Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಇಬ್ರಿಯರಿಗೆ 10 - ಕನ್ನಡ ಸತ್ಯವೇದವು J.V. (BSI)


ಲೇವಿಯರ ಕೊನೆಯಿಲ್ಲದ ಯಜ್ಞಗಳು ಸಾರ್ಥಕವಾಗುವದಿಲ್ಲ; ಯೇಸುವಿನ ಒಂದೇ ಯಜ್ಞವು ಸದಾಕಾಲವೂ ಸಾರ್ಥಕವಾದದ್ದು

1 ಧರ್ಮಶಾಸ್ತ್ರದಲ್ಲಿ ಮುಂದೆ ಬರಬೇಕಾಗಿದ್ದ ಮೇಲುಗಳ ಛಾಯೆಯೇ ಹೊರತು ಅವುಗಳ ನಿಜ ಸ್ವರೂಪವಲ್ಲವಾದದರಿಂದ ಆ ಧರ್ಮಶಾಸ್ತ್ರವು ವರುಷ ವರುಷಕ್ಕೆ ಪದೇ ಪದೇ ಅರ್ಪಿತವಾಗುವ ಒಂದೇ ವಿಧವಾದ ಯಜ್ಞಗಳನ್ನು ಅರ್ಪಿಸಿ ದೇವರ ಸಮೀಪಕ್ಕೆ ಬರುವವರನ್ನು ಎಂದಿಗೂ ಸಿದ್ಧಿಗೆ ತರಲಾರದು.

2 ತಂದಿದ್ದ ಪಕ್ಷದಲ್ಲಿ ಆ ಯಜ್ಞ ಸಮರ್ಪಣೆಯು ನಿಂತುಹೋಗುತ್ತಿತ್ತಲ್ಲಾ. ಯಾಕಂದರೆ ದೇವಾರಾಧನೆ ಮಾಡುವವರು ಒಂದೇ ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ ಅವರಿಗೆ ಪಾಪವುಂಟೆಂದು ಅವರ ಮನಸ್ಸು ಇನ್ನೂ ಸಾಕ್ಷಿಕೊಡುವದು ಹೇಗೆ?

3 ಆದರೆ ಆ ಯಜ್ಞಗಳಿಂದ ಪ್ರತಿವರುಷದಲ್ಲಿಯೂ ಪಾಪಗಳ ಜ್ಞಾಪಕವಾಗುವದುಂಟು;

4 ಹೋರಿಗಳ ಮತ್ತು ಹೋತಗಳ ರಕ್ತದಿಂದ ಪಾಪಗಳು ಪರಿಹಾರವಾಗುವದು ಅಸಾಧ್ಯವಾಗಿದೆಯಲ್ಲಾ.

5 ಆದದರಿಂದ ಕ್ರಿಸ್ತನು ಭೂಲೋಕದೊಳಗೆ ಬರುವಾಗ - [ದೇವರೇ], ಯಜ್ಞನೈವೇದ್ಯಗಳು ನಿನಗೆ ಇಷ್ಟವಾಗಿರಲಿಲ್ಲ, ನನಗೆ ದೇಹವನ್ನು ಸಿದ್ಧಮಾಡಿಕೊಟ್ಟಿ;

6 ಸರ್ವಾಂಗಹೋಮಗಳಲ್ಲಿಯೂ ದೋಷಪರಿಹಾರಕಯಜ್ಞಗಳಲ್ಲಿಯೂ ನೀನು ಸಂತೋಷಪಡಲಿಲ್ಲ;

7 ಆಗ ನಾನು - ಇಗೋ, ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ. ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ ಎಂದು ಹೇಳಿದೆನು ಅನ್ನುತ್ತಾನೆ.

8 ಧರ್ಮಶಾಸ್ತ್ರದ ಪ್ರಕಾರ ಸಮರ್ಪಣೆಯಾಗುತ್ತಾ ಬರುವ ಯಜ್ಞನೈವೇದ್ಯಗಳೂ ಸರ್ವಾಂಗಹೋಮಗಳೂ ದೋಷಪರಿಹಾರಕಯಜ್ಞಗಳೂ ನಿನಗೆ ಇಷ್ಟವಾಗಿರಲಿಲ್ಲ. ನೀನು ಅವುಗಳಲ್ಲಿ ಸಂತೋಷಪಡುವದಿಲ್ಲ ಎಂದು ಮೇಲೆ ಹೇಳಿದ ತರುವಾಯ -

9 ಇಗೋ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವದಕ್ಕಾಗಿ ಮೊದಲನೆಯದನ್ನು ತೆಗೆದುಬಿಡುತ್ತಾನೆ.

10 ಯೇಸು ಕ್ರಿಸ್ತನು ಒಂದೇ ಸಾರಿ ದೇಹ ಸಮರ್ಪಣೆಮಾಡಿ ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಶುದ್ಧರಾದೆವು.

11 ಇದಲ್ಲದೆ ಆ ಯಾಜಕರೆಲ್ಲರು ದಿನಾಲು ಸೇವೆಮಾಡುತ್ತಾ ಎಂದಿಗೂ ಪಾಪನಿವಾರಣೆ ಮಾಡಲಾರದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇಪದೇ ಸಮರ್ಪಿಸುತ್ತಾ ನಿಂತುಕೊಂಡಿರುವರು.

12 ಆದರೆ ಈ ಯಾಜಕನು ಪಾಪನಿವಾರಣೆಗೋಸ್ಕರ ನಿರಂತರವಾಗಿ ನಿಲ್ಲುವ ಒಂದೇ ಯಜ್ಞವನ್ನು ಸಮರ್ಪಿಸಿ ದೇವರ ಬಲಗಡೆಯಲ್ಲಿ ಕೂತುಕೊಂಡನು.

13 ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದಪೀಠವಾಗಿ ಹಾಕಲ್ಪಡುವ ತನಕ ಆತನು ಕಾದಿರುವನು.

14 ಪವಿತ್ರರಾಗುತ್ತಿರುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ಸಿದ್ಧಿಗೆ ತಂದಿದ್ದಾನಷ್ಟೆ.

15 ಪವಿತ್ರಾತ್ಮನು ಸಹ ನಮಗೆ ಸಾಕ್ಷಿಕೊಡುವವನಾಗಿ -

16 ಆ ದಿನಗಳು ಬಂದ ಮೇಲೆ ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವದು - ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ಇಡುವೆನು, ಅವರ ಮನಸ್ಸಿನ ಮೇಲೆ ಅವುಗಳನ್ನು ಬರೆಯುವೆನು ಎಂದು ಕರ್ತನು ನುಡಿಯುತ್ತಾನೆ ಎಂಬದಾಗಿ ಹೇಳಿದ ಮೇಲೆ ಇನ್ನು -

17 ಅವರ ಪಾಪಗಳನ್ನೂ ಅವರ ದುಷ್ಕೃತ್ಯಗಳನ್ನೂ ನನ್ನ ನೆನಪಿಗೆ ಎಂದಿಗೂ ತರುವದಿಲ್ಲ ಎಂದು ಹೇಳುತ್ತಾನೆ.

18 ಪಾಪಗಳು ಪರಿಹಾರವಾದಲ್ಲಿ ಇನ್ನೂ ಅವುಗಳ ವಿಷಯದಲ್ಲಿ ಸಮರ್ಪಣೆಮಾಡುವದು ಅವಶ್ಯವಿಲ್ಲ.


ಯೇಸುವಿನ ಮೂಲಕ ದೇವಸನ್ನಿಧಾನವನ್ನು ಯೋಗ್ಯರಾಗಿ ಸೇರೋಣ; ಆತನ ಯಜ್ಞವನ್ನು ಬೇಡವೆಂದರೆ ಬೇರೊಂದಿಲ್ಲ; ನಾವು ಹಿಂಸೆತಾಳಬೇಕಾದರೂ ಹಿಂಜರಿಯಬಾರದು ಎಂದು ಬೋಧೆ

19-20 ಹೀಗಿರುವಲ್ಲಿ ಸಹೋದರರೇ, ಯೇಸು ನಮಗೋಸ್ಕರ ಪ್ರತಿಷ್ಠಿಸಿದ ಜೀವವುಳ್ಳ ಹೊಸ ದಾರಿಯಲ್ಲಿ ಆತನ ರಕ್ತದ ಮೂಲಕ ಆತನ ಶರೀರವೆಂಬ ತೆರೆಯ ಮುಖಾಂತರ ದೇವರ ಸಮಕ್ಷಮದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು.

21 ದೇವರ ಮನೆಯ ಮೇಲೆ ಅಧಿಕಾರಿಯಾಗಿರುವ ಶ್ರೇಷ್ಠನಾದ ಯಾಜಕನು ನಮಗಿದ್ದಾನೆ.

22 ಆದಕಾರಣ ನೀನಪರಾಧಿಯೆಂದು ನಮ್ಮ ಮನಸ್ಸು ನಮಗೆ ಸಾಕ್ಷಿಹೇಳದಂತೆ ನಾವು ಹೃದಯವನ್ನು ಪ್ರೋಕ್ಷಿಸಿಕೊಂಡು ದೇಹವನ್ನು ತಿಳಿನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಬಳಿಗೆ ಬರೋಣ.

23 ನಮ್ಮ ನಿರೀಕ್ಷೆಯನ್ನು ಕುರಿತು ನಾವು ಮಾಡಿದ ಪ್ರತಿಜ್ಞೆಯನ್ನು ನಿಶ್ಚಂಚಲವಾಗಿ ಪರಿಗ್ರಹಿಸೋಣ; ವಾಗ್ದಾನ ಮಾಡಿದಾತನು ನಂಬಿಗಸ್ತನು.

24 ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ.

25 ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟುಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.

26 ಯಾಕಂದರೆ ಸತ್ಯದ ಪರಿಜ್ಞಾನವನ್ನು ನಾವು ಹೊಂದಿದ ಮೇಲೆ ಬೇಕೆಂದು ಪಾಪಮಾಡಿದರೆ ಪಾಪಪರಿಹಾರಕ್ಕಾಗಿ ಇನ್ನಾವ ಯಜ್ಞವೂ ಇರುವದಿಲ್ಲ;

27 ಅತ್ಯಂತ ಭಯದಿಂದ ಎದುರುನೋಡತಕ್ಕ ನ್ಯಾಯತೀರ್ಪೂ ದೇವರ ವಿರೋಧಿಗಳನ್ನು ದಹಿಸುವ ತೀಕ್ಷ್ಣವಾದ ಅಗ್ನಿಯೂ ಇವೇ ನಮ್ಮ ಮುಂದೆ ಇರುವವು.

28 ಮೋಶೆಯ ವಿಧಿಗಳನ್ನು ಅಸಡ್ಡೆ ಮಾಡಿದವನಿಗೆ ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳ ಮಾತಿನ ಮೇಲೆ ಕನಿಕರವಿಲ್ಲದೆ ಮರಣದಂಡನೆ ಆಗುತ್ತದಷ್ಟೆ.

29 ಯಾವನು ದೇವಕುಮಾರನನ್ನು ತುಳಿದು ಒಡಂಬಡಿಕೆಯನ್ನು ಸ್ಥಿರಪಡಿಸಿದಂಥ ತನ್ನನ್ನು ಪವಿತ್ರಮಾಡಿದಂಥ ರಕ್ತವನ್ನು ಅಶುದ್ಧವೆಂದೆಣಿಸಿ ದೇವರ ಕೃಪಾವರವಾಗಿರುವ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬದನ್ನು ಯೋಚಿಸಿರಿ.

30 ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನೆಂದು ಹೇಳಿದಾತನನ್ನು ಬಲ್ಲೆವು; ಇದಲ್ಲದೆ ಕರ್ತನು ತನ್ನ ಜನರ ನ್ಯಾಯವನ್ನು ವಿಚಾರಿಸುವನೆಂತಲೂ ಹೇಳಿಯದೆ.

31 ಜೀವಸ್ವರೂಪನಾದ ದೇವರ ಕೈಯಲ್ಲಿ ಸಿಕ್ಕಿಬೀಳುವದು ಭಯಂಕರವಾದದ್ದು.

32 ಹೀಗಿರಲಾಗಿ ನೀವು ಜ್ಞಾನಪ್ರಕಾಶದಲ್ಲಿ ಸೇರಿ ಕಷ್ಟಾನುಭವವೆಂಬ ಬಲು ಹೋರಾಟವನ್ನು ಸಹಿಸಿಕೊಂಡ ಹಿಂದಿನ ದಿನಗಳನ್ನು ನೆನಪಿಗೆ ತಂದುಕೊಳ್ಳಿರಿ;

33 ಕೆಲವು ಸಾರಿ ನೀವು ನಿಂದೆಗಳನ್ನೂ ಸಂಕಟಗಳನ್ನೂ ಅನುಭವಿಸಿ ಹಾಸ್ಯಕ್ಕೆ ಗುರಿಯಾದಿರಿ; ಕೆಲವು ಸಾರಿ ಅಂಥವುಗಳನ್ನು ಅನುಭವಿಸಿದವರಲ್ಲಿ ಸೇರಿದವರಾಗಿದ್ದು ಕಷ್ಟಾನುಭವಿಗಳಾದಿರಿ.

34 ಬೇಡಿಗಳನ್ನು ಹಾಕಿಸಿಕೊಂಡವರ ಕಷ್ಟವನ್ನು ನೋಡಿ ಅವರ ಸಂಗಡ ನೀವು ದುಃಖ ಪಟ್ಟದ್ದಲ್ಲದೆ ನಮಗೆ ಉತ್ತಮವಾಗಿಯೂ ಸ್ಥಿರವಾಗಿಯೂ ಇರುವ ಆಸ್ತಿಯುಂಟೆಂದು ಚೆನ್ನಾಗಿ ಅರಿತುಕೊಂಡು ನಿಮ್ಮ ಸೊತ್ತನ್ನು ಸುಲುಕೊಳ್ಳುವವರಿಗೆ ಸಂತೋಷದಿಂದ ಬಿಟ್ಟಿರಿ.

35 ಹಾಗಾದರೆ ನಿಮ್ಮ ಧೈರ್ಯವನ್ನು ಬಿಟ್ಟುಬಿಡಬೇಡಿರಿ; ಅದಕ್ಕೆ ಮಹಾ ಪ್ರತಿಫಲ ಉಂಟು.

36 ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆಬೇಕು.

37 ಬರುವಾತನು ಇನ್ನು ಸ್ಪಲ್ಪಕಾಲದಲ್ಲಿ ಬರುವನು, ತಡಮಾಡುವದಿಲ್ಲ;

38 ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವದಿಲ್ಲ ಎಂದು ಬರೆದದೆ.

39 ನಾವಾದರೋ ಹಿಂದೆಗೆದವರಾಗಿ ನಾಶವಾಗುವವರಲ್ಲ, ನಂಬುವವರಾಗಿ ಪ್ರಾಣರಕ್ಷಣೆಯನ್ನು ಹೊಂದುವವರಾಗಿದ್ದೇವೆ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು