Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 8 - ಕನ್ನಡ ಸತ್ಯವೇದವು J.V. (BSI)


ಲೇವಿಕರ ಯಾಜಕತ್ವವು ಮುಂದೆ ಬರಬೇಕಾದದ್ದನ್ನು ಸೂಚಿಸುವ ಛಾಯೆಯಾಗಿರುವದರಿಂದ ತಾತ್ಕಾಲಿಕವಾದದ್ದು; ಯೇಸುವಿನ ಯಾಜಕತ್ವವು ಶಾಶ್ವತವಾದದ್ದು

1 ನಾವು ಈಗ ಹೇಳುವ ಸಂಗತಿಗಳಲ್ಲಿ ಮುಖ್ಯವಾದ ಮಾತೇನಂದರೆ - ಪರಲೋಕದೊಳಗೆ ಮಹತ್ವವುಳ್ಳ ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾದಂಥ ಮಹಾಯಾಜಕನು ನಮಗಿದ್ದಾನೆ.

2 ಈತನು ಪವಿತ್ರಸ್ಥಾನದಲ್ಲಿ ಅಂದರೆ ಮನುಷ್ಯನು ಹಾಕದೆ ಕರ್ತನೇ ಹಾಕಿದ ನಿಜವಾದ ದೇವದರ್ಶನಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ.

3 ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವದಕ್ಕೆ ನೇಮಕವಾಗಿರುತ್ತಾನಷ್ಟೆ ; ಆದದರಿಂದ ಸಮರ್ಪಿಸುವದಕ್ಕೆ ಈ ಮಹಾಯಾಜಕನಿಗೂ ಏನಾದರೂ ಇರಬೇಕು.

4 ಈತನು ಇನ್ನೂ ಭೂವಿುಯ ಮೇಲೆ ಇದ್ದದ್ದೇ ಆದರೆ ಯಾಜಕನಾಗಿರುತ್ತಿರಲಿಲ್ಲ; ಯಾಕಂದರೆ ಧರ್ಮನಿಯಮದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದೇ ಇರುತ್ತಾರೆ;

5 ಅವರು ಪರಲೋಕದಲ್ಲಿರುವ ದೇವಾಲಯದ ಪ್ರತಿರೂಪವೂ ಛಾಯೆಯೂ ಆಗಿರುವ ಆಲಯದಲ್ಲಿ ಯಾಜಕತ್ವವನ್ನು ನಡಿಸುವವರು. ಮೋಶೆಯು ದೇವದರ್ಶನಗುಡಾರವನ್ನು ಮಾಡುವದಕ್ಕಿದ್ದಾಗ ಬೆಟ್ಟದಲ್ಲಿ ನಾನು ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನು ಮಾಡಿಸಬೇಕು ಎಂಬ ದೈವೋಕ್ತಿಯು ಅವನಿಗೆ ಉಂಟಾಯಿತಲ್ಲಾ.

6 ಆದರೆ ಯೇಸು ಅದಕ್ಕಿಂತ ಶ್ರೇಷ್ಠವಾದ ಯಾಜಕೋದ್ಯೋಗವನ್ನು ಹೊಂದಿದವನಾಗಿದ್ದಾನೆ; ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ.

7 ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲದ್ದಾಗಿದ್ದರೆ ಎರಡನೆಯ ಒಡಂಬಡಿಕೆಗೆ ಅವಕಾಶವು ಇರುತ್ತಿರಲಿಲ್ಲ.

8 ಆದರೆ ದೇವರು ಆ ಒಡಂಬಡಿಕೆಗೆ ಸೇರಿದವರ ಮೇಲೆ ತಪ್ಪುಹೊರಿಸಿ ಹೀಗೆಂದನು - ಇಗೋ, ನಾನು ಇಸ್ರಾಯೇಲ್‍ವಂಶದವರೊಂದಿಗೂ ಯೆಹೂದವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು ಎಂದು ಕರ್ತನು ಹೇಳುತ್ತಾನೆ;

9 ಈ ಒಡಂಬಡಿಕೆಯು ನಾನು ಇವರ ಪಿತೃಗಳನ್ನು ಕೈಹಿಡಿದು ಐಗುಪ್ತದೇಶದೊಳಗಿಂದ ಕರಕೊಂಡು ಬಂದ ಕಾಲದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ; ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾದದರಿಂದ ನಾನು ಅವರ ಚಿಂತೆಯನ್ನು ಬಿಟ್ಟೆನೆಂದು ಕರ್ತನು ಹೇಳುತ್ತಾನೆ.

10 ಆ ದಿನಗಳು ಬಂದ ಮೇಲೆ ನಾನು ಇಸ್ರಾಯೇಲ್‍ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು - ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು, ಅವರ ಹೃದಯದ ಮೇಲೆ ಅವುಗಳನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು;

11 ಒಂದೇ ಊರಿನವರೂ ಅಣ್ಣತಮ್ಮಂದಿರೂ ಒಬ್ಬರಿಗೊಬ್ಬರು - ಕರ್ತನ ಜ್ಞಾನವನ್ನು ಪಡೆಯಿರಿ ಎಂದು ಬೋಧಿಸಬೇಕಾಗಿರುವದಿಲ್ಲ; ಚಿಕ್ಕವರು ಮೊದಲುಗೊಂಡು ದೊಡ್ಡವರ ತನಕ ಎಲ್ಲರೂ ನನ್ನ ಜ್ಞಾನವನ್ನು ಪಡೆದಿರುವರು;

12 ನಾನು ಅವರ ದುಷ್ಕೃತ್ಯಗಳ ವಿಷಯವಾಗಿ ಕ್ಷಮೆಯುಳ್ಳವನಾಗಿರುವೆನು, ಅವರ ಪಾಪಗಳನ್ನು ನನ್ನ ನೆನಪಿಗೆ ಎಂದಿಗೂ ತರುವದಿಲ್ಲ ಎಂದು ಕರ್ತನು ನುಡಿಯುತ್ತಾನೆ.

13 ಇಲ್ಲಿ ಹೊಸ ಒಡಂಬಡಿಕೆಯೆಂದು ಹೇಳಿದ್ದರಲ್ಲಿ ಮೊದಲಿದ್ದದ್ದನ್ನು ಹಳೇದಾಗಿ ಮಾಡಿದ್ದಾನೆ. ಆದರೆ ಹಳೇದಾಗುತ್ತಾ ಮುದಿಯಾಗುವಂಥದಕ್ಕೆ ಅಂತ್ಯವು ಸಮೀಪವಾಗಿದೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು