ಆಮೋಸ 3 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲಿನ ವಿವಿಧಪಾಪವೂ ಘೋರ ದುರ್ಗತಿಯೂ ( 3—6 ) ಹೆಚ್ಚು ದಯೆಹೊಂದಿದವರಿಗೆ ದೋಷಫಲವೂ ಹೆಚ್ಚು 1 ಇಸ್ರಾಯೇಲ್ಯರೇ, ಯೆಹೋವನು ನಿಮಗೆ ವಿರುದ್ಧವಾಗಿ, ಅಂದರೆ ತಾನು ಐಗುಪ್ತದೇಶದೊಳಗಿಂದ ಪಾರುಮಾಡಿದ ಪೂರ್ಣಕುಲಕ್ಕೆ ವಿರುದ್ಧವಾಗಿ ನುಡಿದಿರುವ ಈ ಮಾತನ್ನು ಕೇಳಿರಿ - 2 ಭೂವಿುಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ; ಆದಕಾರಣ ನಿಮ್ಮ ಎಲ್ಲಾ ಪಾಪಗಳ ಫಲವನ್ನು ನಿಮಗೆ ತಿನ್ನಿಸುವೆನು. ಪ್ರವಾದಿಯು ನಿಷ್ಕಾರಣವಾಗಿ ಖಂಡಿಸನು 3 ಗೊತ್ತುಮಾಡಿಕೊಳ್ಳದೆ ಇಬ್ಬರು ಜೊತೆಯಾಗಿ ನಡೆಯುವರೋ? 4 ಬೇಟೆಯಿಲ್ಲದೆ ಸಿಂಹವು ಅರಣ್ಯದಲ್ಲಿ ಗರ್ಜಿಸುವದೋ? ಏನೂ ಹಿಡಿದುಕೊಂಡಿರದೆ ಪ್ರಾಯದ ಸಿಂಹವು ಗವಿಯಲ್ಲಿ ಗುರುಗುಟ್ಟುವದೋ? 5 ಕಾಳಿಲ್ಲದೆ ಪಕ್ಷಿಯು ನೆಲದಲ್ಲಿನ ಬಲೆಯೊಳಗೆ ಬೀಳುವದೋ? ಏನೂ ಸಿಕ್ಕಿಕೊಳ್ಳದೆ ಬೋನು ಮೇಲಕ್ಕೆ ಹಾರುವದೋ? 6 ಊರಲ್ಲಿ ಕೊಂಬೂದಿದರೆ ಜನರು ಅಂಜರೋ? ಯೆಹೋವನಿಂದಲ್ಲದೆ ಊರಿಗೆ ವಿಪತ್ತು ಸಂಭವಿಸುವದೋ? 7 ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು. 8 ಸಿಂಹವು ಗರ್ಜಿಸಿದೆ, ಭಯಪಡದವರು ಯಾರು? ಕರ್ತನಾದ ಯೆಹೋವನು ನುಡಿದಿದ್ದಾನೆ, ಆ ನುಡಿಯನ್ನು ಸಾರದಿರುವವರು ಯಾರು? ಸಮಾರ್ಯ ಪಟ್ಟಣದ ಧ್ವಂಸ 9 ಅಷ್ಡೋದಿನ ಅರಮನೆಗಳಲ್ಲಿಯೂ ಐಗುಪ್ತದೇಶದ ಸೌಧಗಳಲ್ಲಿಯೂ ಹೀಗೆ ಪ್ರಕಟಿಸಿರಿ - ಸಮಾರ್ಯದ ಬೆಟ್ಟಗಳಲ್ಲಿ ಕೂಡಿಬನ್ನಿರಿ, ಪಟ್ಟಣದೊಳಗೆ ಎಷ್ಟೆಷ್ಟೋ ಗದ್ದಲಗಳೂ ಹಿಂಸೆಗಳೂ ನಡೆಯುತ್ತವೆ ನೋಡಿರಿ. 10 ತಮ್ಮ ಉಪ್ಪರಿಗೆಗಳಲ್ಲಿ ಬಾಧೆಕೊಳ್ಳೆಗಳಿಂದ ಸಂಪಾದಿಸಿದ್ದನ್ನು ಕೂಡಿಸಿಟ್ಟುಕೊಂಡಿರುವವರು ನ್ಯಾಯವಾಗಿ ನಡೆಯಲು ಅರಿಯರು; ಇದು ಯೆಹೋವನ ನುಡಿ. 11 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ - ಶತ್ರುವು ನಿನ್ನ ದೇಶವನ್ನು ಮುತ್ತಿಕೊಳ್ಳುವನು, ನಿನ್ನ ಶಕ್ತಿಯನ್ನು ಕುಂದಿಸಿಬಿಡುವನು, ನಿನ್ನ ಅರಮನೆಗಳು ಸೂರೆಯಾಗುವವು. 12 ಯೆಹೋವನು ಇಂತೆನ್ನುತ್ತಾನೆ - ಸಿಂಹದ ಬಾಯೊಳಗಿಂದ ಎರಡು ಕಾಲುಗಳಾಗಲಿ ಕಿವಿಯ ತುಂಡಾಗಲಿ ಹೇಗೆ ಕುರುಬನಿಂದ ರಕ್ಷಿಸಲ್ಪಡುವದೋ ಹಾಗೆಯೇ ಸಮಾರ್ಯದೊಳಗೆ ಗದ್ದುಗೆಯ ಮೂಲೆಯಲ್ಲಿಯೂ ಮಂಚದ ಪಟ್ಟೇದಿಂಬುಗಳಲ್ಲಿಯೂ ಒರಗಿಕೊಳ್ಳುವ ಇಸ್ರಾಯೇಲ್ಯರ [ಸ್ವಲ್ಪಭಾಗ ಮಾತ್ರ] ರಕ್ಷಿಸಲ್ಪಡುವದು. 13 ಸೇನಾಧೀಶ್ವರ ದೇವನಾದ ಯೆಹೋವನು ಇಂತೆನ್ನುತ್ತಾನೆ - ಕೇಳಿರಿ, ಯಾಕೋಬ ವಂಶದವರಿಗೆ ಎಚ್ಚರ ಹೇಳಿರಿ; 14 ನಾನು ಇಸ್ರಾಯೇಲಿನ ದ್ರೋಹಗಳಿಗಾಗಿ ಅದಕ್ಕೆ ಮುಯ್ಯಿತೀರಿಸುವ ದಿನದಲ್ಲಿ ಬೇತೇಲಿನ ಯಜ್ಞವೇದಿಗಳನ್ನು ಧ್ವಂಸಮಾಡುವೆನು; ಯಜ್ಞವೇದಿಯ ಕೊಂಬುಗಳು ಕತ್ತರಿಸಲ್ಪಟ್ಟು ನೆಲದ ಪಾಲಾಗುವವು. 15 ನಾನು ಚಳಿಗಾಲದ ಅರಮನೆಯನ್ನೂ ಬೇಸಿಗೆಯ ಅರಮನೆಯನ್ನೂ ಹೊಡೆದುಹಾಕುವೆನು; ದಂತಮಂದಿರಗಳು ಹಾಳಾಗುವವು, ಮಹಾಸೌಧಗಳು ಕೊನೆಗಾಣುವವು; ಇದು ಯೆಹೋವನ ನುಡಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India