ಆದಿಕಾಂಡ 37 - ಕನ್ನಡ ಸತ್ಯವೇದವು J.V. (BSI)ಯೋಸೇಫನ ಚರಿತ್ರೆ ( 37—50 ) ಯೋಸೇಫನನ್ನು ಅವನ ಅಣ್ಣಂದಿರು ಅನ್ಯಜನರಿಗೆ ಗುಲಾಮನಾಗಿ ಮಾರಿದ್ದು 1 ಆದರೆ ಯಾಕೋಬನು ತನ್ನ ತಂದೆ ಪ್ರವಾಸವಾಗಿದ್ದ ಕಾನಾನ್‍ದೇಶದಲ್ಲಿಯೇ ವಾಸವಾಗಿದ್ದನು. 2 ಯಾಕೋಬನ ಮಕ್ಕಳ ಚರಿತ್ರೆ. ಯೋಸೇಫನು ಹದಿನೇಳು ವರುಷದವನಾಗಿ ಇನ್ನೂ ಹುಡುಗನಾಗಿದ್ದು ತನ್ನ ಅಣ್ಣಂದಿರ ಜೊತೆಯಲ್ಲಿ ಅಂದರೆ ತನ್ನ ಮಲತಾಯಿಗಳಾದ ಬಿಲ್ಹಾ, ಜಿಲ್ಪಾ ಎಂಬವರ ಮಕ್ಕಳ ಜೊತೆಯಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದನು. ಅವರು ಏನಾದರೂ ಕೆಟ್ಟ ಕೆಲಸ ಮಾಡುವಾಗ ಅವನು ತಂದೆಗೆ ತಿಳಿಸುತ್ತಿದ್ದನು. 3 ಯೋಸೇಫನು ಇಸ್ರಾಯೇಲನಿಗೆ ಮುಪ್ಪಿನಲ್ಲಿ ಹುಟ್ಟಿದವನಾದ್ದರಿಂದ ಇಸ್ರಾಯೇಲನು ಅವನನ್ನು ತನ್ನ ಎಲ್ಲಾ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿ ಅವನಿಗೆ ನಿಲುವಂಗಿಯನ್ನು ಮಾಡಿಸಿಕೊಟ್ಟಿದ್ದನು. 4 ಅವನ ಅಣ್ಣತಮ್ಮಂದಿರು - ನಮ್ಮ ತಂದೆ ತನ್ನ ಎಲ್ಲಾ ಮಕ್ಕಳಿಗಿಂತಲೂ ಇವನನ್ನೇ ಹೆಚ್ಚಾಗಿ ಪ್ರೀತಿಸುತ್ತಾನೆಂದು ನೋಡಿ ಯೋಸೇಫನನ್ನು ಹಗೆಮಾಡಿ ಅವನೊಡನೆ ಸ್ನೇಹಭಾವದಿಂದ ಮಾತಾಡಲಾರದೆ ಹೋದರು. 5 ಒಂದು ದಿನ ಯೋಸೇಫನು ಕನಸುಕಂಡು ಅದನ್ನು ತನ್ನ ಅಣ್ಣಂದಿರಿಗೆ ತಿಳಿಸಲು ಅವರು ಅವನನ್ನು ಇನ್ನೂ ಹೆಚ್ಚಾಗಿ ದ್ವೇಷಿಸಿದರು. 6 ಅವನು ಅವರಿಗೆ - ನಾನು ಕನಸಿನಲ್ಲಿ ಕಂಡದ್ದನ್ನು ಹೇಳುತ್ತೇನೆ, ಕೇಳಿರಿ. 7 ಆ ಕನಸಿನಲ್ಲಿ ನಾವು ಹೊಲದಲ್ಲಿ ಸಿವುಡುಗಳನ್ನು ಕಟ್ಟುತ್ತಾ ಇದ್ದೆವು; ಆಗ ನನ್ನ ಸಿವುಡು ಎದ್ದು ನಿಲ್ಲಲು ನಿಮ್ಮ ಸಿವುಡುಗಳು ಸುತ್ತಲೂ ಬಂದು ನನ್ನ ಸಿವುಡಿಗೆ ಅಡ್ಡಬಿದ್ದದ್ದನ್ನು ಕಂಡೆನು ಎಂದು ಹೇಳಿದನು. 8 ಅದಕ್ಕೆ ಅವನ ಅಣ್ಣಂದಿರು - ನೀನು ನಿಜವಾಗಿ ನಮ್ಮನ್ನು ಆಳುವಿಯಾ? ನೀನು ನಮ್ಮ ಮೇಲೆ ದೊರೆತನಮಾಡುವಿಯಾ ಎಂದು ಅವನಿಗೆ ಹೇಳಿ ಅವನ ಕನಸುಗಳಿಗಾಗಿಯೂ ಮಾತುಗಳಿಗಾಗಿಯೂ ಮತ್ತಷ್ಟು ಹಗೆಮಾಡಿದರು. 9 ಅವನು ಇನ್ನೊಂದು ಕನಸು ಕಂಡು ಅದನ್ನೂ ತನ್ನ ಅಣ್ಣಂದಿರಿಗೆ ತಿಳಿಸಿದನು. ಅವನು ಅವರಿಗೆ - ಇನ್ನೊಂದು ಕನಸು ಕಂಡಿದ್ದೇನೆ; ಅದರಲ್ಲಿ ಸೂರ್ಯಚಂದ್ರರೂ ಹನ್ನೊಂದು ನಕ್ಷತ್ರಗಳೂ ನನಗೆ ಅಡ್ಡಬಿದ್ದವು ಎಂದು ಹೇಳಿದನು. 10 ಅವನು ಈ ಕನಸನ್ನು ತನ್ನ ತಂದೆಗೂ ಅಣ್ಣಂದಿರಿಗೂ ತಿಳಿಸಿದಾಗ ತಂದೆಯು ಅವನಿಗೆ - ಇದು ಎಂಥಾ ಕನಸು ನೀನು ಕಂಡದ್ದು? ನಾನೂ ನಿನ್ನ ತಾಯಿಯೂ ಅಣ್ಣತಮ್ಮಂದಿರೂ ನಿನ್ನ ಮುಂದೆ ಅಡ್ಡಬೀಳುವದಕ್ಕೆ ಬಂದೇವೋ ಎಂದು ಹೇಳಿ ಗದರಿಸಿದನು. 11 ಯೋಸೇಫನ ಅಣ್ಣಂದಿರು ಅವನ ಮೇಲೆ ಹೊಟ್ಟೆಕಿಚ್ಚುಪಟ್ಟರು; ಆದರೆ ಅವನ ತಂದೆಯು ಅವನ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡನು. 12 ಒಂದಾನೊಂದು ಕಾಲದಲ್ಲಿ ಅವನ ಅಣ್ಣಂದಿರು ತಂದೆಯ ಆಡುಕುರಿಗಳನ್ನು ಶೆಕೆವಿುನಲ್ಲಿ ಮೇಯಿಸುವದಕ್ಕೆ ಹೋಗಿದ್ದಾಗ ಇಸ್ರಾಯೇಲನು 13 ಯೋಸೇಫನಿಗೆ - ನಿನ್ನ ಅಣ್ಣಂದಿರು ಶೆಕೆವಿುನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರಲ್ಲಾ; ಅವರ ಬಳಿಗೆ ನಿನ್ನನ್ನು ಕಳುಹಿಸುತ್ತೇನೆ ಬಾ ಎಂದು ಹೇಳಲು ಅವನು - ಇಗೋ ಇದ್ದೇನೆ ಅಂದನು. 14 ಇಸ್ರಾಯೇಲನು ಅವನಿಗೆ - ನೀನು ಹೋಗಿ ನಿನ್ನ ಅಣ್ಣಂದಿರ ಯೋಗಕ್ಷೇಮವನ್ನೂ ಆಡುಕುರಿಗಳ ಯೋಗಕ್ಷೇಮವನ್ನೂ ವಿಚಾರಿಸಿಕೊಂಡು ಬಾ ಎಂದು ಅಪ್ಪಣೆಕೊಟ್ಟು ಅವನನ್ನು ಹೆಬ್ರೋನಿರುವ ತಗ್ಗಿನಿಂದ ಕಳುಹಿಸಲು ಯೋಸೇಫನು ಹೊರಟನು. 15 ಅವನು ಶೆಕೆವಿುಗೆ ಬಂದು ಅಲ್ಲಿ ಅಡವಿಯೊಳಗೆ ತಿರುಗಾಡುತ್ತಿರುವಾಗ ಒಬ್ಬ ಮನುಷ್ಯನು ಅವನನ್ನು ಕಂಡು - 16 ಏನು ಹುಡುಕುತ್ತಿ ಎಂದು ವಿಚಾರಿಸಲು ಅವನು - ನನ್ನ ಅಣ್ಣಂದಿರನ್ನು ಹುಡುಕುತ್ತಾ ಇದ್ದೇನೆ; ಅವರು ಆಡುಕುರಿಗಳನ್ನು ಎಲ್ಲಿ ಮೇಯಿಸುತ್ತಾರೆ? ದಯವಿಟ್ಟು ಹೇಳು ಅಂದನು. 17 ಅದಕ್ಕೆ ಆ ಮನುಷ್ಯನು - ಅವರು ಇಲ್ಲಿಂದ ಹೊರಟುಹೋದರು; ದೋತಾನಿಗೆ ಹೋಗೋಣ ಎಂಬದಾಗಿ ಮಾತಾಡುವದನ್ನು ಕೇಳಿದೆನು ಎಂದು ಹೇಳಲು ಯೋಸೇಫನು ಅವರನ್ನು ಹುಡುಕುತ್ತಾ ಹೋಗಿ ದೋತಾನಿನಲ್ಲಿ ಅವರನ್ನು ಕಂಡನು. 18 ಅವರು ಅವನನ್ನು ದೂರದಿಂದ ನೋಡಿ ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲುವದಕ್ಕೆ ಒಳಸಂಚುಮಾಡಿಕೊಂಡರು. 19 ಅವರು ಒಬ್ಬರಿಗೊಬ್ಬರು - ಅಗೋ, ಆ ಕನಸಿನವನು ಬರುತ್ತಾನೆ; 20 ನಾವು ಅವನನ್ನು ಕೊಂದು ಈ ಗುಂಡಿಗಳಲ್ಲಿ ಒಂದರೊಳಗೆ ಹಾಕಿ ದುಷ್ಟಮೃಗವು ಅವನನ್ನು ತಿಂದುಬಿಟ್ಟಿತೆಂದು ಹೇಳೋಣ ಬನ್ನಿ; ಆಗ ಅವನ ಕನಸುಗಳು ಏನಾಗುವವೋ ನೋಡೋಣ ಎಂದು ಮಾತಾಡಿಕೊಂಡರು. 21 ರೂಬೇನನು ಈ ಮಾತನ್ನು ಕೇಳಿ - ನಾವು ಅವನ ಪ್ರಾಣವನ್ನು ತೆಗೆಯಬಾರದು ಎಂದು ಹೇಳಿ ಅವನನ್ನು ಅವರ ಕೈಗೆ ತಪ್ಪಿಸಿದನು. 22 ರೂಬೇನನು ಅವನನ್ನು ಅವರ ಕೈಯಿಂದ ತಪ್ಪಿಸಿ ತಂದೆಗೆ ತಿರಿಗಿ ಒಪ್ಪಿಸಬೇಕೆಂದು ಅವರಿಗೆ - ಪ್ರಾಣಹತ್ಯ ಮಾಡಬೇಡಿರಿ; ಅವನನ್ನು ಕಾಡಿನಲ್ಲಿರುವ ಈ ಗುಂಡಿಯೊಳಗೆ ಹಾಕಬಹುದು; ಅವನ ಮೇಲೆ ಕೈಹಾಕಬೇಡಿರಿ ಎಂದು ಹೇಳಿದನು. 23 ಯೋಸೇಫನು ತನ್ನ ಅಣ್ಣಂದಿರ ಹತ್ತಿರಕ್ಕೆ ಬಂದಾಗ ಅವರು ಅವನ ಮೇಲಿದ್ದ ನಿಲುವಂಗಿಯನ್ನು ತೆಗೆದುಬಿಟ್ಟು 24 ಅವನನ್ನು ಹಿಡಿದು ಆ ಗುಂಡಿಯೊಳಗೆ ಹಾಕಿದರು. ಆ ಗುಂಡಿ ನೀರಿಲ್ಲದೆ ಬರಿದಾಗಿತ್ತು. 25 ಆಮೇಲೆ ಅವರು ಊಟಕ್ಕೆ ಕೂತುಕೊಂಡರು. ಅಷ್ಟರಲ್ಲಿ ಅವರು ಕಣ್ಣೆತ್ತಿ ನೋಡಿ ಇಷ್ಮಾಯೇಲ್ಯರ ಗುಂಪು ಒಂಟೆಗಳ ಮೇಲೆ ಹಾಲುಮಡ್ಡಿ, ಸುಗಂಧತೈಲ, ರಕ್ತಬೋಳ ಇವುಗಳನ್ನು ಹೇರಿಕೊಂಡು ಗಿಲ್ಯಾದಿನಿಂದ ಐಗುಪ್ತದೇಶಕ್ಕೆ ಪ್ರಯಾಣಮಾಡುತ್ತಾ ಬರುವದನ್ನು ಕಂಡರು. 26 ಯೆಹೂದನು ತನ್ನ ಅಣ್ಣತಮ್ಮಂದಿರಿಗೆ - ನಾವು ನಮ್ಮ ತಮ್ಮನನ್ನು ಕೊಂದು ಆ ಕೊಲೆಯನ್ನು ಮರೆಮಾಡಿದರೆ ಪ್ರಯೋಜನವೇನು? 27 ಅವನನ್ನು ಆ ಇಷ್ಮಾಯೇಲ್ಯರಿಗೆ ಮಾರಿಬಿಡೋಣ ಬನ್ನಿ; ನಾವು ಅವನ ಮೇಲೆ ಕೈಹಾಕಬಾರದು; ಅವನು ನಮ್ಮ ಒಡಹುಟ್ಟಿದ ತಮ್ಮನಲ್ಲವೇ ಎಂದು ಹೇಳಿದನು. ಆ ಮಾತಿಗೆ ಅವನ ಅಣ್ಣಂದಿರು ಒಪ್ಪಿದರು. 28 (ಅಷ್ಟರಲ್ಲಿ ವಿುದ್ಯಾನ್ಯರಾದ ವರ್ತಕರು ಹಾದುಹೋಗುತ್ತಿದ್ದರು.) ಅವರು ಯೋಸೇಫನನ್ನು ಗುಂಡಿಯೊಳಗಿಂದ ಎತ್ತಿ ಆ ಇಷ್ಮಾಯೇಲ್ಯರಿಗೆ ಇಪ್ಪತ್ತು ರೂಪಾಯಿಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಐಗುಪ್ತದೇಶಕ್ಕೆ ತೆಗೆದುಕೊಂಡು ಹೋದರು. 29 ರೂಬೇನನು ತಿರಿಗಿ ಆ ಗುಂಡಿಯ ಹತ್ತಿರಕ್ಕೆ ಬಂದು ಅದರಲ್ಲಿ ಯೋಸೇಫನಿಲ್ಲದ್ದನ್ನು ಕಂಡು 30 ತನ್ನ ಬಟ್ಟೆಗಳನ್ನು ಹರಿದುಕೊಂಡು ತನ್ನ ತಮ್ಮಂದಿರ ಬಳಿಗೆ ಬಂದು - ಆ ಹುಡುಗನು ಇಲ್ಲವಲ್ಲಾ; ಅಯ್ಯೋ, ನಾನೆಲ್ಲಿಗೆ ಹೋಗಲಿ ಎಂದು ಗೋಳಾಡಿದನು. 31 ಆಮೇಲೆ ಅವರು ಒಂದು ಹೋತವನ್ನು ಕೊಯಿದು ಅದರ ರಕ್ತದಲ್ಲಿ ಯೋಸೇಫನ ಅಂಗಿಯನ್ನು ಅದ್ದಿ 32 ಆ ನಿಲುವಂಗಿಯನ್ನು ತಮ್ಮ ತಂದೆಗೆ ಕಳುಹಿಸಿದರು; ತಂದವರು - ಇದು ನಮಗೆ ಸಿಕ್ಕಿತು; ಇದು ನಿನ್ನ ಮಗನ ಅಂಗಿ ಹೌದೋ ಅಲ್ಲವೋ ನೋಡು ಎಂದು ಅವನಿಗೆ ಹೇಳಲು 33 ಅವನು ಅದರ ಗುರುತನ್ನು ಹಿಡಿದು - ಈ ಅಂಗಿ ನನ್ನ ಮಗನದೇ ಹೌದು; ದುಷ್ಟಮೃಗವು ಅವನನ್ನು ಕೊಂದು ತಿಂದಿರಬೇಕು; ಯೋಸೇಫನು ಸಂದೇಹವಿಲ್ಲದೆ ಸೀಳಿ ಹಾಕಲ್ಪಟ್ಟಿರಬೇಕು ಎಂದು ಹೇಳಿ 34 ತನ್ನ ಬಟ್ಟೆಗಳನ್ನು ಹರಿದುಕೊಂಡು ನಡುವಿನ ಮೇಲೆ ಗೋಣೀತಟ್ಟು ಸುತ್ತಿಕೊಂಡು ತನ್ನ ಮಗನಿಗಾಗಿ ಬಹುದಿನಗಳವರೆಗೂ ಹಂಬಲಿಸುತ್ತಿದ್ದನು. 35 ಅವನ ಗಂಡುಮಕ್ಕಳೂ ಹೆಣ್ಣು ಮಕ್ಕಳೂ ಎಲ್ಲರೂ ದುಃಖಶಮನ ಮಾಡುವದಕ್ಕೆ ಪ್ರಯತ್ನಿಸಿದಾಗ್ಯೂ ಅವನು ಶಾಂತಿಯನ್ನು ಹೊಂದಲೊಲ್ಲದೆ - ನಾನು ಹೀಗೇ ಹಂಬಲಿಸುತ್ತಾ ನನ್ನ ಮಗನಿರುವ ಪಾತಾಳವನ್ನು ಸೇರುವೆನು ಅಂದನು. ಹೀಗೆ ತಂದೆಯು ಮಗನಿಗೋಸ್ಕರ ಅಳುತ್ತಿದ್ದನು. 36 ವಿುದ್ಯಾನ್ಯರು ಯೋಸೇಫನನ್ನು ಐಗುಪ್ತದೇಶಕ್ಕೆ ತೆಗೆದುಕೊಂಡು ಹೋಗಿ ಫರೋಹನ ಬಳಿಯಲ್ಲಿದ್ದ ದೊಡ್ಡ ಉದ್ಯೋಗಸ್ಥನಾದ ಪೋಟೀಫರನಿಗೆ ಮಾರಿದರು; ಇವನು ಮೈಗಾವಲಿನವರ ದಳವಾಯಿ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India