Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಆದಿಕಾಂಡ 38 - ಕನ್ನಡ ಸತ್ಯವೇದವು J.V. (BSI)


ಯೆಹೂದನ ಕುಟುಂಬದಲ್ಲಿ ನಡೆದ ಕೆಲವು ಸಂಗತಿಗಳು

1 ಆ ಕಾಲದಲ್ಲಿ ಯೆಹೂದನು ತನ್ನ ಅಣ್ಣತಮ್ಮಂದಿರನ್ನು ಬಿಟ್ಟು ಗಟ್ಟಾ ಇಳಿದು ಅದುಲ್ಲಾಮೂರಿನವನಾದ ಹೀರಾ ಎಂಬವನ ಹತ್ತಿರ ಇದ್ದುಕೊಂಡನು.

2 ಅಲ್ಲಿ ಅವನು ಶೂಗನೆಂದು ಹೆಸರುಳ್ಳ ಒಬ್ಬ ಕಾನಾನ್ಯನ ಮಗಳನ್ನು ಕಂಡು ಅವಳನ್ನು ವರಿಸಿ ಅವಳ ಸಹವಾಸ ಮಾಡಿದನು.

3 ಅವಳು ಬಸುರಾಗಿ ಗಂಡುಮಗುವನ್ನು ಹೆತ್ತಳು; ಅದಕ್ಕೆ ಅವನು ಏರನೆಂದು ಹೆಸರಿಟ್ಟನು.

4 ಅವಳು ಎರಡನೆಯ ಸಾರಿ ಬಸುರಾಗಿ ಗಂಡುಮಗುವನ್ನು ಹೆರಲು ಅದಕ್ಕೆ ಅವನು ಓನಾನನೆಂದು ಹೆಸರಿಟ್ಟನು.

5 ಅವಳು ಮತ್ತೊಂದು ಸಾರಿ ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತು ಅದಕ್ಕೆ ಶೇಲಹನೆಂದು ಹೆಸರಿಟ್ಟಳು; ಅವಳು ಆ ಮಗುವನ್ನು ಹೆರುವಾಗ ಯೆಹೂದನು ಕಜೀಬೂರಿನಲ್ಲಿದ್ದನು.

6 ಯೆಹೂದನು ತನ್ನ ಚೊಚ್ಚಲಮಗನಾದ ಏರನಿಗೆ ತಾಮಾರೆಂಬ ಹೆಣ್ಣನ್ನು ಮದುವೆ ಮಾಡಿದನು.

7 ಆದರೆ ಯೆಹೂದನ ಚೊಚ್ಚಲಮಗನಾದ ಏರನು ಯೆಹೋವನ ದೃಷ್ಟಿಯಲ್ಲಿ ಕೆಟ್ಟವನಾದ್ದರಿಂದ ಯೆಹೋವನು ಅವನನ್ನು ಸಾಯಿಸಿದನು.

8 ಬಳಿಕ ಯೆಹೂದನು ಓನಾನನಿಗೆ - ನೀನು ನಿನ್ನ ಅತ್ತಿಗೆಯನ್ನು ಮದುವೆ ಮಾಡಿಕೊಂಡು ಮೈದುನಧರ್ಮಕ್ಕೆ ಸರಿಯಾಗಿ ನಡೆದು ನಿನ್ನ ಅಣ್ಣನಿಗೆ ಸಂತತಿಯನ್ನು ಹುಟ್ಟಿಸು ಅಂದನು.

9 ಆದರೆ ಓನಾನನು ಈ ರೀತಿಯಾಗಿ ಆಗುವ ಸಂತಾನವು ತನ್ನದಾಗುವದಿಲ್ಲವೆಂದು ತಿಳಿದು ಅಣ್ಣನಿಗೆ ಸಂತತಿಯನ್ನು ಹುಟ್ಟಿಸಲೊಲ್ಲದೆ ತನ್ನ ಅತ್ತಿಗೆಯಲ್ಲಿ ಸಂಗಮಮಾಡುವಾಗೆಲ್ಲಾ ತನ್ನ ವೀರ್ಯವನ್ನು ನೆಲದ ಪಾಲು ಮಾಡುತ್ತಿದ್ದನು.

10 ಈ ನಡತೆ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿದ್ದದರಿಂದ ಆತನು ಅವನನ್ನೂ ಸಾಯಿಸಿದನು.

11 ಆಮೇಲೆ ಯೆಹೂದನು - ಒಂದು ವೇಳೆ ಶೇಲಹನೂ ತನ್ನ ಅಣ್ಣಂದಿರಂತೆಯೇ ಸತ್ತಾನೆಂದು ಯೋಚಿಸಿ ತನ್ನ ಸೊಸೆಯಾದ ತಾಮಾರಳಿಗೆ - ನನ್ನ ಮಗನಾದ ಶೇಲಹನು ಪ್ರಾಯಸ್ಥನಾಗುವ ತನಕ ನೀನು ವಿಧವೆಯಾಗಿ ತೌರಮನೆಯಲ್ಲಿರು ಎಂದು ನೆವ ಹೇಳಿದನು. ಅವಳು ತೌರಮನೆಗೆ ಹೋಗಿ ಅಲ್ಲೇ ವಾಸಮಾಡಿದಳು.

12 ಬಹಳ ದಿನಗಳಾದ ಮೇಲೆ ಯೆಹೂದನ ಹೆಂಡತಿಯಾಗಿದ್ದ ಶೂಗನ ಮಗಳು ತೀರಿಹೋದಳು. ಯೆಹೂದನು ತನಗೆ ದುಃಖ ಶಮನವಾದ ಮೇಲೆ ತನ್ನ ಕುರಿಗಳ ಉಣ್ಣೇ ಕತ್ತರಿಸುವವರ ಬಳಿಗೆ ತನ್ನ ಸ್ನೇಹಿತನಾದ ಹೀರಾ ಎಂಬ ಅದುಲ್ಲಾಮ್ಯನ ಜೊತೆಯಲ್ಲಿ ಗಟ್ಟಾ ಹತ್ತಿ ತಿಮ್ನಾ ಊರಿಗೆ ಹೋದನು.

13 ಮಾವನು ತನ್ನ ಕುರಿಗಳ ಉಣ್ಣೇ ಕತ್ತರಿಸುವದಕ್ಕೋಸ್ಕರ ತಿಮ್ನಾ ಊರಿಗೆ ಹೋಗುತ್ತಾನೆಂಬ ವರ್ತಮಾನವು ತಾಮಾರಳಿಗೆ ತಿಳಿದು ಬಂತು.

14 ಆಗ ಆಕೆ - ಶೇಲಹನು ಪ್ರಾಯಸ್ಥನಾದಾಗ್ಯೂ ನನ್ನನ್ನು ಅವನಿಗೆ ಮದುವೆ ಮಾಡಿಸಲಿಲ್ಲವಲ್ಲಾ ಅಂದುಕೊಂಡು ತನ್ನ ವಿಧವಾವಸ್ತ್ರಗಳನ್ನು ತೆಗೆದಿಟ್ಟು ಮುಸುಕನ್ನು ಹಾಕಿಕೊಂಡು [ವೇಶ್ಯಾಸ್ತ್ರೀಯಂತೆ] ಅಲಂಕೃತಳಾಗಿ ತಿಮ್ನಾವೂರಿನ ದಾರಿಯಲ್ಲಿರುವ ಏನಯಿಮೂರಿನ ಬಾಗಿಲ ಬಳಿಯಲ್ಲಿ ಕೂತುಕೊಂಡಳು.

15 ಯೆಹೂದನು ಆಕೆಯನ್ನು ಕಂಡಾಗ ಆಕೆಯ ಮುಖದ ಮೇಲೆ ಮುಸುಕು ಇದ್ದದರಿಂದ ಸೊಸೆ ಎಂದು ತಿಳಿಯದೆ ಸೂಳೆಯೆಂದು ಭಾವಿಸಿ ಮಾರ್ಗದಿಂದ ಓರೆಯಾಗಿ ಆಕೆಯ ಬಳಿಗೆ ಹೋಗಿ -

16 ನಾನು ನಿನ್ನ ಸಂಗಮ ಮಾಡುವದಕ್ಕೆ ಒಪ್ಪುತ್ತೀಯಾ ಅನ್ನಲು ಆಕೆ - ನನ್ನಲ್ಲಿ ಬರಬೇಕಾದರೆ ನೀನು ಏನು ಕೊಡುತ್ತೀ ಎಂದು ಕೇಳಿದಳು.

17 ಅವನು - ಹಿಂಡಿನಿಂದ ಒಂದು ಹೋತಮರಿಯನ್ನು ಕಳುಹಿಸಿಕೊಡುತ್ತೇನೆ ಅಂದಾಗ ಆಕೆ - ನೀನು ಅದನ್ನು ಕೊಡುವ ತನಕ ನನ್ನಲ್ಲಿ ಏನಾದರೂ ಒತ್ತೆಯಿಡಬೇಕು ಎಂದು ಹೇಳಿದ್ದಕ್ಕೆ

18 ಅವನು - ಏನು ಒತ್ತೆ ಇಡಲಿ ಎಂದು ಕೇಳಲು ಆಕೆ - ನಿನ್ನ ಮುದ್ರೆ, ದಾರ, ಕೈಕೋಲು ಈ ಮೂರನ್ನು ಇಡು ಅಂದಳು. ಅವನು ಅವುಗಳನ್ನು ಕೊಟ್ಟು ಆಕೆಯ ಸಂಗಮ ಮಾಡಲು ಆಕೆ ಅವನಿಗೆ ಬಸುರಾದಳು.

19 ಆಕೆ ಎದ್ದುಹೋದ ಮೇಲೆ ತಾನು ಹಾಕಿಕೊಂಡಿದ್ದ ಮುಸುಕನ್ನು ತೆಗೆದಿಟ್ಟು ತಿರಿಗಿ ವಿಧವಾವಸ್ತ್ರಗಳನ್ನು ಉಟ್ಟುಕೊಂಡಳು.

20 ಯೆಹೂದನು ತಾನು ಇಟ್ಟಿದ್ದ ಒತ್ತೆಯನ್ನು ಆ ಹೆಂಗಸಿನಿಂದ ಬಿಡಿಸಿಕೊಳ್ಳುವದಕ್ಕೋಸ್ಕರ ತನ್ನ ಸ್ನೇಹಿತನಾದ ಆ ಅದುಲ್ಲಾಮ್ಯನ ಕೈಯಲ್ಲಿ ಹೋತಮರಿಯನ್ನು ಕಳುಹಿಸಲು ಆಕೆ ಅವನಿಗೆ ಸಿಕ್ಕಲಿಲ್ಲ.

21 ಅವನು ಅವಳ ಊರಿನವರನ್ನು - ಏನಯಿವಿುನ ಸಮೀಪದಲ್ಲಿ ದಾರಿಯ ಬಳಿಯಲ್ಲಿ ಕೂತಿದ್ದ ದೇವದಾಸಿ ಎಲ್ಲಿರುವಳು ಎಂದು ಕೇಳಿದ್ದಕ್ಕೆ ಅವರು - ಇಲ್ಲಿ ಯಾವ ದೇವದಾಸಿಯೂ ಇಲ್ಲ ಅಂದರು.

22 ಅವನು ಯೆಹೂದನ ಬಳಿಗೆ ಹಿಂದಿರುಗಿಬಂದು - ನಾನು ಅವಳನ್ನು ಕಾಣಲಿಲ್ಲ. ಮತ್ತು ವಿಚಾರಿಸಿದಾಗ ಆ ಊರಿನವರು ಅಲ್ಲಿ ಯಾವ ದೇವದಾಸಿಯೂ ಇಲ್ಲವೆಂದರು ಎಂದು ತಿಳಿಸಿದನು.

23 ಅದಕ್ಕೆ ಯೆಹೂದನು - ಇನ್ನು ಹಾಸ್ಯಕ್ಕೆ ಗುರಿಯಾದೇವು; ನಾನಿಟ್ಟ ಒತ್ತೆಯನ್ನು ಅವಳೇ ಇಟ್ಟುಕೊಳ್ಳಲಿ; ನಾನಂತೂ ಹೋತಮರಿಯನ್ನು ಕಳುಹಿಸಿಕೊಟ್ಟೆನು; ಅವಳು ನಿನಗೆ ಸಿಕ್ಕಲಿಲ್ಲವಷ್ಟೆ ಅಂದನು.

24 ಸುಮಾರು ಮೂರು ತಿಂಗಳಾದ ಮೇಲೆ ಯೆಹೂದನು ತನ್ನ ಸೊಸೆಯಾದ ತಾಮಾರಳು ವ್ಯಭಿಚಾರದಿಂದ ಬಸುರಾಗಿದ್ದಾಳೆ ಎಂಬ ವರ್ತಮಾನವನ್ನು ತಿಳಿದು - ಅವಳನ್ನು ಹೊರಗೆ ತನ್ನಿರಿ, ಸುಡಬೇಕಾಗಿದೆ ಎಂದು ಹೇಳಿದನು.

25 ಅವರು ಆಕೆಯನ್ನು ಹೊರಕ್ಕೆ ತಂದಾಗ ಆಕೆ ತನ್ನ ಮಾವನಿಗೆ ಆ ಒತ್ತೆಯ ಸಾಮಾನುಗಳನ್ನು ಕಳುಹಿಸಿ - ಇವು ಯಾವನವೋ ಆ ಮನುಷ್ಯನಿಂದಲೇ ನಾನು ಬಸುರಾಗಿದ್ದೇನೆ; ಮುದ್ರೆ, ದಾರ, ಕೋಲು ಇವುಗಳ ಗುರುತನ್ನು ತಿಳಿಯಬಹುದು ಎಂದು ಹೇಳಿಸಿದಳು.

26 ಯೆಹೂದನು ಅವುಗಳ ಗುರುತನ್ನು ತಿಳಿದು - ನಾನು ನನ್ನ ಮಗನಾದ ಶೇಲಹನನ್ನು ಆಕೆಗೆ ಮದುವೆಮಾಡಿಸಲಿಲ್ಲವಾದ್ದರಿಂದ ಆಕೆ ನನಗಿಂತಲೂ ನ್ಯಾಯವಾಗಿ ನಡೆದಳು ಎಂದು ಹೇಳಿದನು. ಅವನು ತಿರಿಗಿ ಆಕೆಯ ಸಹವಾಸ ಮಾಡಲಿಲ್ಲ.

27 ತಾಮಾರಳಿಗೆ ಹೆರಿಗೆ ಕಾಲ ಬಂದಾಗ ಆಕೆಯ ಗರ್ಭದಲ್ಲಿ ಅವಳಿಮಕ್ಕಳಿರುವದು ಕಂಡುಬಂತು.

28 ಆಕೆ ಹೆರುವಾಗ ಒಂದು ಮಗುವು ಕೈಚಾಚಲು ಸೂಲಗಿತ್ತಿಯು - ಇದು ಮೊದಲಾಗಿ ಬಂದದ್ದು ಎಂದು ಹೇಳಿ ಅದರ ಕೈಗೆ ಕೆಂಪು ನೂಲನ್ನು ಕಟ್ಟಿದಳು. ಅದು ಕೈಯನ್ನು ಹಿಂದಕ್ಕೆ ತೆಗೆಯಲು ಅದರೊಡನೆ ಇದ್ದ ಮತ್ತೊಂದು ಶಿಶುವು ಹೊರಗೆ ಬಂತು.

29 ಸೂಲಗಿತ್ತಿಯು ಇದನ್ನು ಕಂಡು - ನೀನು ಛೇದಿಸಿಕೊಂಡು ಬಂದದ್ದೇನು ಎಂದು ಹೇಳಿದ್ದದರಿಂದ ಅದಕ್ಕೆ ಪೆರೆಚ್ ಎಂದು ಹೆಸರಾಯಿತು.

30 ತರುವಾಯ ಕೈಗೆ ಕೆಂಪು ನೂಲು ಕಟ್ಟಿಸಿಕೊಂಡ ಶಿಶುವು ಹುಟ್ಟಿತು; ಅದಕ್ಕೆ ಜೆರಹ ಎಂದು ಹೆಸರಾಯಿತು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು