ಅರಣ್ಯಕಾಂಡ 5 - ಕನ್ನಡ ಸತ್ಯವೇದವು J.V. (BSI)ನಾನಾ ನಿಯಮಗಳು ( 5—6 ) ಅಪರಿಶುದ್ಧರಾದವರನ್ನು ಪಾಳೆಯದಿಂದ ಹೊರಡಿಸಬೇಕೆಂಬುವ ವಿಧಿ 1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 2 ಎಲ್ಲಾ ಕುಷ್ಠರೋಗಿಗಳನ್ನೂ ಮೇಹಸ್ರಾವವುಳ್ಳವರನ್ನೂ ಹೆಣದ ಸೋಂಕಿನಿಂದ ಅಶುದ್ಧರಾದವರನ್ನೂ 3 ಪಾಳೆಯದಿಂದ ಹೊರಡಿಸಬೇಕೆಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸು. ಅಂಥವರು ಗಂಡಸರೇ ಆಗಲಿ ಹೆಂಗಸರೇ ಆಗಲಿ, ಅವರೆಲ್ಲರನ್ನೂ ಪಾಳೆಯದಿಂದ ಹೊರಡಿಸಬೇಕು. 4 ನಾನೇ ಅವರ ಪಾಳೆಯದಲ್ಲಿ ವಾಸವಾಗಿರುವದರಿಂದ ಅವರು ಅದನ್ನು ಅಪವಿತ್ರಮಾಡಬಾರದು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ಮಾಡಿದರು; ಅಂಥವರೆಲ್ಲರನ್ನೂ ಪಾಳೆಯದಿಂದ ಹೊರಡಿಸಿದರು. ಮೋಸಮಾಡಿ ಪಡೆದದ್ದನ್ನು ಪ್ರಾಯಶ್ಚಿತ್ತದೊಂದಿಗೆ ತಿರಿಗಿ ಕೊಡಬೇಕೆಂಬ ವಿಧಿ 5 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - 6 ಯಾವ ಪುರುಷನಾಗಲಿ ಸ್ತ್ರೀಯಾಗಲಿ ಮತ್ತೊಬ್ಬನನ್ನು ಮೋಸಗೊಳಿಸುವದರಿಂದ ಯೆಹೋವನಿಗೆ ದ್ರೋಹಮಾಡಿ ಅಪರಾಧಿಗಳಾದರೆ ಅಂಥವರು ತಮ್ಮ ಅಪರಾಧವನ್ನು ಅರಿಕೆಮಾಡಬೇಕು. 7 ಅದಲ್ಲದೆ ಅಪರಾಧ ಮಾಡಿದವನು ನಷ್ಟಪಟ್ಟವನಿಗೆ ಮೂಲದ್ರವ್ಯದ ಬೆಲೆಯೊಡನೆ ಐದನೆಯ ಭಾಗವನ್ನು ಹೆಚ್ಚಾಗಿ ಕೊಡಬೇಕು. 8 ದಂಡವನ್ನು ತೆಗೆದುಕೊಳ್ಳತಕ್ಕವನು [ತೀರಿಹೋಗಿ] ಬಾಧ್ಯನೂ ಇಲ್ಲದ ಪಕ್ಷಕ್ಕೆ ಆ ದ್ರವ್ಯವು ಯೆಹೋವನಿಗೆ ಸೇರಬೇಕು. ಅದು ಮತ್ತು ದೋಷಪರಿಹಾರಕ್ಕಾಗಿ ಸಮರ್ಪಿಸಲ್ಪಡುವ ಪ್ರಾಯಶ್ಚಿತ್ತಯಜ್ಞದ ಟಗರು ಈ ಎರಡೂ ಯಾಜಕನಿಗೆ ಆಗಬೇಕು. 9 ಇಸ್ರಾಯೇಲ್ಯರು ಪ್ರತ್ಯೇಕಿಸಿ ಯಾಜಕನಿಗೆ ಒಪ್ಪಿಸುವ ದೇವರ ವಸ್ತುಗಳೆಲ್ಲಾ ಯಾಜಕನವುಗಳಾಗಿಯೇ ಇರಬೇಕು. 10 ಒಬ್ಬನು ಯೆಹೋವನಿಗೆ ಮೀಸಲಾಗಿಟ್ಟದ್ದನ್ನು ಯಾವ ಯಾಜಕನಿಗೆ ತಂದು ಒಪ್ಪಿಸುತ್ತಾನೋ ಅದು ಅವನದಾಗಿಯೇ ಇರಬೇಕು. ಮುತ್ತೈದೆಯ ವಿಷಯದಲ್ಲಿ ವ್ಯಭಿಚಾರ ಸಂಶಯವನ್ನು ಪರಿಹರಿಸುವ ಕ್ರಮ 11 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - 12 ಮುತ್ತೈದೆಯು ಸನ್ಮಾರ್ಗವನ್ನು ಬಿಟ್ಟು ದುಷ್ಕಾರ್ಯಮಾಡುವಾಗ 13 ಕೈಗೆ ಸಿಕ್ಕದೆಯೂ ಸಾಕ್ಷಿಯಿಲ್ಲದೆಯೂ ರಹಸ್ಯವಾಗಿಯೇ ಪರಪುರುಷನೊಡನೆ ಸಂಗವಿುಸಿ ಗಂಡನಿಗೆ ದ್ರೋಹಿಯಾಗಿ ಅಶುದ್ಧಳಾದ ಸಂದರ್ಭದಲ್ಲೂ ಅವಳು ಹೀಗೆ ಮಾಡದೆ ಕೆಟ್ಟುಹೋಗದ ಸಂದರ್ಭದಲ್ಲೂ 14 ಕೆಟ್ಟು ಹೋದಳೆಂಬ ಸಂಶಯವು ಗಂಡನಲ್ಲಿ ಹೊಕ್ಕರೆ ಮಾಡಬೇಕಾದದ್ದೇನಂದರೆ - 15 ಆ ಪುರುಷನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ಕರಕೊಂಡು ಬರಬೇಕು. ಮತ್ತು ಅವಳ ಸಂಗತಿಯನ್ನು ವಿಚಾರಿಸುವದಕ್ಕಾಗಿ ಅವನು ಯಾಜಕನಿಗೆ ಮೂರು ಸೇರು ಜವೆಗೋದಿಯ ಹಿಟ್ಟನ್ನು ಕಾಣಿಕೆಯಾಗಿ ತಂದುಕೊಡಬೇಕು. ಅದು ವ್ಯಭಿಚಾರಸಂಶಯವನ್ನು ಸೂಚಿಸುವದಕ್ಕೂ ಪಾಪವನ್ನು ಹೊರಪಡಿಸುವದಕ್ಕೂ ಯೆಹೋವನಿಗೆ ನೈವೇದ್ಯವಾದ ಕಾಣಿಕೆಯಾದದರಿಂದ ಆ ಹಿಟ್ಟಿನ ಮೇಲೆ ಎಣ್ಣೆಯನ್ನು ಹೊಯ್ಯಲೂಬಾರದು, ಧೂಪವನ್ನು ಇಡಲೂಬಾರದು. 16 ಯಾಜಕನು ಅವಳನ್ನು ಕರೆದು ಯೆಹೋವನ ಎದುರಿನಲ್ಲಿ ನಿಲ್ಲಿಸಬೇಕು. 17 ಅವನು ಮಣ್ಣಿನ ಪಾತ್ರೆಯಲ್ಲಿ ಪರಿಶುದ್ಧಜಲವನ್ನು ತೆಗೆದುಕೊಂಡು ದೇವದರ್ಶನದ ಗುಡಾರದ ನೆಲದಿಂದ ಸ್ವಲ್ಪ ಧೂಳನ್ನು ಆ ನೀರಿನಲ್ಲಿ ಹಾಕಬೇಕು. 18 ಅವನು ಆ ಸ್ತ್ರೀಯನ್ನು ಯೆಹೋವನ ಮುಂದೆ ನಿಲ್ಲಿಸಿ ಅವಳ ತಲೆಯ ಕೂದಲನ್ನು ಕೆದರಿಸಿ ಹಾದರದ ಸಂಶಯವನ್ನು ಸೂಚಿಸುವ ಆ ನೈವೇದ್ಯದ ಹಿಟ್ಟನ್ನು ಅವಳ ಕೈಯಲ್ಲಿ ಇಟ್ಟು ಶಾಪವನ್ನುಂಟುಮಾಡುವ ವಿಷಕರವಾದ ಆ ನೀರನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು. 19 ಯಾಜಕನು ಅವಳಿಂದ ಶಪಥಪೂರ್ವಕವಾದ ಪ್ರಮಾಣವಾಕ್ಯವನ್ನು ನುಡಿಸುವವನಾಗಿ ಹೀಗನ್ನಬೇಕು - ನೀನು ಪರಪುರುಷನ ಸಂಗಮಾಡದೆ ಗಂಡನ ಅಧೀನದಲ್ಲಿದ್ದು ಪಾತಿವ್ರತ್ಯವನ್ನು ಬಿಡದೆ ದುಷ್ಕಾರ್ಯವನ್ನು ಮಾಡದೆ ಇರುವವಳಾದರೆ ಶಾಪವನ್ನುಂಟು ಮಾಡುವ ವಿಷಕರವಾದ ನೀರಿನಿಂದ ನಿನಗೆ ಹಾನಿಯಾಗಬಾರದು. 20 ಆದರೆ ನೀನು ಗಂಡನುಳ್ಳವಳಾಗಿ ಪರಪುರುಷನ ಬಳಿಗೆ ಹೋಗಿ ಕೆಟ್ಟಿದ್ದರೆ ನಿನ್ನ ಗಂಡನಲ್ಲದ ಬೇರೊಬ್ಬನು ನಿನ್ನನ್ನು ಸಂಗವಿುಸಿದ್ದರೆ 21 ಯೆಹೋವನು ನಿನ್ನ ತೊಡೆಗಳು ಕ್ಷೀಣವಾಗಿ ಹೋಗುವಂತೆಯೂ ಹೊಟ್ಟೆ ಉಬ್ಬುವಂತೆಯೂ ಮಾಡಿ ನಿನ್ನನ್ನು ನಿನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳನ್ನಾಗಿ ನೇವಿುಸಲಿ. 22 ಶಾಪವನ್ನುಂಟುಮಾಡುವ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆಯೂ ತೊಡೆಗಳು ಕ್ಷೀಣವಾಗಿ ಹೋಗುವಂತೆಯೂ ಮಾಡುವದು ಎಂದು ಹೇಳಬೇಕು. ಅದಕ್ಕೆ ಆ ಸ್ತ್ರೀಯು - ಆಮೆನ್, ಹಾಗೆಯೇ ಆಗಲಿ ಎಂದು ಹೇಳಬೇಕು. 23 ಆಗ ಯಾಜಕನು ಆ ಶಾಪವಚನಗಳನ್ನು ಪತ್ರದಲ್ಲಿ ಬರೆದು 24 ಆ ವಿಷಕರಜಲದಲ್ಲಿ ಸೇರುವಂತೆ ಒರಸಿ ಶಾಪವನ್ನುಂಟುಮಾಡುವ ಆ ನೀರನ್ನು ಆ ಸ್ತ್ರೀಗೆ ಕುಡಿಸಬೇಕು. ಶಾಪವನ್ನುಂಟುಮಾಡುವ ಆ ನೀರು ಅವಳೊಳಗೆ ಸೇರಿ ವಿಷಕರವಾಗುವದು. 25 ಆಗ ಯಾಜಕನು ಸ್ತ್ರೀಯ ಕೈಯಿಂದ ವ್ಯಭಿಚಾರ ಸಂಶಯ ವಿಷಯವಾದ ಆ ಹಿಟ್ಟನ್ನು ತೆಗೆದುಕೊಂಡು ಯೆಹೋವನ ಮುಂದೆ ನೈವೇದ್ಯವಾಗಿ ನಿವಾಳಿಸಿ ಯಜ್ಞವೇದಿಯ ಹತ್ತಿರ ತರಬೇಕು. 26 ಯಾಜಕನು ನೈವೇದ್ಯವಾದದ್ದನ್ನು ಸೂಚಿಸುವದಕ್ಕಾಗಿ ಆ ಹಿಟ್ಟಿನಲ್ಲಿ ಒಂದು ಹಿಡಿಯನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ತರುವಾಯ ಅವನು ಆ ನೀರನ್ನು ಸ್ತ್ರೀಗೆ ಕುಡಿಸಬೇಕು. 27 ಅವಳು ದೋಷಿಯಾಗಿ ಗಂಡನಿಗೆ ದ್ರೋಹಮಾಡಿದವಳಾಗಿದ್ದರೆ ಕುಡಿದನಂತರ ಶಾಪಕರವಾದ ಆ ನೀರು ಅವಳೊಳಗೆ ಸೇರಿ ವಿಷವಾಗುವದರಿಂದ ಅವಳ ಹೊಟ್ಟೆ ಉಬ್ಬುವದು, ಅವಳ ತೊಡೆಗಳು ಕ್ಷೀಣವಾಗಿ ಹೋಗುವವು; ಆ ಸ್ತ್ರೀಯು ತನ್ನ ಜನರೊಳಗೆ ಶಾಪಗ್ರಸ್ತಳಾಗುವಳು. 28 ಆದರೆ ಆ ಸ್ತ್ರೀಯು ದುಷ್ಟಳಾಗಿರದೆ ನಿರಪರಾಧಿಯಾದ ಪಕ್ಷಕ್ಕೆ ಯಾವ ಹಾನಿಯನ್ನೂ ಅನುಭವಿಸದೆ ಗರ್ಭವತಿಯಾಗುವಳು. 29 ಇದೇ ವ್ಯಭಿಚಾರಸಂಶಯವನ್ನು ಪರಿಹರಿಸುವ ವಿಧಿ. ಹೆಂಡತಿಯಾದವಳು ಗಂಡನ ಸ್ವಾಧೀನದಲ್ಲಿದ್ದರೂ 30 ಪಾತಿವ್ರತ್ಯವನ್ನು ಬಿಟ್ಟು ಜಾರತ್ವಮಾಡಿರುವಾಗಲೂ ಗಂಡನು ಹೆಂಡತಿಯ ವಿಷಯದಲ್ಲಿ ಸಂಶಯಪಡುವಾಗಲೂ ಅವನು ಅವಳನ್ನು ಯೆಹೋವನ ಮುಂದೆ ನಿಲ್ಲಿಸಬೇಕು; ಯಾಜಕನು ಅವಳ ವಿಷಯದಲ್ಲಿ ಈ ನಿಯಮದ ಪ್ರಕಾರ ಮಾಡಬೇಕು. 31 ಆ ಪುರುಷನು ನಿರಪರಾಧಿಯಾಗುವನು; ಆ ಸ್ತ್ರೀಯು ತನ್ನ ಪಾಪದ ಫಲವನ್ನು ಅನುಭವಿಸಬೇಕು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India