೆ ಪ್ರವೇಶಿಸುವದಕ್ಕೆ ಮಾರ್ಗವಾಯಿತು. 19 ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದೀರಿ. 20 ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ. 21 ಯೇಸು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು; ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ. 22 ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India