ಇಬ್ರಿಯರಿಗೆ 7 - ಕನ್ನಡ ಸತ್ಯವೇದವು J.V. (BSI)ಯೇಸು ಮೆಲ್ಕಿಜೆದೇಕನ ತರಹದ ಯಾಜಕನಾಗಿದ್ದು ಲೇವಿಕ ಯಾಜಕರಿಗಿಂತ ಉತ್ತಮನು 1 ಈ ಮೆಲ್ಕಿಜೆದೇಕನು ಸಾಲೇವಿುನ ಅರಸನೂ ಪರಾತ್ಪರನಾದ ದೇವರ ಯಾಜಕನೂ ಆಗಿದ್ದನು; ರಾಜರನ್ನು ಹೊಡೆದು ಹಿಂತಿರುಗಿ ಬರುತ್ತಿದ್ದ ಅಬ್ರಹಾಮನನ್ನು ಎದುರುಗೊಂಡು ಅವನನ್ನು ಆಶೀರ್ವದಿಸಿದನು; 2 ಅವನಿಗೆ ಅಬ್ರಹಾಮನು ತಾನು ಜಯಿಸಿಕೊಂಡು ಬಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಕೊಟ್ಟನು. ಅವನ ಹೆಸರಿನ ಅರ್ಥವು ನೀತಿರಾಜ ಎಂಬದು; ಇದಲ್ಲದೆ ಅವನು ಸಾಲೇವಿುನರಾಜ ಅಂದರೆ ಸಮಾಧಾನರಾಜ; 3 ಅವನಿಗೆ ತಂದೆಯೂ ತಾಯಿಯೂ ವಂಶಾವಳಿಯೂ ಇಲ್ಲ, ಜನ್ಮದ ಆರಂಭವೂ ಆಯುಷ್ಯದ ಅಂತ್ಯವೂ ಇಲ್ಲ. ಅವನು ದೇವರ ಮಗನಿಗೆ ಸಮಾನ ಮಾಡಲ್ಪಟ್ಟಿದ್ದಾನೆ. ಅವನು ನಿರಂತರವಾಗಿ ಯಾಜಕನಾಗಿರುವವನು. 4 ಈ ಮನುಷ್ಯನು ಎಷ್ಟು ದೊಡ್ಡವನೆಂದು ಆಲೋಚಿಸಿರಿ. ನಮ್ಮ ಮೂಲಪಿತೃವಾದ ಅಬ್ರಹಾಮನು ತಾನು ಸುಲುಕೊಂಡು ಬಂದ ಶ್ರೇಷ್ಠವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನಲ್ಲಾ. 5 ಲೇವಿಯ ಕುಲದವರಲ್ಲಿ ಯಾಜಕೋದ್ಯೋಗವನ್ನು ಹೊಂದುವವರು ಜನರಿಂದ ಅಂದರೆ ಅಬ್ರಹಾಮನ ವಂಶಸ್ಥರಾಗಿರುವ ತಮ್ಮ ಸಹೋದರರಿಂದಲೇ ದಶಮಭಾಗಗಳನ್ನು ತೆಗೆದುಕೊಳ್ಳುವದಕ್ಕೆ ಧರ್ಮಶಾಸ್ತ್ರದಲ್ಲಿ ಅಪ್ಪಣೆ ಉಂಟು. 6 ಆದರೆ ಅವರ ವಂಶಾವಳಿಗೆ ಸೇರದೆ ಇರುವ ಮೆಲ್ಕಿಜೆದೇಕನು ಅಬ್ರಹಾಮನಿಂದಲೇ ದಶಮಭಾಗಗಳನ್ನು ತಕ್ಕೊಂಡದ್ದಲ್ಲದೆ ದೇವರಿಂದ ವಾಗ್ದಾನಗಳನ್ನು ಹೊಂದಿದವನಾದ ಅವನಿಗೆ ಆಶೀರ್ವಾದ ಕೊಟ್ಟನು. 7 ಆಶೀರ್ವಾದ ಹೊಂದುವವನಿಗಿಂತ ಆಶೀರ್ವದಿಸುವವನು ದೊಡ್ಡವನು ಎಂಬದು ವಿವಾದವಿಲ್ಲದ ಮಾತಷ್ಟೆ. 8 ಇದಲ್ಲದೆ ಲೇವಿಯರ ಕ್ರಮವನ್ನು ನೋಡಿದರೆ ಸಾಯತಕ್ಕ ಮನುಷ್ಯರು ದಶಮಭಾಗಗಳನ್ನು ತಕ್ಕೊಳ್ಳುತ್ತಾರೆ; ಆದರೆ ಮೆಲ್ಕಿಜೆದೇಕನ ಕ್ರಮವನ್ನು ನೋಡಿದರೆ ಜೀವಿಸುತ್ತಿದ್ದಾನೆಂದು ಸಾಕ್ಷಿಹೊಂದಿರುವವನು ತಕ್ಕೊಳ್ಳುತ್ತಾನೆ. 9 ಇದು ಮಾತ್ರವಲ್ಲದೆ ದಶಮಭಾಗಗಳನ್ನು ತಕ್ಕೊಳ್ಳುವ ಲೇವಿಯೂ ಕೂಡ ಅಬ್ರಹಾಮನ ಮೂಲಕ ದಶಮಭಾಗಗಳನ್ನು ಕೊಟ್ಟ ಹಾಗಾಯಿತೆಂದು ಹೇಳಬಹುದು; 10 ಹೇಗಂದರೆ ಮೆಲ್ಕಿಜೆದೇಕನು ಲೇವಿಯ ಮೂಲಪುರುಷನನ್ನು ಎದುರುಗೊಂಡಾಗ ಲೇವಿಯು ತತ್ವರೂಪವಾಗಿ ಇವನೊಳಗೆ ಇದ್ದನು. 11 ಇಸ್ರಾಯೇಲ್ಯರಿಗೆ ಉಂಟಾದ ಧರ್ಮಶಾಸ್ತ್ರವು ಲೇವಿಕ ಯಾಜಕತ್ವದ ಮೇಲೆಯೇ ಆಧಾರಗೊಂಡಿದೆಯಷ್ಟೆ. ಆ ಯಾಜಕತ್ವದಿಂದ ಸಂಪೂರ್ಣಸಿದ್ಧಿ ಉಂಟಾಗಿದ್ದರೆ ಆರೋನನ ತರಹದವನಾಗಿರದೆ ಮೆಲ್ಕಿಜೆದೇಕನ ತರಹದ ಬೇರೊಬ್ಬ ಯಾಜಕನು ಬರುವದಕ್ಕೆ ಅವಶ್ಯವೇನಿತ್ತು? 12 ಯಾಜಕತ್ವವು ಬೇರೆಯಾದರೆ ಧರ್ಮಶಾಸ್ತ್ರವು ಕೂಡ ಬೇರೆಯಾಗುವದು ಅಗತ್ಯ. 13 ಮೇಲ್ಕಂಡ ಮಾತು ಯಾವಾತನ ವಿಷಯದಲ್ಲಿ ಹೇಳಿದೆಯೋ ಆತನು ಬೇರೊಂದು ಕುಲದಲ್ಲಿ ಹುಟ್ಟಿದವನು; ಆ ಕುಲದವರಲ್ಲಿ ಒಬ್ಬರೂ ಯಜ್ಞವೇದಿಯ ಬಳಿಯಲ್ಲಿ ಸೇವೆಮಾಡಿದ್ದಿಲ್ಲ. 14 ನಮ್ಮ ಕರ್ತನು ಯೆಹೂದ ಕುಲದಲ್ಲಿ ಜನಿಸಿದವನೆಂಬದು ಪ್ರಸಿದ್ಧವಾಗಿದೆಯಷ್ಟೆ; ಈ ಕುಲದ ವಿಷಯದಲ್ಲಿ ಮೋಶೆಯು ಯಾಜಕರ ಸಂಬಂಧವಾಗಿ ಒಂದು ಮಾತನ್ನಾದರೂ ಹೇಳಲಿಲ್ಲ. 15-16 ಇದಲ್ಲದೆ ಬೇರೊಬ್ಬ ಯಾಜಕನು ಶರೀರಧರ್ಮ ವಿಷಯವಾದ ನಿಯಮದ ಪ್ರಕಾರವಾಗಿರದೆ ಮೆಲ್ಕಿಜೆದೇಕನ ಸಾದೃಶ್ಯದಲ್ಲಿ ನಿರ್ಲಯವಾದ ಜೀವದ ಶಕ್ತಿಯುಳ್ಳವನಾಗಿದ್ದು ಬರಬೇಕಾದದರಿಂದ ನಮ್ಮ ಸಿದ್ಧಾಂತ ಮತ್ತೂ ಸ್ವಷ್ಟವಾಯಿತು. 17 ಆತನ ವಿಷಯದಲ್ಲಿ - ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ 18 ಯಾಜಕನಾಗಿದ್ದೀ ಎಂದು ಹೇಳಿಯದೆಯಲ್ಲಾ. 19 ಧರ್ಮಶಾಸ್ತ್ರವು ಯಾವದನ್ನೂ ಸಿದ್ಧಿಗೆ ತಾರದೆ ಇರುವದರಿಂದ ಮೊದಲಿದ್ದ ನಿಯಮವು ನಿರ್ಬಲವಾಗಿಯೂ ನಿಷ್ಪ್ರಯೋಜಕವಾಗಿಯೂ ಇದ್ದು ರದ್ದಾಗಿಹೋಯಿತು. ಅದಕ್ಕೆ ಬದಲಾಗಿ ಉತ್ತಮವಾಗಿರುವ ಒಂದು ನಿರೀಕ್ಷಾಧಾರವು ಪ್ರಾಬಲ್ಯಕ್ಕೆ ಬಂತು. ಈ ನಿರೀಕ್ಷಾಧಾರವು ನಮ್ಮನ್ನು ದೇವರ ಸನ್ನಿಧಿಗೆ ಸೇರಿಸುವಂಥದು. 20-21 ಇದಲ್ಲದೆ ಲೇವಿಯರು ಆಣೆಯಿಲ್ಲದೆ ಯಾಜಕರಾದರು; ಆತನಾದರೋ ಆಣೆಯೊಡನೆ ಯಾಜಕನಾಗಿ ಮಾಡಲ್ಪಟ್ಟನು. ದೇವರು ಆತನಿಗೆ - ನೀನು ಸದಾಕಾಲವೂ ಯಾಜಕನಾಗಿದ್ದೀ ಎಂದು ಕರ್ತನೆಂಬ ನಾನು ಆಣೆಯಿಟ್ಟು ನುಡಿದೆನು; ಪಶ್ಚಾತ್ತಾಪಪಡುವದಿಲ್ಲ ಎಂಬದಾಗಿ ಹೇಳಿದನಲ್ಲಾ. 22 ಯೇಸು ಆಣೆಯೊಡನೆಯೇ ಯಾಜಕನಾದದರಿಂದ ಎಷ್ಟೋ ಶ್ರೇಷ್ಠವಾದ ಒಡಂಬಡಿಕೆಗೆ ಹೊಣೆಗಾರನಾದನು. 23 ಲೇವಿಯರು ಶಾಶ್ವತವಾಗಿ ಉದ್ಯೋಗ ನಡಿಸುವದಕ್ಕೆ ಮರಣವು ಅಡ್ಡಿಯಾದದರಿಂದ ಅವರಲ್ಲಿ ಯಾಜಕರಾದವರು ಅನೇಕರು; 24 ಆತನಾದರೋ ಸದಾಕಾಲವಿರುವದರಿಂದ ಆತನ ಯಾಜಕತ್ವವು ಮತ್ತೊಬ್ಬರಿಗೆ ಹೋಗುವಂಥದಲ್ಲ. 25 ಆದಕಾರಣ ಆತನು ತನ್ನ ಮೂಲಕ ದೇವರ ಬಳಿಗೆ ಬರುವವರನ್ನು ಸಂಪೂರ್ಣವಾಗಿ ರಕ್ಷಿಸುವದಕ್ಕೆ ಶಕ್ತನಾಗಿದ್ದಾನೆ; ಅವರಿಗೋಸ್ಕರ ವಿಜ್ಞಾಪನೆಮಾಡುವದಕ್ಕೆ ಯಾವಾಗಲೂ ಬದುಕುವವನಾಗಿದ್ದಾನೆ. 26 ಇಂಥವನೇ ನಮಗೆ ಬೇಕಾದ ಮಹಾಯಾಜಕನು. ಈತನು ಪರಿಶುದ್ಧನೂ ನಿರ್ದೋಷಿಯೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವವನೂ ಆಕಾಶಮಂಡಲಗಳಿಗಿಂತ ಉನ್ನತದಲ್ಲಿರುವವನೂ ಆಗಿರುವನು. 27 ಮೊದಲು ತಮ್ಮ ಪಾಪಪರಿಹಾರಕ್ಕಾಗಿ ಆಮೇಲೆ ಜನರ ಪಾಪಪರಿಹಾರಕ್ಕಾಗಿ ಸಮರ್ಪಣೆಮಾಡುವ ಲೇವಿಕ ಮಹಾಯಾಜಕರಂತೆ ಈತನು ಪ್ರತಿನಿತ್ಯವೂ ಸಮರ್ಪಿಸಬೇಕಾದ ಅವಶ್ಯವಿಲ್ಲ. ಈತನು ತನ್ನನ್ನೇ ಸಮರ್ಪಿಸಿಕೊಂಡು ಒಂದೇ ಸಾರಿ ಆ ಕೆಲಸವನ್ನು ಮಾಡಿ ಮುಗಿಸಿದನು. 28 ಧರ್ಮಶಾಸ್ತ್ರವು ನಿರ್ಬಲರಾದ ಮನುಷ್ಯರನ್ನು ಮಹಾಯಾಜಕರನ್ನಾಗಿ ನೇವಿುಸುತ್ತದೆ; ಆದರೆ ಧರ್ಮಶಾಸ್ತ್ರದ ತರುವಾಯ ಆಣೆಯೊಡನೆ ಉಂಟಾದ ವಾಕ್ಯವು ಸದಾಕಾಲಕ್ಕೂ ಸರ್ವಸಂಪೂರ್ಣನಾಗಿರುವ ಮಗನನ್ನೇ ನೇವಿುಸುತ್ತದೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India