Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 32 - ಕನ್ನಡ ಸತ್ಯವೇದವು J.V. (BSI)


ಗಾದ್ಯರೂ ರೂಬೇನ್ಯರೂ ಮನಸ್ಸೆಯ ಕುಲದವರಲ್ಲಿ ಅರ್ಧ ಜನರೂ ಯೊರ್ದನ್ ಹೊಳೆಯ ಮೂಡಣ ದಿಕ್ಕಿನಲ್ಲಿ ಸ್ವಾಸ್ತ್ಯವನ್ನು ಹೊಂದಿದ್ದು.

1 ರೂಬೇನ್ ಕುಲದವರಿಗೂ ಗಾದ್ ಕುಲದವರಿಗೂ ಬಹಳ ದನಕುರಿಗಳಿದ್ದವು. ಅವರು ಯಗ್ಜೇರ್, ಗಿಲ್ಯಾದ್ ಎಂಬ ಪ್ರದೇಶಗಳನ್ನು ನೋಡಿದಾಗ ಅವು ದನಕುರಿಗಳ ಮೇವಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡು

2 ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರ್ ಇವರ ಬಳಿಗೂ ಸಮೂಹದ ಪ್ರಧಾನರ ಬಳಿಗೂ ಬಂದು -

3 ಯೆಹೋವನು ಇಸ್ರಾಯೇಲ್ಯರಿಗೆ ಅಧೀನಪಡಿಸಿದ ಈ ಪ್ರದೇಶವು ಅಂದರೆ ಅಟಾರೋತ್, ದೀಬೋನ್, ಯಗ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬ ಪಟ್ಟಣಗಳ ಪ್ರದೇಶವು ದನಕುರಿಗಳ ಮೇವಿಗೆ ತಕ್ಕ ಪ್ರದೇಶ.

4 ನಿಮ್ಮ ದಾಸರಾದ ನಮಗೆ ಬಹಳ ದನಕುರಿಗಳುಂಟಷ್ಟೆ;

5 ಆದಕಾರಣ ನೀವು ದಾಸರಾದ ನಮ್ಮ ಮೇಲೆ ದಯವಿಟ್ಟು ನಮ್ಮನ್ನು ಯೊರ್ದನ್ ಹೊಳೆಯ ಆಚೆಗೆ ಬರಮಾಡದೆ ಈ ಪ್ರದೇಶವನ್ನೇ ಸ್ವಾಸ್ತ್ಯಕ್ಕಾಗಿ ಕೊಡಬೇಕೆಂದು ಕೇಳಿಕೊಂಡರು.

6 ಮೋಶೆ ಅವರಿಗೆ - ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲೇ ಕೂತಿರಬೇಕೇನು?

7 ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟ ದೇಶಕ್ಕೆ ಅವರು ಹೋಗದಂತೆ ನೀವು ಯಾಕೆ ಅವರಿಗೆ ಅಧೈರ್ಯವನ್ನು ಹುಟ್ಟಿಸುತ್ತೀರಿ?

8 ಆ ದೇಶವನ್ನು ನೋಡಿಕೊಂಡು ಬರುವದಕ್ಕೆ ನಾನು ಕಾದೇಶ್‍ಬರ್ನೇಯದಿಂದ ನಿಮ್ಮ ತಂದೆಗಳನ್ನು ಕಳುಹಿಸಿದಾಗ ಅವರೂ ಹಾಗೆಯೇ ಮಾಡಿದರಲ್ಲಾ;

9 ಅವರು ಎಷ್ಕೋಲ್ ತಗ್ಗಿಗೆ ಬಂದು ಆ ದೇಶವನ್ನು ನೋಡಿ ಇಸ್ರಾಯೇಲ್ಯರಿಗೆ ಅಧೈರ್ಯವನ್ನು ಹುಟ್ಟಿಸಿದದರಿಂದ ಇಸ್ರಾಯೇಲ್ಯರು ತಮಗೆ ಯೆಹೋವನು ವಾಗ್ದಾನಮಾಡಿದ ದೇಶಕ್ಕೆ ಹೋಗಲೇ ಇಲ್ಲ.

10 ಆ ಕಾಲದಲ್ಲಿ ಯೆಹೋವನು ಕೋಪಗೊಂಡು -

11-12 ಐಗುಪ್ತದೇಶದೊಳಗಿಂದ ಬಂದ ಈ ಜನರೊಳಗೆ ಕೆನಿಜ್ಜೀಯನಾದ ಯೆಫುನ್ನೆಯ ಮಗ ಕಾಲೇಬನೂ ನೂನನ ಮಗನಾದ ಯೆಹೋಶುವನೂ ಇವರಿಬ್ಬರೇ ಹೊರತಾಗಿ ಯಾರೂ ನನ್ನನ್ನು ಪೂರ್ಣಮನಸ್ಸಿನಿಂದ ಅನುಸರಿಸದೆ ಹೋದದರಿಂದ ಅವರೊಳಗೆ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸಿನವರಲ್ಲಿ ಅವರಿಬ್ಬರೇ ಹೊರತಾಗಿ ಒಬ್ಬನಾದರೂ ನಾನು ಅಬ್ರಹಾಮ್ ಇಸಾಕ್ ಯಾಕೋಬರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ದೇಶವನ್ನು ನೋಡುವದೇ ಇಲ್ಲ ಎಂದು ಖಂಡಿತವಾಗಿ ಹೇಳಿದನು.

13 ಯೆಹೋವನು ಇಸ್ರಾಯೇಲ್ಯರ ಮೇಲೆ ಕೋಪಗೊಂಡವನಾಗಿ ತನ್ನ ದೃಷ್ಟಿಯಲ್ಲಿ ಕೆಟ್ಟ ನಡತೆಯುಳ್ಳ ಆ ಸಂತತಿಯವರೆಲ್ಲರೂ ನಾಶವಾಗುವ ತನಕ, ಅಂದರೆ ನಾಲ್ವತ್ತು ವರುಷಕಾಲ, ಇಸ್ರಾಯೇಲ್ಯರನ್ನು ಅರಣ್ಯದಲ್ಲಿ ತಿರುಗಾಡ ಮಾಡಿದನು.

14 ಈಗ ದುಷ್ಟ ಸಂತತಿಯವರಾದ ನೀವು ನಿಮ್ಮ ತಂದೆಗಳಿಗೆ ಬದಲಾಗಿ ಬಂದು ಇಸ್ರಾಯೇಲ್ಯರ ಮೇಲಿದ್ದ ಯೆಹೋವನ ರೋಷಾಗ್ನಿಯನ್ನು ಮತ್ತಷ್ಟು ಹೆಚ್ಚಿಸುತ್ತೀರಲ್ಲಾ.

15 ನೀವು ಆತನನ್ನು ಹಿಂಬಾಲಿಸದೆ ನಡೆಯುವ ಕಾರಣ ಆತನು ಈ ಜನರನ್ನು ಅರಣ್ಯದಲ್ಲಿ ಇನ್ನೂ ಇರಿಸಿದರೆ ಈ ಸಮಸ್ತಜನಾಂಗದ ನಾಶಕ್ಕೆ ನೀವೇ ಕಾರಣರಾಗುವಿರಿ ಎಂದು ಹೇಳಿದನು.

16 ಆಗ ಅವರು ಅವನ ಬಳಿಗೆ ಬಂದು - ನಾವು ಇಲ್ಲಿ ನಮ್ಮ ದನಕುರಿಗಳಿಗೋಸ್ಕರ ದೊಡ್ಡಿಗಳನ್ನೂ ನಮ್ಮ ಕುಟುಂಬಗಳಿಗೋಸ್ಕರ ಊರುಗಳನ್ನೂ ಕಟ್ಟಿಕೊಳ್ಳುವೆವು.

17 ನಾವಾದರೋ ಇಸ್ರಾಯೇಲ್ಯರನ್ನು ಅವರವರ ಸ್ಥಳಗಳಿಗೆ ಸೇರಿಸುವವರೆಗೂ ಯುದ್ಧಕ್ಕೆ ಸನ್ನದ್ಧರಾಗಿ ಅವರ ಮುಂದೆ ನಡೆಯುವೆವು. ಅಷ್ಟರಲ್ಲಿ ನಮ್ಮ ಕುಟುಂಬಗಳವರು ಈ ದೇಶದ ನಿವಾಸಿಗಳ ಭಯದ ದೆಸೆಯಿಂದ ಕೋಟೆಕೊತ್ತಲುಗಳುಳ್ಳ ಊರುಗಳಲ್ಲಿ ವಾಸಿಸಲಿ.

18 ಇಸ್ರಾಯೇಲ್ಯರೆಲ್ಲರೂ ತಮ್ಮತಮ್ಮ ಸ್ವಾಸ್ತ್ಯಗಳನ್ನು ಸ್ವತಂತ್ರಿಸಿಕೊಳ್ಳುವ ಪರ್ಯಂತರ ನಾವು ನಮ್ಮ ಮನೆಗಳಿಗೆ ತಿರಿಗಿ ಬರುವದಿಲ್ಲ.

19 ನಮಗೆ ಯೊರ್ದನ್ ಹೊಳೆಯ ಈಚೆ ಮೂಡಣ ದಿಕ್ಕಿನಲ್ಲಿ ಸ್ವಾಸ್ತ್ಯವು ದೊರಕಿದದರಿಂದ ನಾವು ಹೊಳೆಯ ಆಚೆ ಎಲ್ಲಿಯೂ ಅವರೊಂದಿಗೆ ಸ್ವಾಸ್ತ್ಯವನ್ನು ಅಪೇಕ್ಷಿಸುವದಿಲ್ಲ ಅಂದರು.

20 ಅದಕ್ಕೆ ಮೋಶೆ - ನೀವು ಆ ಮಾತಿನಂತೆ ನಡೆದರೆ ನಿಮ್ಮಲ್ಲಿರುವ ಭಟರೆಲ್ಲರೂ ಯುದ್ಧಸನ್ನದ್ಧರಾಗಿ

21 ಯೊರ್ದನ್ ಹೊಳೆಯ ಆಚೆಗೆ ಹೋಗಿ ಯೆಹೋವನು ತನ್ನ ವೈರಿಗಳನ್ನು ಹೊರಡಿಸಿಬಿಟ್ಟು ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವ ತನಕ ಆತನ ಮುಂದೆ ಯುದ್ಧಮಾಡುವದಾದರೆ

22 ತರುವಾಯ ನೀವು ತಿರಿಗಿ ಬಂದು ಆತನ ದೃಷ್ಟಿಯಲ್ಲೂ ಇಸ್ರಾಯೇಲ್ಯರ ದೃಷ್ಟಿಯಲ್ಲೂ ನಿರ್ದೋಷಿಗಳಾಗಿರುವಿರಿ, ಮತ್ತು ಈ ಪ್ರದೇಶವು ಯೆಹೋವನ ಸನ್ನಿಧಿಯಲ್ಲೇ ನಿಮಗೆ ಸ್ವಾಸ್ತ್ಯವಾಗಿರುವದು.

23 ಆದರೆ ನೀವು ಹಾಗೆ ಮಾಡದೆಹೋದರೆ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದವರಾಗುವಿರಿ; ಮತ್ತು ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೇ ಬರುವದು ಎಂದು ತಿಳಿದುಕೊಳ್ಳಿರಿ.

24 ನೀವು ನಿಮ್ಮ ಕುಟುಂಬಗಳಿಗೋಸ್ಕರ ಊರುಗಳನ್ನೂ ದನಕುರಿಗಳಿಗೋಸ್ಕರ ದೊಡ್ಡಿಗಳನ್ನೂ ಕಟ್ಟಿಕೊಂಡು ತರುವಾಯ ನಿಮ್ಮ ಮಾತಿನ ಮೇರೆಗೆ ಮಾಡಿರಿ ಅಂದನು.

25 ಅದಕ್ಕೆ ಗಾದ್ಯರೂ ರೂಬೇನ್ಯರೂ - ಸ್ವಾವಿುಯವರ ಅಪ್ಪಣೆಯ ಮೇರೆಗೆ ದಾಸರಾದ ನಾವು ಮಾಡುತ್ತೇವೆ.

26 ನಮ್ಮ ಮನೆಗಳವರೂ ಹೆಂಡತಿಯರೂ ದನಕುರಿಗಳೂ ಇಲ್ಲೇ ಗಿಲ್ಯಾದ್ ದೇಶದ ಊರುಗಳಲ್ಲಿ ಇರಲಿ.

27 ನಿನ್ನ ದಾಸರಾದ ನಮ್ಮಲ್ಲಿ ಯುದ್ಧ ಸನ್ನದ್ಧರೆಲ್ಲರೂ ಸ್ವಾವಿುಯವರ ಅಪ್ಪಣೆಯ ಮೇರೆಗೆ ಯೆಹೋವನ ಮುಂದುಗಡೆಯಲ್ಲಿ ಹೊರಟು ಹೊಳೆಯನ್ನು ದಾಟಿ ಯುದ್ಧಮಾಡುವೆವು ಎಂದು ಉತ್ತರಕೊಟ್ಟರು.

28 ಆದಕಾರಣ ಮೋಶೆ ಅವರ ವಿಷಯವಾಗಿ ಮಹಾಯಾಜಕ ಎಲ್ಲಾಜಾರನಿಗೂ ನೂನನ ಮಗನಾದ ಯೆಹೋಶುವನಿಗೂ ಇಸ್ರಾಯೇಲ್ಯರ ಕುಲಾಧಿಪತಿಗಳಿಗೂ ಆಜ್ಞೆಮಾಡಿ -

29 ಗಾದ್ಯರಲ್ಲಿಯೂ ರೂಬೇನ್ಯರಲ್ಲಿಯೂ ಯುದ್ಧಸನ್ನದ್ಧರಾದವರೆಲ್ಲರೂ ನಿಮ್ಮೊಡನೆ ಯೊರ್ದನ್ ಹೊಳೆಯನ್ನು ದಾಟಿ ಯೆಹೋವನ ಮುಂದೆ ಯುದ್ಧಮಾಡಿದರೆ ಕಾನಾನ್ ದೇಶವು ನಿಮ್ಮ ಸ್ವಾಧೀನಕ್ಕೆ ಬಂದಾಗ ನೀವು ಗಿಲ್ಯಾದ್ ಪ್ರದೇಶವನ್ನು ಅವರಿಗೆ ಸ್ವಾಸ್ತ್ಯವಾಗುವದಕ್ಕೆ ಕೊಡಬೇಕು.

30 ಆದರೆ ಅವರು ನಿಮ್ಮೊಡನೆ ಯುದ್ಧಕ್ಕೆ ಹೋಗದಿದ್ದರೆ ಕಾನಾನ್ ದೇಶದಲ್ಲಿಯೇ ಅವರಿಗೆ ಸ್ವಾಸ್ತ್ಯವಾಗಬೇಕೆಂದು ಹೇಳಿದನು.

31 ಅದಕ್ಕೆ ಗಾದ್ಯರೂ ರೂಬೇನ್ಯರೂ ಒಪ್ಪಿ - ಯೆಹೋವನು ನಿನ್ನ ದಾಸರಾದ ನಮಗೆ ಆಜ್ಞಾಪಿಸಿದಂತೆಯೇ ಮಾಡುವೆವು;

32 ನಾವು ಯೇಹೋವನ ಮುಂದೆ ಯುದ್ಧಸನ್ನದ್ಧರಾಗಿ ಕಾನಾನ್ ದೇಶಕ್ಕೆ ಹೊರಡುವೆವು; ಆಗ ಯೊರ್ದನ್ ಹೊಳೆಯ ಈಚೆಯೇ ನಮಗೆ ಸ್ವಾಸ್ತ್ಯವು ದೊರಕಬೇಕು ಅಂದರು.

33 ಹೀಗೆ ಮೋಶೆಯು ಗಾದ್ಯರಿಗೂ ರೂಬೇನ್ಯರಿಗೂ ಯೋಸೇಫನ ಮಗನಾದ ಮನಸ್ಸೆಯ ಕುಲದವರಲ್ಲಿ ಅರ್ಧಜನರಿಗೂ ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ ಇವುಗಳ ಎಲ್ಲಾ ಊರುಗಳನ್ನೂ ಆ ಊರುಗಳಿಗೆ ಸೇರಿದ ಭೂವಿುಗಳನ್ನೂ ಕೊಟ್ಟನು.

34 ಗಾದ್ಯರು ದೀಬೋನ್, ಅಟಾರೋತ್, ಅರೋಯೇರ್,

35 ಅಟ್ರೋತ್ಷೋಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ,

36 ಬೇತ್‍ಹಾರಾನ್ ಎಂಬ ಸುತ್ತು ಗೋಡೆಗಳುಳ್ಳ ಊರುಗಳನ್ನು ಹೊಸದಾಗಿ ಕಟ್ಟಿಕೊಂಡರು; ತಮ್ಮ ಆಡುಕುರಿಗಳಿಗೋಸ್ಕರ ದೊಡ್ಡಿಗಳನ್ನು ಕಟ್ಟಿಕೊಂಡರು.

37-38 ರೂಬೇನ್ಯರು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್, ಸಿಬ್ಮಾ ಎಂಬ ಊರುಗಳನ್ನೂ [ಬೇರೆ ಹೆಸರಿನಿಂದ ಉಚ್ಚರಿಸತಕ್ಕ] ನೆಬೋ, ಬಾಳ್ಮೆಯೋನ್ ಎಂಬಿವುಗಳನ್ನೂ ಹೊಸದಾಗಿ ಕಟ್ಟಿ ಅವುಗಳಿಗೆ ಬೇರೆ ಹೆಸರುಗಳನ್ನು ಇಟ್ಟರು.

39 ಮನಸ್ಸೆಯ ಮಗನಾದ ಮಾಕೀರನ ವಂಶದವರು ಗಿಲ್ಯಾದಿಗೆ ಹೋಗಿ ಅದನ್ನು ಸ್ವಾಧೀನಮಾಡಿಕೊಂಡು ಅಲ್ಲಿದ್ದ ಅಮೋರಿಯರನ್ನು ಹೊರಡಿಸಿಬಿಟ್ಟರು.

40 ಮೋಶೆಯು ಮನಸ್ಸೆಯ ಮಗನಾದ ಮಾಕೀರನ ಸಂತತಿಯವರಿಗೆ ಗಿಲ್ಯಾದ್ ಪ್ರದೇಶವನ್ನು ಕೊಡಲಾಗಿ ಅವರು ಅಲ್ಲೇ ವಾಸಮಾಡಿಕೊಂಡರು.

41 ಮನಸ್ಸೆಯ ವಂಶದವನಾದ ಯಾಯೀರನು ಯುದ್ಧಕ್ಕೆ ಹೊರಟು ಅಮೋರಿಯರ ಗ್ರಾಮಗಳನ್ನು ಸ್ವಾಧೀನಮಾಡಿಕೊಂಡು ಅವುಗಳಿಗೆ ಯಾಯೀರನ ಗ್ರಾಮಗಳೆಂದು ಹೆಸರಿಟ್ಟನು.

42 ನೋಬಹನು ಯುದ್ಧಕ್ಕೆ ಹೊರಟು ಕೆನಾತ್ ಎಂಬ ಪಟ್ಟಣವನ್ನೂ ಅದಕ್ಕೆ ಸೇರಿದ ಊರುಗಳನ್ನೂ ಜಯಿಸಿ ಅದಕ್ಕೆ ನೋಬಹ ಎಂದು ತನ್ನ ಹೆಸರನ್ನೇ ಕೊಟ್ಟನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು