Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆಮೋಸ 6 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲಿನ ಪ್ರಮುಖರ ಭೋಗ, ಮುಂದಿನ ದೌರ್ಭಾಗ್ಯ

1 ಅಯ್ಯೋ, ಚೀಯೋನಿನಲ್ಲಿ ನೆಮ್ಮದಿಯಾಗಿರುವವರ ಗತಿಯನ್ನು ಏನೆಂದು ಹೇಳಲಿ! ಪ್ರಮುಖಜನಾಂಗದಲ್ಲಿ ಹೆಸರುಗೊಂಡು ಇಸ್ರಾಯೇಲ್ಯರ ನ್ಯಾಯ ವಿಚಾರಕರಾಗಿ ಸಮಾರ್ಯದ ಬೆಟ್ಟದಲ್ಲಿ ನಿಶ್ಚಿಂತರಾಗಿರುವವರ ಪಾಡನ್ನು ಎಂಥದೆನ್ನಲಿ!

2 ಕಲ್ನೆಗೆ ಹೋಗಿ ನೋಡಿರಿ, ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ತೆರಳಿರಿ, ಆಮೇಲೆ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ; ಅವು ಈ ರಾಜ್ಯಗಳಿಗಿಂತ ಶ್ರೇಷ್ಠವೋ? ಅವುಗಳ ಪ್ರಾಂತವು ನಿಮ್ಮ ಪ್ರಾಂತಕ್ಕಿಂತ ದೊಡ್ಡದೋ?

3 ಆಹಾ, ಆ ಮುಖಂಡರು ಆಪತ್ತಿನ ದಿನದ ಯೋಚನೆಯನ್ನು ದೂರಕ್ಕೆ ತಳ್ಳುತ್ತಾರೆ, ಅನ್ಯಾಯದ ಪೀಠವನ್ನು ಹತ್ತಿರಕ್ಕೆ ತಂದುಕೊಳ್ಳುತ್ತಾರೆ;

4 ದಂತದ ಮಂಚಗಳ ಮೇಲೆ ಮಲಗುತ್ತಾರೆ, ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಳ್ಳುತ್ತಾರೆ; ಹಿಂಡಿನ ಮರಿಗಳನ್ನೂ ಕೊಟ್ಟಿಗೆಯ ಕರುಗಳನ್ನೂ ತಿನ್ನುತ್ತಾರೆ;

5 ವೀಣೆಯ ಮೇಲೆ ಮನಸ್ಸುಬಂದಂತೆ ಹಾಡುತ್ತಾರೆ; ದಾವೀದನ ಹಾಗೆ ವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತಾರೆ,

6 ದ್ರಾಕ್ಷಾರಸವನ್ನು ಬೋಗುಣಿಯಲ್ಲಿ ಕುಡಿಯುತ್ತಾರೆ, ಉತ್ತಮೋತ್ತಮ ತೈಲಗಳನ್ನು ಹಚ್ಚಿಕೊಳ್ಳುತ್ತಾರೆ, ಆದರೆ ಯೋಸೇಫಿನ ಗಾಯಕ್ಕೆ ಮರುಗರು.

7 ಹೀಗಿರಲು ಸೆರೆಗೆ ಒಯ್ಯಲ್ಪಡುವವರ ಮುಂದುಗಡೆ ಅವರು ಸೆರೆಗೆ ಹೋಗುವರು; ಒರಗಿಕೊಳ್ಳುವವರ ಹರ್ಷಧ್ವನಿಯು ನಿಂತುಹೋಗುವದು.

8 ಸೇನಾಧೀಶ್ವರದೇವರಾದ ಯೆಹೋವನ ನುಡಿಯನ್ನು ಕೇಳಿರಿ - ಕರ್ತನಾದ ಯೆಹೋವನು ತನ್ನ ಮೇಲೆ ಆಣೆಯಿಟ್ಟು ಹೀಗಂದಿದ್ದಾನೆ - ನಾನು ಯಾಕೋಬಿನ ಅಟ್ಟಹಾಸಕ್ಕೆ ಅಸಹ್ಯಪಟ್ಟು ಅದರ ಸೌಧಗಳನ್ನು ಹಗೆಮಾಡುತ್ತೇನೆ; ಆದದರಿಂದ ನಾನು ರಾಜಧಾನಿಯನ್ನೂ ಅದರ ಸಕಲಸಮೃದ್ಧಿಯನ್ನೂ ಆಪತ್ತಿಗೆ ಗುರಿಮಾಡುವೆನು,

9 ಒಂದು ಮನೆಯಲ್ಲಿ ಹತ್ತು ಜನರು ಉಳಿದರೂ ಅವರೆಲ್ಲರು ಸಾಯುವರು.

10 ಸುಡಲು ಬಂದ ದಾಯಾದಿಯು ಒಂದು ಹೆಣವನ್ನು ಮನೆಯೊಳಗಿಂದ ತೆಗೆದುಕೊಂಡು ಹೋಗಬೇಕೆಂದು ಅದನ್ನೆತ್ತಿ - ನಿನ್ನ ಹತ್ತಿರ ಇನ್ನು ಯಾರಾದರೂ ಇದ್ದಾರೋ ಎಂದು ಒಳಮನೆಯಲ್ಲಿರುವವನನ್ನು ಕೇಳುವಾಗ ಅವನು ಇಲ್ಲವೆನ್ನಲು ಇವನು ಯೆಹೋವನ ಹೆಸರನ್ನು ಎತ್ತಾನೆಂದು ದಾಯಾದಿಯು ಭಯಪಟ್ಟು ಸುಮ್ಮನಿರು ಎಂದು ಅವನನ್ನು ತಡೆಯುವನು.

11 ಇಗೋ, ಯೆಹೋವನು ಆಜ್ಞಾಪಿಸಲು ದೊಡ್ಡ ಮನೆಯು ಹೊಡೆಯಲ್ಪಟ್ಟು ಚೂರುಚೂರಾಗುವದು, ಚಿಕ್ಕ ಮನೆಯೂ ಮುರಿದುಹೋಗುವದು.

12 ಕುದುರೆಗಳು ಕೋಡುಗಲ್ಲಿನ ಮೇಲೆ ಓಡಾಡುವವೋ; ಅದನ್ನು ಎತ್ತುಗಳಿಂದ ಉಳುವರೋ? ಆದರೆ ನೀವು ನ್ಯಾಯವನ್ನು ವಿಷಮಾಡಿ ಧರ್ಮದ ಸುಫಲವನ್ನು ಕಹಿಗೆ ತಂದಿರಲ್ಲಾ.

13 ನೀವು ಹೆಚ್ಚಳಪಡುವದು ಶೂನ್ಯವಾದದ್ದರಲ್ಲಿಯೇ ಸ್ವಬಲದಿಂದ ಕೊಂಬುಗಳನ್ನು ಪಡೆದುಕೊಂಡಿದ್ದೇವಲ್ಲಾ ಅಂದುಕೊಳ್ಳುತ್ತೀರಿ.

14 ಸೇನಾಧೀಶ್ವರದೇವರಾದ ಯೆಹೋವನು ಇಂತೆನ್ನುತ್ತಾನೆ - ಇಸ್ರಾಯೇಲ್ ವಂಶದವರೇ, ಇಗೋ, ನಾನು ನಿಮಗೆ ವಿರುದ್ಧವಾಗಿ ಒಂದು ಜನಾಂಗವನ್ನು ಎಬ್ಬಿಸುವೆನು; ಅದು ಹಮಾತಿನ ದಾರಿಯಿಂದ ಅರಾಬಾ ತಗ್ಗಿನ ತೊರೆಯ ತನಕ ನಿಮ್ಮನ್ನು ಜಜ್ಜಿಬಿಡುವದು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು