ಆಮೋಸ 8 - ಕನ್ನಡ ಸತ್ಯವೇದವು J.V. (BSI)ಮಾಗಿದ ಹಣ್ಣಿನ ದರ್ಶನ 1 ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು - ಇಗೋ, ಮಾಗಿದ ಹಣ್ಣಿನ ಪುಟ್ಟಿ. 2 ಆತನು ನನ್ನನ್ನು - ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವದೇನು ಎಂದು ಕೇಳಲು ಮಾಗಿದ ಹಣ್ಣಿನ ಪುಟ್ಟಿ ಅಂದೆನು. ಆಗ ಯೆಹೋವನು ನನಗೆ ಹೀಗೆ ಹೇಳಿದನು - ಇಸ್ರಾಯೇಲೆಂಬ ನನ್ನ ಜನರಿಗೆ ಕಡೆಗಾಲವು ಮಾಗುತ್ತಾ ಬಂದಿದೆ; ಇನ್ನು ಅವರನ್ನು ಕಂಡುಕಾಣದ ಹಾಗಿರೆನು. 3 ಆ ದಿನದಲ್ಲಿ ಸೌಧಗಳ ಕೀರ್ತನೆಗಳು ಕಿರಚಾಟವಾಗುವವು; ಇದು ಕರ್ತನಾದ ಯೆಹೋವನ ನುಡಿ; ಆಗ ಹೆಣಗಳು ಹೆಚ್ಚುವವು; ಅವುಗಳನ್ನು ಎಲ್ಲೆಲ್ಲಿಯೂ ಮೌನವಾಗಿ ಬಿಸಾಟುಬಿಡುವರು; ಉಸಿರಾಡದಿರ್ರಿ! ಧನವಂತರ ಹಣದಾಶೆ, ಮುಂದಿನ ದೌರ್ಭಾಗ್ಯ 4 ಎಷ್ಟು ಹೊತ್ತಿಗೆ ಅಮಾವಾಸ್ಯೆಯು ತೀರುವದು? ಧಾನ್ಯವನ್ನು ಮಾರಬೇಕಲ್ಲಾ; ಸಬ್ಬತ್ತು ಇನ್ನೆಷ್ಟು ಹೊತ್ತು ಇರುವದು? ಗೋದಿಯನ್ನು ಅಂಗಡಿಯಿಡಬೇಕಲ್ಲಾ; ಕೊಳಗವನ್ನು ಕಿರಿದುಮಾಡೋಣ, ತೊಲವನ್ನು ಹೆಚ್ಚಿಸೋಣ, ಸುಳ್ಳುತಕ್ಕಡಿಯಿಂದ ಮೋಸಮಾಡೋಣ; 5 ಬಡವನನ್ನು ಬೆಳ್ಳಿಗೆ, ದಿಕ್ಕಿಲ್ಲದವನನ್ನು ಜೊತೆ ಕೆರಕ್ಕೆ ಕೊಂಡುಕೊಳ್ಳೋಣ; ಗೋದಿಯ ನುಚ್ಚುನುಸಿಯನ್ನು ಮಾರೋಣ ಎಂದುಕೊಂಡು 6 ದಿಕ್ಕಿಲ್ಲದವರನ್ನು ತುಳಿದುಬಿಡುವವರೇ, ದೇಶದ ದರಿದ್ರರನ್ನು ನಿರ್ಮೂಲ ಮಾಡುವವರೇ, ಕೇಳಿರಿ! 7 ಯೆಹೋವನು ಯಾಕೋಬಿನ ಮಹಿಮೆಯ ಮೇಲೆ ಹೀಗೆ ಆಣೆಯಿಟ್ಟಿದ್ದಾನೆ - ಖಂಡಿತವಾಗಿ ಅವರ ಕೃತ್ಯಗಳಲ್ಲಿ ಯಾವದನ್ನೂ ಎಂದಿಗೂ ಮರೆತುಬಿಡೆನು. 8 ಆ ಕೃತ್ಯಗಳಿಗೆ ದೇಶವು ನಡುಗಬೇಕಾಗುವದಲ್ಲವೆ, ಅದರ ನಿವಾಸಿಗಳೆಲ್ಲರೂ ದುಃಖಿಸುವರಲ್ಲವೆ; ದೇಶವೆಲ್ಲಾ ನೈಲ್ ನದಿಯಂತೆ ಉಬ್ಬಿ ಅಲ್ಲಕಲ್ಲೋಲವಾಗುವದು, ಐಗುಪ್ತದ ನದಿಯ ಹಾಗೆಯೇ ಇಳಿದುಹೋಗುವದು. 9 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ಸೂರ್ಯನನ್ನು ಮಧ್ಯಾಹ್ನಕ್ಕೆ ಮುಣುಗಿಸುವೆನು, ಭೂವಿುಯನ್ನು ಹಗಲಿನಲ್ಲೇ ಮೊಬ್ಬುಮಾಡುವೆನು. 10 ನಿಮ್ಮ ಉತ್ಸವಗಳನ್ನು ದುಃಖಕ್ಕೆ ಮಾರ್ಪಡಿಸುವೆನು, ನಿಮ್ಮ ಗಾಯನಗಳನ್ನೆಲ್ಲಾ ಶೋಕಗೀತಕ್ಕೆ ತಿರುಗಿಸುವೆನು; ಎಲ್ಲರೂ ಸೊಂಟಕ್ಕೆ ಗೋಣಿತಟ್ಟನ್ನು ಸುತ್ತಿಕೊಂಡು ತಲೆಬೋಳಿಸಿಕೊಳ್ಳುವಂತೆ ಮಾಡುವೆನು; ನಿನ್ನ ಪ್ರಲಾಪವು ಏಕಪುತ್ರಶೋಕಕ್ಕೆ ಸಮಾನವಾಗುವದು, ಅದು ಆದ ಮೇಲೂ ವ್ಯಾಕುಲವು ಇದ್ದೇ ಇರುವದು. 11 ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಆಹಾ, ನಾನು ದೇಶಕ್ಕೆ ಕ್ಷಾಮವನ್ನು ಉಂಟುಮಾಡುವ ದಿನಗಳು ಬರುತ್ತಿವೆ; ಅದು ಅನ್ನದ ಕ್ಷಾಮವಲ್ಲ, ನೀರಿನ ಕ್ಷಾಮವಲ್ಲ, ಯೆಹೋವನ ವಾಕ್ಯಗಳ ಕ್ಷಾಮವೇ. 12 ಸಮುದ್ರದಿಂದ ಸಮುದ್ರಕ್ಕೆ, ಬಡಗಲಿಂದ ಮೂಡಲಿಗೆ ಬಳಲುತ್ತಾ ಹೋಗುವರು, ಯೆಹೋವನ ವಾಕ್ಯವನ್ನು ಹುಡುಕುತ್ತಾ ಓಡಾಡುವರು; ಆದರೂ ಅದು ಸಿಕ್ಕದು. 13 ಆ ದಿನದಲ್ಲಿ ಯುವಕರೂ ಸುಂದರಯುವತಿಯರೂ ಬಾಯಾರಿಕೆಯಿಂದ ಮೂರ್ಛೆ ಹೋಗುವರು. 14 ದಾನೇ, ನಿನ್ನ ದೇವರ ಜೀವದಾಣೆ ಎಂತಲೂ ಬೇರ್ಷೆಬ ಮಾರ್ಗದ ಜೀವದಾಣೆ ಎಂತಲೂ ಸಮಾರ್ಯದ ಪಾಪಮೂರ್ತಿಯ ಮೇಲೆ ಪ್ರಮಾಣಮಾಡುವವರು ಬಿದ್ದುಹೋಗುವರು, ಮತ್ತೆ ಏಳರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India