ಆದಿಕಾಂಡ 49 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲನು ತನ್ನಿಂದುಂಟಾಗುವ ಹನ್ನೆರಡು ಕುಲಗಳ ವಿಷಯವಾಗಿ ಕಾಲಜ್ಞಾನ ಹೇಳಿದ್ದು 1 ಯಾಕೋಬನು ತನ್ನ ಮಕ್ಕಳನ್ನು ಕರಸಿ - ನೀವೆಲ್ಲರೂ ಕೂ ಡಿಬನ್ನಿರಿ; ಮುಂದಿನ ಕಾಲದಲ್ಲಿ ನಿಮಗೆ ಸಂಭವಿಸುವದನ್ನು ತಿಳಿಸುತ್ತೇನೆ. 2 ಯಾಕೋಬನ ಮಕ್ಕಳೇ, ನೀವೆಲ್ಲರೂ ಕೂಡಿಬಂದು ಕೇಳಿರಿ; ನಿಮ್ಮ ತಂದೆಯಾದ ಇಸ್ರಾಯೇಲನ ಮಾತನ್ನು ಲಾಲಿಸಿರಿ. 3 ರೂಬೇನನೇ, ನೀನು ನನ್ನ ಚೊಚ್ಚಲಮಗನೂ, ನನ್ನ ಚೈತನ್ಯಸ್ವರೂಪನೂ ನನ್ನ ವೀರ್ಯಕ್ಕೆ ಪ್ರಥಮ ಫಲವೂ ಗೌರವದಲ್ಲಿಯೂ ಅಧಿಕಾರದಲ್ಲಿಯೂ ಪ್ರಮುಖನೂ ಆಗಿದ್ದೀ. 4 ಆದರೂ ದಡವನ್ನು ಮೀರಿದ ಪ್ರವಾಹದಂತಿರುವ ನೀನು ಇನ್ನು ಪ್ರಮುಖನ ಸ್ಥಾನದಲ್ಲಿ ಇರುವದಿಲ್ಲ. ನಿನ್ನ ತಂದೆಯ ಹಾಸಿಗೆಯನ್ನು ಹತ್ತಿ ಅದನ್ನು ಹೊಲೆ ಮಾಡಿದಿಯಲ್ಲಾ. ಇವನು ನನ್ನ ಮಂಚವನ್ನು ಹತ್ತಿದನು! 5 ಸಿಮೆಯೋನನೂ ಲೇವಿಯೂ ಅಣ್ಣತಮ್ಮಂದಿರೇ ಸರಿ; ಇವರ ಕತ್ತಿಗಳು ಬಲಾತ್ಕಾರದ ಆಯುಧಗಳೇ. 6 ನನ್ನ ಪ್ರಾಣವೇ, ಅವರ ಗುಪ್ತವಾದ ದುರಾಲೋಚನೆಗೆ ನೀನು ಒಳಪಡಬಾರದು; ನನ್ನ ಮನವೇ, ಅವರ ಗುಂಪಿಗೆ ನೀನು ಸೇರಬೇಡ. ಅವರು ಕೋಪೋದ್ರೇಕದಿಂದ ಮನುಷ್ಯರನ್ನು ಸಂಹರಿಸಿದರು; ಮದದಿಂದ ಎತ್ತುಗಳನ್ನು ಊನಪಡಿಸಿದರು. 7 ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದೆ; ಅದಕ್ಕೆ ಶಾಪವುಂಟಾಗಲಿ. ಯಾಕೋಬನ ಕುಲದವರಲ್ಲಿ ಅವರನ್ನು ವಿಭಾಗಿಸುವೆನು; ಇಸ್ರಾಯೇಲ್ಯರಲ್ಲಿ ಅವರನ್ನು ಚದರಿಸುವೆನು. 8 ಯೆಹೂದನೇ, ನಿನ್ನ ಅಣ್ಣತಮ್ಮಂದಿರು ನಿನ್ನನ್ನೇ ಸ್ತುತಿಸುವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವದು; ನಿನ್ನ ಸಹೋದರರು ನಿನಗೇ ಎರಗುವರು. 9 ಯೆಹೂದನು ಪ್ರಾಯದ ಸಿಂಹದಂತಿದ್ದಾನೆ; ನನ್ನ ಪುತ್ರನೇ, ನೀನು ಮೃಗವನ್ನು ಹಿಡಿದು ಕೊಂದು ಬೆಟ್ಟವನ್ನು ಸೇರಿದ ಸಿಂಹದೋಪಾದಿಯಲಿದ್ದೀ. ಅವನು ಸಿಂಹದಂತೆ ಕಾಲುಮುದುರಿ ಹೊಂಚುಹಾಕಿಕೊಂಡಿದ್ದಾನೆ; ಮೃಗೇಂದ್ರನಿಗೆ ಸಮಾನನಾದ ಇವನನ್ನು ಕೆಣಕುವದು ಯಾರಿಂದಾದೀತು? 10 ರಾಜದಂಡವನ್ನು ಹಿಡಿಯತಕ್ಕವನು ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವದಿಲ್ಲ, ಮುದ್ರೆಕೋಲು ಅವನ ಪಾದಗಳ ಬಳಿಯಿಂದ ಕದಲುವದಿಲ್ಲ; ಅವನಿಗೆ ಅನ್ಯಜನಗಳೂ ವಿಧೇಯರಾಗಿರುವರು. 11 ಅವನು ತನ್ನ ವಾಹನಪಶುವನ್ನು ದ್ರಾಕ್ಷಾಲತೆಗೆ ಕಟ್ಟುವನು, ರಾಜದ್ರಾಕ್ಷೆಗೆ ತನ್ನ ಕತ್ತೆಯನ್ನು ಬಿಗಿಯುವನು; ದ್ರಾಕ್ಷಾರಸದಲ್ಲಿ ತನ್ನ ಬಟ್ಟೆಗಳನ್ನು ಒಗೆಯುವನು, ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು: 12 ದ್ರಾಕ್ಷಾರಸದ ಸಮೃದ್ಧಿಯಿಂದ ಅವನ ಕಣ್ಣುಗಳು ಕೆಂಪಾಗಿಯೇ ಇರುವವು. ಹಾಲಿನ ಸಮೃದ್ಧಿಯಿಂದ ಅವನ ಹಲ್ಲುಗಳು ಬೆಳ್ಳಗಾಗಿಯೇ ಇರುವವು. 13 ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಮಾಡುವನು; ಅವನಿಗೆ ಹಡಗುಗಳು ಸೇರುವ ರೇವು ಇರುವದು. ಅವನ ಸೀಮೆಯ ಒಂದು ಮೇರೆ ಚೀದೋನಿಗೆ ಮುಟ್ಟುವದು. 14 ಇಸ್ಸಾಕಾರನು ಕುರೀಹಟ್ಟಿಗಳ ನಡುವೆ ಮಲಗಿಕೊಂಡಿರುವ ಬಲವುಳ್ಳ ಕತ್ತೆಯಂತಿರುವನು. 15 ತಾನು ಸೇರಿದ ಪ್ರದೇಶವು ವಿಶ್ರಾಂತಿಗೆ ಅನುಕೂಲವೂ ಸುಖಾಸ್ಪದವೂ ಆಗಿರುವದನ್ನು ನೋಡಿ ಅವನು ಹೊರೆಯನ್ನು ಹೊರುವದಕ್ಕೆ ಬೆನ್ನು ಬೊಗ್ಗಿಸಿಕೊಂಡು ಬಿಟ್ಟೀ ಕೆಲಸವನ್ನು ಮಾಡುವವನಾದನು. 16 ದಾನನು ಇಸ್ರಾಯೇಲ್ಯರ ಕುಲಗಳಿಗೆ ಯೋಗ್ಯವಾಗುವ ರೀತಿಯಲ್ಲಿ ತನ್ನ ಜನರ ವ್ಯಾಜ್ಯವನ್ನು ಜಯಕ್ಕೆ ತರುವನು. 17 ದಾನನು ದಾರಿಯಲ್ಲಿರುವ ಹಾವಿನಂತೆಯೂ ಮಾರ್ಗದಲ್ಲಿ ಕುದುರೆಯ ಹಿಮ್ಮಡಿಯನ್ನು ಕಚ್ಚಿ ಸವಾರನನ್ನು ಕೆಡಹುವ ವಿಷ ಸರ್ಪದಂತೆಯೂ ಆಗಿರುವನು. 18 ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಯು ಯಾವಾಗ ಆಗುವದೋ ಎಂದು ನಿರೀಕ್ಷಿಸಿಕೊಂಡಿದ್ದೇನೆ. 19 ಗಾದನ ಸಂಗತಿ - ಸುಲಿಗೆಮಾಡುವವರು ದಂಡೆತ್ತಿ ಅವನ ಮೇಲೆ ಬೀಳಲು ಇವನು ಅವರನ್ನು ಹಿಮ್ಮೆಟ್ಟಿಕೊಂಡು ಹೋಗುವನು. 20 ಆಶೇರನಿಗೆ ಧಾನ್ಯಸಮೃದ್ಧಿಯಾಗುವದು; ಅವನಲ್ಲಿ ರಾಜಭೋಗ್ಯವಾದ ಪದಾರ್ಥಗಳು ದೊರಕುವವು. 21 ನಫ್ತಾಲಿ ಬಿಡಿಸಿಕೊಂಡಿರುವ ಜಿಂಕೆಯಂತಿದ್ದಾನೆ. ಅವನಿಂದ ಇಂಪಾದ ಮಾತುಗಳುಂಟಾಗುತ್ತವೆ. 22 ಯೋಸೇಫನು ಬಹುಫಲವನ್ನು ಬಿಡುವ ವೃಕ್ಷಕ್ಕೆ ಸಮಾನನಾಗಿದ್ದಾನೆ, ಒರತೆಯ ಬಳಿಯಲ್ಲಿ ಬೆಳೆದು ರೆಂಬೆಗಳನ್ನು ಗೋಡೆಯ ಆಚೆಗೆ ಚಾಚಿರುವ ಫಲವೃಕ್ಷದಂತಿದ್ದಾನೆ. 23 ಬಿಲ್ಲುಗಾರರು ಬಂದು ಅವನನ್ನು ಕೆಣಕಿ ಬಾಣ ಎಸೆದು ಕವಿದುಕೊಂಡರು. 24 ಆದರೂ ಯಾಕೋಬನ ವಂಶಸ್ಥರನ್ನು ರಕ್ಷಿಸುವ ಪರಾಕ್ರವಿುಯ ಭುಜಬಲದಿಂದಲೂ ಇಸ್ರಾಯೇಲನಿಗೆ ಪಾಲಕನೂ ಬಂಡೆಯೂ ಆಗಿರುವಾತನ ಕಡೆಯಿಂದಲೂ ಅವನ ಬಿಲ್ಲು ಸ್ಥಿರವಾಗಿ ನಿಂತಿತು, ಅವನ ಕೈಗಳು ಚುರುಕಾಗಿ ಮಾಡಲ್ಪಟ್ಟವು. 25 ಇದು ನಿನ್ನ ತಂದೆಯ ದೇವರಿಂದಾಯಿತು, ಆತನು ನಿನಗೆ ಸಹಾಯ ಮಾಡಲಿ; ಸರ್ವಶಕ್ತನಾದ ದೇವರಿಂದಾಯಿತು,ಅತನು ನಿನ್ನನ್ನು ಆಶೀರ್ವದಿಸಲಿ. ಆತನು ಮೇಲಣ ಆಕಾಶದಿಂದಲೂ ಕೆಳಗಣ ಸಾಗರದ ಸೆಲೆಗಳಿಂದಲೂ ಸ್ತನ್ಯದಿಂದಲೂ ಗರ್ಭದಿಂದಲೂ ಉಂಟಾಗುವ ಸೌಭಾಗ್ಯಗಳನ್ನು ಕೊಟ್ಟು ನಿನ್ನನ್ನು ಆಶೀರ್ವದಿಸಲಿ. 26 ನಿನ್ನ ತಂದೆಯ ಆಶೀರ್ವಾದಗಳು ಆದಿಯಿಂದಿದ್ದ ಪರ್ವತಗಳಿಂದುಟಾಗುವ ಮೇಲುಗಳಿಗಿಂತಲೂ ಸದಾಕಾಲವಾಗಿರುವ ಬೆಟ್ಟಗಳಿಂದುಂಟಾಗುವ ಉತ್ತಮ ವಸ್ತುಗಳಿಗಿಂತಲೂ ವಿಶೇಷವಾಗಿವೆ. ಇವೆಲ್ಲಾ ಯೋಸೇಫನ ಪಾಲಿಗೆ ಬರಲಿ; ಅಣ್ಣತಮ್ಮಂದಿರಲ್ಲಿ ಪ್ರಭುವಾಗಿರುವವನ ಶಿರಸ್ಸಿನ ಮೇಲುಂಟಾಗಲಿ. 27 ಬೆನ್ಯಾಮೀನನು ಕುರಿಗಳನ್ನು ಹಿಡಿದುಕೊಳ್ಳುವ ತೋಳದಂತಿದ್ದಾನೆ. ಹಿಡಿದುಕೊಂಡದ್ದನ್ನು ಬೆಳಿಗ್ಗೆ ಉಣ್ಣುವನು. ಕೊಳ್ಳೆಮಾಡಿದ್ದನ್ನು ಸಂಜೆಯಲ್ಲಿ ಹಂಚಿಕೊಳ್ಳುವನು. 28 ಇವರೆಲ್ಲರೂ ಇಸ್ರಾಯೇಲನಿಂದುಂಟಾದ ಹನ್ನೆರಡು ಕುಲಗಳು. ಇದೇ ಅವರ ತಂದೆ ಅವರಿಗೆ ಹೇಳಿದ ಆಶೀರ್ವಾದ. ಒಂದೊಂದು ಕುಲಕ್ಕೆ ಒಂದೊಂದು ಆಶೀರ್ವಚನವನ್ನು ನುಡಿದನು. ಇಸ್ರಾಯೇಲನ ಮರಣವೂ ಉತ್ತರಕ್ರಿಯೆಯೂ 29 ಇಸ್ರಾಯೇಲನು ತನ್ನ ಮಕ್ಕಳಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ - ನಾನು ನನ್ನ ಪಿತೃಗಳ ಬಳಿಗೆ ಸೇರಬೇಕಾದ ಕಾಲ ಸಮೀಪಿಸಿತು. ಹಿತ್ತಿಯನಾದ ಎಫ್ರೋನನ ಭೂವಿುಯಲ್ಲಿರುವ ಗವಿಯೊಳಗೆ ನನಗೆ ಪಿತೃಗಳ ಬಳಿಯಲ್ಲಿ ಸಮಾಧಿಮಾಡಬೇಕು. 30 ಆ ಗವಿಯು ಕಾನಾನ್‍ದೇಶದ ಮಮ್ರೆಗೆದುರಾಗಿರುವ ಮಕ್ಪೇಲ ಎಂಬ ಬೈಲಿನಲ್ಲಿ ಅದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂವಿುಸಹಿತವಾಗಿ ಹಿತ್ತಿಯನಾದ ಎಫ್ರೋನನಿಂದ ಸ್ವಕೀಯ ಶ್ಮಶಾನಭೂವಿುಯಾಗುವದಕ್ಕೆ ಕೊಂಡುಕೊಂಡನು. 31 ಅಲ್ಲಿ ಅಬ್ರಹಾಮನಿಗೂ ಅವನ ಪತ್ನಿಯಾದ ಸಾರಳಿಗೂ ಸಮಾಧಿಯಾಯಿತು; ಅಲ್ಲಿ ಇಸಾಕನಿಗೂ ಅವನ ಹೆಂಡತಿಯಾದ ರೆಬೆಕ್ಕಳಿಗೂ ಸಮಾಧಿಯಾಯಿತು; ಅಲ್ಲಿ ನಾನು ಲೇಯಳನ್ನೂ ಹೂಣಿಟ್ಟೆನು. 32 ಹೊಲದ ಕೂಡ ಹಿತ್ತಿಯರಿಂದ ಕ್ರಯಕ್ಕೆ ತೆಗೆದುಕೊಂಡ ಆ ಗವಿಯೊಳಗೆ ನನಗೂ ಸಮಾಧಿಮಾಡಬೇಕು ಅಂದನು. 33 ಯಾಕೋಬನು ತನ್ನ ಮಕ್ಕಳಿಗೆ ಅಪ್ಪಣೆಕೊಡುವದನ್ನು ಮುಗಿಸಿದನಂತರ ಹಾಸಿಗೆಯ ಮೇಲೆ ತನ್ನ ಕಾಲುಗಳನ್ನು ಮುದುರಿಕೊಂಡು ಪ್ರಾಣಬಿಟ್ಟು ಪಿತೃಗಳ ಬಳಿಗೆ ಸೇರಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India