ಇಬ್ರಿಯರಿಗೆ 2 - ಕನ್ನಡ ಸತ್ಯವೇದವು J.V. (BSI)1 ಆದದರಿಂದ ನಾವು ಕೇಳಿದ ಸಂಗತಿಗಳಿಗೆ ತಪ್ಪಿಹೋದೇವೆಂದು ಭಯಪಟ್ಟು ಅವುಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿರಬೇಕು. 2 ಯಾಕಂದರೆ ದೇವದೂತರ ಮೂಲಕ ಹೇಳಲ್ಪಟ್ಟ ವಾಕ್ಯವು ಸ್ಥಿರವಾಗಿದ್ದು ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ ಅವಿಧೇಯತ್ವಕ್ಕೂ ನ್ಯಾಯವಾದ ಪ್ರತಿಫಲವುಂಟಾದ ಮೇಲೆ [ನಮ್ಮ ಮುಂದಿಟ್ಟಿರುವ] 3 ಈ ಅತ್ಯಂತ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು; ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು; 4 ಮತ್ತು ದೇವರು ಅವರ ಕೈಯಿಂದ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನಾನಾ ವಿಧವಾದ ಮಹತ್ಕಾರ್ಯಗಳನ್ನೂ ನಡಿಸಿ ಪವಿತ್ರಾತ್ಮವರಗಳನ್ನು ತನ್ನ ಚಿತ್ತಾನುಸಾರವಾಗಿ ಅವರಿಗೆ ಅನುಗ್ರಹಿಸಿ ಅವರ ಮಾತಿಗೆ ಸಾಕ್ಷಿಕೊಡುತ್ತಿದ್ದನು. ಯೇಸು ಸ್ವಲ್ಪಕಾಲ ದೇವದೂತರಿಗಿಂತ ಕಡಿಮೆಯಾದದ್ದಕ್ಕೆ ಕಾರಣ 5 ನಾವು ಪ್ರಸ್ತಾಪಿಸುವ ಮುಂದಣ ಸಾಮ್ರಾಜ್ಯವನ್ನು ಆತನು ದೇವದೂತರಿಗೆ ಅಧೀನ ಮಾಡಲಿಲ್ಲವಲ್ಲಾ. 6 ಶಾಸ್ತ್ರದ ಒಂದು ಭಾಗದಲ್ಲಿ - ಮನುಷ್ಯನು ಎಷ್ಟು ಮಾತ್ರದವನು; ಅವನನ್ನು ನೀನು ಯಾಕೆ ನೆನಸಬೇಕು? ಮಾನವನು ಎಷ್ಟರವನು; ಅವನಲ್ಲಿ ಯಾಕೆ ಲಕ್ಷ್ಯವಿಡಬೇಕು? 7 ಅವನನ್ನು ದೇವದೂತರಿಗಿಂತ ಸ್ವಲ್ಪವೇ ಕಡಿಮೆಯಾಗಿ ಮಾಡಿದಿಯಲ್ಲಾ; ಪ್ರಭಾವವನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿ ಇಟ್ಟಿ; 8 ಎಲ್ಲವನ್ನೂ ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನಮಾಡಿದ್ದೀಯಲ್ಲವೇ ಎಂದು ಸ್ಪಷ್ಟವಾಗಿ ಹೇಳಿದನು. ಆತನು ಎಲ್ಲವನ್ನೂ ಮನುಷ್ಯನಿಗೆ ಅಧೀನಮಾಡಿದನೆಂಬದರಲ್ಲಿ ಅವನಿಗೆ ಒಂದನ್ನಾದರೂ ಅಧೀನಮಾಡದೆ ಬಿಡಲಿಲ್ಲವೆಂದು ಹೇಳಿದ ಹಾಗಾಯಿತು; ಆದರೆ ಎಲ್ಲವೂ ಅವನಿಗೆ ಅಧೀನವಾಗಿರುವದನ್ನು ನಾವು ಇನ್ನೂ ಕಾಣುವದಿಲ್ಲ. 9 ಆದರೂ ದೇವದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು, ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ. ಮೃತಪಟ್ಟದ್ದರಿಂದಲೇ ಮಾನ ಪ್ರಭಾವಗಳನ್ನು ಹೊಂದಿದನು. ಆತನು ದೇವರ ಕೃಪೆಯಿಂದ ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಲೇಬೇಕಾಗಿತ್ತು. 10 ಸಮಸ್ತವು ಯಾವನಿಗೋಸ್ಕರವೂ ಯಾವನಿಂದಲೂ ಉಂಟಾಯಿತೋ ಆತನು ಬಹು ಮಂದಿ ಪುತ್ರರನ್ನು ಪ್ರಭಾವಕ್ಕೆ ಸೇರಿಸುವಲ್ಲಿ ಅವರ ರಕ್ಷಣಾಕರ್ತನನ್ನು ಬಾಧೆಗಳ ಮೂಲಕ ಸಿದ್ಧಿಗೆ ತರುವದು ಆತನಿಗೆ ಯುಕ್ತವಾಗಿತ್ತು. 11 ಯಾಕಂದರೆ ಪವಿತ್ರ ಮಾಡುವಾತನಿಗೂ ಪವಿತ್ರರಾಗುವವರೆಲ್ಲರಿಗೂ ಒಬ್ಬನೇ ತಂದೆ ಇದ್ದಾನೆ. ಈ ಕಾರಣದಿಂದ ಪವಿತ್ರ ಮಾಡುವಾತನು ಪವಿತ್ರರಾಗುವವರನ್ನು ಸಹೋದರರೆನ್ನುವದಕ್ಕೆ ನಾಚಿಕೆಪಡದೆ - 12 ನಿನ್ನ ನಾಮಮಹಿಮೆಯನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿಪದಗಳನ್ನು ಹಾಡುವೆನು ಎಂತಲೂ 13 ನಾನೂ ದೇವರ ಮೇಲೆ ಭರವಸವಿಟ್ಟವನಾಗಿರುವೆನು ಎಂತಲೂ ಇಗೋ, ನಾನೂ ದೇವರು ನನಗೆ ದಯಪಾಲಿಸಿರುವ ಮಕ್ಕಳೂ ಇದ್ದೇವೆ ಎಂತಲೂ ಹೇಳುತ್ತಾನೆ. 14 ಇದಲ್ಲದೆ ಮಕ್ಕಳು ರಕ್ತ ಮಾಂಸಧಾರಿಗಳಾಗಿರುವದರಿಂದ ಆತನೂ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡುವದಕ್ಕೂ, 15 ಮರಣಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು. 16 ಆತನು ದೇವದೂತರನ್ನು ಹಿಡಿದವನೆಂದು ಬರೆದಿಲ್ಲ; ಅಬ್ರಹಾಮನ ಸಂತತಿಯನ್ನು ಕೈಹಿಡಿದಿದ್ದಾನಷ್ಟೆ. 17 ಆದದರಿಂದ ಆತನು ಎಲ್ಲಾ ವಿಷಯಗಳಲ್ಲಿ ತನ್ನ ಸಹೋದರರಿಗೆ ಸಮಾನನಾಗಬೇಕಾಗಿ ಬಂತು. ಹೀಗೆ ಆತನು ಜನರ ಪಾಪಗಳನ್ನು ನಿವಾರಣಮಾಡುವದಕ್ಕಾಗಿ ದೇವರ ಕಾರ್ಯಗಳಲ್ಲಿ ಕರುಣೆಯೂ ನಂಬಿಕೆಯೂ ಉಳ್ಳ ಮಹಾಯಾಜಕನಾದನು. 18 ತಾನೇ ಶೋಧಿಸಲ್ಪಟ್ಟು ಬಾಧೆಯನ್ನು ಅನುಭವಿಸಿರುವದರಿಂದ ಶೋಧಿಸಲ್ಪಡುವವರಿಗೆ ಸಹಾಯಮಾಡುವದಕ್ಕೆ ಶಕ್ತನಾಗಿದ್ದಾನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India