ಆದಿಕಾಂಡ 42 - ಕನ್ನಡ ಸತ್ಯವೇದವು J.V. (BSI)ಯೋಸೇಫನ ಅಣ್ಣಂದಿರು ಧಾನ್ಯಕೊಂಡುಕೊಳ್ಳುವದಕ್ಕೆ ಯೋಸೇಫನ ಬಳಿಗೆ ಬಂದು ಅವನ ಗುರುತನ್ನು ತಿಳಿಯದೆ ಹೋದದ್ದು 1 ಐಗುಪ್ತದೇಶದಲ್ಲಿ ದವಸಧಾನ್ಯವುಂಟೆಂದು ಯಾಕೋಬನು ಕೇಳಿ ತನ್ನ ಮಕ್ಕಳಿಗೆ - ನೀವು ಒಬ್ಬರನ್ನೊಬ್ಬರು ನೋಡುತ್ತಿರುವದೇಕೆ? 2 ಐಗುಪ್ತ ದೇಶದಲ್ಲಿ ದವಸಧಾನ್ಯ ಉಂಟೆಂಬದನ್ನು ಕೇಳಿದ್ದೇನೆ; ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಹೋಗಿ ಬೇಕಾದ ದವಸವನ್ನು ಕೊಂಡುಕೊಂಡು ಬನ್ನಿರಿ ಎಂದು ಹೇಳಿದ್ದರಿಂದ 3 ಯೋಸೇಫನ ಹತ್ತು ಮಂದಿ ಅಣ್ಣಂದಿರು ಧಾನ್ಯವನ್ನು ತರುವದಕ್ಕೋಸ್ಕರ ಐಗುಪ್ತದೇಶಕ್ಕೆ ಹೊರಟರು. 4 ಆದರೆ ಯಾಕೋಬನು ಯೋಸೇಫನ ಒಡಹುಟ್ಟಿದ ತಮ್ಮನಾದ ಬೆನ್ಯಾಮೀನನನ್ನು ಅವನಿಗೆ ಕೆಡುಕುಂಟಾದೀತೆಂದು ಹೇಳಿ ಅಣ್ಣಂದಿರ ಜೊತೆಯಲ್ಲಿ ಕಳುಹಿಸಲಿಲ್ಲ. 5 ಧಾನ್ಯವನ್ನು ಕೊಂಡುಕೊಳ್ಳುವದಕ್ಕೋಸ್ಕರ ಐಗುಪ್ತದೇಶಕ್ಕೆ ಬಂದವರಲ್ಲಿ ಇಸ್ರಾಯೇಲನ ಮಕ್ಕಳೂ ಇದ್ದರು; ಕಾನಾನ್ ದೇಶದಲ್ಲಿಯೂ ಬರವಿತ್ತಷ್ಟೆ. 6 ಐಗುಪ್ತದೇಶದ ಮೇಲೆ ಅಧಿಕಾರವನ್ನು ನಡಿಸಿ ಜನರಿಗೆ ಧಾನ್ಯವನ್ನು ಮಾರಿಸುವವನು ಯೋಸೇಫನೇ. ಹೀಗಿರುವದರಿಂದ ಅವನ ಅಣ್ಣಂದಿರು ಬಂದು ಅವನ ಮುಂದೆಯೇ ಅಡ್ಡಬಿದ್ದರು. 7 ಯೋಸೇಫನು ಅವರನ್ನು ಕಂಡಾಗ ಅವರ ಗುರುತು ಹಿಡಿದು ತನ್ನ ಅಣ್ಣಂದಿರೆಂದು ತಿಳಿದಾಗ್ಯೂ ಅವರಿಗೆ ಅನ್ಯನಂತೆ ತೋರ್ಪಡಿಸಿಕೊಂಡು ಬಿರುನುಡಿಯಿಂದ - ನೀವು ಎಲ್ಲಿಂದ ಬಂದವರು ಎಂದು ಕೇಳಿದನು. ಅವರು - ಧಾನ್ಯವನ್ನು ಕೊಂಡುಕೊಳ್ಳುವದಕ್ಕೋಸ್ಕರ ಕಾನಾನ್ ದೇಶದಿಂದ ಬಂದಿದ್ದೇವೆ ಅಂದರು. 8 ಅಣ್ಣಂದಿರ ಗುರುತು ಯೋಸೇಫನಿಗೆ ತಿಳಿದಾಗ್ಯೂ ಅವನ ಗುರುತು ಅವರಿಗೆ ತಿಳಿಯಲಿಲ್ಲ. 9 ಅವನು ಅವರ ವಿಷಯ ತನಗೆ ಬಿದ್ದ ಕನಸುಗಳನ್ನು ನೆನಪಿಗೆ ತಂದುಕೊಂಡು ಅವರಿಗೆ - ನೀವು ಗೂಢಚಾರರು; ನಮ್ಮ ದೇಶದ ದುರ್ಬಲ ಸ್ಥಳಗಳನ್ನು ನೋಡಿಕೊಳ್ಳುವದಕ್ಕಾಗಿ ಬಂದವರು ಎಂದು ಹೇಳಲು, 10 ಅವರು - ಅಲ್ಲ, ಸ್ವಾಮೀ, ತಮ್ಮ ಸೇವಕರಾದ ನಾವು ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವದಕ್ಕೆ ಬಂದಿದ್ದೇವೆ. ನಾವೆಲ್ಲರೂ ಒಬ್ಬನೇ ತಂದೆಯ ಮಕ್ಕಳು; 11 ನಾವು ಯಥಾರ್ಥವಾಗಿ ಬಂದವರೇ ಹೊರತು ಗೂಢಚಾರರಲ್ಲ ಅಂದರು. 12 ಅವನು ಅವರಿಗೆ - ಸುಳ್ಳು, ನಮ್ಮ ದೇಶದ ದುರ್ಬಲ ಸ್ಥಳಗಳನ್ನು ತಿಳಿದುಕೊಳ್ಳುವದಕ್ಕೆ ಬಂದಿರಿ ಎಂದು ಹೇಳಲು 13 ಅವರು - ತಮ್ಮ ಸೇವಕರಾದ ನಾವು ಹನ್ನೆರಡು ಮಂದಿ ಅಣ್ಣತಮ್ಮಂದಿರು; ನಾವು ಕಾನಾನ್ ದೇಶದವರು, ಒಬ್ಬ ತಂದೆಯ ಮಕ್ಕಳು; ನಮ್ಮಲ್ಲಿ ಚಿಕ್ಕವನು ತಂದೆಯ ಬಳಿಯಲ್ಲಿದ್ದಾನೆ; ಒಬ್ಬನಿಲ್ಲ ಅಂದರು. 14 ಯೋಸೇಫನು ಅವರಿಗೆ - ನೀವು ಗೂಢಚಾರರೆಂದು ನಾನು ಹೇಳಿದೆನಷ್ಟೆ; 15 ಅದು ಹೌದೋ ಅಲ್ಲವೋ ಗೊತ್ತಾಗುವದಕ್ಕಾಗಿ ನಿಮ್ಮ ತಮ್ಮನು ಬರಬೇಕು; ಅವನು ಬಂದ ಹೊರತು ಫರೋಹನ ಜೀವದಾಣೆ ನೀವು ಇಲ್ಲಿಂದ ಹೊರಟು ಹೋಗಕೂಡದು. 16 ಅವನನ್ನು ಕರೆದುಕೊಂಡು ಬರುವದಕ್ಕೆ ನಿಮ್ಮಲ್ಲಿ ಒಬ್ಬನನ್ನು ಕಳುಹಿಸಿರಿ; ಅವನು ಬರುವವರೆಗೂ ನಿಮ್ಮನ್ನು ಸೆರೆಯಲ್ಲಿ ಇಡಿಸುತ್ತೇನೆ. ಹೀಗೆ ನಾನು ನಿಮ್ಮ ಮಾತುಗಳನ್ನು ಪರೀಕ್ಷಿಸಿ ನೀವು ಸತ್ಯವಂತರೋ ಅಲ್ಲವೋ ಎಂದು ತಿಳಿದುಕೊಳ್ಳುತ್ತೇನೆ. ನಿಮ್ಮ ತಮ್ಮನು ಬಾರದೆ ಹೋದರೆ, ಫರೋಹನ ಜೀವದಾಣೆ, ನೀವು ಗೂಢಚಾರರೇ ಎಂದು ಹೇಳಿ 17 ಅವರೆಲ್ಲರನ್ನೂ ಮೂರು ದಿನಗಳವರೆಗೂ ಕಾವಲಲ್ಲಿರಿಸಿದನು. 18 ಮೂರನೆಯ ದಿನದಲ್ಲಿ ಯೋಸೇಫನು ಅವರನ್ನು ಕರಸಿ - ನಾನು ದೇವರಿಗೆ ಭಯಪಡುವವನು; ನೀವು ಸತ್ಯವಂತರಾಗಿದ್ದರೆ ಒಂದು ಕೆಲಸವನ್ನು ಮಾಡಿ ಬದುಕಿಕೊಳ್ಳಿರಿ. 19 ನಿಮ್ಮಲ್ಲಿ ಒಬ್ಬನನ್ನು ಮಾತ್ರ ಸೆರೆಯಲ್ಲಿರಿಸುತ್ತೇನೆ; ವಿುಕ್ಕಾದವರು ನಿಮ್ಮ ಮನೆಯವರ ಅವಸರಕ್ಕೆ ಧಾನ್ಯವನ್ನು ತೆಗೆದುಕೊಂಡು ಹೋಗಿ ನಿಮ್ಮ ತಮ್ಮನನ್ನು 20 ನನ್ನ ಬಳಿಗೆ ಕರೆದುಕೊಂಡು ಬರಬೇಕು; ಕರೆದುಕೊಂಡು ಬಂದರೆ, ನಿಮ್ಮ ಮಾತನ್ನು ಸತ್ಯವೆಂದು ನಾನು ತಿಳಿದುಕೊಳ್ಳುವದರಿಂದ ನೀವು ಸಾಯುವದಿಲ್ಲ ಅಂದನು. ಅವರು ಆ ಮಾತಿಗೆ ಒಪ್ಪಿದರು. 21 ಆದರೆ ಅವರು ತಮ್ಮತಮ್ಮೊಳಗೆ - ನಾವು ನಮ್ಮ ತಮ್ಮನಿಗೆ ಮಾಡಿದ್ದು ದ್ರೋಹವೇ ಸರಿ; ಅವನು ನಮ್ಮನ್ನು ಬೇಡಿಕೊಂಡಾಗ ನಾವು ಅವನ ಪ್ರಾಣಸಂಕಟವನ್ನು ತಿಳಿದರೂ ಅವನ ಮೊರೆಗೆ ಕಿವಿಗೊಡಲಿಲ್ಲ; ಆ ಕಾರಣದಿಂದಲೇ ಈ ಸಂಕಟವು ನಮಗೆ ಪ್ರಾಪ್ತವಾಗಿದೆ ಎಂದು ಮಾತಾಡಿಕೊಂಡರು. 22 ಅದಕ್ಕೆ ರೂಬೇನನು - ಆ ಹುಡುಗನಿಗೆ ಏನೂ ಕೇಡು ಮಾಡಬೇಡಿರಿ ಎಂದು ನಾನು ಹೇಳಿದೆನಲ್ಲವೇ; ನೀವು ಕೇಳಲಿಲ್ಲ. ಆದದರಿಂದ ಅವನಿಗಾದ ಪ್ರಾಣಹಾನಿಯ ವಿಷಯದಲ್ಲಿ ನಾವು ಉತ್ತರ ಹೇಳಬೇಕಾಗಿ ಬಂತು ಅಂದನು. 23 ಯೋಸೇಫನು ದ್ವಿಭಾಷಿಯ ಮುಖಾಂತರ ಅವರ ಸಂಗಡ ಮಾತಾಡಿದದರಿಂದ, ಅವರು ತಮ್ಮ ಮಾತು ಅವನಿಗೆ ಗೊತ್ತಾಗುವದೆಂದು ನೆನಸಲೇ ಇಲ್ಲ. 24 ಯೋಸೇಫನಾದರೋ ಅವರ ಬಳಿಯಿಂದ ಒಂದು ಕಡೆಗೆ ಹೋಗಿ ಕಣ್ಣೀರು ಸುರಿಸಿದನು. ತರುವಾಯ ಅವರ ಬಳಿಗೆ ತಿರಿಗಿ ಬಂದು ಅವರ ಸಂಗಡ ಮಾತಾಡಿ ಅವರೊಳಗೆ ಸಿಮೆಯೋನನನ್ನು ಹಿಡಿಸಿ ಅವರ ಕಣ್ಣೆದುರಾಗಿ ಅವನಿಗೆ ಬೇಡಿಗಳನ್ನು ಹಾಕಿಸಿದನು. 25 ಆಮೇಲೆ ಯೋಸೇಫನು ತನ್ನ ಆಳುಗಳಿಗೆ - ಆ ಮನುಷ್ಯರ ಚೀಲಗಳಲ್ಲಿ ಧಾನ್ಯವನ್ನು ತುಂಬಿಸಿ ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರಿಗಿ ಇಟ್ಟು ಅವರ ಪ್ರಯಾಣಕ್ಕೆ ಬೇಕಾದ ಆಹಾರವನ್ನು ಕೊಡಬೇಕೆಂದು ಅಪ್ಪಣೆಮಾಡಲು ಅವರು ಹಾಗೆಯೇ ಮಾಡಿದರು. 26 ಇವರು ತಾವು ಕೊಂಡುಕೊಂಡ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು ಹೊರಟುಹೋದರು. 27 ದಾರಿಯಲ್ಲಿ ಅವರು ಒಂದು ಸ್ಥಳದಲ್ಲಿ ಇಳಿದುಕೊಂಡಾಗ ಅವರಲ್ಲಿ ಒಬ್ಬನು ತನ್ನ ಕತ್ತೆಗೆ ದಾಣಕೊಡಬೇಕೆಂದು ತನ್ನ ಚೀಲವನ್ನು ಬಿಚ್ಚಿದಾಗ ಅದರ ಬಾಯಲ್ಲೇ ತಾನು ತಂದಿದ್ದ ಹಣವನ್ನು ಕಂಡನು. 28 ಅವನು ಅಣ್ಣತಮ್ಮಂದಿರಿಗೆ - ನಾನು ಕೊಟ್ಟ ಹಣವು ಹಿಂದಕ್ಕೆ ಬಂದದೆ; ಇಗೋ, ನನ್ನ ಚೀಲದಲ್ಲಿದೆ ಎಂದು ಹೇಳಲು ಅವರು ಧೈರ್ಯಗೆಟ್ಟು ನಡುಗುತ್ತಾ ಒಬ್ಬರನ್ನೊಬ್ಬರು ನೋಡಿ - ದೇವರು ನಮಗೆ ಮಾಡಿದ್ದು ಇದೇನು ಅಂದರು. 29 ಅವರು ಕಾನಾನ್‍ದೇಶಕ್ಕೆ ತಮ್ಮ ತಂದೆಯಾದ ಯಾಕೋಬನ ಬಳಿಗೆ ಬಂದು ನಡೆದದ್ದನ್ನೆಲ್ಲಾ ತಿಳಿಸಿ - 30 ಆ ದೇಶಾಧಿಪತಿ ನಮ್ಮ ಸಂಗಡ ಬಿರಿಸಿನಿಂದ ಮಾತಾಡಿ ನಮ್ಮನ್ನು ಗೂಢಚಾರರೆಂದು ಹೇಳಿದನು. 31 ನಾವು ಅವನಿಗೆ - ನಾವು ಸತ್ಯವಂತರೇ ಹೊರತು ಗೂಢಚಾರರಲ್ಲ; 32 ನಾವು ಒಬ್ಬ ತಂದೆಯಿಂದಲೇ ಹುಟ್ಟಿದ ಹನ್ನೆರಡು ಮಂದಿ ಅಣ್ಣತಮ್ಮಂದಿರಾಗಿದ್ದೇವೆ; ನಮ್ಮಲ್ಲಿ ಒಬ್ಬನಿಲ್ಲ; ಚಿಕ್ಕವನೋ ಈಗ ಕಾನಾನ್ ದೇಶದಲ್ಲಿ ನಮ್ಮ ತಂದೆಯ ಬಳಿಯಲ್ಲಿದ್ದಾನೆ ಎಂದು ಹೇಳಿದೆವು. 33 ಅದಕ್ಕೆ ದೇಶಾಧಿಪತಿ - ನೀವು ಸತ್ಯವಂತರೋ ಅಲ್ಲವೋ ಎಂಬದು ಗೊತ್ತಾಗುವದಕ್ಕಾಗಿ ನಿಮ್ಮೊಳಗೆ ಒಬ್ಬನನ್ನು ನನ್ನ ಬಳಿಯಲ್ಲಿ ಬಿಟ್ಟು ನಿಮ್ಮ ಮನೆಯವರ ಕ್ಷಾಮ ನಿವಾರಣೆಗೆ ಬೇಕಾದದ್ದನ್ನು ತೆಗೆದುಕೊಂಡು ಹೋಗಿ 34 ನಿಮ್ಮ ತಮ್ಮನನ್ನು ನನ್ನ ಬಳಿಗೆ ಕರಕೊಂಡು ಬರಬೇಕು; ಕರಕೊಂಡು ಬಂದರೆ ನೀವು ಗೂಢಚಾರರಲ್ಲ, ಸತ್ಯವಂತರೇ ಎಂದು ತಿಳಿದುಕೊಂಡು ನಿಮ್ಮ ಅಣ್ಣನನ್ನು ಬಿಡಿಸಿಬಿಡುತ್ತೇನೆ, ಮತ್ತು ನೀವು ಈ ದೇಶದಲ್ಲಿ ವ್ಯಾಪಾರ ನಡಿಸಬಹುದೆಂದು ಹೇಳಿದನು ಅಂದರು. 35 ಅವರು ತಮ್ಮ ಚೀಲಗಳನ್ನು ಬಿಚ್ಚಿನೋಡಿದಾಗ ಪ್ರತಿಯೊಬ್ಬನ ಚೀಲದಲ್ಲಿಯೂ ಅವನವನ ಹಣದ ಗಂಟು ಸಿಕ್ಕಿತು. ಅವರೂ ಅವರ ತಂದೆಯೂ ಹಣದ ಗಂಟುಗಳನ್ನು ಕಂಡಾಗ ಭಯಪಟ್ಟರು. 36 ಆಗ ಅವರ ತಂದೆಯಾದ ಯಾಕೋಬನು ಅವರಿಗೆ - ನನ್ನನ್ನು ಮಕ್ಕಳಿಲ್ಲದವನಂತೆ ಮಾಡಿದ್ದೀರಿ; ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ; ಬೆನ್ಯಾಮೀನನನ್ನೂ ಕರಕೊಂಡು ಹೋಗಬೇಕೆಂದಿದ್ದೀರಿ, ಈ ಕಷ್ಟವೆಲ್ಲಾ ನನ್ನ ಮೇಲೆಯೇ ಬಂತು ಎಂದು ಹೇಳಲು ರೂಬೇನನು ಅವನಿಗೆ - 37 ನಾನು ಈ ಹುಡುಗನನ್ನು ತಿರಿಗಿ ತಂದು ಒಪ್ಪಿಸದೆ ಹೋದರೆ ನನ್ನಿಬ್ಬರು ಗಂಡು ಮಕ್ಕಳನ್ನು ಕೊಂದು ಹಾಕಬಹುದು; ಇವನನ್ನು ನನ್ನ ವಶಕ್ಕೆ ಕೊಟ್ಟರೆ ನಾನು ತಪ್ಪದೆ ಇವನನ್ನು ನಿನ್ನ ಬಳಿಗೆ ಕರಕೊಂಡು ಬರುತ್ತೇನೆ ಎಂದು ಹೇಳಿದನು. 38 ಆದರೆ ಯಾಕೋಬನು ಅವರಿಗೆ - ನನ್ನ ಮಗನು ನಿಮ್ಮ ಸಂಗಡ ಹೋಗಬಾರದು; ಇವನ ಒಡಹುಟ್ಟಿದವನು ಸತ್ತು ಹೋದನು; ಇವನೊಬ್ಬನೇ ಉಳಿದಿದ್ದಾನೆ; ಮಾರ್ಗದಲ್ಲಿ ಇವನಿಗೇನಾದರೂ ಕೇಡಾದರೆ ಈ ಮುದಿತಲೆ ದುಃಖದಿಂದಲೇ ಪಾತಾಳಕ್ಕೆ ಸೇರಲು ನೀವು ಕಾರಣವಾಗುವಿರಿ ಎಂದು ಹೇಳಿದನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India