ಅರಣ್ಯಕಾಂಡ 4 - ಕನ್ನಡ ಸತ್ಯವೇದವು J.V. (BSI)ಲೇವಿಯ ಮೂರು ಮಂದಿ ಮಕ್ಕಳ ವಂಶದವರನ್ನು ಲೆಕ್ಕಿಸಿ ಅವರವರ ಕೆಲಸಗಳನ್ನು ನೇವಿುಸಿದ್ದು 1 ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ್ದೇನಂದರೆ - 2-3 ನೀನು ಲೇವಿಯರೊಳಗೆ ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರುಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಸೇವಕಮಂಡಲಿಗೆ ಸೇರತಕ್ಕವರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು. 4 ದೇವದರ್ಶನದ ಗುಡಾರದ ವಿಷಯದಲ್ಲಿ ಕೆಹಾತ್ಯರು ಮಾಡಬೇಕಾದ ಕೆಲಸ ಯಾವದಂದರೆ - ಅವರು ಮಹಾಪರಿಶುದ್ಧ ವಸ್ತುಗಳನ್ನು ನೋಡಿಕೊಳ್ಳಬೇಕು. 5 ದಂಡು ಹೊರಡುವಾಗ ಆರೋನನೂ ಅವನ ಮಕ್ಕಳೂ ಒಳಗೆ ಬಂದು [ಮಹಾಪವಿತ್ರಸ್ಥಾನವನ್ನು] ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಿಬಿಟ್ಟು 6 ಅದರ ಮೇಲೆ ಕಡಲುಹಂದಿಯ ತೊಗಲನ್ನೂ ನೀಲಿಬಟ್ಟೆಯನ್ನೂ ಹೊದಿಸಿ [ಮಂಜೂಷದ ಬಳೆಗಳಲ್ಲಿ] ಹೊರುವ ಕೋಲುಗಳನ್ನು ಸೇರಿಸಬೇಕು. 7 ಬಳಿಕ ಅವರು ಯೆಹೋವನ ಸಮ್ಮುಖದಲ್ಲಿರುವ ಮೇಜಿನ ಮೇಲೆ ನೀಲಿ ಬಟ್ಟೆಯನ್ನು ಹಾಸಿ ಅದರ ಮೇಲೆ ಮೇಜಿಗೆ ಸೇರಿದ ಹರಿವಾಣಗಳನ್ನೂ ಧೂಪಾರತಿಗಳನ್ನೂ ಹೂಜೆಗಳನ್ನೂ ಪಾನದ್ರವ್ಯಾರ್ಪಣೆಯ ಬಟ್ಟಲುಗಳನ್ನೂ ಇಡಬೇಕು. ಯಾವಾಗಲೂ ಇರಬೇಕಾದ ರೊಟ್ಟಿಗಳೂ ಅದರ ಮೇಲೆ ಇರಬೇಕು. 8 ಅವೆಲ್ಲವುಗಳ ಮೇಲೆ ಅವರು ರಕ್ತವರ್ಣದ ಬಟ್ಟೆಯನ್ನು ಹಾಸಿ ಕಡಲುಹಂದಿಯ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಸೇರಿಸಬೇಕು. 9 ಆಮೇಲೆ ಅವರು ದೀಪಸ್ತಂಭವನ್ನೂ ಅದಕ್ಕೆ ಸಂಬಂಧಪಟ್ಟ ಹಣತೆಗಳನ್ನೂ ಕತ್ತರಿಗಳನ್ನೂ ದೀಪದ ಕುಡಿತೆಗೆಯುವ ಬಟ್ಟಲುಗಳನ್ನೂ ಎಣ್ಣೆಯ ಪಾತ್ರೆಗಳನ್ನೂ ನೀಲಿಬಟ್ಟೆಯಿಂದ ಮುಚ್ಚಿಬಿಟ್ಟು 10 ಅದಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಕಡಲುಹಂದಿಯ ತೊಗಲನ್ನು ಹೊದಿಸಿ ಅವುಗಳನ್ನು ಅಡ್ಡದಂಡಕ್ಕೆ ಕಟ್ಟಬೇಕು. 11 ತರುವಾಯ ಅವರು ಬಂಗಾರದ ವೇದಿಯ ಮೇಲೆ ನೀಲಿಬಟ್ಟೆಯನ್ನು ಹಾಸಿ ಕಡಲು ಹಂದಿಯ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಹಾಕಬೇಕು. 12 ದೇವಸ್ಥಾನದ ಸೇವೋಪಕರಣಗಳನ್ನೆಲ್ಲಾ ನೀಲಿಬಟ್ಟೆಯಲ್ಲಿ ಇಟ್ಟು ಕಡಲುಹಂದಿಯ ತೊಗಲನ್ನು ಹೊದಿಸಿ ಅಡ್ಡದಂಡಕ್ಕೆ ಕಟ್ಟಬೇಕು. 13 ಆಗ ಅವರು ಯಜ್ಞವೇದಿಯ ಬೂದಿಯನ್ನು ತೆಗೆದುಬಿಟ್ಟು ಆ ವೇದಿಯ ಮೇಲೆ ಧೂಮ್ರವರ್ಣದ ಬಟ್ಟೆಯನ್ನು ಹಾಸಿ 14 ಅದಕ್ಕೆ ಸಂಬಂಧಪಟ್ಟ ಅಗ್ಗಿಷ್ಟಿಗೆಗಳು, ಮುಳ್ಳುಗಳು, ಸಲಿಕೆಗಳು, ಬೋಗುಣಿಗಳು ಮುಂತಾದ ಉಪಕರಣಗಳನ್ನೆಲ್ಲಾ ಮೇಲೆ ಇಟ್ಟು ಕಡಲುಹಂದಿಯ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಹಾಕಬೇಕು. 15 ದಂಡು ಹೊರಡುವ ಕಾಲದಲ್ಲಿ ಆರೋನನೂ ಅವನ ಮಕ್ಕಳೂ ದೇವಸ್ಥಾನದ ಎಲ್ಲಾ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದನಂತರ ಕೆಹಾತ್ಯರು ಅವುಗಳನ್ನು ಹೊರುವದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು; ಮುಟ್ಟಿದರೆ ಸತ್ತಾರು. ದೇವದರ್ಶನದ ಗುಡಾರದ ಸಾಮಾನುಗಳಲ್ಲಿ ಕೆಹಾತ್ಯರು ಹೊರಬೇಕಾದವುಗಳು ಇವೇ. 16 ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ದೀಪದ ಎಣ್ಣೆಯನ್ನೂ ಪರಿಮಳಧೂಪವನ್ನೂ ನಿತ್ಯವಾಗಿ ನೈವೇದ್ಯ ಮಾಡುವ ಧಾನ್ಯದ್ರವ್ಯವನ್ನೂ ಅಭೀಷೇಕ ತೈಲವನ್ನೂ ತನ್ನ ವಶದಲ್ಲಿ ಇಟ್ಟುಕೊಳ್ಳಬೇಕು. ಅದಲ್ಲದೆ ದೇವದರ್ಶನದ ಗುಡಾರದ ಎಲ್ಲಾ ಭಾಗಗಳೂ ಅದರಲ್ಲಿಯೂ ಅದರ ಪಾತ್ರೆಗಳಲ್ಲಿಯೂ ಇರುವ ಸಮಸ್ತ ವಸ್ತುಗಳೂ ಅವನ ಮೇಲ್ವಿಚಾರಣೆಯಲ್ಲಿರಬೇಕು. 17 ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ್ದೇನಂದರೆ - 18 ಕೆಹಾತ್ಯರ ಗೋತ್ರ ಕುಟುಂಬಗಳವರು ಲೇವಿಯರೊಳಗೆ ಉಳಿಯದೆ ನಾಶವಾಗುವದಕ್ಕೆ ಆಸ್ಪದಕೊಡಬೇಡಿರಿ. 19 ಅವರು ಮಹಾಪರಿಶುದ್ಧವಸ್ತುಗಳ ಹತ್ತಿರಕ್ಕೆ ಬರುವಾಗ ಸಾಯದಂತೆ ನೀವು ಅವರ ವಿಷಯದಲ್ಲಿ ಮಾಡಬೇಕಾದದ್ದೇನಂದರೆ - ಆರೋನನೂ ಅವನ ಮಕ್ಕಳೂ ಒಳಗೆ ಬಂದು ಅವರವರ ಕೆಲಸಗಳನ್ನೂ ಅವರವರ ಹೊರೆಗಳನ್ನೂ ಗೊತ್ತುಮಾಡಬೇಕು. 20 ಕೆಹಾತ್ಯರೇ ಒಳಗೆ ಬಂದು ಒಂದು ಕ್ಷಣವಾದರೂ ಆ ಪರಿಶುದ್ಧವಸ್ತುಗಳನ್ನು ನೋಡಬಾರದು; ನೋಡಿದರೆ ಸತ್ತಾರು. 21 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನಂದರೆ - 22-23 ನೀನು ಗೇರ್ಷೋನ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರುಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಸೇವಕಮಂಡಲಿಗೆ ಸೇರತಕ್ಕವರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು. 24 ಪರಿಚರ್ಯ ಮಾಡುವದರಲ್ಲಿಯೂ ಹೊರೆಗಳನ್ನು ಹೊರುವದರಲ್ಲಿಯೂ ಗೇರ್ಷೋನ್ಯರು ಮಾಡಬೇಕಾದ ಸೇವೆ ಯಾವದಂದರೆ - 25 ಅವರು ದೇವದರ್ಶನದ ಗುಡಾರದ ಬಟ್ಟೆಗಳನ್ನು ಹೊರಬೇಕು; ಅಂದರೆ ಗುಡಾರವು, ಅದರ ಹೊದಿಕೆಯು, ಅದರ ಮೇಲಣ ಕಡಲುಹಂದಿಯ ತೊಗಲಿನ ಹೊದಿಕೆಯು, 26 ದೇವದರ್ಶನದ ಗುಡಾರದ ಬಾಗಲಿನ ಪರದೆಯು, ಗುಡಾರದ ಮತ್ತು ಯಜ್ಞವೇದಿಯ ಸುತ್ತಣ ಅಂಗಳದ ತೆರೆಗಳು, ಅದರ ಬಾಗಲಿನ ಪರದೆಯು, ಹಗ್ಗಗಳು, ಎಲ್ಲಾ ಉಪಕರಣಗಳು ಇವುಗಳನ್ನು ಹೊರಬೇಕು; ಮತ್ತು ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು. 27 ಗೇರ್ಷೋನ್ಯರು ಹೊರೆಹೊರುವದರಲ್ಲಿಯೂ ಬೇರೆ ಪರಿಚರ್ಯಮಾಡುವದರಲ್ಲಿಯೂ ಆರೋನನ ಮತ್ತು ಅವನ ಮಕ್ಕಳ ಅಪ್ಪಣೆಯ ಪ್ರಕಾರವೇ ನಡೆಯಬೇಕು. ನೀವೇ ಹೊರೆಗಳನ್ನು ಗೊತ್ತುಮಾಡಿ ಅವರವರ ವಶಕ್ಕೆ ಕೊಡಬೇಕು. 28 ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕೆಲಸ ಇದೇ. ಮಹಾಯಾಜಕನಾದ ಆರೋನನ ಮಗನಾದ ಈತಾಮಾರನು ಅವರ ಮೇಲ್ವಿಚಾರಣೆ ಮಾಡಬೇಕು. 29 ನೀನು ಮೆರಾರೀಯರಲ್ಲೂ ಯಾರಾರು ಮೂವತ್ತರಿಂದ ಐವತ್ತು ವರುಷದವರೆಗೂ ವಯಸ್ಸುಳ್ಳವರಾಗಿ 30 ದೇವದರ್ಶನದ ಗುಡಾರದ ಸೇವಕಮಂಡಲಿಗೆ ಸೇರತಕ್ಕವರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು. 31 ದೇವದರ್ಶನದ ಗುಡಾರದ ವಿಷಯದಲ್ಲಿ ಅವರು ಮಾಡಬೇಕಾದ ಕೆಲಸ ಯಾವದಂದರೆ - ಅವರು ಗುಡಾರದ ಚೌಕಟ್ಟುಗಳನ್ನೂ ಅಗುಳಿಗಳನ್ನೂ ಕಂಬಗಳನ್ನೂ ಗದ್ದಿಗೇಕಲ್ಲುಗಳನ್ನೂ ಅಂಗಳದ ಕಂಬಗಳನ್ನೂ 32 ಇವುಗಳ ಗದ್ದಿಗೇಕಲ್ಲುಗಳನ್ನೂ ಗೂಟಗಳನ್ನೂ ಹಗ್ಗಗಳನ್ನೂ ಎಲ್ಲಾ ಉಪಕರಣಗಳನ್ನೂ ಹೊರಬೇಕು; ಇವುಗಳಿಗೆ ಸಂಬಂಧಪಟ್ಟ ಎಲ್ಲಾ ಕೆಲಸವನ್ನು ಅವರು ಮಾಡಬೇಕು. ಅವರವರ ಹೊರೆಗಳನ್ನೆಲ್ಲಾ ನೀವು ಹೆಸರು ಹೇಳಿ ಗೊತ್ತುಮಾಡಬೇಕು. 33 ದೇವದರ್ಶನದ ಗುಡಾರದ ವಿಷಯದಲ್ಲಿ ಮೆರಾರೀಯರು ಮಾಡಬೇಕಾದ ಕೆಲಸ ಇದೇ. ಅವರು ಮಹಾಯಾಜಕ ಆರೋನನ ಮಗನಾದ ಈತಾಮಾರನ ಕೈ ಕೆಳಗೆ ಅದನ್ನು ನಡಿಸಬೇಕು. 34-35 ಮೋಶೆ ಆರೋನರೂ ಸಮೂಹದ ಪ್ರಧಾನರೂ ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರುಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಸೇವಕಮಂಡಲಿಗೆ ಸೇರತಕ್ಕವರಾಗಿದ್ದಾರೋ ಅವರನ್ನು ಗೋತ್ರ ಕುಟುಂಬಗಳ ಪ್ರಕಾರ ಲೆಕ್ಕಿಸಿದರು. 36 ಅವರಲ್ಲಿ ಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 2750 ಮಂದಿ. 37 ಯೆಹೋವನು ಮೋಶೆಗೆ ಕೊಟ್ಟ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಕೆಹಾತ್ಯರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನದ ಗುಡಾರದ ಕೆಲಸವನ್ನು ಮಾಡತಕ್ಕವರು ಇಷ್ಟೇ ಜನ. 38-39 ಗೇರ್ಷೋನ್ಯರಲ್ಲಿ ಮೂವತ್ತರಿಂದ ಐವತ್ತು ವರುಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಕೆಲಸಕ್ಕೆ ಸೇರಿದವರೆಂದು 40 ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 2630 ಮಂದಿ. 41 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆರೋನರು ಅವರನ್ನು ಲೆಕ್ಕಿಸಲಾಗಿ ಅವರಲ್ಲಿ ದೇವದರ್ಶನದ ಗುಡಾರದ ಕೆಲಸವನ್ನು ಮಾಡತಕ್ಕವರು ಇಷ್ಟೇ ಜನ. 42-43 ಮೆರಾರೀಯರಲ್ಲಿ ಮೂವತ್ತರಿಂದ ಐವತ್ತು ವರುಷದವರೆಗೂ ವಯಸ್ಸುಳ್ಳವರಾಗಿ ದೇವದರ್ಶನದ ಗುಡಾರದ ಕೆಲಸಕ್ಕೆ ಸೇರಿದವರೆಂದು 44 ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಲ್ಪಟ್ಟವರು 3200 ಮಂದಿ. 45 ಯೆಹೋವನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಮೋಶೆ ಆರೋನರು ಮೆರಾರೀಯರನ್ನು ಲೆಕ್ಕಿಸಲಾಗಿ ಅವರ ಸಂಖ್ಯೆ ಇಷ್ಟೇ. 46-47 ಮೋಶೆ ಆರೋನರೂ ಇಸ್ರಾಯೇಲ್ಯರ ಪ್ರಧಾನರೂ ಲೇವಿಯರಲ್ಲಿ ಮೂವತ್ತರಿಂದ ಐವತ್ತು ವರುಷದವರೆಗೂ ವಯಸ್ಸುಳ್ಳವರನ್ನು ಅಂದರೆ ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಲೂ 48 ಅದರ ಹೊರೆಗಳನ್ನು ಹೊರಲೂ ತಕ್ಕವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಲಾಗಿ ಅವರ ಒಟ್ಟು ಸಂಖ್ಯೆ 8580. 49 ಯೆಹೋವನು ಮೋಶೆಗೆ ಆಜ್ಞಾಪಿಸಿದ ಮೇರೆಗೆ ಅವನಿಂದ ಪ್ರತಿಯೊಬ್ಬನಿಗೆ ಅವನವನ ಕೆಲಸವೂ ಹೊರೆಯೂ ಗೊತ್ತು ಮಾಡಲ್ಪಟ್ಟಿತು. ಹೀಗೆ ಯೆಹೋವನ ಆಜ್ಞೆಯ ಮೇರೆಗೆ ಲೆಕ್ಕವಾಯಿತು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India