ಆದಿಕಾಂಡ 43 - ಕನ್ನಡ ಸತ್ಯವೇದವು J.V. (BSI)ಯೋಸೇಫನ ಅಣ್ಣಂದಿರು ಬೆನ್ಯಾಮೀನನನ್ನು ಕರಕೊಂಡು ಎರಡನೆಯ ಸಾರಿ ಯೋಸೇಫನ ಬಳಿಗೆ ಬಂದಾಗ ಯೋಸೇಫನು ತಾನು ಅವರ ತಮ್ಮನೆಂದು ತಿಳಿಸಿದ್ದು 1 ಆ ದೇಶದಲ್ಲಿ ಬರವು ಬಹುಘೋರವಾಗಿತ್ತು. 2 ಅವರು ಐಗುಪ್ತದೇಶದಿಂದ ತಂದಿದ್ದ ದವಸವು ಮುಗಿದನಂತರ ಅವರ ತಂದೆಯು ಅವರಿಗೆ - ನೀವು ತಿರಿಗಿ ಹೋಗಿ ಇನ್ನು ಸ್ವಲ್ಪ ಧಾನ್ಯವನ್ನು ಕೊಂಡುಕೊಂಡು ಬನ್ನಿರಿ ಅಂದನು. 3 ಅದಕ್ಕೆ ಯೆಹೂದನು - ಆ ಮನುಷ್ಯನು ನಮಗೆ, ನಿಮ್ಮ ತಮ್ಮನನ್ನು ಕರಕೊಂಡುಬಂದ ಹೊರತು ನನ್ನ ಮುಖವನ್ನು ನೋಡಕೂಡದು ಎಂದು ಖಂಡಿತವಾಗಿ ಹೇಳಿದನಲ್ಲಾ. 4 ನೀನು ನಮ್ಮ ತಮ್ಮನನ್ನು ನಮ್ಮ ಜೊತೆಯಲ್ಲಿ ಕಳುಹಿಸಿದರೆ ನಾವು ಹೋಗಿ ನಿನಗೆ ಧಾನ್ಯವನ್ನು ಕೊಂಡುಕೊಂಡು ಬರುತ್ತೇವೆ; 5 ಅವನನ್ನು ಕಳುಹಿಸಿಕೊಡದಿದ್ದರೆ ನಾವು ಹೋಗುವದಿಲ್ಲ. ಆ ಮನುಷ್ಯನು ನಮಗೆ - ನಿಮ್ಮ ತಮ್ಮನು ನಿಮ್ಮ ಸಂಗಡ ಇಲ್ಲದಿದ್ದರೆ ನನ್ನ ಮುಖವನ್ನು ನೋಡಲೇಕೂಡದೆಂದು ಹೇಳಿದ್ದಾನೆ ಅಂದನು. 6 ಅದಕ್ಕೆ ಇಸ್ರಾಯೇಲನು - ಇನ್ನೊಬ್ಬ ತಮ್ಮನಿದ್ದಾನೆಂದು ಆ ಮನುಷ್ಯನಿಗೆ ಹೇಳಿ ನೀವು ಯಾಕೆ ನನಗೆ ಈ ಅಪಕಾರ ಮಾಡಿದಿರಿ ಎಂದು ಹೇಳಲು ಅವರು - 7 ನಮ್ಮ ವಿಷಯದಲ್ಲಿಯೂ ನಮ್ಮ ಮನೆಯವರ ವಿಷಯದಲ್ಲಿಯೂ ಆ ಮನುಷ್ಯನು ಸೂಕ್ಷ್ಮವಾಗಿ ವಿಚಾರಿಸಿ, ನಿಮ್ಮ ತಂದೆಯು ಇನ್ನೂ ಜೀವದಿಂದಿದ್ದಾನೋ? ನಿಮಗೆ ತಮ್ಮನಿದ್ದಾನೋ? ಎಂದು ಕೇಳಿದನು. ಆ ಪ್ರಶ್ನೆಗಳಿಗೆ ತಕ್ಕಂತೆ ಉತ್ತರಕೊಟ್ಟೆವು. ಅವನು - ನಿಮ್ಮ ತಮ್ಮನನ್ನು ಕರೆದುಕೊಂಡು ಬನ್ನಿರಿ ಎಂದು ಹೇಳುವನೆಂಬದು ನಮಗೆ ಹೇಗೆ ತಿಳಿಯುವದು ಅಂದರು. 8 ಆಗ ಯೆಹೂದನು ತನ್ನ ತಂದೆಯಾದ ಇಸ್ರಾಯೇಲನಿಗೆ - ನೀನೂ ನಾವೂ ನಮ್ಮ ಮಕ್ಕಳೂ ಎಲ್ಲರೂ ಸಾಯದೆ ಬದುಕಿಕೊಳ್ಳುವಂತೆ ಆ ಹುಡುಗನನ್ನು ನನ್ನ ಜೊತೆಯಲ್ಲಿ ಕಳುಹಿಸಿಕೊಡಪ್ಪಾ; ನಾವು ಹೊರಟು ಹೋಗುವೆವು. 9 ನಾನೇ ಅವನಿಗೆ ಹೊಣೆ; ಅವನ ವಿಷಯ ನನ್ನನ್ನೇ ಕೇಳಬಹುದು. ನಾನು ಅವನನ್ನು ತಿರಿಗಿ ಕರಕೊಂಡು ಬಂದು ನಿನ್ನೆದುರಿನಲ್ಲಿ ನಿಲ್ಲಿಸದೆ ಹೋದರೆ ಆ ದೋಷ ಎಂದೆಂದಿಗೂ ನನ್ನ ಮೇಲೆ ಇರಲಿ. 10 ನಾವು ತಡಮಾಡದಿದ್ದರೆ ಇಷ್ಟರೊಳಗೆ ಎರಡನೆಯ ಸಾರಿ ಹೋಗಿ ಬರುತ್ತಿದ್ದೆವು ಎಂದು ಹೇಳಿದನು. 11 ಅದಕ್ಕೆ ಅವರ ತಂದೆಯಾದ ಇಸ್ರಾಯೇಲನು ಅವರಿಗೆ - ನೀವು ಹೋಗಲೇಬೇಕಾಗಿದ್ದರೆ ಒಂದು ಕೆಲಸ ಮಾಡಿರಿ; ಈ ದೇಶದಲ್ಲಿ ದೊರಕುವ ಶ್ರೇಷ್ಠವಾದ ವಸ್ತುಗಳಲ್ಲಿ ಕೆಲವನ್ನು ನಿಮ್ಮ ಸಾಮಾನಿನಲ್ಲಿಟ್ಟು, ಆ ಮನುಷ್ಯನಿಗೆ ಕಾಣಿಕೆಯಾಗಿ ತೆಗೆದುಕೊಂಡು ಹೋಗಿರಿ; ಸ್ವಲ್ಪ ತೈಲ, ಸ್ವಲ್ಪ ದ್ರಾಕ್ಷಾರಸದ ಕಾಕಂಬಿ, ಹಾಲುಮಡ್ಡಿ, ರಕ್ತಬೋಳ, ಆಕ್ರೋಡು, ಬಾದಾವಿು ಇವುಗಳನ್ನು ತೆಗೆದುಕೊಂಡುಹೋಗಿ ಕೊಡಿರಿ. 12 ಅದಲ್ಲದೆ ಎರಡರಷ್ಟು ಹಣವನ್ನು ಕೈಯಲ್ಲಿ ತೆಗೆದುಕೊಂಡು ಹೋಗಿರಿ; ಅವರು ನಿಮ್ಮ ಚೀಲಗಳ ಬಾಯಲ್ಲಿ ಹಾಕಿ ಹಿಂದಕ್ಕೆ ಕಳುಹಿಸಿದ ಹಣವನ್ನು ತೆಗೆದುಕೊಂಡು ಹೋಗಿರಿ; ಒಂದು ವೇಳೆ ಅದು ಅವರಿಗೆ ತಿಳಿಯದೆ ನಿಮ್ಮ ಕೈಗೆ ಬಂದಿರಬಹುದು. 13 ನಿಮ್ಮ ತಮ್ಮನನ್ನೂ ಕರೆದುಕೊಂಡು ಹೊರಟು ತಿರಿಗಿ ಆ ಮನುಷ್ಯನ ಬಳಿಗೆ ಹೋಗಿರಿ. 14 ಅವನು ನಿಮ್ಮ ಮೇಲೆ ಕನಿಕರವಿಟ್ಟು ನಿಮ್ಮ ಅಣ್ಣನನ್ನೂ ಬೆನ್ಯಾಮೀನನನ್ನೂ ನಿಮ್ಮೊಂದಿಗೆ ಕಳುಹಿಸಿ ಬಿಡುವಂತೆ ಸರ್ವಶಕ್ತನಾದ ದೇವರು ಅನುಗ್ರಹಿಸಲಿ; ನಾನಂತೂ ಮಕ್ಕಳನ್ನು ಕಳಕೊಂಡವನಾಗಬೇಕಾದರೆ ಹಾಗೆಯೇ ಆಗಲಿ ಎಂದು ಹೇಳಿದನು. 15 ಆ ಮನುಷ್ಯರು ಆ ಕಾಣಿಕೆಯ ವಸ್ತುಗಳನ್ನು ಸಿದ್ಧಪಡಿಸಿ ಎರಡರಷ್ಟು ಹಣವನ್ನು ತೆಗೆದುಕೊಂಡು ಬೆನ್ಯಾಮೀನನನ್ನು ತಮ್ಮ ಜೊತೆಯಲ್ಲಿ ಕರೆದುಕೊಂಡು ಹೊರಟು ಐಗುಪ್ತದೇಶಕ್ಕೆ ಸೇರಿ ಯೋಸೇಫನೆದುರಿನಲ್ಲಿ ನಿಂತುಕೊಂಡರು. 16 ಬೆನ್ಯಾಮೀನನು ಅವರ ಸಂಗಡ ಇರುವದನ್ನು ಯೋಸೇಫನು ಕಂಡು ತನ್ನ ಮನೆವಾರ್ತೆಯವನನ್ನು ಕರಸಿ - ಈ ಮನುಷ್ಯರು ಈ ಹೊತ್ತು ಮಧ್ಯಾಹ್ನ ನನ್ನ ಸಂಗಡ ಊಟಮಾಡಬೇಕಾಗಿದೆ; ಇವರನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಪಶುವನ್ನು ಕೊಯಿಸಿ ಎಲ್ಲಾ ಸಿದ್ಧಪಡಿಸು ಎಂದು ಅಪ್ಪಣೆಕೊಟ್ಟನು. 17 ಅಪ್ಪಣೆಯ ಮೇರೆಗೆ ಮನೆವಾರ್ತೆಯವನು ಅವರನ್ನು ಯೋಸೇಫನ ಮನೆಯೊಳಕ್ಕೆ ಕರೆದುಕೊಂಡು ಹೋಗಲು ಅವರು ಅದಕ್ಕೆ ಭಯಪಟ್ಟು - 18 ಮುಂಚೆ ನಾವು ಚೀಲಗಳಲ್ಲಿ ಹಿಂದಕ್ಕೆ ತೆಗೆದುಕೊಂಡು ಹೋದ ಹಣದ ನಿವಿುತ್ತವೇ ಅವನು ನಮ್ಮನ್ನು ತನ್ನ ಮನೆಯೊಳಗೆ ಕರೆಸಿದ್ದಾನೆ; ನಮ್ಮ ಮೇಲೆ ಫಕ್ಕನೆ ಬಿದ್ದು ನಮ್ಮನ್ನು ಕತ್ತೆಗಳ ಸಹಿತವಾಗಿ ಹಿಡಿಸಿ ಗುಲಾಮರನ್ನಾಗಿ ಮಾಡಿಕೊಳ್ಳಬೇಕೆಂದಿದ್ದಾನೆ ಎಂಬದಾಗಿ ತಮ್ಮ ತಮ್ಮೊಳಗೆ ಮಾತಾಡಿಕೊಂಡು 19 ಮನೇಬಾಗಲಲ್ಲಿದ್ದ ಮನೆವಾರ್ತೆಯವನ ಬಳಿಗೆ ಹೋಗಿ ಅವನಿಗೆ - 20 ಅಯ್ಯಾ, ಮೊದಲು ಒಂದು ಸಾರಿ ಆಹಾರಪದಾರ್ಥಗಳನ್ನು ಕೊಂಡುಕೊಳ್ಳುವದಕ್ಕೆ ಬಂದಿದ್ದೆವು; 21 ನಾವು ಹೊರಟುಹೋದ ನಂತರ ಇಳಿದುಕೊಂಡಿದ್ದ ಒಂದು ಸ್ಥಳದಲ್ಲಿ ನಮ್ಮ ಚೀಲಗಳನ್ನು ಬಿಚ್ಚಿ ನೋಡಿದಾಗ ಪ್ರತಿಯೊಬ್ಬನ ಹಣವು ತೂಕದಲ್ಲಿ ಏನೂ ಕಡಿಮೆಯಿಲ್ಲದೆ ಅವನವನ ಚೀಲದಲ್ಲೇ ಇತ್ತು; ಅದನ್ನು ತಿರಿಗಿ ತಂದಿದ್ದೇವೆ. 22 ದವಸವನ್ನು ಕೊಂಡುಕೊಳ್ಳುವದಕ್ಕೆ ಬೇರೆ ಹಣವನ್ನೂ ತಂದಿದ್ದೇವೆ. ಆ ಹಣವನ್ನು ನಮ್ಮ ಚೀಲಗಳಲ್ಲಿ ಯಾರು ಇಟ್ಟರೋ ನಮಗೆ ತಿಳಿಯದು ಎಂದು ಹೇಳಿದರು. 23 ಅದಕ್ಕೆ ಅವನು - ಸಮಾಧಾನವಾಗಿರ್ರಿ. ನೀವೇನೂ ಹೆದರಬೇಡಿರಿ; ನಿಮ್ಮ ತಂದೆಗೂ ನಿಮಗೂ ದೇವರಾಗಿರುವಾತನು ನಿಮ್ಮ ಚೀಲಗಳಲ್ಲಿಯೇ ನಿಕ್ಷೇಪ ಸಿಕ್ಕುವಂತೆ ಅನುಗ್ರಹಿಸಿದ್ದಾನೆ; ನಿಮ್ಮ ಹಣವು ನನಗೆ ಮುಟ್ಟಿತು ಎಂದು ಹೇಳಿ ಸಿಮೆಯೋನನನ್ನು ಅವರ ಬಳಿಗೆ ಕರೆದುಕೊಂಡು ಬಂದು 24 ಅವರೆಲ್ಲರನ್ನೂ ಯೋಸೇಫನ ಮನೆಯೊಳಗೆ ಸೇರಿಸಿ ಕಾಲುಗಳನ್ನು ತೊಳೆಯುವದಕ್ಕೆ ನೀರನ್ನು ಕೊಡಿಸಿ ಅವರ ಕತ್ತೆಗಳಿಗೆ ಮೇವು ಹಾಕಿಸಿದನು. 25 ತಾವು ಅಲ್ಲೇ ಊಟ ಮಾಡಬೇಕೆಂಬುವ ಸಂಗತಿಯನ್ನು ಅವರು ಕೇಳಿದ್ದರಿಂದ ತಾವು ತಂದಿದ್ದ ಕಾಣಿಕೆಯನ್ನು ಸಿದ್ಧವಾಗಿ ಇಟ್ಟುಕೊಂಡು ಯೋಸೇಫನು ಮಧ್ಯಾಹ್ನದಲ್ಲಿ ಬರುವ ತನಕ ಕಾದು ಕೊಂಡಿದ್ದರು. 26 ಯೋಸೇಫನು ಮನೆಗೆ ಬಂದಾಗ ಅವರು ಕಾಣಿಕೆಯನ್ನು ಮನೆಯೊಳಕ್ಕೆ ತಂದುಕೊಟ್ಟು ಅವನ ಮುಂದೆ ಅಡ್ಡಬಿದ್ದರು. 27 ಅವನು ಅವರ ಯೋಗಕ್ಷೇಮವನ್ನು ವಿಚಾರಿಸಿ - ನೀವು ಹೇಳಿದ ಮುದುಕನಾಗಿರುವ ನಿಮ್ಮ ತಂದೆಗೆ ಕ್ಷೇಮವೋ? ಅವನು ಇನ್ನೂ ಬದುಕಿದ್ದಾನೋ ಎಂದು ಕೇಳಲು ಅವರು ಬೊಗ್ಗಿ ನಮಸ್ಕಾರಮಾಡಿ - 28 ನಿನ್ನ ಸೇವಕನಾದ ನಮ್ಮ ತಂದೆಗೆ ಕ್ಷೇಮ; ಅವನು ಇನ್ನೂ ಇದ್ದಾನೆ ಅಂದರು. 29 ಆಗ ಅವನು ಕಣ್ಣೆತ್ತಿ ತನ್ನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ನೋಡಿ - ನೀವು ಹೇಳಿದ ನಿಮ್ಮ ಕಿರೀ ತಮ್ಮನು ಇವನೋ ಎಂದು ಕೇಳಿ ಅವನಿಗೆ - ಮಗನೇ, ದೇವರ ದಯೆ ನಿನ್ನ ಮೇಲಿರಲಿ ಎಂದು ಹೇಳಿದನು. 30 ಯೋಸೇಫನಿಗೆ ತಮ್ಮನ ಮೇಲೆ ಕರುಳು ಮರುಗಿದ್ದರಿಂದ ಅವನು ಬೇಗನೆ ಎದ್ದು ಅಳುವದಕ್ಕೆ ಸ್ಥಳವನ್ನು ನೋಡಿಕೊಂಡು ತನ್ನ ಕೋಣೆಯೊಳಗೆ ಹೋಗಿ ಅಲ್ಲಿ ಅತ್ತನು. 31 ಆಮೇಲೆ ಮುಖವನ್ನು ತೊಳಕೊಂಡು ಹೊರಗೆ ಬಂದು ಮನಸ್ಸನ್ನು ಬಿಗಿಹಿಡಿದು ಊಟಕ್ಕೆ ಬಡಿಸಿರಿ ಎಂದು ಅಪ್ಪಣೆ ಕೊಟ್ಟನು. 32 ಪರಿಚಾರಕರು ಅವನಿಗೂ ಅವನ ಅಣ್ಣತಮ್ಮಂದಿರಿಗೂ ಅವನ ಸಂಗಡವಿದ್ದ ಐಗುಪ್ತ್ಯರಿಗೂ ಬೇರೆಬೇರೆಯಾಗಿ ಊಟಕ್ಕೆ ಬಡಿಸಿದರು. ಐಗುಪ್ತ್ಯರು ಇಬ್ರಿಯರ ಸಹಪಂಕ್ತಿಯಲ್ಲಿ ಊಟಮಾಡುವದಿಲ್ಲ; ಅದು ಅವರಿಗೆ ಅಸಹ್ಯ. 33 ಯೋಸೇಫನು ತನ್ನ ಅಣ್ಣತಮ್ಮಂದಿರನ್ನು ಹಿರಿಯವನು ಮೊದಲುಗೊಂಡು ಕಿರಿಯವನವರೆಗೂ ಅವರವರ ವಯಸ್ಸಿನ ಪ್ರಕಾರವೇ ಕುಳ್ಳಿರಿಸಿದ್ದರಿಂದ ಅವರು ಒಬ್ಬರನ್ನೊಬ್ಬರು ನೋಡುತ್ತಾ ಆಶ್ಚರ್ಯಪಟ್ಟರು. 34 ಯೋಸೇಫನು ತನ್ನ ಮುಂದೆ ಬಡಿಸಿದ್ದ ಪದಾರ್ಥಗಳಲ್ಲಿ ಅವರಿಗೆ ಭಾಗಗಳನ್ನು ಕಳುಹಿಸಿದನು; ಆದರೆ ಬೆನ್ಯಾಮೀನನಿಗೆ ಬಂದ ಭಾಗವು ವಿುಕ್ಕಾದವರ ಭಾಗಗಳಿಗಿಂತ ಐದರಷ್ಟು ಹೆಚ್ಚಾಗಿತ್ತು. ಅವರು ಯಥೇಚ್ಫವಾಗಿ ಪಾನಮಾಡಿ ಅವನ ಸಂಗಡ ಸಂಭ್ರಮದಿಂದಿದ್ದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India