Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆಮೋಸ 7 - ಕನ್ನಡ ಸತ್ಯವೇದವು J.V. (BSI)


ದುರ್ಗತಿಯ ಐದು ದರ್ಶನಗಳು ( 7.1—9.10 ) ವಿುಡತೆಗಳ ದರ್ಶನ

1 ಕರ್ತನಾದ ಯೆಹೋವನು ಇದನ್ನು ನನಗೆ ತೋರಿಸಿದನು - ಹಿಂಗಾರು ಮಳೆಬಿದ್ದು ಪೈರು ಸೊಂಪಾಗುವದಕ್ಕೆ ಆರಂಭವಾದಾಗ, ಅಂದರೆ ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಆಹಾ, ಯೆಹೋವನು ವಿುಡತೆಗಳನ್ನು ಉಂಟುಮಾಡಿದನು.

2 ಅವು ದೇಶದ ಪೈರುಪಚ್ಚೆಯನ್ನೆಲ್ಲಾ ತಿಂದುಬಿಟ್ಟ ಮೇಲೆ ನಾನು - ಕರ್ತನಾದ ಯೆಹೋವನೇ, ಲಾಲಿಸು, ಕ್ಷವಿುಸು; ಯಾಕೋಬು ಹೇಗೆ ನಿಂತೀತು, ಅದು ಚಿಕ್ಕ ಜನಾಂಗ ಎಂದು ವಿಜ್ಞಾಪಿಸಲು

3 ಯೆಹೋವನು ಮನಮರುಗಿ ಈ ದರ್ಶನವು ನೆರವೇರದು ಅಂದನು.


ಕ್ಷಾಮದ ದರ್ಶನ

4 ಕರ್ತನಾದ ಯೆಹೋವನು ಇನ್ನೊಂದನ್ನು ನನಗೆ ತೋರಿಸಿದನು - ಆಹಾ, ಕರ್ತನಾದ ಯೆಹೋವನು ತನ್ನ ಪಕ್ಷವಾಗಿ ವ್ಯಾಜ್ಯವಾಡುವದಕ್ಕೆ ಅಗ್ನಿಯನ್ನು ಕರೆದನು.

5 ಅದು ಮಹಾಸಾಗರವನ್ನು ನುಂಗಿ ದೇಶವನ್ನೂ ತಿಂದುಬಿಡಬೇಕೆಂದಿತ್ತು. ಆಗ ನಾನು - ಕರ್ತನಾದ ಯೆಹೋವನೇ, ಲಾಲಿಸು, ಇದನ್ನು ತಪ್ಪಿಸು; ಯಾಕೋಬು ಹೇಗೆ ನಿಂತೀತು, ಅದು ಚಿಕ್ಕ ಜನಾಂಗ ಎಂದು ವಿಜ್ಞಾಪಿಸಲು

6 ಕರ್ತನಾದ ಯೆಹೋವನು ಮನಮರುಗಿ ಈ ದರ್ಶನವೂ ನೆರವೇರದು ಅಂದನು.


ನೂಲುಗುಂಡಿನ ದರ್ಶನ

7 ಕರ್ತನು ಮತ್ತೊಂದನ್ನು ನನಗೆ ತೋರಿಸಿದನು - ಇಗೋ, ಆತನು ನೂಲುಮಟ್ಟದ ಗೋಡೆಯ ಮೇಲೆ ನಿಂತಿದ್ದನು; ಆತನ ಕೈಯಲ್ಲಿ ನೂಲುಗುಂಡಿತ್ತು.

8 ಯೆಹೋವನು ನನ್ನನ್ನು - ಆಮೋಸನೇ, ನಿನ್ನ ಕಣ್ಣಿಗೆ ಕಾಣಿಸುವದೇನು ಎಂದು ಕೇಳಲು ನಾನು - ಒಂದು ನೂಲುಗುಂಡು ಎಂದು ಉತ್ತರಕೊಟ್ಟೆನು. ಆಗ ಕರ್ತನು - ಇಗೋ, ನನ್ನ ಜನರಾದ ಇಸ್ರಾಯೇಲಿನ ಮಧ್ಯದಲ್ಲಿ ನೂಲುಗುಂಡನ್ನು ಹಿಡಿಯುವೆನು; ಇನ್ನು ಅವರನ್ನು ಕಂಡುಕಾಣದ ಹಾಗಿರೆನು.

9 ಇಸಾಕನ ವಂಶದವರ ಪೂಜಾಸ್ಥಳಗಳು ಹಾಳಾಗುವವು, ಇಸ್ರಾಯೇಲಿನ ಪವಿತ್ರಾಲಯಗಳು ಬೀಡುಬೀಳುವವು; ನಾನು ಕತ್ತಿಹಿರಿದು ಯಾರೊಬ್ಬಾಮನ ಮನೆತನಕ್ಕೆ ವಿರುದ್ಧವಾಗಿ ಏಳುವೆನು ಅಂದನು.


ಆಮೋಸನು ಯಾಜಕನನ್ನು ಮುಖಾಮುಖಿಯಾಗಿ ಎದುರಿಸಿದ್ದು

10 ಆಗ ಬೇತೇಲಿನ ಯಾಜಕನಾದ ಅಮಚ್ಯನು ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನಿಗೆ - ಆಮೋಸನು ಇಸ್ರಾಯೇಲ್ಯರ ಮಧ್ಯದಲ್ಲಿ ನಿನ್ನ ಮೇಲೆ ಒಳಸಂಚುಮಾಡಿದ್ದಾನೆ; ದೇಶವು ಅವನ ವಿಪರೀತವಾದ ಮಾತುಗಳನ್ನು ತಾಳಲಾರದು;

11 ಅವನು - ಯಾರೊಬ್ಬಾಮನು ಖಡ್ಗದಿಂದ ಹತನಾಗುವನು, ಇಸ್ರಾಯೇಲು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು ಖಂಡಿತ ಎಂದು ನುಡಿದಿದ್ದಾನೆ ಎಂಬದಾಗಿ ಹೇಳಿಕಳುಹಿಸಿದನು.

12 ಅನಂತರ ಅಮಚ್ಯನು ಆಮೋಸನಿಗೆ - ಕಣಿಯವನೇ, ನಡೆ, ಯೆಹೂದದೇಶಕ್ಕೆ ಓಡಿಹೋಗು; ಅಲ್ಲೇ ಪ್ರವಾದನೆಮಾಡುತ್ತಾ ಹೊಟ್ಟೆಹೊರಕೋ;

13 ಆದರೆ ಬೇತೇಲಿನಲ್ಲಿ ಇನ್ನು ಪ್ರವಾದನೆಮಾಡಬೇಡ; ಇದು ರಾಜಕೀಯ ಪವಿತ್ರಾಲಯ, ಇದು ಅರಮನೆ ಎಂದು ಹೇಳಲು

14 ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ - ನಾನು ಪ್ರವಾದಿಯಲ್ಲ, ಪ್ರವಾದಿ ಮಂಡಲಿಗೆ ಸೇರಿದವನೂ ಅಲ್ಲ, ನಾನು ಗೊಲ್ಲನು, ಅತ್ತಿಹಣ್ಣು ಕೀಳುವವನು;

15 ಯೆಹೋವನು ನನ್ನನ್ನು ಮಂದೆಕಾಯುವದರಿಂದ ತಪ್ಪಿಸಿ - ನೀನು ಹೋಗಿ ನನ್ನ ಜನರಾದ ಇಸ್ರಾಯೇಲ್ಯರಿಗೆ ಪ್ರವಾದನೆಮಾಡು ಎಂದು ನನಗೆ ಅಪ್ಪಣೆಕೊಟ್ಟನು.

16 ಈಗ ಯೆಹೋವನ ವಾಕ್ಯವನ್ನು ಕೇಳು; ಇಸ್ರಾಯೇಲಿಗೆ ವಿರುದ್ಧವಾಗಿ ಪ್ರವಾದನೆ ಮಾಡಬೇಡ, ಇಸಾಕನ ವಂಶಕ್ಕೆ ಖಂಡನೆಯಾಗಿ ಬಾಯೆತ್ತಬೇಡ ಎಂದು ನೀನು ಹೇಳಿದ ಕಾರಣ

17 ಯೆಹೋವನು ಇಂತೆನ್ನುತ್ತಾನೆ - ನಿನ್ನ ಹೆಂಡತಿಯು ಈ ಪಟ್ಟಣದಲ್ಲಿ ಸೂಳೆಯಾಗುವಳು, ನಿನ್ನ ಗಂಡುಹೆಣ್ಣುಮಕ್ಕಳು ಖಡ್ಗದಿಂದ ಹತರಾಗುವರು, ನಿನ್ನ ದೇಶವನ್ನು [ಶತ್ರುಗಳು] ನೂಲೆಳೆದು ಭಾಗಿಸಿಕೊಳ್ಳುವರು, ನೀನಂತು ಅಪವಿತ್ರ ದೇಶದಲ್ಲಿ ಸಾಯುವಿ, ಇಸ್ರಾಯೇಲು ಸ್ವದೇಶದಿಂದ ಸೆರೆಯಾಗಿ ಒಯ್ಯಲ್ಪಡುವದು ಖಂಡಿತ ಎಂಬದಾಗಿ ಹೇಳಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು