ಇಬ್ರಿಯರಿಗೆ 3 - ಕನ್ನಡ ಸತ್ಯವೇದವು J.V. (BSI)ಮೋಶೆಗಿಂತ ಯೇಸು ಶ್ರೇಷ್ಠನು 1 ಆದದರಿಂದ ದೇವಜನರಾದ ಸಹೋದರರೇ, ಪರಲೋಕಸ್ವಾಸ್ಥ್ಯಕ್ಕಾಗಿ ನನ್ನೊಂದಿಗೆ ಕರೆಯಲ್ಪಟ್ಟವರೇ, ನಾವು ಪ್ರತಿಜ್ಞೆಮಾಡಿ ಒಪ್ಪಿಕೊಂಡಿರುವ ದೇವಪ್ರೇಷಿತನೂ ಮಹಾಯಾಜಕನೂ ಆಗಿರುವ ಯೇಸುವನ್ನು ಲಕ್ಷ್ಯವಿಟ್ಟು ಯೋಚಿಸಿರಿ. 2 ಮೋಶೆಯು ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಂತೆಯೇ ಯೇಸುವೂ ತನ್ನನ್ನು ನೇವಿುಸಿದಾತನಿಗೆ ನಂಬಿಗಸ್ತನಾಗಿದ್ದಾನೆ. 3 ಮನೆಗಿಂತ ಮನೆಕಟ್ಟಿದವನಿಗೆ ಹೆಚ್ಚಾದ ಮಾನವಿರುವದರಿಂದ ಮೋಶೆಗಿಂತ ಯೇಸುವು ಹೆಚ್ಚಾದ ಮಾನಕ್ಕೆ ಯೋಗ್ಯನೆಂದೆಣಿಸಲ್ಪಟ್ಟಿದ್ದಾನೆ. 4 ಪ್ರತಿ ಮನೆಯನ್ನು ಯಾರೋ ಒಬ್ಬನು ಕಟ್ಟಿರುವನು; ಸಮಸ್ತವನ್ನು ಕಟ್ಟಿದಾತನು ದೇವರೇ. 5 ಮೋಶೆಯು ಸೇವಕನಾಗಿ ದೇವರ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದನು; ಅವನು ಮುಂದೆ ಪ್ರಕಟವಾಗಬೇಕಾಗಿದ್ದ ಸಂಗತಿಗಳಿಗೆ ಸಾಕ್ಷಿಯಾಗಿದ್ದನು. 6 ಕ್ರಿಸ್ತನಾದರೋ ಮಗನಾಗಿ ದೇವರ ಮನೆಯ ಮೇಲೆ ಅಧಿಕಾರಿಯಾಗಿದ್ದಾನೆ; ನಾವು ನಮ್ಮ ಧೈರ್ಯವನ್ನೂ ನಮ್ಮ ನಿರೀಕ್ಷೆಯಿಂದುಂಟಾಗುವ ಉತ್ಸಾಹವನ್ನೂ ಕಡೇ ತನಕ ದೃಢವಾಗಿ ಹಿಡಿದುಕೊಂಡವರಾದರೆ ನಾವೇ ದೇವರ ಮನೆಯವರು. ದೇವರು ವಾಗ್ದಾನಮಾಡಿದ ವಿಶ್ರಾಂತಿಯನ್ನು ನಾವು ಹೊಂದಬೇಕಾದರೆ ನಾವು ನಂಬದವರಾಗಿರದೆ ಸ್ಥಿರಚಿತ್ತದಿಂದಿರುವದು ಅಗತ್ಯ 7 ಆದದರಿಂದ ಪವಿತ್ರಾತ್ಮನು ಹೇಳುವ ಪ್ರಕಾರ - ನೀವು ಈಹೊತ್ತು ದೇವರ ಶಬ್ದಕ್ಕೆ ಕಿವಿಗೊಟ್ಟರೆ 8 ನಿಮ್ಮ ಹಿರಿಯರು ದೇವರ ಕೋಪವನ್ನೆಬ್ಬಿಸಿದ ಸ್ಥಳದಲ್ಲಿ ಅರಣ್ಯದೊಳಗೆ ದೇವರನ್ನು ಪರೀಕ್ಷಿಸಿದ ದಿನದಲ್ಲಿ ಮಾಡಿದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿಕೊಳ್ಳಬೇಡಿರಿ. 9 ಅವರು ಅರಣ್ಯದಲ್ಲಿ ನನ್ನನ್ನು ಪರೀಕ್ಷಿಸಿ ಶೋಧಿಸಿ ನಾಲ್ವತ್ತು ವರುಷ ನಾನು ನಡಿಸುತ್ತಿದ್ದ ಕೃತ್ಯಗಳನ್ನು ನೋಡಿದರು. 10 ಆದದರಿಂದ ನಾನು ಆ ಸಂತತಿಯವರ ಮೇಲೆ ಬಹಳವಾಗಿ ಕೋಪಿಸಿಕೊಂಡು - ಅವರು ಯಾವಾಗಲೂ ಹೃದಯದಲ್ಲಿ ತಪ್ಪಿಹೋಗುವವರು ಎಂದು ಹೇಳಿದೆನು. ಆದರೆ ಅವರು ನನ್ನ ಮಾರ್ಗವನ್ನು ತಿಳುಕೊಳ್ಳಲಿಲ್ಲ. 11 ಹೀಗಿರಲು ಇವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ಕೋಪಗೊಂಡು ಪ್ರಮಾಣಮಾಡಿದೆನು. 12 ಸಹೋದರರೇ, ನೋಡಿಕೊಳ್ಳಿರಿ, ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗುವ ಅಪನಂಬಿಕೆಯುಳ್ಳ ಕೆಟ್ಟ ಹೃದಯವು ನಿಮ್ಮೊಳಗೆ ಯಾವನಲ್ಲಿಯೂ ಇರಬಾರದು. 13 ನಿಮ್ಮಲ್ಲಿ ಒಬ್ಬರಾದರೂ ಪಾಪದಿಂದ ಮೋಸಹೋಗಿ ಕಠಿನರಾಗದಂತೆ ಈಹೊತ್ತು ಎಂಬ ಕಾಲವು ಇರುವ ತನಕ ಪ್ರತಿನಿತ್ಯವೂ ಒಬ್ಬರನ್ನೊಬ್ಬರು ಎಚ್ಚರಿಸಿರಿ. 14 ಮೊದಲಿಂದಿರುವ ಭರವಸವನ್ನು ಅಂತ್ಯದವರೆಗೂ ದೃಢವಾಗಿ ಹಿಡಿದುಕೊಳ್ಳುವ ಪಕ್ಷಕ್ಕೆ ಕ್ರಿಸ್ತನಲ್ಲಿ ಪಾಲುಗಾರರಾಗಿದ್ದೇವಲ್ಲಾ! 15 ನೀವು ಈಹೊತ್ತು ದೇವರ ಶಬ್ದಕ್ಕೆ ಕಿವಿಗೊಟ್ಟರೆ, ನಿಮ್ಮ ಹಿರಿಯರು ದೇವರ ಕೋಪವನ್ನೆಬ್ಬಿಸಿದ ಸ್ಥಳದಲ್ಲಿ ಮಾಡಿದಂತೆ ನಿಮ್ಮ ಹೃದಯಗಳನ್ನು ಕಠಿನಮಾಡಿಕೊಳ್ಳಬೇಡಿರಿ 16 ಎಂಬದರಲ್ಲಿ ಕೇಳಿ ಕೋಪವನ್ನೆಬ್ಬಿಸಿದವರು ಯಾರು? ಮೋಶೆಯ ಕೈಕೆಳಗಿದ್ದು ಐಗುಪ್ತದೊಳಗಿಂದ ಹೊರಟುಬಂದವರೆಲ್ಲರೂ ಅಲ್ಲವೇ. 17 ಮತ್ತು ನಾಲ್ವತ್ತು ವರುಷ ಆತನು ಯಾರ ಮೇಲೆ ಬಹಳವಾಗಿ ಕೋಪಿಸಿಕೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ. 18 ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ. ನನ್ನ ವಿಶ್ರಾಂತಿಯಲ್ಲಿ ನೀವು ಸೇರುವದೇ ಇಲ್ಲವೆಂದು ಯಾರನ್ನು ಕುರಿತು ಪ್ರಮಾಣಮಾಡಿದನು? ಅವಿಧೇಯರನ್ನು ಕುರಿತಲ್ಲವೇ. 19 ಅವರು ಸೇರಲಾರದೆ ಹೋದದ್ದು ಅಪನಂಬಿಕೆಯಿಂದಲೇ ಎಂದು ತಿಳಿದುಕೊಳ್ಳುತ್ತೇವೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India