ಆದಿಕಾಂಡ 44 - ಕನ್ನಡ ಸತ್ಯವೇದವು J.V. (BSI)1 ತರುವಾಯ ಯೋಸೇಫನು ತನ್ನ ಮನೆವಾರ್ತೆಯವನಿಗೆ - ಆ ಮನುಷ್ಯರ ಚೀಲಗಳಲ್ಲಿ ಹೊರುವಷ್ಟು ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದ ಬಾಯಲ್ಲಿ 2 ಅವನವನ ಹಣದ ಗಂಟನ್ನಿಟ್ಟು ಕಿರಿಯವನ ಚೀಲದ ಬಾಯೊಳಗೆ ಅವನು ದವಸಕ್ಕೆ ತಂದ ಹಣವನ್ನಲ್ಲದೆ ನನ್ನ ಬೆಳ್ಳಿಯ ಪಾನಪಾತ್ರೆಯನ್ನೂ ಇಡಬೇಕೆಂದು ಅಪ್ಪಣೆಕೊಡಲು ಮನೆವಾರ್ತೆಯವನು ಹಾಗೆಯೇ ಮಾಡಿದನು. 3 ಬೆಳಿಗ್ಗೆ ಹೊತ್ತು ಮೂಡುವಾಗ ಆ ಮನುಷ್ಯರು ಅಪ್ಪಣೆ ಪಡೆದು ಕತ್ತೆಗಳನ್ನು ಹೊಡಕೊಂಡು ಹೊರಟು ಹೋದರು. 4 ಅವರು ಪಟ್ಟಣವನ್ನು ಬಿಟ್ಟು ಸ್ವಲ್ಪದೂರ ಹೋಗುವಷ್ಟರಲ್ಲಿ ಯೋಸೇಫನು ತನ್ನ ಮನೆವಾರ್ತೆಯವನಿಗೆ - ನೀನೆದ್ದು ಆ ಮನುಷ್ಯರನ್ನು ಹಿಂದಟ್ಟಿ ಸಂಧಿಸಿ - ನೀವು ಉಪಕಾರಕ್ಕೆ ಪ್ರತಿಯಾಗಿ ಯಾಕೆ ಅಪಕಾರ ಮಾಡಿದ್ದೀರಿ? 5 ಆ ಪಾತ್ರೆಯಲ್ಲಿ ನನ್ನ ದಣಿಯು ಪಾನಮಾಡುತ್ತಾನಲ್ಲವೇ. ಅದರಲ್ಲಿ ನೋಡಿ ಶಕುನ ಹೇಳುವದಿಲ್ಲವೇ. ನೀವು ಮಾಡಿದ್ದು ಬಹಳ ಕೆಟ್ಟದ್ದು ಅನ್ನಬೇಕೆಂದು ಹೇಳಿದನು. 6 ಮನೆವಾರ್ತೆಯವನು ಅವರನ್ನು ಹಿಂದಟ್ಟಿ ಸಂಧಿಸಿ ಅವರಿಗೆ ಆ ಮಾತುಗಳನ್ನು ಹೇಳಿದಾಗ 7 ಅವರು ಅವನಿಗೆ - ನಮ್ಮ ಸ್ವಾವಿುಯು ಇಂಥಾ ಮಾತುಗಳನ್ನು ಹೇಳುವದೇನು! ನಿನ್ನ ಸೇವಕರು ಇಂಥ ಕೃತ್ಯವನ್ನು ಎಂದಿಗೂ ಮಾಡುವವರಲ್ಲ. 8 ಮೊದಲು ನಮ್ಮ ಚೀಲಗಳ ಬಾಯಲ್ಲಿ ನಮಗೆ ಸಿಕ್ಕಿದ ಹಣವನ್ನು ನಾವು ಕಾನಾನ್‍ದೇಶದಿಂದ ತಿರಿಗಿ ತಂದು ನಿನಗೆ ಕೊಟ್ಟೆವಲ್ಲವೇ. ಹೀಗಿರುವಾಗ ನಾವು ನಿನ್ನ ದಣಿಯ ಮನೆಯೊಳಗಿಂದ ಬೆಳ್ಳಿಬಂಗಾರವನ್ನು ಹೇಗೆ ಕದ್ದುಕೊಂಡೇವು. 9 ಆ ಪಾತ್ರೆಯು ನಿನ್ನ ಸೇವಕರೊಳಗೆ ಯಾರ ಬಳಿಯಲ್ಲಿ ಸಿಕ್ಕುತ್ತದೋ ಅವನು ಮರಣದಂಡನೆಯನ್ನು ಹೊಂದಲಿ; ಅದಲ್ಲದೆ ನಾವೆಲ್ಲರೂ ನಮ್ಮ ಸ್ವಾವಿುಗೆ ದಾಸರಾಗುವೆವು ಅಂದರು. 10 ಅದಕ್ಕೆ ಅವನು - ಒಳ್ಳೇದು, ನೀವು ಹೇಳಿದಂತೆ ಆಗಲಿ; ಆ ಪಾತ್ರೆ ಯಾವನ ಬಳಿಯಲ್ಲಿ ಸಿಕ್ಕುತ್ತದೋ ಅವನು ನನಗೆ ದಾಸನಾಗಬೇಕು; ಉಳಿದವರು ತಪ್ಪಿಲ್ಲದವರು ಎಂದು ಹೇಳಿದಾಗ, 11 ಅವರು ತ್ವರೆಪಟ್ಟು ಪ್ರತಿಯೊಬ್ಬನೂ ತನ್ನ ತನ್ನ ಚೀಲವನ್ನು ನೆಲಕ್ಕಿಳಿಸಿ ಬಿಚ್ಚಿದರು. 12 ಅವನು ಹಿರಿಯವನಿಂದ ಹಿಡಿದು ಕಿರಿಯವನ ತನಕ ಪರೀಕ್ಷಿಸಿ ನೋಡಿದನು. ಆ ಪಾತ್ರೆಯು ಬೆನ್ಯಾಮೀನನ ಚೀಲದಲ್ಲಿ ಸಿಕ್ಕಿತು. 13 ಸಿಕ್ಕಿದಾಗ ಅವರು [ದುಃಖಾಕ್ರಾಂತರಾಗಿ] ತಮ್ಮ ಬಟ್ಟೆಗಳನ್ನು ಹರಿದುಕೊಂಡು ಕತ್ತೆಗಳ ಮೇಲೆ ಚೀಲಗಳನ್ನು ಹೇರಿ ಪಟ್ಟಣಕ್ಕೆ ಹಿಂದಿರುಗಿ ಬಂದರು. 14 ಯೆಹೂದನೂ ಅವನ ಅಣ್ಣತಮ್ಮಂದಿರೂ ಯೋಸೇಫನ ಮನೆಗೆ ಬಂದಾಗ ಅವನು ಇನ್ನೂ ಅಲ್ಲೇ ಇದ್ದನು. 15 ಅವರು ಅವನೆದುರಿಗೆ ಅಡ್ಡಬೀಳಲು ಯೋಸೇಫನು ಅವರನ್ನು - ನೀವು ಮಾಡಿರುವ ಈ ಕೃತ್ಯವು ಏನು! ನನ್ನಂಥವನು ಶಕುನ ನೋಡಿ ಗುಟ್ಟನ್ನು ಬಿಚ್ಚುವನೆಂಬದು 16 ನಿಮಗೆ ತಿಳಿಯಲಿಲ್ಲವೋ ಎಂದು ಕೇಳಲು ಯೆಹೂದನು - ನಾವು ನಮ್ಮ ಸ್ವಾವಿುಗೆ ಏನು ಹೇಳೋಣ? ನಾವು ಹೇಗೆ ಮಾತಾಡೇವು? ನಾವು ನಿರ್ದೋಷಿಗಳಾಗಿ ತೋರುವಂತೆ ಏನು ಮಾಡಬೇಕು? ನಿನ್ನ ಸೇವಕರ ಪಾಪಕೃತ್ಯವನ್ನು ದೇವರು ಹೊರಪಡಿಸಿದ್ದಾನೆ. ಈ ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವಲ್ಲದೆ ನಾವೆಲ್ಲರೂ ನಮ್ಮ ಸ್ವಾವಿುಗೆ ಗುಲಾಮರಾದೆವಲ್ಲವೇ ಅನ್ನಲು ಯೋಸೇಫನು - 17 ಹಾಗೆ ಎಂದಿಗೂ ಆಗಬಾರದು; ಈ ಪಾತ್ರೆಯು ಯಾರ ಬಳಿಯಲ್ಲಿ ಸಿಕ್ಕಿತೋ ಅವನು ಮಾತ್ರವೇ ನನಗೆ ಗುಲಾಮನಾಗಬೇಕು; ನೀವಾದರೋ ಅಡ್ಡಿಯಿಲ್ಲದೆ ನಿಮ್ಮ ತಂದೆಯ ಬಳಿಗೆ ಹೋಗಬಹುದು ಅಂದನು. 18 ಆಗ ಯೆಹೂದನು ಹತ್ತರಕ್ಕೆ ಬಂದು - ನಿನ್ನ ಸೇವಕನಾದ ನಾನು ಒಂದು ಮಾತನ್ನು ಅರಿಕೆಮಾಡಿಕೊಳ್ಳುತ್ತೇನೆ, ನನ್ನ ಮೇಲೆ ಸಿಟ್ಟು ಮಾಡಬಾರದು; ನೀನು ಫರೋಹನಿಗೆ ಸಮಾನನಾಗಿದ್ದೀಯೆಂದು ನಾನು ಬಲ್ಲೆ. 19 ಸ್ವಾವಿುಯು ಸೇವಕರನ್ನು - ನಿಮಗೆ ತಂದೆಯಾಗಲಿ ತಮ್ಮನಾಗಲಿ ಇದ್ದಾನೋ ಎಂದು ಕೇಳಲು ನಾವು - 20 ತಂದೆಯಿದ್ದಾನೆ, ಅವನು ಮುದುಕನು; ಅವನಿಗೆ ಮುಪ್ಪಿನಲ್ಲಿ ಹುಟ್ಟಿದ ಒಬ್ಬ ಚಿಕ್ಕ ಹುಡುಗನೂ ಇದ್ದಾನೆ. ಅವನ ಒಡಹುಟ್ಟಿದವನು ಸತ್ತು ಹೋದನು; ಅವನ ತಾಯಿಯಲ್ಲಿ ಹುಟ್ಟಿದವರೊಳಗೆ ಅವನೊಬ್ಬನೇ ಉಳಿದಿದ್ದಾನೆ, ಅವನ ಮೇಲೆ ತಂದೆಗೆ ಬಹಳ ಪ್ರೀತಿಯುಂಟು ಎಂದು ಹೇಳಿದೆವು. 21 ಅದಕ್ಕೆ ನೀನು ಸೇವಕರಾದ ನಮಗೆ - ನಾನು ಆ ಹುಡುಗನನ್ನು ನೋಡಬೇಕು, ಅವನನ್ನು ನನ್ನ ಬಳಿಗೆ ಕರಕೊಂಡು ಬನ್ನಿರಿ ಎಂದು ಅಪ್ಪಣೆಕೊಡಲು 22 ನಾವು ಸ್ವಾವಿುಯವರಿಗೆ - ಆ ಹುಡುಗನು ತನ್ನ ತಂದೆಯನ್ನು ಅಗಲುವದಕ್ಕಾಗುವದಿಲ್ಲ; ಅಗಲಿದರೆ ತಂದೆ ಸತ್ತಾನು ಅಂದೆವು. 23 ಅದಕ್ಕೆ - ನಿಮ್ಮ ತಮ್ಮನು ಸಂಗಡ ಬಾರದಿದ್ದರೆ ನೀವು ಇನ್ನೊಂದು ಸಾರಿ ನನ್ನ ಮುಖವನ್ನು ನೋಡಕೂಡದು ಎಂದು ಅಪ್ಪಣೆಕೊಟ್ಟಿಯಷ್ಟೆ. 24 ನಾವು ನಿನ್ನ ಸೇವಕನಾದ ನಮ್ಮ ತಂದೆಯ ಬಳಿಗೆ ಬಂದಾಗ ಸ್ವಾವಿುಯ ಮಾತನ್ನು ತಿಳಿಸಿದೆವು. 25 ನಮ್ಮ ತಂದೆ - ನೀವು ತಿರಿಗಿ ಹೋಗಿ ನಮಗೆ ಧಾನ್ಯವನ್ನು ಕೊಂಡುಕೊಂಡು ಬನ್ನಿರಿ ಎಂದು ಹೇಳಿದಾಗ ನಾವು ಆತನಿಗೆ - ಹೇಗೆ ಹೋಗುವದು? 26 ತಮ್ಮನು ನಮ್ಮ ಜೊತೆಯಲ್ಲಿ ಇಲ್ಲವಾದರೆ ಆ ಮನುಷ್ಯನ ಮುಖವನ್ನು ನೋಡಲಾಗದು; ತಮ್ಮನು ನಮ್ಮ ಸಂಗಡ ಬಂದರೆ ಹೋಗುತ್ತೇವೆ ಎಂದು ಹೇಳಿದ್ದಕ್ಕೆ ನಿನ್ನ ಸೇವಕನಾದ 27 ನಮ್ಮ ತಂದೆಯು - ನನ್ನ ಪತ್ನಿಯಲ್ಲಿ ನನಗೆ ಇಬ್ಬರೇ ಗಂಡುಮಕ್ಕಳು ಹುಟ್ಟಿದರೆಂಬದು ನಿಮಗೆ ತಿಳಿದೇ ಇದೆಯಷ್ಟೆ; 28 ಅವರಲ್ಲಿ ಒಬ್ಬನು ನನ್ನ ಬಳಿಯಿಂದ ಹೊರಟುಹೋದನು; ಅವನು ಸಂದೇಹವಿಲ್ಲದೆ ಮೃಗದಿಂದ ಸೀಳಿಹಾಕಲ್ಪಟ್ಟಿರಬೇಕೆಂದು ತಿಳುಕೊಂಡೆನು; ಅಂದಿನಿಂದ ನಾನು ಅವನನ್ನು ಕಾಣಲಿಲ್ಲ. 29 ಈಗ ಇವನನ್ನೂ ನನ್ನ ಬಳಿಯಿಂದ ತೆಗೆದುಕೊಂಡು ಹೋಗಬೇಕೆಂದಿದ್ದೀರಿ. ಇವನಿಗೂ ಕೇಡು ಬಂದರೆ ಈ ಮುದಿತಲೆ ದುಃಖದಿಂದಲೇ ಪಾತಾಳಕ್ಕೆ ಸೇರಲು ನೀವು ಕಾರಣರಾಗುವಿರಿ ಅಂದನು. 30 ನಮ್ಮ ತಂದೆಯ ಪ್ರಾಣವೂ ಇವನ ಪ್ರಾಣವೂ ಒಂದೇಯಾಗಿರುವದರಿಂದ ನಾನು ನಿನ್ನ ಸೇವಕನಾದ ನನ್ನ ತಂದೆಯ ಬಳಿಗೆ ಸೇರಿದಾಗ ಈ ಹುಡುಗನು ಸಂಗಡ ಇಲ್ಲದೆ ಹೋದರೆ ಹುಡುಗನು ಬರಲಿಲ್ಲವೆಂದು ಅವನು ತಿಳಿದಕೂಡಲೇ ಸಾಯುವನು. 31 ಹೀಗೆ ಸ್ವಾವಿುಯ ಸೇವಕರಾದ ನಾವು ನಿನ್ನ ಸೇವಕನಾದ ನಮ್ಮ ತಂದೆಯ ಮುದಿತಲೆ ದುಃಖದಿಂದಲೇ ಪಾತಾಳಕ್ಕೆ ಸೇರಲು ಕಾರಣರಾಗುವೆವು. 32 ಸೇವಕನಾದ ನಾನು ನನ್ನ ತಂದೆಯ ಬಳಿಯಲ್ಲಿ ಈ ಹುಡುಗನಿಗೆ ಹೊಣೆಯಾಗಿ - ನಾನು ಇವನನ್ನು ನಿನ್ನ ಬಳಿಗೆ ಕರೆದುಕೊಂಡು ಬಾರದಿದ್ದರೆ ತಂದೆಗೆ ತಪ್ಪಿದವನ ದೋಷ ಎಂದೆಂದಿಗೂ ನನಗಿರಲಿ ಎಂದು ಮಾತು ಕೊಟ್ಟೆನು. 33 ಆದದರಿಂದ ಸೇವಕನಾದ ನಾನು ಈ ಹುಡುಗನಿಗೆ ಬದಲಾಗಿ ಸ್ವಾವಿುಗೆ ಗುಲಾಮನಾಗುವಂತೆಯೂ ಇವನು ತನ್ನ ಅಣ್ಣಂದಿರ ಸಂಗಡ ಹೋಗುವಂತೆಯೂ ಅನುಗ್ರಹ ಮಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. 34 ಈ ಹುಡುಗನನ್ನು ಬಿಟ್ಟು ನಾನು ನನ್ನ ತಂದೆಯ ಬಳಿಗೆ ಹೇಗೆ ಹೋಗುವದಕ್ಕಾದೀತು? ತಂದೆಗೆ ಮಹಾ ಶೋಕವುಂಟಾಗುವದನ್ನು ನಾನು ನೋಡಕೂಡದು ಅಂದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India