ಅರಣ್ಯಕಾಂಡ 30 - ಕನ್ನಡ ಸತ್ಯವೇದವು J.V. (BSI)ಹರಕೆತೀರಿಸುವದು 1 ಮೋಶೆಯು ಇಸ್ರಾಯೇಲ್ಯರ ಕುಲಾಧಿಪತಿಗಳಿಗೆ ಹೇಳಿದ್ದೇನೆಂದರೆ - ಯೆಹೋವನು ಹೀಗೆ ಆಜ್ಞಾಪಿಸಿದ್ದಾನೆ - 2 ಯಾವನಾದರೂ ಯೆಹೋವನಿಗೆ ಹರಕೆಮಾಡಿದರೆ ಇಲ್ಲವೆ ತಾನು ಯಾವದಾದರೂ ಒಂದನ್ನು ಮುಟ್ಟದೆ ಇರುವೆನೆಂದು ಆಣೆಯಿಟ್ಟುಕೊಂಡರೆ ಅವನು ತನ್ನ ಮಾತನ್ನು ಮೀರದೆ ಹೇಳಿದಂತೆಯೇ ನೆರವೇರಿಸಬೇಕು. 3 ಸ್ತ್ರೀಯು ಕನ್ಯಾವಸ್ಥೆಯಲ್ಲಿ ತಂದೆಯ ಮನೆಯಲ್ಲಿದ್ದು ಯೆಹೋವನಿಗೆ ಹರಕೆಯನ್ನು ಮಾಡಿದಾಗ ಇಲ್ಲವೆ ಯಾವದಾದರೂ ಒಂದನ್ನು ಮುಟ್ಟದೆ ಇರುವೆನೆಂದು ಪ್ರತಿಜ್ಞೆಯನ್ನು ಮಾಡಿಕೊಂಡಾಗ 4 ಅವಳ ತಂದೆಯು ಆ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಅವಳು ಆ ಹರಕೆಯನ್ನು ನೆರವೇರಿಸಲೇಬೇಕು; ಯಾವದನ್ನು ಮುಟ್ಟದೆ ಇರುವೆನೆಂದು ಹೇಳಿದಳೋ ಅದನ್ನು ಮುಟ್ಟಲೇಬಾರದು. 5 ಆದರೆ ತಂದೆ ಆ ಸಂಗತಿಯನ್ನು ತಿಳಿದಾಗ ಹಾಗೆ ಮಾಡಬಾರದೆಂದು ಅಪ್ಪಣೆಕೊಟ್ಟರೆ ಅವಳು ಮಾಡಿದ ಹರಕೆಗಳೂ ಪ್ರತಿಜ್ಞೆಗಳೂ ವ್ಯರ್ಥವಾಗುವವು. ತಂದೆ ಬೇಡವೆಂದು ಹೇಳಿದದರಿಂದ ಯೆಹೋವನು ಅವಳನ್ನು ದೋಷಿಯೆಂದು ಎಣಿಸುವದಿಲ್ಲ. 6 ಅವಳು ಮಾಡಿದ ಹರಕೆ ಇಲ್ಲವೆ ಯೋಚಿಸದೆ ಮಾಡಿದ ಪ್ರತಿಜ್ಞೆ ನಡೆಯುವಷ್ಟರೊಳಗೆ ಅವಳಿಗೆ ಮದುವೆಯಾದ ಪಕ್ಷದಲ್ಲಿ 7 ಗಂಡನು ಆ ಪ್ರಮಾಣದ ಸಂಗತಿಯನ್ನು ತಿಳಿದು ಸುಮ್ಮನಿದ್ದರೆ ಆ ಹರಕೆಗಳೂ ಪ್ರತಿಜ್ಞೆಗಳೂ ನಡೆಯಬೇಕು. 8 ಆದರೆ ಗಂಡನು ಕೇಳಿದಾಗಲೇ ಬೇಡವೆಂದು ಅಪ್ಪಣೆಕೊಟ್ಟರೆ ಆ ಹರಕೆಯು ಇಲ್ಲವೆ ಅವಿಚಾರ ಪ್ರತಿಜ್ಞೆಯು ನಿರರ್ಥಕವಾಗುವವು. ಯೆಹೋವನು ಅವಳನ್ನು ದೋಷಿಯೆಂದು ಎಣಿಸುವದಿಲ್ಲ. 9 ವಿಧವೆಯು ಇಲ್ಲವೆ ಗಂಡನಿಂದ ಬಿಡಲ್ಪಟ್ಟ ಸ್ತ್ರೀಯು ಇಂಥ ಪ್ರಮಾಣಮಾಡಿಕೊಂಡರೆ ಅದು ನಿಲ್ಲುವದು; ಅವಳು ಅದನ್ನು ನೆರವೇರಿಸಬೇಕು. 10 ಮುತ್ತೈದೆಯು ಅಂಥ ಹರಕೆಯನ್ನಾಗಲಿ ಪ್ರಮಾಣವನ್ನಾಗಲಿ ಮಾಡಿದಾಗ 11 ಅವಳ ಗಂಡನು ತಿಳಿದು ಅಡ್ಡಿಮಾಡದೆ ಸುಮ್ಮನಿದ್ದರೆ ಆ ಹರಕೆಗಳೂ ಪ್ರತಿಜ್ಞೆಗಳೂ ನಿಲ್ಲುವವು. 12 ಆದರೆ ಗಂಡನು ಅವುಗಳನ್ನು ತಿಳಿದಾಗಲೇ ಬೇಡವೆಂದರೆ ಅವು ರದ್ದಾಗುವವು. ಗಂಡನು ರದ್ದುಮಾಡಿದ್ದರಿಂದ ಅಂಥವಳು ಯೆಹೋವನಿಂದ ದೋಷಿಯೆಂದು ಎಣಿಸಲ್ಪಡುವದಿಲ್ಲ. 13 ಹೆಂಡತಿ ಮಾಡಿದ ಹರಕೆಯನ್ನೂ ಉಪವಾಸವಾಗಿರುವೆನೆಂದು ಅವಳು ಮಾಡಿದ ಪ್ರಮಾಣವನ್ನೂ ಸ್ಥಾಪಿಸುವದಕ್ಕಾಗಲಿ ರದ್ದು ಮಾಡುವದಕ್ಕಾಗಲಿ ಗಂಡನಿಗೆ ಅಧಿಕಾರವಿರುವದು. 14 ಆದರೆ ಅವಳ ಗಂಡನು ಯಾವ ಅಡ್ಡಿಯನ್ನೂ ಮಾಡದೆ ದಿನದಿನಕ್ಕೆ ಸುಮ್ಮನಿದ್ದರೆ ಅವನು ಅವಳ ಹರಕೆಗಳನ್ನೂ ಪ್ರತಿಜ್ಞೆಗಳನ್ನೂ ಸ್ಥಾಪಿಸಿದ ಹಾಗಾಗುವದು. 15 ಅವನು ತರುವಾಯ ಬೇಡವೆಂದರೆ ಆ ಪಾಪದ ಫಲವನ್ನು ಅವನೇ ಅನುಭವಿಸಬೇಕು. 16 ಗಂಡಹೆಂಡತಿಯರ ವಿಷಯವಾಗಿಯೂ ಇನ್ನೂ ಮದುವೆಯಿಲ್ಲದ ಹೆಂಗಸು ಮತ್ತು ಅವಳ ತಂದೆ ಇವರ ವಿಷಯವಾಗಿಯೂ [ಹರಕೆಗಳ ಸಂಬಂಧದಲ್ಲಿ] ಯೆಹೋವನು ಮೋಶೆಗೆ ಕೊಟ್ಟ ನಿಯಮಗಳು ಇವೇ. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India