ಅರಣ್ಯಕಾಂಡ 6 - ಕನ್ನಡ ಸತ್ಯವೇದವು J.V. (BSI)ನಾಜೀರವ್ರತ 1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 2 ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - ಯಾವ ಪುರುಷನಾಗಲಿ ಸ್ತ್ರೀಯಾಗಲಿ ನಾಜೀರರ ಹರಕೆಯನ್ನು ಅಂದರೆ ಯೆಹೋವನಿಗೆ ತನ್ನನ್ನು ಪ್ರತಿಷ್ಠಿಸಿಕೊಳ್ಳುವ 3 ವಿಶೇಷವಾದ ಹರಕೆಯನ್ನು ಮಾಡಿದಾಗ ದ್ರಾಕ್ಷಾರಸವನ್ನೂ ಮದ್ಯವನ್ನೂ ಮುಟ್ಟಬಾರದು; ದ್ರಾಕ್ಷಾರಸದ ಹುಳಿಯನ್ನಾಗಲಿ ಬೇರೆ ಮದ್ಯದ ಹುಳಿಯನ್ನಾಗಲಿ ಕುಡಿಯಬಾರದು; ದ್ರಾಕ್ಷೇ ಹಣ್ಣಿನಿಂದ ಮಾಡಿದ ಯಾವ ಪಾನವನ್ನೂ ಕುಡಿಯಬಾರದು; ಹಸಿದಾಗಲಿ ಒಣಗಿದ್ದಾಗಲಿ ದ್ರಾಕ್ಷೇ ಹಣ್ಣನ್ನು ತಿನ್ನಬಾರದು; 4 ಅವನು ಹರಕೆಮಾಡಿ ಪ್ರತಿಷ್ಠಿಸಿಕೊಂಡ ದಿನಗಳೆಲ್ಲಾ ದ್ರಾಕ್ಷಾಲತೆಯಿಂದ ಉತ್ಪನ್ನವಾದ ಹೀಚನ್ನಾದರೂ ತೃಣವನ್ನಾದರೂ ತಿನ್ನಬಾರದು. 5 ಅವನು ತನ್ನ ಹರಕೆಯ ದಿನಗಳಲ್ಲೆಲ್ಲಾ ಕ್ಷೌರಮಾಡಿಸಿಕೊಳ್ಳಬಾರದು. ಅವನು ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳು ಮುಗಿಯುವ ತನಕ ತಾನು ಮೀಸಲಾಗಿದ್ದು ತನ್ನ ತಲೆಯ ಕೂದಲನ್ನು ಕತ್ತರಿಸದೆ ಬಿಡಬೇಕು. 6 ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಂಡ ದಿನಗಳೆಲ್ಲಾ ಯಾವ ಶವವನ್ನೂ ಮುಟ್ಟಬಾರದು. 7 ತಾಯಿ, ತಂದೆ, ಅಣ್ಣ, ತಮ್ಮ, ಅಕ್ಕ, ತಂಗಿ ಇವರಲ್ಲಿ ಯಾರು ಸತ್ತರೂ ಅವರ ನಿವಿುತ್ತ ಅವನು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು; ತಾನು ದೇವರಿಗೆ ಮೀಸಲಾಗಿ ಬಿಟ್ಟ ಕೂದಲು ತಲೆಯ ಮೇಲೆ ಇದೆಯಲ್ಲಾ. 8 ತಾನು ಪ್ರತಿಷ್ಠಿಸಿಕೊಂಡಿರುವ ದಿನಗಳಲ್ಲೆಲ್ಲಾ ಅವನು ಯೆಹೋವನಿಗೆ ಮೀಸಲಾಗಿಯೇ ಇರಬೇಕು. 9 ಯಾವನಾದರೂ ಅಕಸ್ಮಾತ್ತಾಗಿ ಅವನ ಬಳಿಯಲ್ಲೇ ಸತ್ತದರಿಂದ ತಾನು ಪ್ರತಿಷ್ಠಿಸಿಕೊಂಡ ತಲೆಕೂದಲು ಅಪವಿತ್ರವಾದರೆ ಏಳನೆಯ ದಿನದಲ್ಲಿ ಅಂದರೆ ಶುದ್ಧನಾಗುವ ದಿನದಲ್ಲಿ ತಲೆಯನ್ನು ಕ್ಷೌರಮಾಡಿಸಿಕೊಳ್ಳಬೇಕು. 10 ಎಂಟನೆಯ ದಿನದಲ್ಲಿ ಅವನು ಎರಡು ಬೆಳವಕ್ಕಿಗಳನ್ನಾಗಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ದೇವದರ್ಶನದ ಗುಡಾರದ ಬಾಗಲಿಗೆ ಯಾಜಕನ ಬಳಿಗೆ ತರಬೇಕು. 11 ಯಾಜಕನು ದೋಷಪರಿಹಾರಯಜ್ಞವಾಗಿ ಒಂದನ್ನೂ ಸರ್ವಾಂಗಹೋಮವಾಗಿ ಇನ್ನೊಂದನ್ನೂ ಸಮರ್ಪಿಸಿ ಶವಸೋಂಕಿದವನಿಗೋಸ್ಕರ ದೋಷಪರಿಹಾರಮಾಡಿ ಅವನ ತಲೆಯ ಕೂದಲನ್ನು ಆ ದಿನದಿಂದ ಪವಿತ್ರವೆಂದು ನಿರ್ಣಯಿಸಬೇಕು. 12 ಅವನು ಎಷ್ಟು ದಿನಗಳವರೆಗೆ ತನನ್ನು ಪ್ರತಿಷ್ಠಿಸಿಕೊಂಡಿದ್ದನೋ ಅಷ್ಟು ದಿನಗಳವರೆಗೆ ಹೊಸದಾಗಿ ತನ್ನನ್ನು ಯೆಹೋವನಿಗೆ ಪ್ರತಿಷ್ಠಿಸಿಕೊಳ್ಳಬೇಕು; ಮತ್ತು ಪ್ರಾಯಶ್ಚಿತ್ತಯಜ್ಞವಾಗಿ ಒಂದು ವರುಷದ ಕುರಿಯನ್ನು ಸಮರ್ಪಿಸಬೇಕು. ಮೊದಲು ಮಾಡಿದ್ದ ಹರಕೆಗೆ ವಿಘ್ನಪ್ರಾಪ್ತವಾದದರಿಂದ ಕಳೆದುಹೋದ ದಿನಗಳು ವ್ಯರ್ಥವಾದವು. 13 ನಾಜೀರನು ತನ್ನ ವ್ರತದಿನಗಳು ಮುಗಿದಾಗ ನಡೆಯಬೇಕಾದ ಕ್ರಮ. ಅವನು ದೇವದರ್ಶನದ ಗುಡಾರದ ಬಾಗಲಿಗೆ ಬಂದು ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆಗಳು ಯಾವವಂದರೆ - 14 ಸರ್ವಾಂಗಹೋಮಕ್ಕಾಗಿ ಪೂರ್ಣಾಂಗವಾದ ಒಂದು ವರುಷದ ಟಗರು, ದೋಷಪರಿಹಾರಕಯಜ್ಞಕ್ಕಾಗಿ ಪೂರ್ಣಾಂಗವಾದ ಒಂದು ವರುಷದ ಕುರಿ, ಸಮಾಧಾನಯಜ್ಞಕ್ಕಾಗಿ ಪೂರ್ಣಾಂಗವಾದ ಟಗರು ಇವೇ. 15 ಅದಲ್ಲದೆ ಒಂದು ಪುಟ್ಟಿ ತುಂಬಾ ಎಣ್ಣೆ ಬೆರಸಿದ ಗೋದಿಹಿಟ್ಟಿನ ಹುಳಿಯಿಲ್ಲದ ರೊಟ್ಟಿಗಳು, ಎಣ್ಣೆಹಾಕಿದ ಹುಳಿಯಿಲ್ಲದ ಕಡುಬುಗಳು ಇವುಗಳನ್ನೂ ಮೇಲೆ ಕಂಡ ಯಜ್ಞಗಳೊಡನೆ ಕೊಡಬೇಕಾದ ಧಾನ್ಯದ್ರವ್ಯಪಾನದ್ರವ್ಯಗಳನ್ನೂ ಸಮರ್ಪಿಸಬೇಕು. 16 ಯಾಜಕನು ಇವುಗಳನ್ನು ಯೆಹೋವನ ಸನ್ನಿಧಿಗೆ ತಂದು ನಾಜೀರನ ದೋಷಪರಿಹಾರಕಯಜ್ಞವನ್ನೂ ಸರ್ವಾಂಗಹೋಮವನ್ನೂ ಸಮರ್ಪಿಸಿದನಂತರ 17 ಆ ಟಗರನ್ನೂ ಪುಟ್ಟಿ ತುಂಬಾ ಹುಳಿಯಿಲ್ಲದ ರೊಟ್ಟಿಗಳನ್ನೂ ಯೆಹೋವನಿಗೆ ಸಮಾಧಾನ ಯಜ್ಞವಾಗಿ ಸಮರ್ಪಿಸಬೇಕು. ಅವನು ತಂದ ಧಾನ್ಯದ್ರವ್ಯಪಾನದ್ರವ್ಯಗಳನ್ನೂ ನೈವೇದ್ಯಮಾಡಬೇಕು. 18 ಆಗ ನಾಜೀರನು ತನ್ನ ದೀಕ್ಷೆಯನ್ನು ಸೂಚಿಸುವ ತಲೆಯಕೂದಲನ್ನು ದೇವದರ್ಶನದ ಗುಡಾರದ ಬಾಗಲಿನ ಬಳಿಯಲ್ಲಿ ಕ್ಷೌರಮಾಡಿಸಿಕೊಂಡು ಆ ಕೂದಲನ್ನು ಸಮಾಧಾನಯಜ್ಞದ್ರವ್ಯಗಳ ಕೆಳಗಿರುವ ಬೆಂಕಿಯಲ್ಲಿ ಹಾಕಬೇಕು. 19 ತರುವಾಯ ಯಾಜಕನು ಆ ಟಗರಿನ ಬೆಂದ ಮುಂದೊಡೆಯನ್ನೂ ಪುಟ್ಟಿಯಲ್ಲಿನ ಒಂದು ಹುಳಿಯಿಲ್ಲದ ರೊಟ್ಟಿಯನ್ನೂ ಒಂದು ಹುಳಿಯಿಲ್ಲದ ಕಡುಬನ್ನೂ ತೆಗೆದುಕೊಂಡು ನಾಜೀರನು ಕ್ಷೌರಮಾಡಿಸಿಕೊಂಡನಂತರ ಅವನ ಕೈಯಲ್ಲಿ ಇಟ್ಟು ನೈವೇದ್ಯವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸಬೇಕು. 20 ಇದು ನೈವೇದ್ಯವಾಗಿ ನಿವಾಳಿಸುವ ಎದೆಯ ಭಾಗದಂತೆಯೂ ಯಾಜಕರಿಗೋಸ್ಕರ ಪ್ರತ್ಯೇಕಿಸುವ ತೊಡೆಯಂತೆಯೂ ಯಾಜಕನಿಗೆ ಸಲ್ಲಬೇಕು. ಅನಂತರ ಆ ನಾಜೀರನು ದ್ರಾಕ್ಷಾರಸವನ್ನು ಪಾನಮಾಡಬಹುದು. 21 ಇದೇ ನಾಜೀರರ ವ್ರತವಿಧಿ. ಅವರು ತಮ್ಮ ವ್ರತಪೂರ್ತಿಗಾಗಿ ಯೆಹೋವನಿಗೆ ಸಮರ್ಪಿಸಬೇಕಾದ ಕಾಣಿಕೆ ಇದೇ. ಅವರು ತಮ್ಮ ಶಕ್ತ್ಯನುಸಾರ ಹೆಚ್ಚಾಗಿಯೂ ಕೊಡಬಹುದು; ಆದರೆ ತಾವು ಕೊಡುತ್ತೇವೆಂದು ಹರಕೆಮಾಡಿದಷ್ಟು ವ್ರತವಿಧಿಗನುಸಾರವಾಗಿ ಕೊಡಲೇಬೇಕು. ಯಾಜಕರು ಹೇಳಬೇಕಾದ ಆಶೀರ್ವಚನವು 22 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 23 ನೀನು ಆರೋನನಿಗೂ ಅವನ ಮಕ್ಕಳಿಗೂ ಹೀಗೆ ಆಜ್ಞಾಪಿಸು - ನೀವು ಇಸ್ರಾಯೇಲ್ಯರನ್ನು ಆಶೀರ್ವದಿಸುವಾಗ ಈ ಪ್ರಕಾರ ಅವರಿಗೆ ಹೇಳಬೇಕು - 24 ಯೆಹೋವನು ನಿಮ್ಮನ್ನು ಆಶೀರ್ವದಿಸಿ ಕಾಪಾಡಲಿ; 25 ಯೆಹೋವನು ಪ್ರಸನ್ನಮುಖದಿಂದ ನಿಮ್ಮನ್ನು ನೋಡಿ ನಿಮ್ಮ ಮೇಲೆ ದಯವಿಡಲಿ; 26 ಯೆಹೋವನು ನಿಮ್ಮ ಮೇಲೆ ಕೃಪಾಕಟಾಕ್ಷವಿಟ್ಟು ಶಾಂತಿಯನ್ನು ಅನುಗ್ರಹಿಸಲಿ ಎಂಬದೇ. 27 ಹೀಗೆ ಅವರು ಇಸ್ರಾಯೇಲ್ಯರ ಮೇಲೆ ನನ್ನ ಹೆಸರನ್ನು ಉಚ್ಚರಿಸಲಾಗಿ ನಾನು ಅವರನ್ನು ಆಶೀರ್ವದಿಸುವೆನು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India