ಇಬ್ರಿಯರಿಗೆ 12 - ಕನ್ನಡ ಸತ್ಯವೇದವು J.V. (BSI)ನಮಗೆ ಸಂಭವಿಸುವ ಕಷ್ಟಗಳನ್ನು ತಂದೆಯ ಶಿಕ್ಷಣವೆಂದು ತಿಳಿದು ನಾವು ಸಹಿಸಿಕೊಂಡು ಪರಲೋಕಮಾರ್ಗದಲ್ಲಿ ಸ್ಥಿರಚಿತ್ತದಿಂದ ನಡೆಯಬೇಕು 1 ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು 2 ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡು ದೇವರ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾಗಿದ್ದಾನೆ. 3 ನೀವು ಮನಗುಂದಿದವರಾಗಿ ಬೇಸರಗೊಳ್ಳದಂತೆ ಆತನನ್ನು ಆಲೋಚಿಸಿರಿ. ಆತನು ಪಾಪಿಗಳಿಂದ ಎಷ್ಟೋ ವಿರೋಧವನ್ನು ಸಹಿಸಿಕೊಂಡನು. 4 ನೀವು ಪಾಪಕ್ಕೆ ವಿರೋಧವಾಗಿ ಹೋರಾಡುವದರಲ್ಲಿ ಪ್ರಾಣಾಪಾಯದ ತನಕ ಇನ್ನೂ ಅದನ್ನು ಎದುರಿಸಲಿಲ್ಲ. 5 ಮಕ್ಕಳಿಗೆ ಹೇಳುವಂತೆ ನಿಮಗೆ ಹೇಳಿದ ಎಚ್ಚರಿಕೆಯ ಮಾತನ್ನು ಮರೆತುಬಿಟ್ಟಿದ್ದೀರೋ? ಏನಂದರೆ - ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ; ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; 6 ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ ಎಂಬದು. 7 ನೀವು ಶಿಕ್ಷಿತರಾಗುವದಕ್ಕಾಗಿಯೇ ನಿಮಗೆ ಶಿಕ್ಷೆಯಾಗುತ್ತದೆಂದು ತಿಳಿದು ಅದನ್ನು ಸಹಿಸಿಕೊಳ್ಳಿರಿ; ದೇವರು ನಿಮ್ಮನ್ನು ಮಕ್ಕಳೆಂದು ನಡಿಸುತ್ತಾನೆ. 8 ತಂದೆಯಿಂದ ಶಿಕ್ಷೆಹೊಂದದ ಮಗನೆಲ್ಲಿ? ಮಕ್ಕಳೆಲ್ಲರೂ ಹೊಂದುವ ಶಿಕ್ಷೆಯು ನಿಮಗುಂಟಾಗದಿದ್ದರೆ ನೀವು ಹಾದರದಿಂದ ಹುಟ್ಟಿದವರೇ ಹೊರತು ಪುತ್ರರಲ್ಲ. 9 ಇದು ಮಾತ್ರವಲ್ಲದೆ ನಮ್ಮನ್ನು ಶಿಕ್ಷಿಸಿದಂಥ ಶರೀರ ಸಂಬಂಧವಾದ ತಂದೆಗಳನ್ನು ಸನ್ಮಾನಿಸಿದೆವಷ್ಟೆ; ನಮ್ಮ ಆತ್ಮಗಳಿಗೆ ತಂದೆಯಾಗಿರುವಾತನಿಗೆ ನಾವು ಇನ್ನೂ ಹೆಚ್ಚಾಗಿ ಒಳಪಟ್ಟು ಜೀವಿಸಬೇಕಲ್ಲವೇ. 10 ಆ ತಂದೆಗಳು ಕೆಲವು ದಿವಸಗಳ ಪ್ರಯೋಜನವನ್ನು ಲಕ್ಷ್ಯಕ್ಕೆ ತೆಗೆದುಕೊಂಡು ತಮ್ಮ ಮನಸ್ಸಿಗೆ ತೋರಿದಂತೆ ನಮ್ಮನ್ನು ಶಿಕ್ಷಿಸಿದರು; ಆತನಾದರೋ ನಾವು ತನ್ನ ಪರಿಶುದ್ಧತೆಯಲ್ಲಿ ಪಾಲುಗಾರರಾಗಬೇಕೆಂದು ನಮ್ಮ ಹಿತಕ್ಕಾಗಿಯೇ ಶಿಕ್ಷಿಸುತ್ತಾನೆ. 11 ಯಾವ ಶಿಕ್ಷೆಯಾದರೂ ತತ್ಕಾಲಕ್ಕೆ ಸಂತೋಷಕರವಾಗಿ ತೋಚದೆ ದುಃಖಕರವಾಗಿ ತೋಚುತ್ತದೆ; ಆದರೂ ತರುವಾಯ ಅದು ಶಿಕ್ಷೆ ಹೊಂದಿದವರಿಗೆ ನೀತಿಯೆಂಬ ಫಲವನ್ನು ಕೊಟ್ಟು ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುತ್ತದೆ. 12 ಆದದರಿಂದ ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಸುಧಾರಿಸಿಕೊಳ್ಳಿರಿ; 13 ನಿಮ್ಮ ಕಾಲುಗಳಿಂದ ನೆಟ್ಟಗೆ ಮುಂದೆ ನಡೆಯಿರಿ. ಹೀಗೆ ಮಾಡಿದರೆ ಕುಂಟಕಾಲು ಉಳುಕಿಹೋಗದೆ ವಾಸಿಯಾಗುವದು. ಕ್ರೈಸ್ತಸಭೆಯೊಳಗೆ ಯಾವ ವಿಧವಾದ ಅವಭಕ್ತಿಯೂ ಇರಬಾರದೆಂದು ಎಚ್ಚರಿಕೆ 14 ಎಲ್ಲರ ಸಂಗಡ ಸಮಾಧಾನದಿಂದಿರುವದಕ್ಕೂ ಪರಿಶುದ್ಧತೆಯನ್ನು ಹೊಂದುವದಕ್ಕೂ ಪ್ರಯತ್ನಮಾಡಿರಿ; 15 ಪರಿಶುದ್ಧತೆಯಿಲ್ಲದೆ ಯಾವನೂ ಕರ್ತನನ್ನು ಕಾಣುವದಿಲ್ಲ. ನಿಮ್ಮಲ್ಲಿ ಯಾವನಾದರೂ ದೇವರ ಕೃಪೆಗೆ ತಪ್ಪಿ ಹಿಂಜರಿಯದಂತೆ ಯಾವ ವಿಷವುಳ್ಳ ಬೇರೂ ನಿಮ್ಮಲ್ಲಿ ಚಿಗುರಿ ಅಸಮಾಧಾನವನ್ನು ಹುಟ್ಟಿಸಿ ಸಭೆಯವರನ್ನು ಕೆಡಿಸದಂತೆ 16 ಯಾವ ಜಾರನಾಗಲಿ ಏಸಾವನಂಥ ಪ್ರಾಪಂಚಿಕನಾಗಲಿ ನಿಮ್ಮಲ್ಲಿ ಇರದಂತೆ ಜಾಗ್ರತೆಯಿಂದ ನೋಡಿಕೊಳ್ಳಿರಿ. ಆ ಏಸಾವನು ಒಂದೇ ಒಂದು ಊಟಕ್ಕೋಸ್ಕರ ತನ್ನ ಚೊಚ್ಚಲತನದ ಹಕ್ಕನ್ನು ಕೊಟ್ಟುಬಿಟ್ಟನು; 17 ಅನಂತರದಲ್ಲಿ ತನ್ನ ತಂದೆಯ ಆಶೀರ್ವಾದವನ್ನು ಬಾಧ್ಯವಾಗಿ ಹೊಂದಬೇಕೆಂದು ಕಣ್ಣೀರು ಸುರಿಸುತ್ತಾ ಬೇಡಿಕೊಂಡರೂ, ನಡೆದದ್ದನ್ನು ಇಲ್ಲದ ಹಾಗೆ ಮಾಡುವದಕ್ಕೆ ಮಾರ್ಗವಿಲ್ಲದೆ ನಿರಾಕರಿಸಲ್ಪಟ್ಟನೆಂದು ಬಲ್ಲಿರಿ. ಧರ್ಮಶಾಸ್ತ್ರವು ಭೂಸಂಬಂಧವಾದದ್ದೂ ಭಯಹುಟ್ಟಿಸುವಂಥದೂ ಆಗಿದೆ; ಸುವಾರ್ತೆಯು ನಿರಂತರವಾಗಿಯೂ ಉತ್ಸಾಹ ಹುಟ್ಟಿಸುವಂಥದಾಗಿಯೂ ಇದೆ ಎಂಬದು 18 ನೀವು ಮುಟ್ಟುವದಕ್ಕೆ ಸಾಧ್ಯವಾದಂಥ ಮತ್ತು ಬೆಂಕಿಹತ್ತಿದಂಥ ಬೆಟ್ಟಕ್ಕೂ ಮೋಡದ ಮೊಬ್ಬಿಗೂ ಕತ್ತಲೆಗೂ ಬಿರುಗಾಳಿಗೂ ತುತೂರಿಯ ಧ್ವನಿಗೂ ಮಾತುಗಳ ಶಬ್ದಕ್ಕೂ ಬಂದವರಲ್ಲ. 19 ಆ ಶಬ್ದವನ್ನು ಕೇಳಿದವರು ತಮಗೆ ಇನ್ನು ಒಂದು ಮಾತನ್ನಾದರೂ ಹೇಳಬಾರದೆಂದು ಬೇಡಿಕೊಂಡರು; 20 ಯಾಕಂದರೆ - ಒಂದು ಮೃಗವಾದರೂ ಬೆಟ್ಟಕ್ಕೆ ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲಬೇಕೆಂಬ ವಿಧಿಯನ್ನು ತಾಳಲಾರದೆ ಇದ್ದರು. 21 ಇದಲ್ಲದೆ ಅಲ್ಲಿ ತೋರಿದ್ದು ಅಷ್ಟು ಭಯಂಕರವಾಗಿದ್ದದರಿಂದ ಮೋಶೆಯು - ನನಗೆ ಬಹು ಭಯವಾಗುತ್ತದೆ, ನಡುಗುತ್ತೇನೆ ಎಂದು ಹೇಳಿದನು. 22 ಆದರೆ ನೀವು ಚೀಯೋನ್ ಪರ್ವತಕ್ಕೂ ಜೀವಸ್ವರೂಪನಾದ ದೇವರ ಪಟ್ಟಣವಾಗಿರುವ ಪರಲೋಕದ ಯೆರೂಸಲೇವಿುಗೂ ಉತ್ಸವಸಂಘದಲ್ಲಿ ಕೂಡಿರುವ ಕೋಟ್ಯಾನುಕೋಟಿ ದೇವದೂತರ ಬಳಿಗೂ 23 ಪರಲೋಕದಲ್ಲಿ ಹೆಸರು ಬರಸಿಕೊಂಡಿರುವ ಚೊಚ್ಚಲಮಕ್ಕಳ ಸಭೆಗೂ ಎಲ್ಲರಿಗೆ ನ್ಯಾಯಾಧಿಪತಿಯಾಗಿರುವ ದೇವರ ಬಳಿಗೂ ಸಿದ್ಧಿಗೆ ಬಂದಿರುವ ನೀತಿವಂತರ ಆತ್ಮಗಳ ಬಳಿಗೂ 24 ಹೊಸ ಒಡಂಬಡಿಕೆಗೆ ಮಧ್ಯಸ್ಥನಾಗಿರುವ ಯೇಸುವಿನ ಬಳಿಗೂ ಹೇಬೆಲನ ರಕ್ತಕ್ಕಿಂತ ಹಿತಕರವಾಗಿ ಮಾತಾಡುವ ಪ್ರೋಕ್ಷಣ ರಕ್ತದ ಬಳಿಗೂ ಬಂದಿದ್ದೀರಿ. 25 ನೀವು ಮಾತಾಡುತ್ತಿರುವಾತನ ಮಾತನ್ನು ಕೇಳಲೊಲ್ಲೆವೆಂದು ಹೇಳಬಾರದು. ಭೂವಿುಯ ಮೇಲೆ ದೈವೋಕ್ತಿಗಳನ್ನಾಡಿದವನಿಗೆ ಕಿವಿಗೊಡ ಮನಸ್ಸಿಲ್ಲದೆ ಇದ್ದ ಇಸ್ರಾಯೇಲ್ಯರು ದಂಡನೆಗೆ ತಪ್ಪಿಸಿಕೊಳ್ಳದಿದ್ದರೆ ಪರಲೋಕದಿಂದ ಮಾತಾಡುವವನಿಗೆ ನಾವು ಕಿವಿಗೊಡ ಮನಸ್ಸಿಲ್ಲದೆ ತೊಲಗಿದರೆ ಹೇಗೆ ತಪ್ಪಿಸಿಕೊಂಡೇವು? 26 ಆತನ ಧ್ವನಿಯು ಆ ಕಾಲದಲ್ಲಿ ಭೂವಿುಯನ್ನು ಕದಲಿಸಿತು; ಈಗಲಾದರೋ ಆತನು - ಇನ್ನೊಂದೇ ಸಾರಿ ನಾನು ಭೂವಿುಯನ್ನು ಮಾತ್ರವಲ್ಲದೆ ಪರಲೋಕವನ್ನೂ ನಡುಗಿಸುವೆನೆಂದು ವಾಗ್ದಾನಮಾಡಿದ್ದಾನೆ. 27 ಇನ್ನೊಂದೇ ಸಾರಿ ಎಂಬೀ ಮಾತನ್ನು ಯೋಚಿಸಿದರೆ ಕದಲಿಸಿರುವ ವಸ್ತುಗಳು ನಿರ್ಮಿತವಾದವುಗಳಾದದರಿಂದ ತೆಗೆದುಹಾಕಲ್ಪಡಬೇಕೆಂಬದು ಸ್ಪಷ್ಟವಾಗುತ್ತದೆ; ಆಗ ಕದಲಿಸದೆ ಇರುವ ವಸ್ತುಗಳು ಸ್ಥಿರವಾಗಿ ನಿಲ್ಲುವವು. 28 ಆದಕಾರಣ ಯಾರೂ ಕದಲಿಸಲಾರದ ರಾಜ್ಯವನ್ನು ಹೊಂದುವವರಾದ ನಾವು ಕೃತಜ್ಞತೆಯುಳ್ಳವರಾಗಿದ್ದು ಆತನಿಗೆ ಸಮರ್ಪಕವಾದ ಆರಾಧನೆಯನ್ನು ಭಕ್ತಿಯಿಂದಲೂ ಭಯದಿಂದಲೂ ಮಾಡೋಣ; 29 ಯಾಕಂದರೆ ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾನೆ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India