ಅರಣ್ಯಕಾಂಡ 36 - ಕನ್ನಡ ಸತ್ಯವೇದವು J.V. (BSI)ಸ್ವಾಸ್ತ್ಯವು ಹೆಣ್ಣುಮಕ್ಕಳ ಪಾಲಾಗುವ ಸಂದರ್ಭದಲ್ಲಿ ಇವರು ಸ್ವಕುಲದಲ್ಲಿಯೇ ಮದುವೆಯನ್ನು ಮಾಡಿಕೊಳ್ಳಬೇಕೆಂಬ ವಿಧಿ 1 ಯೋಸೇಫನ ವಂಶದವರೊಳಗೆ ಮನಸ್ಸೆಯ ಮೊಮ್ಮಗನೂ ಮಾಕೀರನ ಮಗನೂ ಆಗಿದ್ದ ಗಿಲ್ಯಾದನ ಸಂತತಿಯವರ ಮುಖಂಡರು ಮೋಶೆಯ ಬಳಿಗೂ ಇಸ್ರಾಯೇಲ್ಯರ ಕುಲಾಧಿಪತಿಗಳ ಬಳಿಗೂ ಬಂದು - 2 ದೇಶವನ್ನು ಚೀಟುಹಾಕಿ ಇಸ್ರಾಯೇಲ್ಯರಿಗೆ ಹಂಚಿಕೊಡಬೇಕೆಂದು ಯೆಹೋವನು ಒಡೆಯನಿಗೆ ಆಜ್ಞಾಪಿಸಿ ತರುವಾಯ ನಮ್ಮ ಸ್ವಕುಲದವನಾದ ಚಲ್ಪಹಾದನಿಗೆ ಬರತಕ್ಕ ಸ್ವಾಸ್ತ್ಯವನ್ನು ಅವನ ಹೆಣ್ಣುಮಕ್ಕಳಿಗೆ ಕೊಡಬೇಕೆಂದೂ ಅಪ್ಪಣೆ ಮಾಡಿದನಷ್ಟೆ. 3 ಹೀಗಿರಲು ಅವರು ಇಸ್ರಾಯೇಲ್ಯರ ಬೇರೆ ಕುಲದವರಿಗೆ ಮದುವೆಯಾದ ಪಕ್ಷಕ್ಕೆ ಅವರ ಸ್ವಾಸ್ತ್ಯವು ನಮ್ಮ ಕುಲದಿಂದ ತೆಗೆಯಲ್ಪಟ್ಟು ಅವರು ಸೇರಿಕೊಳ್ಳುವ ಕುಲಕ್ಕೆ ಹೋಗುವದು. ಇದರಿಂದ ನಮ್ಮ ಸ್ವಾಸ್ತ್ಯಕ್ಕೆ ನಷ್ಟವುಂಟಾಗುವದು. 4 ಇಸ್ರಾಯೇಲ್ಯರ ಜೂಬಿಲಿ ಸಂವತ್ಸರವು ಬಂದಾಗ ಅವರ ಸ್ವಾಸ್ತ್ಯವು ಅವರು ಸೇರಿಕೊಳ್ಳುವ ಕುಲದ ಸ್ವಾಸ್ತ್ಯಕ್ಕೆ ಕೂಡಿಕೊಳ್ಳುವದರಿಂದ ನಮ್ಮ ಕುಲದಿಂದ ತೆಗೆಯಲ್ಪಡುವದು ಎಂದು ಹೇಳಿದರು. 5 ಆಗ ಮೋಶೆಯು ಯೆಹೋವನ ಅಪ್ಪಣೆಯನ್ನು ಹೊಂದಿ ಇಸ್ರಾಯೇಲ್ಯರಿಗೆ - ಯೋಸೇಫನ ಕುಲದವರು ಹೇಳುವ ಮಾತು ನ್ಯಾಯ. 6 ಆದಕಾರಣ ಚಲ್ಪಹಾದನ ಹೆಣ್ಣುಮಕ್ಕಳು ತಮ್ಮ ಕುಲದ ಕುಟುಂಬಗಳಲ್ಲಿ ಮಾತ್ರವೇ ತಮಗೆ ಇಷ್ಟಬಂದವರನ್ನು ಮದುವೆ ಮಾಡಿಕೊಳ್ಳಬೇಕೆಂದು ಯೆಹೋವನು ಅಪ್ಪಣೆ ಮಾಡಿದ್ದಾನೆ. 7 ಇಸ್ರಾಯೇಲ್ಯರ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗಬಾರದು. ಇಸ್ರಾಯೇಲ್ಯರೆಲ್ಲರೂ ತಮ್ಮ ತಮ್ಮ ಕುಲಗಳ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರಬೇಕು. 8 ಇದಕ್ಕಾಗಿ ಇಸ್ರಾಯೇಲ್ಯರಲ್ಲಿ ಸ್ವಾಸ್ತ್ಯವನ್ನು ಹೊಂದಿದ ಹೆಣ್ಣುಮಕ್ಕಳು ಸ್ವಕುಲದಲ್ಲಿಯೇ ಮದುವೆ ಮಾಡಿಕೊಳ್ಳಬೇಕು. 9 ಹೀಗೆ ಯಾವ ಸ್ವಾಸ್ತ್ಯವೂ ಒಂದು ಕುಲದಿಂದ ಬೇರೊಂದು ಕುಲಕ್ಕೆ ಹೋಗದೆ ಇಸ್ರಾಯೇಲ್ಯರ ಪ್ರತಿಯೊಂದು ಕುಲವು ತನ್ನ ಸ್ವಾಸ್ತ್ಯವನ್ನು ಹೊಂದಿಕೊಂಡೇ ಇರುವದು ಎಂದು ಆಜ್ಞಾಪಿಸಿದನು. 10-11 ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ತಿರ್ಚಾ, ಹೊಗ್ಲಾ, ವಿುಲ್ಕಾ, ನೋವಾ ಎಂಬವರು ಯೆಹೋವನ ಆಜ್ಞಾನುಸಾರ ನಡೆದು ತಂದೆಯ ಅಣ್ಣತಮ್ಮಂದಿರ ಮಕ್ಕಳನ್ನು ಮದುವೆಮಾಡಿಕೊಂಡರು. 12 ಅವರು ಯೋಸೇಫನ ಮಗನಾದ ಮನಸ್ಸೆಯ ಕುಲದವರಿಗೇ ಮದುವೆಯಾದದರಿಂದ ಅವರ ಸ್ವಾಸ್ತ್ಯವು ತಂದೆಯ ಕುಲದಲ್ಲಿಯೇ ನಿಂತಿತು. 13 ಯೊರ್ದನ್ ಹೊಳೆಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಟ್ಟ ಆಜ್ಞಾವಿಧಿಗಳು ಇವೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India