Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 8 - ಕನ್ನಡ ಸತ್ಯವೇದವು J.V. (BSI)


ದೇವಸ್ಥಾನದಲ್ಲಿನ ದೀಪಗಳ ವಿಷಯ

1 ಯೆಹೋವನು ಮೋಶೆಗೆ -

2 ಆರೋನನು ದೇವಸ್ಥಾನದ ದೀಪಗಳನ್ನು ಕ್ರಮಪಡಿಸುವಾಗ ಆ ಏಳು ದೀಪಗಳು ದೀಪಸ್ತಂಭದ ಎದುರಾಗಿರುವ ಸ್ಥಳಕ್ಕೆ ಬೆಳಕುಕೊಡುವಂತೆ ಅವುಗಳನ್ನು ಇಡಬೇಕೆಂದು ಅವನಿಗೆ ಆಜ್ಞಾಪಿಸು ಎಂದು ಹೇಳಿದನು.

3 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು; ದೀಪಸ್ತಂಭದ ಎದುರಿನ ಪ್ರದೇಶಕ್ಕೆ ಬೆಳಕುಬೀಳುವಂತೆ ಆ ದೀಪಗಳನ್ನು ಕ್ರಮವಾಗಿ ಇಟ್ಟನು.

4 ಆ ದೀಪಸ್ತಂಭವು ಅದರ ಬುಡವೂ ಪುಷ್ಪಾಲಂಕಾರಗಳೂ ಚಿನ್ನದ ನಕಾಸಿ ಕೆಲಸದಿಂದ ಮಾಡಲ್ಪಟ್ಟಿತ್ತು. ಯೆಹೋವನು ತೋರಿಸಿದ ಮಾದರಿಯಂತೆ ಮೋಶೆ ಅದನ್ನು ಮಾಡಿಸಿದ್ದನು.


ಲೇವಿಯರನ್ನು ಶುದ್ಧೀಕರಿಸಿ ಉದ್ಯೋಗಕ್ಕೆ ಸೇರಿಸಿದ್ದು

5 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನಂದರೆ -

6 ನೀನು ಇಸ್ರಾಯೇಲ್ಯರಿಂದ ಲೇವಿಯರನ್ನು ಪ್ರತ್ಯೇಕಿಸಿ ಶುದ್ಧೀಕರಿಸಬೇಕು.

7 ಅವರನ್ನು ಶುದ್ಧೀಕರಿಸಬೇಕಾದ ಕ್ರಮ ಹೇಗಂದರೆ - ನೀನು ಅವರ ಮೇಲೆ ದೋಷಪರಿಹಾರಕಜಲವನ್ನು ಚಿವಿುಕಿಸಬೇಕು; ಅವರು ಸರ್ವಾಂಗಕ್ಷೌರಮಾಡಿಸಿಕೊಂಡು ತಮ್ಮ ಬಟ್ಟೆಗಳನ್ನು ಒಗೆದುಕೊಂಡು ತಮ್ಮನ್ನು ಶುದ್ಧಮಾಡಿಕೊಳ್ಳಬೇಕು.

8 ತರುವಾಯ ಅವರು [ಸರ್ವಾಂಗಹೋಮಕ್ಕಾಗಿ] ಒಂದು ಹೋರಿಯನ್ನೂ ಅದರೊಡನೆ ಸಮರ್ಪಿಸಬೇಕಾದ ಧಾನ್ಯನೈವೇದ್ಯ ಅಂದರೆ ಎಣ್ಣೆಬೆರಸಿದ ಗೋದಿಯ ಹಿಟ್ಟನ್ನೂ ದೋಷಪರಿಹಾರಕ ಯಜ್ಞಕ್ಕಾಗಿ ಮತ್ತೊಂದು ಹೋರಿಯನ್ನೂ ತೆಗೆದುಕೊಳ್ಳಬೇಕು.

9 ಆಗ ನೀನು ಅವರನ್ನು ದೇವದರ್ಶನದ ಗುಡಾರದ ಮುಂದೆ ಕರಕೊಂಡು ಬಂದು ಇಸ್ರಾಯೇಲ್ಯರ ಸಮೂಹವನ್ನೆಲ್ಲಾ ಕೂಡ ಕರಿಸಿ

10 ಲೇವಿಯರನ್ನು ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಿದಾಗ ಇಸ್ರಾಯೇಲ್ಯರು ಅವರ ಮೇಲೆ ತಮ್ಮ ಕೈಗಳನ್ನು ಇಡಬೇಕು.

11 ಲೇವಿಯರು ಯೆಹೋವನ ಪರಿಚರ್ಯವನ್ನು ಮಾಡುವವರಾಗುವಂತೆ ಆರೋನನು ಇಸ್ರಾಯೇಲ್ಯರ ನಿವಿುತ್ತ ಅವರನ್ನು ಯೆಹೋವನ ಸನ್ನಿಧಿಯಲ್ಲಿ ನೈವೇದ್ಯದೋಪಾದಿಯಲ್ಲಿ ಸಮರ್ಪಿಸಬೇಕು.

12 ಲೇವಿಯರು ಆ ಹೋರಿಗಳ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ ನೀನು ಯೆಹೋವನಿಗೆ ದೋಷಪರಿಹಾರಕಯಜ್ಞವಾಗಿ ಒಂದು ಹೋರಿಯನ್ನೂ ಸರ್ವಾಂಗಹೋಮವಾಗಿ ಮತ್ತೊಂದು ಹೋರಿಯನ್ನೂ ಸಮರ್ಪಿಸಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು.

13 ನೀನು ಆರೋನನ ಮತ್ತು ಅವನ ಮಕ್ಕಳ ಮುಂದೆ ಲೇವಿಯರನ್ನು ನಿಲ್ಲಿಸಿ ಅವರನ್ನು ನೈವೇದ್ಯದಂತೆ ಯೆಹೋವನಿಗೆ ಸಮರ್ಪಿಸಬೇಕು.

14 ಹೀಗೆ ನೀನು ಲೇವಿಯರನ್ನು ಇಸ್ರಾಯೇಲ್ಯರಿಂದ ಪ್ರತ್ಯೇಕಿಸಿದಾಗ ಅವರು ನನ್ನ ಸೊತ್ತಾಗುವರು.

15 ಅದು ಮೊದಲುಗೊಂಡು ಅವರು ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಬೇಕು. ನೀನು ಅವರನ್ನು ಶುದ್ಧೀಕರಿಸಿ ನೈವೇದ್ಯದೋಪಾದಿಯಲ್ಲಿ ಸಮರ್ಪಿಸಬೇಕು.

16 ಇಸ್ರಾಯೇಲ್ಯರಲ್ಲಿ ಇವರು ನನಗೆ ಸಂಪೂರ್ಣವಾಗಿ ವಶವಾದವರು; ಪ್ರಥಮಗರ್ಭಕ್ಕೆ ಬದಲಾಗಿ ಅಂದರೆ ಇಸ್ರಾಯೇಲ್ಯರ ಚೊಚ್ಚಲುಮಕ್ಕಳಿಗೆ ಬದಲಾಗಿ ನಾನು ಇವರನ್ನೇ ನನ್ನ ಸ್ವಂತಕ್ಕಾಗಿ ತೆಗೆದುಕೊಂಡಿದ್ದೇನೆ.

17 ಇಸ್ರಾಯೇಲ್ಯರಲ್ಲಿರುವ ಚೊಚ್ಚಲಾದ ಮನುಷ್ಯರೂ ಪಶುಗಳೂ ಎಲ್ಲಾ ನನ್ನ ಸೊತ್ತಷ್ಟೆ; ಐಗುಪ್ತದೇಶದಲ್ಲಿದ್ದ ಚೊಚ್ಚಲಾದದ್ದನ್ನೆಲ್ಲಾ ನಾನು ಸಂಹರಿಸಿದಾಗ ಇಸ್ರಾಯೇಲ್ಯರ ಚೊಚ್ಚಲಾದದ್ದನ್ನು ನನ್ನ ಸ್ವಂತಕ್ಕಾಗಿ ಪ್ರತಿಷ್ಠಿಸಿಕೊಂಡೆನಲ್ಲಾ.

18 ನಾನು ಇಸ್ರಾಯೇಲ್ಯರ ಚೊಚ್ಚಲು ಮಕ್ಕಳಿಗೆ ಬದಲಾಗಿ ಲೇವಿಯರನ್ನು ತೆಗೆದುಕೊಂಡಿದ್ದೇನೆ.

19 ಇಸ್ರಾಯೇಲ್ಯರಿಗೋಸ್ಕರ ದೇವದರ್ಶನದ ಗುಡಾರದ ಪರಿಚರ್ಯವನ್ನು ನಡಿಸುವದಕ್ಕೂ ದೋಷಪರಿಹಾರವನ್ನು ಮಾಡುವದಕ್ಕೂ ಲೇವಿಯರನ್ನು ಆರೋನನ ಮತ್ತು ಅವನ ಮಕ್ಕಳ ವಶಕ್ಕೆ ಕೊಟ್ಟಿದ್ದೇನೆ. ಹೀಗಿರುವದರಿಂದ ಇಸ್ರಾಯೇಲ್ಯರು ದೇವಸ್ಥಾನದ ಹತ್ತಿರಕ್ಕೆ ಬಂದಾಗ ಅವರಿಗೆ ಅಪಾಯವು ಸಂಭವಿಸುವದಿಲ್ಲ.

20 ಯೆಹೋವನು ಲೇವಿಯರ ವಿಷಯದಲ್ಲಿ ಆಜ್ಞಾಪಿಸಿದಂತೆಯೇ ಮೋಶೆ ಆರೋನರೂ ಇಸ್ರಾಯೇಲ್ಯರ ಸಮೂಹದವರೆಲ್ಲರೂ ಮಾಡಿದರು.

21 ಲೇವಿಯರು ತಮ್ಮನ್ನು ಶುದ್ಧಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡರು; ಆರೋನನು ಅವರನ್ನು ನೈವೇದ್ಯದಂತೆ ಯೆಹೋವನ ಸನ್ನಿಧಿಯಲ್ಲಿ ಸಮರ್ಪಿಸಿ ಅವರನ್ನು ಶುದ್ಧೀಕರಿಸುವದಕ್ಕೆ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಿದನು.

22 ಆಮೇಲೆ ಲೇವಿಯರು ತಮಗೆ ನೇಮಕವಾದ ಕೆಲಸವನ್ನು ದೇವದರ್ಶನದ ಗುಡಾರದಲ್ಲಿ ಆರೋನನ ಮತ್ತು ಅವನ ಮಕ್ಕಳ ಕೈಕೆಳಗೆ ನಡಿಸಲಾರಂಭಿಸಿದರು. ಅವರ ವಿಷಯದಲ್ಲಿ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಅವರು ಮಾಡಿದರು.

23 ಅದಲ್ಲದೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನಂದರೆ -

24 ಲೇವಿಯರು ಅನುಸರಿಸಬೇಕಾದ ಪದ್ಧತಿ ಏನಂದರೆ - ಇಪ್ಪತ್ತೈದು ವರುಷ ಮೊದಲುಗೊಂಡು ಹೆಚ್ಚಿನ ವಯಸ್ಸಿನವರು ದೇವದರ್ಶನದ ಗುಡಾರದ ಸೇವಕಮಂಡಲಿಗೆ ಸೇರಬೇಕು.

25 ಅವರು ಐವತ್ತು ವರುಷದವರಾದನಂತರ ಆ ಮಂಡಲಿಯನ್ನು ಬಿಟ್ಟು ದೇವಸ್ಥಾನದ ಪರಿಚರ್ಯದಿಂದ ಬಿಡುಗಡೆಯಾಗುವರು.

26 ಅಂಥವರು ತಮ್ಮ ಸ್ವಕುಲದವರ ಜೊತೆಯಲ್ಲಿ ದೇವದರ್ಶನದ ಗುಡಾರವನ್ನು ಕಾಯುವ ಸೇವೆ ಮಾಡಬಹುದೇ ಹೊರತು ಅವರಿಂದ ಬೇರೆ ಪರಿಚರ್ಯವನ್ನು ಮಾಡಿಸಕೂಡದು. ಲೇವಿಯರು ಕಾಪಾಡಬೇಕಾದವುಗಳ ವಿಷಯದಲ್ಲಿ ನೀನು ಹೀಗೆ ಅವರಿಗೆ ನೇವಿುಸಬೇಕು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು