ಆದಿಕಾಂಡ 45 - ಕನ್ನಡ ಸತ್ಯವೇದವು J.V. (BSI)1 ಯೋಸೇಫನು ಇದನ್ನು ಕೇಳಿ ತನ್ನ ಎದುರಿನಲ್ಲಿದ್ದವರ ಮುಂದೆ ತಾಳಲಾರದೆ - ನನ್ನ ಬಳಿಯಿಂದ ಎಲ್ಲರನ್ನೂ ಆಚೆಗೆ ಕಳುಹಿಸಿರಿ ಎಂದು ಬಾಯಿಬಿಟ್ಟು ಹೇಳಿದನು. ಯೋಸೇಫನು ಅಣ್ಣತಮ್ಮಂದಿರಿಗೆ ತನ್ನ ಗುರುತು ಸಿಕ್ಕುವಂತೆ ಮಾಡುವ ವೇಳೆಯಲ್ಲಿ ಇತರರು ಯಾರೂ ಹತ್ತರ ಇರಲಿಲ್ಲ. 2 ಅವನು ಗಟ್ಟಿಯಾಗಿ ಅತ್ತದ್ದರಿಂದ ಐಗುಪ್ತ್ಯರಿಗೂ ಫರೋಹನ ಮನೆಯವರಿಗೂ ಆ ಶಬ್ದವು ಕೇಳಿಸಿತು. 3 ಅವನು ತನ್ನ ಅಣ್ಣಂದಿರಿಗೆ - ನಾನು ಯೋಸೇಫನು; ನನ್ನ ತಂದೆ ಇನ್ನೂ ಇದ್ದಾನೋ ಎಂದು ಹೇಳಲು ಅವರು ಅವನ ಮುಂದೆ ತತ್ತರಗೊಂಡು ಉತ್ತರಕೊಡಲಾರದೆ ಹೋದರು. 4 ಯೋಸೇಫನು - ನನ್ನ ಹತ್ತರಕ್ಕೆ ಬನ್ನಿರಿ ಎಂದು ತನ್ನಣ್ಣಂದಿರಿಗೆ ಹೇಳಲು ಅವರು ಹತ್ತರಕ್ಕೆ ಬಂದರು. ಅವನು ಅವರಿಗೆ - ಐಗುಪ್ತದೇಶಕ್ಕೆ ಸೇರುವಂತೆ ನೀವು ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನೇ ನಾನು. 5 ನೀವು ನನ್ನನ್ನು ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು. 6 ದೇಶಕ್ಕೆ ಬರಬಂದು ಎರಡು ವರುಷವಾಗಿದೆಯಷ್ಟೆ; ಇನ್ನೂ ಐದು ವರುಷಗಳ ಪರ್ಯಂತರ ಬಿತ್ತುವದಕ್ಕಾಗಲಿ ಕೊಯ್ಯುವದಕ್ಕಾಗಲಿ ಅವಕಾಶವಿಲ್ಲ. 7 ನಿಮ್ಮ ಜನವು ಭೂವಿುಯ ಮೇಲೆ ಉಳಿಯುವಂತೆಯೂ ನೀವು ಈ ವಿಪತ್ತಿಗೆ ಸಿಕ್ಕದೆ ಬಹುಜನವಾಗುವಂತೆಯೂ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು. 8 ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದನಲ್ಲದೆ ನೀವು ಕಳುಹಿಸಲಿಲ್ಲ; ಆತನು ನನ್ನನ್ನು ಫರೋಹನ ಮಂತ್ರಿಯನ್ನಾಗಿಯೂ ಫರೋಹನ ಅರಮನೆಯಲ್ಲಿ ಅಧಿಪತಿಯನ್ನಾಗಿಯೂ ಐಗುಪ್ತದೇಶಕ್ಕೆ ಸರ್ವಾಧಿಕಾರಿಯನ್ನಾಗಿಯೂ ಮಾಡಿದ್ದಾನೆ. 9 ನೀವು ಬೇಗ ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ - ನಿನ್ನ ಮಗನಾದ ಯೋಸೇಫನು ಹೀಗನ್ನುತ್ತಾನೆ - ದೇವರು ನನ್ನನ್ನು ಐಗುಪ್ತದೇಶಕ್ಕೆ ಸರ್ವಾಧಿಕಾರಿಯನ್ನಾಗಿ ನೇವಿುಸಿದ್ದಾನೆ; ನೀನು ತಡಮಾಡದೆ ನನ್ನ ಬಳಿಗೆ ಬಾ; 10 ಗೋಷೆನ್ ಸೀಮೆಯಲ್ಲಿ ನೀನು ವಾಸಮಾಡಬಹುದು; ನೀನೂ ನಿನ್ನ ಮಕ್ಕಳೂ ಮೊಮ್ಮಕ್ಕಳೂ ಕುರಿ ದನ ಮೊದಲಾದ ಸ್ವಾಸ್ತ್ಯಸಹಿತರಾಗಿ ನನ್ನ ಬಳಿಯಲ್ಲೇ ಇರಬಹುದು; 11 ಈ ಬರಗಾಲ ತೀರುವದಕ್ಕೆ ಇನ್ನೂ ಐದು ವರುಷ ಹೋಗಬೇಕು; ಆದದರಿಂದ ನಿನಗೂ ನಿನ್ನ ಮನೆಯವರಿಗೂ ನಿನಗಿರುವ ಎಲ್ಲವುಗಳಿಗೂ ಬಡತನವುಂಟಾಗದಂತೆ ಇಲ್ಲಿ ನಿನ್ನನ್ನು ಪೋಷಿಸುವೆನೆಂದು ಹೇಳುತ್ತಾನೆಂಬದಾಗಿ ತಿಳಿಸಿರಿ. 12 ನಾನು ಸ್ವತಃ ನಿಮ್ಮ ಸಂಗಡ ಮಾತಾಡಿದ್ದೇನಲ್ಲಾ; ಅದಕ್ಕೆ ನೀವೇ ಸಾಕ್ಷಿ, ನನ್ನ ಒಡಹುಟ್ಟಿದವನಾದ ಬೆನ್ಯಾಮೀನನೂ ಸಾಕ್ಷಿ. 13 ಐಗುಪ್ತದೇಶದಲ್ಲಿ ನನಗಿರುವ ಎಲ್ಲಾ ವೈಭವವನ್ನೂ ನೀವು ಕಂಡದ್ದೆಲ್ಲವನ್ನೂ ತಂದೆಗೆ ತಿಳಿಸಿ ಬೇಗನೆ ಅವನನ್ನು ಇಲ್ಲಿಗೆ ಕರಕೊಂಡು ಬರಬೇಕೆಂದು ಹೇಳಿ 14 ತನ್ನ ತಮ್ಮನಾದ ಬೆನ್ಯಾಮೀನನ ಕೊರಳನ್ನು ಅಪ್ಪಿಕೊಂಡು ಅತ್ತನು. ಬೆನ್ಯಾಮೀನನೂ ಅವನ ಕೊರಳನ್ನು ಅಪ್ಪಿಕೊಂಡು ಅತ್ತನು. 15 ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವರು ಅವನ ಸಂಗಡ ಮಾತಾಡಿದರು. 16 ಯೋಸೇಫನ ಅಣ್ಣತಮ್ಮಂದಿರು ಬಂದ ಸಮಾಚಾರವು ಫರೋಹನ ಮನೆಯವರಿಗೆ ತಿಳಿದಾಗ ಫರೋಹನಿಗೂ ಅವನ ಪರಿವಾರದವರಿಗೂ ಸಂತೋಷವಾಯಿತು. 17 ಫರೋಹನು ಯೋಸೇಫನನ್ನು ಕರಿಸಿ - ನೀನು ನಿನ್ನ ಅಣ್ಣತಮ್ಮಂದಿರಿಗೆ ತಿಳಿಸಬೇಕಾದ ನನ್ನ ಆಜ್ಞೆಯೇನಂದರೆ - ನೀವು ನಿಮ್ಮ ಪಶುಗಳ ಮೇಲೆ ಸಾಮಾನುಗಳನ್ನು ಹೇರಿ ಕಾನಾನ್‍ದೇಶಕ್ಕೆ ಹೋಗಿ 18 ನಿಮ್ಮ ತಂದೆಯನ್ನೂ ಮನೆಯವರನ್ನೂ ನನ್ನ ಬಳಿಗೆ ಕರಕೊಂಡು ಬನ್ನಿರಿ; ಐಗುಪ್ತದೇಶದಲ್ಲಿ ದೊರಕುವ ಉತ್ತಮ ವಸ್ತುಗಳನ್ನು ನಿಮಗೆ ಕೊಡುವೆನು, ಮತ್ತು ನೀವು ಈ ದೇಶದ ಸುಖವನ್ನು ಅನುಭವಿಸಬಹುದು. 19 ಮತ್ತು ನಿಮ್ಮ ಹೆಂಡತಿ ಮಕ್ಕಳಿಗೋಸ್ಕರ ಐಗುಪ್ತದೇಶದಿಂದ ರಥಗಳನ್ನು ತೆಗೆದುಕೊಂಡು ಹೋಗಿ ನಿಮ್ಮ ತಂದೆಯನ್ನು ಕರಕೊಂಡು ಬನ್ನಿರಿ. 20 ಐಗುಪ್ತದೇಶದಲ್ಲೆಲ್ಲಾ ಇರುವ ಉತ್ತಮ ವಸ್ತುಗಳು ನಿಮ್ಮ ಪಾಲಿಗೆ ಬಂದದರಿಂದ ನಿಮಗಿರುವ ಸೊತ್ತಿನ ವಿಷಯ ಚಿಂತೆಪಡಬೇಕಾದ ಅವಶ್ಯವಿಲ್ಲ ಎಂಬದೇ ಅಂದನು. 21 ಇಸ್ರಾಯೇಲನ ಮಕ್ಕಳು ಅದೇ ಮೇರೆಗೆ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ರಥಗಳನ್ನೂ ಮಾರ್ಗಕ್ಕೆ ಬೇಕಾದ ಆಹಾರವನ್ನೂ ಕೊಡಿಸಿದನು. 22 ಇದಲ್ಲದೆ ಪ್ರತಿಯೊಬ್ಬನಿಗೂ ಶ್ರೇಷ್ಠ ವಸ್ತ್ರಗಳನ್ನೂ ಕೊಟ್ಟನು; ಬೆನ್ಯಾಮೀನನಿಗೋ ಮುನ್ನೂರು ರೂಪಾಯಿಗಳನ್ನೂ ಐದು ಶ್ರೇಷ್ಠ ವಸ್ತ್ರಗಳನ್ನೂ ಕೊಟ್ಟನು. 23 ತನ್ನ ತಂದೆಗೋಸ್ಕರ ಐಗುಪ್ತದೇಶದ ಒಳ್ಳೇ ವಸ್ತುಗಳನ್ನು ಹತ್ತು ಕತ್ತೆಗಳ ಮೇಲೆ ಹೇರಿಸಿ ಹತ್ತು ಹೆಣ್ಣುಕತ್ತೆಗಳ ಮೇಲೆ ತನ್ನ ತಂದೆಯ ಪ್ರಯಾಣಕ್ಕೆ ಬೇಕಾದ ದವಸ ಧಾನ್ಯಗಳನ್ನೂ ಬೇರೆ ತಿನ್ನುವ ಪದಾರ್ಥಗಳನ್ನೂ ಕಟ್ಟಿಸಿಕೊಟ್ಟನು. 24 ಆಗ ತನ್ನ ಅಣ್ಣತಮ್ಮಂದಿರಿಗೆ - ನೀವು ದಾರಿಯಲ್ಲಿ ಜಗಳಮಾಡಬೇಡಿರಿ ಎಂದು ಬುದ್ಧಿ ಹೇಳಿ ಅವರಿಗೆ ಹೋಗುವದಕ್ಕೆ ಅಪ್ಪಣೆ ಕೊಟ್ಟನು; ಅವರು ಹೊರಟುಹೋದರು. 25 ಅವರು ಐಗುಪ್ತದೇಶವನ್ನು ಬಿಟ್ಟು ಕಾನಾನ್ ದೇಶಕ್ಕೆ ಸೇರಿ ತಂದೆಯಾದ ಯಾಕೋಬನ ಬಳಿಗೆ ಬಂದು ಅವನಿಗೆ- 26 ಯೋಸೇಫನು ಇನ್ನೂ ಜೀವದಿಂದಿದ್ದಾನೆ; ಅವನು ಐಗುಪ್ತದೇಶದ ಸರ್ವಾಧಿಕಾರಿಯಾಗಿದ್ದಾನೆ ಎಂದು ತಿಳಿಸಲು ಅವನು ಸ್ತಬ್ಧನಾಗಿ ನಂಬಲಿಲ್ಲ. 27 ತರುವಾಯ ಯೋಸೇಫನು ಹೇಳಿಕಳುಹಿಸಿದ್ದ ಎಲ್ಲಾ ಮಾತುಗಳನ್ನು ಕೇಳಿ ತನ್ನ ಪ್ರಯಾಣಕ್ಕೋಸ್ಕರ ಯೋಸೇಫನ ಕಡೆಯಿಂದ ಬಂದ ರಥಗಳನ್ನು ನೋಡಿ ಇಸ್ರಾಯೇಲನೆನಿಸಿಕೊಳ್ಳುವ ಅವರ ತಂದೆ ಯಾಕೋಬನು ಚೇತರಿಸಿಕೊಂಡು - 28 ಸಾಕು, ನನ್ನ ಮಗನಾದ ಯೋಸೇಫನು ಸಜೀವನಾಗಿದ್ದಾನೆ; ನಾನು ಸಾಯುವದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುವೆನು ಅಂದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India