Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆದಿಕಾಂಡ 39 - ಕನ್ನಡ ಸತ್ಯವೇದವು J.V. (BSI)


ಯೋಸೇಫ ನಂಬಿಗಸ್ತನಾದ್ದರಿಂದ ವೃದ್ಧಿಗೆ ಬಂದದ್ದು; ತರುವಾಯ ಅನ್ಯಾಯವಾಗಿ ಸೆರೆಯಲ್ಲಿ ಬಿದ್ದದ್ದು

1 ಯೋಸೇಫನನ್ನು ತೆಗೆದುಕೊಂಡುಹೋದ ಇಷ್ಮಾಯೇಲ್ಯರು ಐಗುಪ್ತದೇಶಕ್ಕೆ ಸೇರಿದಾಗ ಒಬ್ಬ ಐಗುಪ್ತದವನು ಅವನನ್ನು ಅವರಿಂದ ಕ್ರಯಕ್ಕೆ ತೆಗೆದುಕೊಂಡನು; ಇವನು ಯಾರಂದರೆ ಫರೋಹನ ಉದ್ಯೋಗಸ್ಥನೂ ಮೈಗಾವಲಿನವರ ದಳವಾಯಿಯೂ ಆಗಿದ್ದ ಪೋಟೀಫರನು.

2 ಯೆಹೋವನು ಯೋಸೇಫನ ಸಂಗಡ ಇದ್ದದರಿಂದ ಅವನು ಏಳಿಗೆಯಾಗಿ ಐಗುಪ್ತ್ಯನಾದ ತನ್ನ ದಣಿಯ ಮನೆಯೊಳಗೆ ಸೇವಕನಾದನು.

3 ಯೆಹೋವನು ಯೋಸೇಫನ ಸಂಗಡವಿದ್ದು ಅವನು ಮಾಡುವ ಕೆಲಸವನ್ನೆಲ್ಲಾ ಸಫಲವಾಗುವಂತೆ ಮಾಡುತ್ತಾನೆಂದು ಅವನ ದಣಿಯು ತಿಳಿದು

4 ಅವನ ಮೇಲೆ ದಯೆ ಇಟ್ಟು ಅವನನ್ನು ಸ್ವಂತ ಸೇವಕನನ್ನಾಗಿ ನೇವಿುಸಿಕೊಂಡನು. ಇದಲ್ಲದೆ ಆ ದಣಿಯು ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟು ತನ್ನ ಆಸ್ತಿಯನ್ನೆಲ್ಲಾ ಅವನ ವಶಕ್ಕೆ ಒಪ್ಪಿಸಿದನು.

5 ಅವನು ಯೋಸೇಫನನ್ನು ತನ್ನ ಮನೆಯ ಮೇಲೆಯೂ ಆಸ್ತಿಯ ಮೇಲೆಯೂ ಅಧ್ಯಕ್ಷನಾಗಿ ಇಟ್ಟಂದಿನಿಂದ ಯೆಹೋವನು ಯೋಸೇಫನ ನಿವಿುತ್ತವಾಗಿ ಆ ಐಗುಪ್ತ್ಯನ ಮನೆಯನ್ನು ಅಭಿವೃದ್ಧಿಗೆ ತಂದನು. ಮನೆಯಲ್ಲಾಗಲಿ ಹೊಲದಲ್ಲಾಗಲಿ ಅವನಿಗಿದ್ದ ಎಲ್ಲಾದರ ಮೇಲೆ ಯೆಹೋವನ ಆಶೀರ್ವಾದವುಂಟಾಯಿತು.

6 ಅವನು ತನ್ನ ಆಸ್ತಿಯನ್ನೆಲ್ಲಾ ಯೋಸೇಫನ ವಶಕ್ಕೆ ಒಪ್ಪಿಸಿದನು; ಇವನು ತನ್ನ ಬಳಿಯಲ್ಲೇ ಇದ್ದದರಿಂದ ತಾನು ತಿನ್ನುವ ಆಹಾರ ಒಂದನ್ನೇ ಹೊರತು ಬೇರೆ ಯಾವದನ್ನೂ ಚಿಂತಿಸಲಿಲ್ಲ. ಇದಲ್ಲದೆ ಯೋಸೇಫನು ರೂಪದಲ್ಲಿಯೂ ಮುಖಭಾವದಲ್ಲಿಯೂ ಸುಂದರನಾಗಿದ್ದನು.

7 ಹೀಗಿರುವಲ್ಲಿ ಅವನ ದಣಿಯ ಹೆಂಡತಿಯು ಅವನ ಮೇಲೆ ಕಣ್ಣು ಹಾಕಿ ತನ್ನೊಡನೆ ಸಂಗಮಕ್ಕೆ ಕರೆದಳು.

8 ಆದರೆ ಅವನು ಒಪ್ಪದೆ - ನನ್ನ ದಣಿಯು ತನ್ನ ಆಸ್ತಿಯನ್ನೆಲ್ಲಾ ನನ್ನ ವಶಕ್ಕೆ ಒಪ್ಪಿಸಿ ನಾನು ಇರುವದರಿಂದ ಮನೆಯೊಳಗೆ ನಡೆಯುವ ಯಾವ ಕೆಲಸವನ್ನೂ ಚಿಂತಿಸದೆ ಇದ್ದಾನೆ;

9 ಈ ಮನೆಯಲ್ಲಿ ಅವನೂ ನನಗಿಂತ ದೊಡ್ಡವನಲ್ಲ; ನೀನು ಅವನ ಧರ್ಮಪತ್ನಿಯಾದದರಿಂದ ನಿನ್ನನ್ನು ಮಾತ್ರ ನನಗೆ ಅಧೀನಮಾಡಲಿಲ್ಲ; ಹೀಗಿರುವಲ್ಲಿ ನಾನು ಇಂಥಾ ಮಹಾದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ ಎಂದು ತನ್ನ ದಣಿಯ ಹೆಂಡತಿಗೆ ಉತ್ತರಕೊಟ್ಟನು.

10 ಆಕೆ ಯೋಸೇಫನ ಸಂಗಡ ಪ್ರತಿ ದಿನವೂ ಈ ಮಾತನ್ನು ಆಡಿದಾಗ್ಯೂ ಅವನು ಅದಕ್ಕೆ ಕಿವಿಗೊಡದೆ ಆಕೆಯಲ್ಲಿ ಸಂಗಮಮಾಡುವದಕ್ಕಾಗಲಿ ಆಕೆಯ ಬಳಿಯಲ್ಲಿರುವದಕ್ಕಾಗಲಿ ಒಪ್ಪಿಕೊಳ್ಳಲೇ ಇಲ್ಲ.

11 ಹೀಗಿರಲು ಒಂದು ದಿನ ಅವನು ತನ್ನ ಕೆಲಸದ ಮೇಲೆ ಮನೆಗೆ ಬಂದಾಗ ಮನೆಯವರಲ್ಲಿ ಯಾರೂ ಒಳಗೆ ಇಲ್ಲದಿರುವಲ್ಲಿ

12 ಆಕೆ ಅವನ ಬಟ್ಟೆಯನ್ನು ಹಿಡಿದುಕೊಂಡು - ನನ್ನ ಸಂಗಮಕ್ಕೆ ಬಾ ಅನ್ನಲು ಅವನು ತನ್ನ ಬಟ್ಟೆಯನ್ನು ಆಕೆಯ ಕೈಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದನು.

13 ಅವನು ತನ್ನ ಬಟ್ಟೆಯನ್ನು ನನ್ನ ಕೈಯಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋದನಲ್ಲಾ ಎಂದು ಆಕೆ ನೋಡಿ ಮನೆಯ ಸೇವಕರನ್ನು

14 ಕರೆದು ಅವರಿಗೆ - ನೋಡಿರಿ, ನನ್ನ ಯಜಮಾನರು ಒಬ್ಬ ಇಬ್ರಿಯನನ್ನು ನಮ್ಮೊಳಗೆ ಸೇರಿಸಿ ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾರೆ. ಅವನು ನನ್ನನ್ನು ಮಾನಭಂಗಪಡಿಸುವದಕ್ಕೆ ನನ್ನ ಹತ್ತಿರ ಬಂದನು. ನಾನು ಗಟ್ಟಿಯಾಗಿ ಕೂಗಿಕೊಂಡೆನು.

15 ನಾನು ಕೂಗುವದನ್ನು ಕೇಳಿ ಅವನು ತನ್ನ ಬಟ್ಟೆಯನ್ನು ನನ್ನ ಬಳಿಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದನು ಎಂದು ಹೇಳಿ

16 ಅವನ ದಣಿಯು ಮನೆಗೆ ಬರುವ ತನಕ ಆ ಬಟ್ಟೆಯನ್ನು ತನ್ನ ಬಳಿಯಲ್ಲಿ ಇಟ್ಟುಕೊಂಡಳು.

17 ಪತಿಯು ಬಂದಾಗ ಆಕೆ ಅದೇ ಮಾತನ್ನು ಹೇಳಿ ಅವನಿಗೆ - ನೀನು ನಮ್ಮಲ್ಲಿ ಸೇರಿಸಿಕೊಂಡ ಆ ಇಬ್ರಿಯ ಸೇವಕನು ನನ್ನನ್ನು ಮಾನಭಂಗಪಡಿಸುವದಕ್ಕೆ ನನ್ನ ಬಳಿಗೆ ಬಂದನು. ನಾನು ಕೂಗಿಕೊಂಡೆನು.

18 ಕೂಗುತ್ತಲೇ ಅವನು ತನ್ನ ಬಟ್ಟೆಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿಹೋದನು ಎಂದು ಹೇಳಿದಳು.

19 ನಿನ್ನ ಸೇವಕನು ಈ ಮೇರೆಗೆ ನನಗೆ ಮಾಡಿದನೆಂಬದಾಗಿ ಆಕೆ ಹೇಳಿದ ಮಾತುಗಳನ್ನು ಯೋಸೇಫನ ದಣಿಯು ಕೇಳಿ ಬಹಳ ಸಿಟ್ಟುಗೊಂಡು

20 ಅವನನ್ನು ಹಿಡಿಸಿ ಅರಸನು ಸೆರೆಯವರನ್ನು ಕಟ್ಟಿಹಾಕಿಸುತ್ತಿದ್ದ ಸೆರೆಮನೆಯಲ್ಲಿ ಹಾಕಿಸಿದನು. ಅಲ್ಲಿ ಯೋಸೇಫನು ಸೆರೆಯಲ್ಲಿ ಇರಬೇಕಾಯಿತು.

21 ಆದರೂ ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕೃಪೆಯನ್ನಿಟ್ಟು ಅವನಿಗೆ ಸೆರೆಯಜಮಾನನ ಬಳಿಯಲ್ಲಿ ದಯೆದೊರಕುವಂತೆ ಮಾಡಿದನು.

22 ಸೆರೆಮನೆಯ ಯಜಮಾನನು ಸೆರೆಯಲ್ಲಿದ್ದವರೆಲ್ಲರನ್ನೂ ಯೋಸೇಫನ ವಶಕ್ಕೆ ಕೊಟ್ಟುಬಿಟ್ಟನು. ಅಲ್ಲಿ ಮಾಡಬೇಕಾದದ್ದನ್ನೆಲ್ಲಾ ಯೋಸೇಫನೇ ಮಾಡಿಸಿದನು.

23 ಯೆಹೋವನು ಅವನ ಸಂಗಡ ಇದ್ದು ಅವನು ನಡಿಸಿದ್ದೆಲ್ಲವನ್ನು ಕೈಗೂಡಿಸಿದ್ದರಿಂದ ಅವನ ವಶದಲ್ಲಿದ್ದ ಯಾವದೊಂದರ ವಿಷಯದಲ್ಲಿಯೂ ಸೆರೆಮನೆಯ ಯಜಮಾನನು ಏನೂ ಚಿಂತಿಸಲಿಲ್ಲ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು