Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆಮೋಸ 4 - ಕನ್ನಡ ಸತ್ಯವೇದವು J.V. (BSI)


ಸಮಾರ್ಯದ ಸ್ತ್ರೀಯರ ಖಂಡನೆ

1 ಸಮಾರ್ಯಬೆಟ್ಟದಲ್ಲಿನ ಬಾಷಾನಿನ ಆಕಳುಗಳೇ, ಬಡವರನ್ನು ಹಿಂಸಿಸಿ ದಿಕ್ಕಿಲ್ಲದವರನ್ನು ಜಜ್ಜಿ ನಿಮ್ಮ ಪತಿಗಳಿಗೆ - ಪಾನವನ್ನು ತರಿಸಿರಿ, ಕುಡಿಯೋಣ ಎಂದು ಹೇಳುವವರೇ, ಈ ಮಾತನ್ನು ಕೇಳಿರಿ.

2 ಕರ್ತನಾದ ಯೆಹೋವನು ತನ್ನ ಪರಿಶುದ್ಧತ್ವದ ಮೇಲೆ ಆಣೆಯಿಟ್ಟು - ಇಗೋ, ನಿಮ್ಮನ್ನು ಕೊಂಡಿಗಳಿಂದಲೂ ನಿಮ್ಮಲ್ಲಿ ಉಳಿದವರನ್ನು ಮೀನುಗಾಳಗಳಿಂದಲೂ ಎಳೆದುಕೊಂಡು ಹೋಗುವ ದಿನಗಳು ನಿಮಗೆ ಬರುತ್ತವೆ ಎಂದು ಪ್ರಮಾಣ ಮಾಡಿದ್ದಾನೆ.

3 ನೀವೆಲ್ಲರು ಇದ್ದ ಮುಖವಾಗಿಯೇ ಕೋಟೆಯೊಡೆದ ಸ್ಥಳಗಳಿಂದ ಹೊರಟು ಹರ್ಮೋನಿಗೆ ಹಾಕಿಸಿಕೊಳ್ಳುವಿರಿ; ಇದು ಯೆಹೋವನ ನುಡಿ.


ಕೇವಲ ಆಚಾರಗಳು ವ್ಯರ್ಥ

4 ಬೇತೇಲಿಗೆ ಬಂದು ದ್ರೋಹಮಾಡಿರಿ, ಗಿಲ್ಗಾಲಿನಲ್ಲಿ ನೆರೆದು ದ್ರೋಹವನ್ನು ಇನ್ನೂ ಹೆಚ್ಚಿಸಿರಿ; ಪ್ರತಿದಿನ ಬೆಳಿಗ್ಗೆ ನಿಮ್ಮ ಯಜ್ಞಗಳನ್ನು ಅರ್ಪಿಸಿರಿ, ಮೂರು ದಿನಕ್ಕೆ ಒಂದು ಸಲ ದಶಮಾಂಶವನ್ನು ಸಲ್ಲಿಸಿರಿ,

5 ಹುಳಿಹಿಟ್ಟನ್ನು ಕೃತಜ್ಞತಾರ್ಪಣವಾಗಿ ಹೋಮಮಾಡಿರಿ, [ಕೊಟ್ಟ] ಕಾಣಿಕೆಗಳನ್ನು ಪ್ರಕಟಿಸಿರಿ, ಸಾರಿಕೊಳ್ಳಿರಿ; ಇಸ್ರಾಯೇಲ್ಯರೇ, ಹೀಗೆ ಮಾಡುವದು ನಿಮಗಿಷ್ಟವಷ್ಟೆ; ಇದು ಕರ್ತನಾದ ಯೆಹೋವನ ನುಡಿ.


ದಂಡನೆಯಿಂದ ಮಾರ್ಗಕ್ಕೆ ಬಾರದವರಿಗೆ ಹೆಚ್ಚು ದಂಡನೆಯು ಅವಶ್ಯ

6 ನಿಮ್ಮ ಊರುಗಳಲ್ಲೆಲ್ಲಾ ನಿಮ್ಮ ಹಲ್ಲಿಗೆ ಏನೂ ಸಿಕ್ಕದಂತೆಯೂ ನಿಮ್ಮ ಸಕಲ ನಿವಾಸಗಳಲ್ಲಿ ಅನ್ನದ ಕೊರತೆಯಾಗುವ ಹಾಗೂ ಮಾಡಿದೆನು; ಹೀಗೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ ಎಂದು ಯೆಹೋವನು ನುಡಿಯುತ್ತಾನೆ.

7 ಸುಗ್ಗಿಗೆ ಮೂರು ತಿಂಗಳು ಕಳೆಯಬೇಕಾದಾಗಲೂ ನಿಮಗೆ ಮಳೆಯನ್ನು ತಡೆದೆನು; ಒಂದು ಊರಿನ ಮೇಲೆ ಮಳೆಯಾಗುವಂತೆಯೂ ಇನ್ನೊಂದು ಊರಿನ ಮೇಲೆ ಮಳೆಯಾಗದಂತೆಯೂ ಮಾಡಿದೆನು; ಒಬ್ಬನ ಹೊಲದಲ್ಲಿ ಮಳೆಯಾಯಿತು, ಮಳೆಯಾಗದ ಹೊಲವು ಬಾಡಿಹೋಯಿತು.

8 ಎರಡು ಮೂರು ಊರಿನವರು ನೀರು ಕುಡಿಯುವದಕ್ಕೆ ಮತ್ತೊಂದು ಊರಿಗೆ ಬಳಲುತ್ತಾ ಹೋಗುತ್ತಿದ್ದರು; ಬಾಯಾರಿಕೆ ತೀರಲಿಲ್ಲ; ಹೀಗೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ ಎಂದು ಯೆಹೋವನು ನುಡಿಯುತ್ತಾನೆ.

9 ನಿಮ್ಮನ್ನು ಬೂದಿಯಿಂದಲೂ ಬಿಸಿಗಾಳಿಯಿಂದಲೂ ಬಾಧಿಸಿದೆನು; ನಿಮ್ಮ ಲೆಕ್ಕವಿಲ್ಲದ ವನ, ದ್ರಾಕ್ಷೆಯ ತೋಟ, ಅಂಜೂರದ ಗಿಡ, ಎಣ್ಣೆಯ ಮರ, ಇವುಗಳನ್ನು ವಿುಡತೆಯು ತಿಂದುಬಿಟ್ಟಿತು; ಹೀಗೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ ಎಂದು ಯೆಹೋವನು ನುಡಿಯುತ್ತಾನೆ.

10 ಐಗುಪ್ತದ ವ್ಯಾಧಿಗಳಂಥ ವ್ಯಾಧಿಯನ್ನು ನಿಮಗೆ ಕಳುಹಿಸಿದೆನು; ನಿಮ್ಮ ಯುವಕರನ್ನು ಖಡ್ಗದಿಂದ ಹತಿಸಿದೆನು, ನಿಮ್ಮ ಅಶ್ವಗಳನ್ನು ಸೂರೆಮಾಡಿಸಿದೆನು; ನಿಮ್ಮ ದಂಡಿನ ಗಬ್ಬು ನಿಮ್ಮ ಮೂಗಿಗೆ ಬಡಿಯುವಂತೆ ಮಾಡಿದೆನು; ಹೀಗೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ ಎಂದು ಯೆಹೋವನು ನುಡಿಯುತ್ತಾನೆ.

11 ಸೊದೋಮ್‍ಗೊಮೋರಗಳನ್ನು ಕೆಡವಿದಂತೆ ನಾನು ನಿಮ್ಮ ಅನೇಕ ಪಟ್ಟಣಗಳನ್ನು ಕೆಡವಲು ಉರಿಯಿಂದ ಎಳೆದ ಕೊಳ್ಳಿಯ ಹಾಗಿದ್ದಿರಿ; ಹೀಗೂ ನೀವು ನನ್ನ ಕಡೆಗೆ ಹಿಂದಿರುಗಲಿಲ್ಲ ಎಂದು ಯೆಹೋವನು ನುಡಿಯುತ್ತಾನೆ.

12 ಆದಕಾರಣ, ಇಸ್ರಾಯೇಲೇ, ನಾನು ನಿನಗೆ ಮಾಡುತ್ತೇನೆ; ನಾನು ಮಾಡಬೇಕೆಂದಿರುವದರಿಂದ, ಇಸ್ರಾಯೇಲೇ, ನಿನ್ನ ದೇವರ ಬರುವಿಕೆಗೆ ನಿನ್ನನ್ನು ಸಿದ್ಧಮಾಡಿಕೋ.

13 ಇಗೋ, ಪರ್ವತಗಳನ್ನು ರೂಪಿಸಿ ವಾಯುವನ್ನು ಸೃಷ್ಟಿಸಿ ತನ್ನ ಸಂಕಲ್ಪವನ್ನು ಮನುಷ್ಯರಿಗೆ ವ್ಯಕ್ತಗೊಳಿಸಿ ಉದಯವನ್ನು ಅಂಧಕಾರವನ್ನಾಗಿ ಮಾಡಿ ಭೂವಿುಯ ಉನ್ನತಪ್ರದೇಶಗಳಲ್ಲಿ ನಡೆಯುವಾತನಿಗೆ ಸೇನಾಧೀಶ್ವರದೇವರಾದ ಯೆಹೋವನೆಂಬದೇ ನಾಮಧೇಯ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು