ಇಬ್ರಿಯರಿಗೆ 5 - ಕನ್ನಡ ಸತ್ಯವೇದವು J.V. (BSI)1 ಪ್ರತಿಯೊಬ್ಬ ಮಹಾಯಾಜಕನು ಮನುಷ್ಯರೊಳಗಿಂದ ಆರಿಸಲ್ಪಟ್ಟವನಾಗಿದ್ದು ಮನುಷ್ಯರಿಗೋಸ್ಕರ ದೇವರ ಕಾರ್ಯಗಳನ್ನು ಜರಗಿಸುವದಕ್ಕಾಗಿ ನೇವಿುಸಲ್ಪಡುತ್ತಾನಲ್ಲಾ. ಅವನು ಅವರಿಗೋಸ್ಕರ ಕಾಣಿಕೆಗಳನ್ನೂ ಪಾಪನಿವಾರಣಕ್ಕಾಗಿ ಯಜ್ಞಗಳನ್ನೂ ಸಮರ್ಪಿಸಬೇಕು. 2 ತಾನೂ ಬಲಹೀನನಾಗಿರುವದರಿಂದ ಅವನು ಜ್ಞಾನವಿಲ್ಲದವರನ್ನೂ ಮಾರ್ಗತಪ್ಪಿ ನಡೆಯುವವರನ್ನೂ ತಾಳ್ಮೆಯಿಂದ ಸಹಿಸಿಕೊಳ್ಳುವದಕ್ಕೆ ಶಕ್ತನಾಗಿರುವನು. 3 ಆ ಬಲಹೀನತೆಯ ಕಾರಣದಿಂದ ಅವನು ಜನರಿಗೋಸ್ಕರ ಹೇಗೋ ಹಾಗೆಯೇ ತನಗೋಸ್ಕರವೂ ಪಾಪನಿವಾರಣಾರ್ಥವಾಗಿ ಯಜ್ಞಗಳನ್ನು ಮಾಡಬೇಕಾದವನಾಗಿದ್ದಾನೆ. 4 ಇದಲ್ಲದೆ ಯಾವನೂ ತನ್ನಷ್ಟಕ್ಕೆ ತಾನೇ ಈ ಗೌರವವನ್ನು ವಹಿಸಿಕೊಳ್ಳದೆ ದೇವರಿಂದ ನೇವಿುಸಲ್ಪಟ್ಟು ವಹಿಸಿಕೊಳ್ಳುತ್ತಾನೆ; ಆರೋನನು ಸಹ ದೇವರಿಂದಲೇ ನೇವಿುಸಲ್ಪಟ್ಟು ಆ ಗೌರವವನ್ನು ವಹಿಸಿಕೊಂಡನಲ್ಲಾ. 5 ಹಾಗೆಯೇ ಕ್ರಿಸ್ತನು ಸಹ ತನ್ನನ್ನು ಘನಪಡಿಸಿಕೊಂಡು ತನ್ನನ್ನು ತಾನೇ ಮಹಾಯಾಜಕನನ್ನಾಗಿ ಮಾಡಿಕೊಳ್ಳಲಿಲ್ಲ; ಆದರೆ - ನನಗೆ ನೀನು ಮಗನು; ನಾನೇ ಈಹೊತ್ತು ನಿನ್ನನ್ನು ಪಡೆದಿದ್ದೇನೆ 6 ಎಂದು ಹೇಳಿದಾತನೇ ಈ ಗೌರವವನ್ನು ಆತನಿಗೆ ಕೊಟ್ಟನು. ಆತನು ಇನ್ನೊಂದು ಸ್ಥಳದಲ್ಲಿ - ನೀನು ಸದಾಕಾಲವೂ ಮೆಲ್ಕಿಜೆದೇಕನ ತರಹದ ಯಾಜಕನು ಎಂದು ಹೇಳುತ್ತಾನೆ. 7 ಕ್ರಿಸ್ತನು ತಾನು ಭೂಲೋಕದಲ್ಲಿದ್ದಾಗ ಮರಣಕ್ಕೆ ತಪ್ಪಿಸಿ ಕಾಪಾಡ ಶಕ್ತನಾಗಿರುವಾತನಿಗೆ ಬಲವಾಗಿ ಕೂಗುತ್ತಾ ಕಣ್ಣೀರನ್ನು ಸುರಿಸುತ್ತಾ ಪ್ರಾರ್ಥನೆ ವಿಜ್ಞಾಪನೆಗಳನ್ನು ಸಮರ್ಪಿಸಿ ದೇವರ ಮೇಲಣ ಭಯಭಕ್ತಿಯ ನಿವಿುತ್ತ ಕೇಳಲ್ಪಟ್ಟನು. 8 ಹೀಗೆ ಆತನು ಮಗನಾಗಿದ್ದರೂ ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು. 9-10 ಇದಲ್ಲದೆ ಆತನು ಸಿದ್ಧಿಗೆ ಬಂದು ದೇವರಿಂದ ಮೆಲ್ಕಿಜೆದೇಕನ ತರಹದ ಮಹಾಯಾಜಕನೆನಿಸಿಕೊಂಡವನಾಗಿ ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು. ವೃದ್ಧಿಯಾಗದಿರುವ ಕ್ರೈಸ್ತರಿಗೆ ಎಚ್ಚರಿಕೆ 11 ಈ ವಿಷಯದಲ್ಲಿ ನಾವು ಹೇಳಬೇಕಾದ ಮಾತು ಬಹಳ ಉಂಟು, ಆದರೆ ನಿಮ್ಮ ಕಿವಿಗಳು ಮಂದವಾದದರಿಂದ ಅದನ್ನು ವಿವರಿಸುವದು ಕಷ್ಟವಾಗಿದೆ. 12 ಕಾಲವನ್ನು ನೋಡಿದರೆ ನೀವು ಇಷ್ಟರೊಳಗೆ ಬೋಧಕರಾಗಿರಬೇಕಾಗಿದ್ದರೂ ಒಬ್ಬನು ನಿಮಗೆ ದೈವೋಕ್ತಿಗಳ ಮೂಲಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ. 13 ಹಾಲು ಬೇಕಾದವನು ಕೂಸಿನಂತಿದ್ದು ನೀತಿವಾಕ್ಯದಲ್ಲಿ ಅನುಭವವಿಲ್ಲದವನಾಗಿದ್ದಾನೆ. 14 ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India