ಆದಿಕಾಂಡ 40 - ಕನ್ನಡ ಸತ್ಯವೇದವು J.V. (BSI)ಯೋಸೇಫನು ಅರಸನ ಇಬ್ಬರು ಉದ್ಯೋಗಸ್ಥರ ಕನಸುಗಳ ಅರ್ಥವನ್ನು ತಿಳಿಸಿದ್ದು 1 ಈ ಸಂಗತಿಗಳಾದ ಮೇಲೆ ಐಗುಪ್ತ ದೇಶದ ಅರಸನಾದ ಫರೋಹನಿಗೆ ಪಾನಕ ಕೊಡುವವನೂ ಭಕ್ಷ್ಯಗಳನ್ನು ಮಾಡಿಕೊಡುವವನೂ 2 ತಮ್ಮ ದಣಿಗೆ ವಿರೋಧವಾಗಿ ಯಾವದೋ ತಪ್ಪುಮಾಡಿದ್ದರಿಂದ ಫರೋಹನು ಆ ಇಬ್ಬರು ಉದ್ಯೋಗಸ್ಥರ ಮೇಲೆ, ಅಂದರೆ ಪಾನದಾಯಕರಲ್ಲಿ ಮುಖ್ಯಸ್ಥನ ಮೇಲೆಯೂ ಭಕ್ಷ್ಯಕಾರರಲ್ಲಿ ಮುಖ್ಯಸ್ಥನ ಮೇಲೆಯೂ ಕೋಪಮಾಡಿ 3 ಅವರನ್ನು ಮೈಗಾವಲಿನವರ ದಳವಾಯಿಯ ಮನೆಯೊಳಗೆ ಕಾವಲಲ್ಲಿರಿಸಿದನು. 4 ಅದು ಯೋಸೇಫನು ಬಿದ್ದಿದ್ದ ಸೆರೆಮನೆಯೇ. ದಳವಾಯಿಯು ಯೋಸೇಫನನ್ನು ಅವರ ಉಪಚಾರಕ್ಕೆ ನೇವಿುಸಿದ್ದರಿಂದ ಯೋಸೇಫನು ಅವರಿಗೆ ಸೇವೆ ಮಾಡುವವನಾದನು. 5 ಹೀಗೆ ಅವರು ಕೆಲವು ಕಾಲ ಕಾವಲಲ್ಲಿದ್ದ ಮೇಲೆ ಅವರಿಬ್ಬರಿಗೂ, ಅಂದರೆ ಐಗುಪ್ತದೇಶದ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ ಭಕ್ಷ್ಯಕಾರನಿಗೂ, ಒಂದೇ ರಾತ್ರಿ ಕನಸುಬಿತ್ತು; ಅವರವರ ಕನಸಿಗೆ ಬೇರೆ ಬೇರೆ ಅರ್ಥವಿತ್ತು. 6 ಬೆಳಿಗ್ಗೆ ಯೋಸೇಫನು ಅವರ ಬಳಿಗೆ ಬಂದಾಗ ಅವರು ಚಿಂತೆಯುಳ್ಳವರಾಗಿ ಕಾಣಿಸಿದರು. 7 ಅದನ್ನು ಅವನು ನೋಡಿ - ನಿಮ್ಮ ಮುಖವು ಈ ಹೊತ್ತು ಯಾಕೆ ಕಳೆಗುಂದಿತು ಎಂದು ತನ್ನ ದಣಿಯ ಮನೆಯೊಳಗೆ ತನ್ನೊಂದಿಗೆ ಕಾವಲಲ್ಲಿದ್ದ ಫರೋಹನ ಉದ್ಯೋಗಸ್ಥರನ್ನು ಕೇಳಿದನು. 8 ಅವರು ಅವನಿಗೆ - ನಮಗೆ ಸ್ವಪ್ನಬಿತ್ತು; ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ ಎಂದು ಹೇಳಲು ಯೋಸೇಫನು ಅವರಿಗೆ - ಸ್ವಪ್ನಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ; ದಯಮಾಡಿ ನಿಮ್ಮ ಸ್ವಪ್ನವನ್ನು ನನಗೆ ತಿಳಿಸಿರಿ ಎಂದು ಹೇಳಿದನು. 9 ಆಗ ಪಾನದಾಯಕರಲ್ಲಿ ಮುಖ್ಯಸ್ಥನು ಯೋಸೇಫನಿಗೆ - ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆಯನ್ನು ನನ್ನೆದುರಾಗಿ ಕಂಡೆನು; 10 ಅದಕ್ಕೆ ಮೂರು ಕವಲುಗಳಿದ್ದವು. ಅದು ಚಿಗುರುತ್ತಲೇ ಹೂವುಗಳನ್ನು ಬಿಟ್ಟಿತು; ಆ ಹೂವುಗಳು ಗೊಂಚಲುಗಳಾಗಿ ಹಣ್ಣಾದವು. 11 ಫರೋಹನ ಪಾನಪಾತ್ರೆಯು ನನ್ನ ಕೈಯಲ್ಲಿದ್ದದರಿಂದ ನಾನು ಆ ಗೊಂಚಲುಗಳನ್ನು ಕೊಯಿದು ಪಾತ್ರೆಯಲ್ಲಿ ಹಿಂಡಿ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆನು ಎಂದು ಹೇಳಿದನು. 12 ಅದಕ್ಕೆ ಯೋಸೇಫನು - ಆ ಕನಸಿನ ಅರ್ಥವೇನಂದರೆ - 13 ಆ ಮೂರು ಕೊಂಬೆಗಳೇ ಮೂರು ದಿನಗಳು; ಈ ಹೊತ್ತಿಗೆ ಮೂರು ದಿನಗಳೊಳಗೆ ಫರೋಹನು ನಿನ್ನನ್ನು ಮೇಲಕ್ಕೆ ಎತ್ತಿ ನಿನ್ನ ಉದ್ಯೋಗಕ್ಕೆ ತಿರಿಗಿ ನೇವಿುಸುವನು. ನೀನು ಮುಂಚೆ ಫರೋಹನ ಪಾನದಾಯಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುತ್ತಿದ್ದಂತೆಯೇ ಮುಂದೆಯೂ ಒಪ್ಪಿಸುವಿ. 14 ಆದರೆ ನೀನು ಸುಖದಿಂದಿರುವಾಗ ನನ್ನನ್ನು ಜ್ಞಾಪಕಮಾಡಿಕೊಂಡು ನನಗೆ ಉಪಕಾರ ಮಾಡಿ ಫರೋಹನಿಗೆ ನನ್ನ ಸಂಗತಿಯನ್ನು ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡಿಸಬೇಕು. 15 ನಾನು ಇಬ್ರಿಯದೇಶಸ್ಥನು; ಕೆಲವರು ನನ್ನನ್ನು ಕದ್ದು ಈ ದೇಶಕ್ಕೆ ತಂದರು. ಇಲ್ಲಿಯೂ ನಾನೇನೂ ತಪ್ಪಿಲ್ಲದವನಾಗಿ ಸೆರೆಯಲ್ಲಿ ಬಿದ್ದೆನು ಅಂದನು. 16 ಅವನು ಹೇಳಿದ ಅರ್ಥವು ಶುಭಕರವಾದದ್ದೆಂದು ಭಕ್ಷ್ಯಕಾರರಲ್ಲಿ ಮುಖ್ಯಸ್ಥನು ತಿಳಿದು ಯೋಸೇಫನಿಗೆ - ನಾನೂ ಕಂಡ ಕನಸನ್ನು ಹೇಳುತ್ತೇನೆ ಕೇಳು. ನನಗೆ ಬಿದ್ದ ಕನಸಿನಲ್ಲಿ ಸೊಗಸಾದ ಭಕ್ಷ್ಯಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲಿದ್ದವು. 17 ಮೇಲಣ ಪುಟ್ಟಿಯಲ್ಲಿ ಫರೋಹನಿಗೋಸ್ಕರ ನಾನಾ ವಿಧವಾದ ಭಕ್ಷ್ಯಗಳು ಇದ್ದವು; ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿಂದಲೇ ತಿನ್ನುತ್ತಿದ್ದವು ಎಂದು ಹೇಳಿದನು. 18 ಅದಕ್ಕೆ ಯೋಸೇಫನು - ನಿನ್ನ ಕನಸಿನ ಅರ್ಥವೇನಂದರೆ - ಆ ಮೂರು ಪುಟ್ಟಿಗಳೇ ಮೂರು ದಿನಗಳು; 19 ಈ ಹೊತ್ತಿಗೆ ಮೂರು ದಿನಗಳೊಳಗೆ ಫರೋಹನು ನಿನ್ನ ತಲೆಯನ್ನು ಎತ್ತಿಸುವನು; ನಿನ್ನನ್ನು ಮರಕ್ಕೆ ತೂಗಹಾಕಿಸುವನು; ಹಕ್ಕಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವವು ಅಂದನು. 20 ಮೂರನೆಯ ದಿನದಲ್ಲಿ ಫರೋಹನ ಜನ್ಮದಿನವಾದ್ದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯ ಪಾನದಾಯಕನನ್ನೂ ಮುಖ್ಯಭಕ್ಷ್ಯಕಾರನನ್ನೂ ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು. 21 ಪಾನದಾಯಕರ ಮುಖ್ಯಸ್ಥನನ್ನು ತಿರಿಗಿ ಅವನ ಉದ್ಯೋಗಕ್ಕೆ ನೇವಿುಸಿದನು; ಅವನು ಪಾನಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು; 22 ಆದರೆ ಮುಖ್ಯ ಭಕ್ಷ್ಯಕಾರನನ್ನು ಫರೋಹನು ಗಲ್ಲಿಗೆ ಹಾಕಿಸಿದನು. ಹೀಗೆ ಯೋಸೇಫನು ಹೇಳಿದ್ದಂತೆಯೇ ಆಯಿತು. 23 ಆದಾಗ್ಯೂ ಮುಖ್ಯಪಾನದಾಯಕನು ಯೋಸೇಫನನ್ನು ನೆನಪುಮಾಡದೆ ಮರೆತುಬಿಟ್ಟನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India