Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 13 - ಕನ್ನಡ ಸತ್ಯವೇದವು J.V. (BSI)


ಯೇಸುವಿನ ಶಿಷ್ಯರು ಸುನಡತೆಯುಳ್ಳವರಾಗಿರಬೇಕೆಂಬದು

1 ಸಹೋದರ ಸ್ನೇಹವು ನೆಲೆಯಾಗಿರಲಿ.

2 ಅತಿಥಿಸತ್ಕಾರಮಾಡುವದನ್ನು ಮರೆಯಬೇಡಿರಿ; ಅದನ್ನು ಮಾಡುವಲ್ಲಿ ಕೆಲವರು ತಿಳಿಯದೆ ದೇವದೂತರನ್ನೂ ಸತ್ಕರಿಸಿದ್ದಾರೆ.

3 ಸೆರೆಯವರ ಸಂಗಡ ನೀವೂ ಜೊತೆ ಸೆರೆಯವರೆಂದು ಭಾವಿಸಿಕೊಂಡು ಅವರನ್ನು ಜ್ಞಾಪಕಮಾಡಿಕೊಳ್ಳಿರಿ. ನಿಮಗೂ ಅನ್ಯಾಯ ಸಂಭವಿಸೀತೆಂದು ತಿಳಿದು ಅನ್ಯಾಯ ಅನುಭವಿಸುವವರನ್ನು ನೆನಸಿರಿ. ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು;

4 ಗಂಡಹೆಂಡರ ಸಂಬಂಧವು ನಿಷ್ಕಳಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.

5 ದ್ರವ್ಯಾಶೆಯಿಲ್ಲದವರಾಗಿರಿ; ನಿಮಗಿರುವವುಗಳಲ್ಲಿ ತೃಪ್ತರಾಗಿರಿ; ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲವೆಂದು ದೇವರು ತಾನೇ ಹೇಳಿದ್ದಾನೆ.

6 ಆದದರಿಂದ - ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು. ನಿಮಗೆ ದೇವರ ವಾಕ್ಯವನ್ನು ತಿಳಿಸಿದ ನಿಮ್ಮ ಸಭಾನಾಯಕರನ್ನು ಜ್ಞಾಪಕಮಾಡಿಕೊಳ್ಳಿರಿ;

7 ಅವರು ಯಾವ ರೀತಿಯಿಂದ ನಡೆದುಕೊಂಡು ಪ್ರಾಣಬಿಟ್ಟರೆಂಬದನ್ನು ಆಲೋಚಿಸಿರಿ; ಅವರ ನಂಬಿಕೆಯನ್ನು ಅನುಸರಿಸಿರಿ.

8 ಯೇಸು ಕ್ರಿಸ್ತನು ನಿನ್ನೆ ಇದ್ದ ಹಾಗೆ ಈಹೊತ್ತೂ ಇದ್ದಾನೆ, ನಿರಂತರವೂ ಹಾಗೆಯೇ ಇರುವನು.

9 ನಾನಾವಿಧವಾದ ಅನ್ಯೋಪದೇಶಗಳ ಸೆಳವಿಗೆ ಸಿಕ್ಕಬೇಡಿರಿ. ದೇವರ ಕೃಪೆಯನ್ನು ಆತುಕೊಂಡು ಮನಸ್ಸನ್ನು ದೃಢಮಾಡಿಕೊಳ್ಳುವದು ಉತ್ತಮವೇ; ಭೋಜನಪದಾರ್ಥಗಳನ್ನು ವಿಶೇಷಿಸುವದರಿಂದ ಅದು ಆಗುವದಿಲ್ಲ. ಭೋಜನಪದಾರ್ಥಗಳನ್ನು ವಿಶೇಷಿಸಿ ನಡೆದವರು ಏನೂ ಪ್ರಯೋಜನ ಹೊಂದಲಿಲ್ಲ.

10 ನಮಗೊಂದು ಯಜ್ಞವೇದಿ ಉಂಟು, ಈ ವೇದಿಯ ಪದಾರ್ಥಗಳನ್ನು ತಿನ್ನುವದಕ್ಕೆ ಯೆಹೂದ್ಯರ ಗುಡಾರದಲ್ಲಿ ಸೇವೆಯನ್ನು ನಡಿಸುವವರಿಗೆ ಹಕ್ಕಿಲ್ಲ.

11 ಮಹಾಯಾಜಕನು ದೋಷಪರಿಹಾರಕಯಜ್ಞದ ಪಶುಗಳ ರಕ್ತವನ್ನು ತೆಗೆದುಕೊಂಡು ಪವಿತ್ರಸ್ಥಾನದೊಳಗೆ ಹೋಗಲು ಆ ಪಶುಗಳ ದೇಹಗಳು ಪಾಳೆಯದ ಆಚೆ ಸುಡಲ್ಪಡುತ್ತವಲ್ಲಾ.

12 ಅದರಂತೆ ಯೇಸು ಕೂಡ ಸ್ವಂತ ರಕ್ತದಿಂದ ತನ್ನ ಜನರನ್ನು ಪವಿತ್ರಪಡಿಸುವದಕ್ಕೋಸ್ಕರ ಪಟ್ಟಣದ ಹೊರಗೆ ಸತ್ತನು.

13 ಆದದರಿಂದ ನಾವು ಆತನ ನಿವಿುತ್ತ ಉಂಟಾಗುವ ನಿಂದೆಯನ್ನು ತಾಳಿಕೊಳ್ಳುವವರಾಗಿ ಪಾಳೆಯದ ಆಚೆ ಆತನ ಬಳಿಗೆ ಹೊರಟುಹೋಗೋಣ.

14 ಯಾಕಂದರೆ ಇಹದಲ್ಲಿ ಶಾಶ್ವತವಾದ ಪಟ್ಟಣವು ನಮಗಿಲ್ಲ; ಇನ್ನು ಮುಂದೆ ಆಗುವ ಪಟ್ಟಣವನ್ನು ಹಾರೈಸುತ್ತಾ ಇದ್ದೇವೆ.

15 ಆದದರಿಂದ ಆತನ ಮೂಲಕವಾಗಿಯೇ ದೇವರಿಗೆ ಸ್ತೋತ್ರಯಜ್ಞವನ್ನು ಎಡೆಬಿಡದೆ ಸಮರ್ಪಿಸೋಣ. ಆತನು ಕರ್ತನೆಂದು ಬಾಯಿಂದ ಪ್ರತಿಜ್ಞೆಮಾಡುವದೇ ನಾವು ಅರ್ಪಿಸುವ ಯಜ್ಞವಾಗಿದೆ.

16 ಇದಲ್ಲದೆ ಪರೋಪಕಾರವನ್ನೂ ಧರ್ಮಮಾಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಸಮರ್ಪಕವಾದ ಯಜ್ಞಗಳು.

17 ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ. ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವದು ನಿಮಗೆ ಪ್ರಯೋಜನಕರವಾದದ್ದಲ್ಲ.


ಕಡೇ ಮಾತುಗಳು

18 ನಮಗೋಸ್ಕರ ಪ್ರಾರ್ಥಿಸಿರಿ. ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಮನಸ್ಸಿನಿಂದ ಒಳ್ಳೇ ಸಾಕ್ಷಿ ಹೊಂದಿದ್ದೇವೆಂದು ನಿಶ್ಚಯಿಸಿಕೊಂಡಿದ್ದೇವೆ.

19 ನಮಗೋಸ್ಕರ ಪ್ರಾರ್ಥನೆಮಾಡಬೇಕೆಂದು ನಿಮ್ಮನ್ನು ಬಹು ವಿಶೇಷವಾಗಿ ಬೇಡಿಕೊಳ್ಳುತ್ತೇನೆ, ಯಾಕಂದರೆ ನಿಮ್ಮ ಪ್ರಾರ್ಥನೆಗಳ ಮೂಲಕ ನಾನು ಅತಿ ಶೀಘ್ರವಾಗಿ ನಿಮ್ಮ ಬಳಿಗೆ ತಿರಿಗಿ ಬಂದೇನು.

20 ಶಾಶ್ವತವಾದ ಒಡಂಬಡಿಕೆಯನ್ನು ನಿಶ್ಚಯಪಡಿಸುವದಕ್ಕಾಗಿ ತನ್ನ ರಕ್ತವನ್ನು ಸುರಿಸಿಕೊಂಡು ಸಭೆಯೆಂಬ ಹಿಂಡಿಗೆ ಮಹಾಪಾಲಕನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರಮಾಡಿದ ಶಾಂತಿದಾಯಕನಾದ ದೇವರು,

21 ನೀವು ತನ್ನ ಚಿತ್ತವನ್ನು ನೆರವೇರಿಸುವ ಹಾಗೆ ಸಕಲ ಸತ್ಕಾರ್ಯಗಳಿಗೆ ಬೇಕಾದ ಅನುಕೂಲತೆಯನ್ನು ನಿಮಗೆ ಅನುಗ್ರಹಿಸಲಿ. ಆತನು ಯೇಸು ಕ್ರಿಸ್ತನ ಮೂಲಕ ತನಗೆ ಸಮರ್ಪಕವಾದದ್ದನ್ನು ನಮ್ಮಲ್ಲಿ ನಡಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಸ್ತೋತ್ರ. ಆಮೆನ್.

22 ಸಹೋದರರೇ, ಈ ಎಚ್ಚರಿಕೆಯ ಮಾತನ್ನು ಸಹಿಸಿಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ; ನಿಮಗೆ ಸಂಕ್ಷೇಪವಾಗಿ ಬರೆದಿದ್ದೇನೆ.

23 ನಮ್ಮ ಸಹೋದರನಾದ ತಿಮೊಥೆಯನಿಗೆ ಬಿಡುಗಡೆಯಾಯಿತೆಂಬದು ನಿಮಗೆ ತಿಳಿದಿರಲಿ. ಅವನು ಬೇಗ ಬಂದರೆ ನಾನೂ ಅವನೊಂದಿಗೆ ಬಂದು ನಿಮ್ಮನ್ನು ಕಾಣುವೆನು.

24 ನಿಮ್ಮ ಸಭಾನಾಯಕರೆಲ್ಲರಿಗೂ ದೇವಜನರೆಲ್ಲರಿಗೂ ವಂದನೆ ಹೇಳಿರಿ. ಇತಾಲ್ಯ ದೇಶದಿಂದ ಬಂದವರು ನಿಮಗೆ ವಂದನೆ ಹೇಳುತ್ತಾರೆ.

25 ಕೃಪೆಯು ನಿಮ್ಮೆಲ್ಲರೊಂದಿಗೆ ಇರಲಿ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು