Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 35 - ಕನ್ನಡ ಸತ್ಯವೇದವು J.V. (BSI)


ಇಸ್ರಾಯೇಲ್ಯರು ಲೇವಿಯರಿಗೆ ಕೊಡಬೇಕಾದ ಊರುಗಳನ್ನು ಕುರಿತದ್ದು

1 ಯೊರ್ದನ್ ಹೊಳೆಯ ತೀರದಲ್ಲಿ ಯೆರಿಕೋ ಪಟ್ಟಣದ ಹತ್ತಿರವಿರುವ ಮೋವಾಬ್ಯರ ಮೈದಾನದಲ್ಲಿ ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

2 ಇಸ್ರಾಯೇಲ್ಯರು ತಾವು ಹೊಂದುವ ಸ್ವಾಸ್ತ್ಯದಲ್ಲಿ ಕೆಲವು ಊರುಗಳನ್ನೂ ಆ ಊರುಗಳ ಸುತ್ತಲಿನ ಭೂವಿುಯನ್ನೂ ಲೇವಿಯರಿಗೆ ನಿವಾಸಕ್ಕಾಗಿ ಕೊಡಬೇಕೆಂದು ಅವರಿಗೆ ಆಜ್ಞಾಪಿಸು.

3 ಆ ಊರುಗಳು ಲೇವಿಯರ ನಿವಾಸಕ್ಕಾಗಿ, ಸುತ್ತಲಿರುವ ಭೂವಿುಗಳು ಅವರ ದನ ಕುರಿ ಮೊದಲಾದ ಪಶುಗಳಿಗಾಗಿಯೂ ಇರುವವು.

4 ನೀವು ಲೇವಿಯರಿಗೆ ಕೊಡುವ ಊರುಗಳ ಸುತ್ತಲಿನ ಭೂವಿುಯು ಪ್ರತಿಯೊಂದು ಊರಿನ ಗೋಡೆಯಿಂದ ನಾಲ್ಕು ಕಡೆಯಲ್ಲಿಯೂ ಸಾವಿರ ಮೊಳದಷ್ಟು ವಿಸ್ತರಿಸಿಕೊಂಡಿರಬೇಕು.

5 ನೀವು ಊರಿನ ಹೊರಗಡೆ ನಾಲ್ಕು ದಿಕ್ಕುಗಳಲ್ಲಿಯೂ ಎರಡೆರಡು ಸಾವಿರ ಮೊಳಗಳಷ್ಟು ಉದ್ದವಾಗಿ ಮೇರೆಗಳನ್ನು ಗೊತ್ತುಮಾಡಬೇಕು; ಆ ಭೂವಿುಯ ನಡುವೆಯಲ್ಲಿ ಊರು ಇರಬೇಕು. ವಿುಕ್ಕದ್ದು ಹುಲ್ಲುಗಾವಲು.

6 ಮನುಷ್ಯ ಹತ್ಯಮಾಡಿದವರು ಆಶ್ರಯಕ್ಕಾಗಿ ಓಡಿಹೋಗುವದಕ್ಕೋಸ್ಕರ ನೀವು ನೇವಿುಸುವ ಆರು ಆಶ್ರಯ ನಗರಗಳನ್ನೂ ಬೇರೆ ನಾಲ್ವತ್ತೆರಡು ಪಟ್ಟಣಗಳನ್ನೂ

7 ಅಂತು ನಾಲ್ವತ್ತೆಂಟು ಊರುಗಳನ್ನೂ ಇವುಗಳ ಸುತ್ತಲಿನ ಭೂವಿುಯನ್ನೂ ಲೇವಿಯರಿಗೆ ಕೊಡಬೇಕು.

8 ಇಸ್ರಾಯೇಲ್ಯರ ಸ್ವಾಸ್ತ್ಯದಲ್ಲಿ ಆಯಾ ಕುಲದ ಸ್ವಾಸ್ತ್ಯದ ಪ್ರಮಾಣಕ್ಕೆ ತಕ್ಕ ಹಾಗೆ ಅಂದರೆ ಹೆಚ್ಚಾದ ಮಂದಿಯುಳ್ಳವರಿಂದ ಹೆಚ್ಚಾಗಿಯೂ ಕಡಿಮೆಯಾದ ಮಂದಿಯುಳ್ಳವರಿಂದ ಕಡಿಮೆಯಾಗಿಯೂ ಲೇವಿಯರಿಗೋಸ್ಕರ ಊರುಗಳನ್ನು ಕೊಡಿಸಬೇಕು.


ನರಹತ್ಯ ಮಾಡಿದವನು ಆಶ್ರಯಕ್ಕೆ ಓಡಿಹೋಗುವದಕ್ಕೋಸ್ಕರ ಆರು ಪಟ್ಟಣಗಳನ್ನು ನೇವಿುಸಬೇಕೆಂಬ ವಿಧಿ

9 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು -

10 ನೀವು ಯೊರ್ದನ್ ಹೊಳೆಯನ್ನು ದಾಟಿ ಕಾನಾನ್ ದೇಶವನ್ನು ಸೇರಿದನಂತರ ಆಶ್ರಯಸ್ಥಾನಗಳಾಗುವದಕ್ಕೆ ಪಟ್ಟಣಗಳನ್ನು ನೇವಿುಸಬೇಕು.

11 ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಅವುಗಳಲ್ಲಿ ಒಂದಕ್ಕೆ ಓಡಿಹೋಗಿ ಸುರಕ್ಷಿತನಾಗಿರಬಹುದು.

12 ಅವನು ಸಭೆಯವರಿಂದ ತೀರ್ಪುಹೊಂದುವದಕ್ಕಿಂತ ಮೊದಲೇ ಹತವಾದವನ ಸಮೀಪಬಂಧುವಿನಿಂದ ಸಾಯದಂತೆ ಆ ಆಶ್ರಯಸ್ಥಾನಗಳು ನಿಮ್ಮೊಳಗೆ ಇರಬೇಕು.

13-14 ಹೀಗೆ ಆಶ್ರಯಸ್ಥಾನಗಳಾಗಿರುವದಕ್ಕಾಗಿ ನೀವು ಯೊರ್ದನ್ ಹೊಳೆಯ ಈಚೆ ಮೂರು, ಕಾನಾನ್ ದೇಶದಲ್ಲಿ ಮೂರು ಅಂತು ಆರು ಪಟ್ಟಣಗಳನ್ನು ನೇವಿುಸಬೇಕು.

15 ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಇಸ್ರಾಯೇಲ್ಯನಾಗಲಿ ಪರದೇಶದವನಾಗಲಿ ನಿಮ್ಮಲ್ಲಿ ಇಳಿದುಕೊಂಡವನಾಗಲಿ ಆ ಆರು ಪಟ್ಟಣಗಳೊಳಗೆ ಒಂದಕ್ಕೆ ಓಡಿಹೋಗಿ ಆಶ್ರಯಹೊಂದಬಹುದು.

16 ಯಾವನಾದರೂ ಕಬ್ಬಿಣದ ಆಯುಧದಿಂದ ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯ ಮಾಡಿದವನೆಂದು ನೀವು ನಿರ್ಣಯಿಸಬೇಕು; ಅಂಥವನಿಗೆ ಮರಣಶಿಕ್ಷೆಯಾಗಬೇಕು.

17 ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಕಲ್ಲನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದು ಕೊಂದರೆ ಅವನು ನರಹತ್ಯಮಾಡಿದವನೇ; ಅವನಿಗೆ ಮರಣಶಿಕ್ಷೆಯಾಗಬೇಕು.

18 ಯಾವನಾದರೂ ಮನುಷ್ಯನನ್ನು ಕೊಲ್ಲುವಷ್ಟು ದೊಡ್ಡ ಮರದ ಆಯುಧವನ್ನು ಕೈಯಲ್ಲಿ ಹಿಡಿದು ಮತ್ತೊಬ್ಬನನ್ನು ಹೊಡೆದುಕೊಂದರೆ ಅವನು ನರಹತ್ಯಮಾಡಿದವನೇ; ಅವನಿಗೆ ಮರಣಶಿಕ್ಷೆಯಾಗಬೇಕು.

19 ನರಹತ್ಯಮಾಡಿದವನು ಎಲ್ಲಿ ಸಿಕ್ಕಿದರೂ ಅವನನ್ನು ಕೊಲ್ಲಬೇಕಾದವನು ಯಾರಂದರೆ ಹತವಾದವನ ಸಮೀಪಬಂಧುವೇ.

20 ಯಾವನಾದರೂ ಮತ್ತೊಬ್ಬನನ್ನು ಹಗೆಮಾಡಿ ನೂಕುವದರಿಂದಾಗಲಿ ಸಮಯನೋಡಿಕೊಂಡು ಅವನ ಮೇಲೆ ಏನಾದರೂ ಎಸೆಯುವದರಿಂದಾಗಲಿ

21 ದ್ವೇಷದಿಂದ ಕೈಯಾರೆ ಹೊಡೆಯುವದರಿಂದಾಗಲಿ ಕೊಂದರೆ ಅವನು ನರಹತ್ಯ ಮಾಡಿದವನೇ; ಅವನಿಗೆ ಮರಣ ಶಿಕ್ಷೆಯಾಗಬೇಕು. ಹತವಾದವನ ಸಮೀಪಬಂಧುವು ಅವನನ್ನು ಎಲ್ಲಿ ಕಂಡರೂ ಕೊಲ್ಲಲಿ.

22 ಆದರೆ ಒಬ್ಬನು ಯಾವ ದ್ವೇಷವೂ ಇಲ್ಲದೆ ಅಕಸ್ಮಾತ್ತಾಗಿ ನೂಕುವದರಿಂದಾಗಲಿ ಹಾನಿಮಾಡುವ ಸಮಯವನ್ನು ನೋಡಿಕೊಳ್ಳದೆ ಏನಾದರೂ ಎಸೆಯುವದರಿಂದಾಗಲಿ

23 ಕೊಲ್ಲುವಷ್ಟು ದೊಡ್ಡ ಕಲ್ಲನ್ನು ತಿಳಿಯದೆ ಬೀಳಿಸುವದರಿಂದಾಗಲಿ ಮತ್ತೊಬ್ಬನು ಸತ್ತರೆ ಅವನು ಆ ಮನುಷ್ಯನಿಗೆ ವೈರಿಯಾಗಿರದೆಯೂ ಹಾನಿಯನ್ನು ಮಾಡಬೇಕೆಂಬ ಅಭಿಪ್ರಾಯವಿಲ್ಲದೆಯೂ ಇದ್ದ ಪಕ್ಷಕ್ಕೆ

24 ಸಭೆಯವರು ಹತ್ಯೆಮಾಡಿದವನಿಗೂ ಹತವಾದವನ ಸಮೀಪಬಂಧುವಿಗೂ ಈ ಸಂಗತಿಗಳಿಗೆ ಅನುಸಾರವಾಗಿ ನ್ಯಾಯ ತೀರಿಸಿ

25 ಹತ್ಯಮಾಡಿದವನನ್ನು ಆ ಸಮೀಪ ಬಂಧುವಿನ ಕೈಯಿಂದ ತಪ್ಪಿಸಿ ಅವನು ಓಡಿಹೋಗಿದ್ದ ಆಶ್ರಯನಗರಕ್ಕೆ ತಿರಿಗಿ ಸೇರಿಸಬೇಕು. ಪಟ್ಟಾಭಿಷೇಕಹೊಂದಿದ ಮಹಾಯಾಜಕನು ಜೀವದಿಂದಿರುವ ತನಕ ಅವನು ಆ ಪಟ್ಟಣದಲ್ಲೇ ವಾಸಿಸಬೇಕು.

26 ಆ ಹತ್ಯಮಾಡಿದವನು ಯಾವಾಗಲಾದರೂ ತಾನು ಓಡಿಹೋಗಿದ್ದ ಆಶ್ರಯ ನಗರದ ಮೇರೆಯ ಹೊರಗೆ ಹೋಗಿರುವಾಗ

27 ಹತವಾದವನ ಸಮೀಪಬಂಧುವು ಅವನನ್ನು ಕಂಡು ಕೊಂದುಹಾಕಿದರೂ ಕೊಲೆಪಾತಕನಾಗುವದಿಲ್ಲ.

28 ಮಹಾಯಾಜಕನು ಜೀವದಿಂದಿರುವ ತನಕ ಅವನು ಆಶ್ರಯನಗರದೊಳಗೆ ಇರಬೇಕಾಗಿತ್ತು. ಮಾಹಾಯಾಜಕನು ತೀರಿಹೋದನಂತರ ಅವನು ತನ್ನ ಸ್ವಾಸ್ತ್ಯವಿರುವ ಸ್ಥಳಕ್ಕೆ ಹೋಗಬಹುದು.

29 ನೀವೂ ನಿಮ್ಮ ಸಂತತಿಯವರೂ ನಿಮ್ಮ ಎಲ್ಲಾ ನಿವಾಸಗಳಲ್ಲಿ ಈ ಮಾತುಗಳಿಗೆ ಅನುಸಾರವಾಗಿ ನ್ಯಾಯತೀರಿಸಬೇಕು.

30 ಯಾವನಾದರೂ ಮತ್ತೊಬ್ಬನನ್ನು ಕೊಂದಾಗ ನೀವು ಸಾಕ್ಷಿಗಳನ್ನು ವಿಚಾರಿಸಿಕೊಂಡು ಅವನಿಗೆ ಮರಣಶಿಕ್ಷೆಯನ್ನು ವಿಧಿಸಬೇಕು. ಒಬ್ಬನೇ ಒಬ್ಬನ ಸಾಕ್ಷಿ ಮಾತ್ರ ಇದ್ದರೆ ಮರಣಶಿಕ್ಷೆಯನ್ನು ವಿಧಿಸಕೂಡದು.

31 ಮರಣಶಿಕ್ಷೆಗೆ ಪಾತ್ರನಾದ ಕೊಲೆಪಾತಕನನ್ನು ಉಳಿಸುವದಕ್ಕೆ ಈಡನ್ನು ತೆಗೆದುಕೊಳ್ಳಕೂಡದು; ಅವನಿಗೆ ಮರಣಶಿಕ್ಷೆಯೇ ಆಗಬೇಕು.

32 ನೀವು ಆಶ್ರಯ ನಗರಕ್ಕೆ ಓಡಿ ಹೋದವನಿಂದ ಧನವನ್ನು ತೆಗೆದುಕೊಂಡು ಮಹಾಯಾಜಕನು ಜೀವದಿಂದಿರುವಾಗಲೇ ಸ್ವಸ್ಥಳಕ್ಕೆ ಹೋಗಗೊಡಿಸಕೂಡದು.

33 ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇಶವು ಅಪವಿತ್ರವಾಗುವದಿಲ್ಲ. ರಕ್ತವು ದೇಶವನ್ನು ಅಪವಿತ್ರ ಮಾಡುವದಷ್ಟೆ. ಕೊಲ್ಲಲ್ಪಟ್ಟವನ ರಕ್ತಕ್ಕಾಗಿ ಕೊಂದವನ ರಕ್ತದಿಂದಲೇ ಹೊರತು ಬೇರೆ ಪ್ರಾಯಶ್ಚಿತ್ತವಿಲ್ಲ.

34 ನೀವು ವಾಸಿಸುವ ದೇಶವನ್ನು ಅಪವಿತ್ರಮಾಡಬಾರದು; ಯೆಹೋವನೆಂಬ ನಾನೇ ಇಸ್ರಾಯೇಲ್ಯರ ನಡುವೆ ಆ ದೇಶದಲ್ಲಿ ವಾಸಿಸುತ್ತೇನಲ್ಲಾ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು