ಅರಣ್ಯಕಾಂಡ 28 - ಕನ್ನಡ ಸತ್ಯವೇದವು J.V. (BSI)ನಿತ್ಯಸರ್ವಾಂಗಹೋಮವನ್ನೂ ಹಬ್ಬದ ದಿನಗಳಲ್ಲಿ ಹೆಚ್ಚಾಗಿ ಮಾಡಬೇಕಾದ ಯಜ್ಞಗಳನ್ನೂ ಕುರಿತದ್ದು 1 ಯೆಹೋವನು ಮೋಶೆಗೆ ಹೇಳಿದ್ದೇನಂದರೆ - 2 ನನಗೆ ಸಮರ್ಪಿಸಬೇಕಾದ ಯಜ್ಞಗಳನ್ನು ಅಂದರೆ ನನಗೆ ಸುಗಂಧಹೋಮ ಮಾಡುವದಕ್ಕಾಗಿ ಇಸ್ರಾಯೇಲ್ಯರು ನನಗೋಸ್ಕರ ತರುವ ಆಹಾರವನ್ನು ತಕ್ಕ ಕಾಲಗಳಲ್ಲಿ ತಂದು ಎಚ್ಚರಿಕೆಯಿಂದ ಸಮರ್ಪಿಸಬೇಕೆಂದು ಅವರಿಗೆ ಆಜ್ಞಾಪಿಸು. 3 ಇದರ ವಿಷಯದಲ್ಲಿ ನೀನು ಅಪ್ಪಣೆ ಮಾಡಬೇಕಾದದ್ದೇನಂದರೆ - 4 ನೀವು ದಿನಂಪ್ರತಿಯೂ ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಹೊತ್ತಾರೆಯಲ್ಲಿ ಒಂದು ಕುರಿಯನ್ನೂ ಸಾಯಂಕಾಲದಲ್ಲಿ ಒಂದು ಕುರಿಯನ್ನೂ ಅಂತು ಎರಡು ಪೂರ್ಣಾಂಗವಾದ ವರುಷದ ಕುರಿಗಳನ್ನು ಸಮರ್ಪಿಸಬೇಕು. 5 [ಹೊತ್ತಾರೆಯ ಕುರಿಯೊಂದಿಗೆ] ನೀವು ಧಾನ್ಯನೈವೇದ್ಯಕ್ಕಾಗಿ ಒಂದುವರೆ ಸೇರು ಶ್ರೇಷ್ಠವಾದ ಎಣ್ಣೆಯನ್ನೂ ಮೂರು ಸೇರು ಗೋದಿಹಿಟ್ಟನ್ನೂ ಬೆರಸಿ ಸಮರ್ಪಿಸಬೇಕು. 6 ನೀವು ಪ್ರತಿನಿತ್ಯವೂ ಯೆಹೋವನಿಗೆ ಸುಗಂಧಕರವಾದ ಈ ಸರ್ವಾಂಗಹೋಮವನ್ನು ಮಾಡಬೇಕೆಂಬದಾಗಿ ಸೀನಾಯಿ ಬೆಟ್ಟದಲ್ಲಿ ನೇಮಕವಾಯಿತು. 7 ಆ ಕುರಿಯೊಂದಿಗೆ ಪಾನದ್ರವ್ಯಾರ್ಪಣೆಗಾಗಿ ಒಂದುವರೆ ಸೇರು ಮದ್ಯವನ್ನು ದೇವಸ್ಥಾನದಲ್ಲಿ ಯೆಹೋವನಿಗೋಸ್ಕರ ಹೊಯ್ದುಬಿಡಬೇಕು. 8 ಸಾಯಂಕಾಲದಲ್ಲಿ ಎರಡನೆಯ ಕುರಿಯನ್ನು ಹೋಮಮಾಡುವಾಗ ಹೊತ್ತಾರೆಯಲ್ಲಿ ಮಾಡಿದ ಪ್ರಕಾರವೇ ಅದರೊಂದಿಗೆ ಧಾನ್ಯದ್ರವ್ಯಪಾನದ್ರವ್ಯಗಳನ್ನೂ ಸಮರ್ಪಿಸಬೇಕು. ಅದು ಯೆಹೋವನಿಗೆ ಸುಗಂಧಕರ ಹೋಮವಾಗಿರುವದು. 9-10 ದಿನಂಪ್ರತಿಯೂ ಮಾಡಬೇಕಾದ ಸರ್ವಾಂಗಹೋಮವು, ಅದಕ್ಕೆ ಸೇರಿದ ಪಾನದ್ರವ್ಯವು ಇವುಗಳನ್ನಲ್ಲದೆ ನೀವು ಸಬ್ಬತ್‍ದಿನದಲ್ಲಿ ಹೆಚ್ಚಾಗಿ ಎರಡು ಪೂರ್ಣಾಂಗವಾದ ವರುಷದ ಕುರಿಗಳನ್ನೂ ಧಾನ್ಯದ್ರವ್ಯಾರ್ಪಣೆಗಾಗಿ ಎಣ್ಣೆ ಬೆರಸಿದ ಆರು ಸೇರು ಗೋದಿಹಿಟ್ಟನ್ನೂ ಅದಕ್ಕೆ ತಕ್ಕ ಪಾನದ್ರವ್ಯವನ್ನೂ ಸಮರ್ಪಿಸಬೇಕು. 11 ಅಮಾವಾಸ್ಯೆಯಲ್ಲಿ ನೀವು ಸರ್ವಾಂಗಹೋಮಕ್ಕಾಗಿ ಎರಡು ಹೋರಿ, ಒಂದು ಟಗರು, ಏಳು ಪೂರ್ಣಾಂಗವಾದ ವರುಷದ ಕುರಿ ಇವುಗಳನ್ನು ಯೆಹೋವನಿಗೆ ಸಮರ್ಪಿಸಬೇಕು. 12 ಇವುಗಳೊಡನೆ ಧಾನ್ಯನೈವೇದ್ಯಕ್ಕಾಗಿ ನೀವು ಪ್ರತಿಯೊಂದು ಹೋರಿಗೆ ಒಂಭತ್ತು ಸೇರೂ 13 ಟಗರಿಗೆ ಆರು ಸೇರೂ ಕುರಿಯೊಂದಕ್ಕೆ ಮೂರು ಸೇರೂ ಈ ಮೇರೆಗೆ ಎಣ್ಣೆ ಬೆರಸಿದ ಗೋದಿಹಿಟ್ಟನ್ನು ಸಮರ್ಪಿಸಬೇಕು. ಇದು ಯೆಹೋವನಿಗೆ ಸುಗಂಧಕರವಾದ ಸರ್ವಾಂಗಹೋಮವಾಗಿರುವದು. 14 ಇವುಗಳಿಗೆ ತಕ್ಕ ಪಾನದ್ರವ್ಯಾರ್ಪಣೆ ಯಾವದಂದರೆ - ಒಂದೊಂದು ಹೋರಿಯೊಡನೆ ಮೂರು ಸೇರೂ ಟಗರಿನೊಡನೆ ಎರಡು ಸೇರೂ ಕುರಿಯೊಡನೆ ಒಂದುವರೆ ಸೇರೂ ದ್ರಾಕ್ಷಾರಸ. ಸಂವತ್ಸರದ ಪ್ರತಿ ಅಮಾವಾಸ್ಯೆಯಲ್ಲಿಯೂ ಹೀಗೆ ಸರ್ವಾಂಗಹೋಮವನ್ನು ಮಾಡಬೇಕು; 15 ಮತ್ತು ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತವನ್ನು ಯೆಹೋವನಿಗೆ ಸಮರ್ಪಿಸಬೇಕು. ನಿತ್ಯಸರ್ವಾಂಗಹೋಮವನ್ನೂ ಅದಕ್ಕೆ ಸೇರಿದ ಪಾನದ್ರವ್ಯವನ್ನೂ ಸಮರ್ಪಿಸುವದಲ್ಲದೆ [ಅಮಾವಾಸ್ಯೆಯಲ್ಲಿ] ಇವುಗಳನ್ನು ಹೆಚ್ಚಾಗಿ ಸಮರ್ಪಿಸಬೇಕು. 16 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಯೆಹೋವನು ನೇವಿುಸಿದ ಪಸ್ಕಹಬ್ಬವಾಗಬೇಕು. 17 ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಜಾತ್ರೆ ಪ್ರಾರಂಭವಾಗುವದು; ಏಳು ದಿನಗಳವರೆಗೂ ಹುಳಿಯಿಲ್ಲದ ರೊಟ್ಟಿಗಳನ್ನು ಊಟಮಾಡಬೇಕು. 18 ಮೊದಲನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು; ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡಿಸಬಾರದು; 19 ಯೆಹೋವನಿಗೆ ಸರ್ವಾಂಗಹೋಮಕ್ಕಾಗಿ ಎರಡು ಹೋರಿಗಳನ್ನೂ ಒಂದು ಟಗರನ್ನೂ ವರುಷದ ಏಳು ಕುರಿಗಳನ್ನೂ ಸಮರ್ಪಿಸಬೇಕು; ಈ ಪಶುಗಳು ಪೂರ್ಣಾಂಗವಾಗಿಯೇ ಇರಬೇಕು. 20 ಇವುಗಳೊಂದಿಗೆ ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಹಿಟ್ಟನ್ನು ತಂದುಕೊಡಬೇಕು; ಹೇಗಂದರೆ ಹೋರಿಗೆ ಒಂಭತ್ತು ಸೇರು, ಟಗರಿಗೆ ಆರು ಸೇರು, 21 ಒಂದೊಂದು ಕುರಿಗೆ ಮೂರು ಮೂರು ಸೇರು ಇಷ್ಟೇ. 22 ಅದಲ್ಲದೆ ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತವನ್ನು ಸಮರ್ಪಿಸಬೇಕು. 23 ನಿತ್ಯಗಟ್ಟಳೆಯಾಗಿರುವ ಪ್ರತಿದಿನದ ಪ್ರಾತಃಕಾಲ ಸರ್ವಾಂಗಹೋಮವನ್ನಲ್ಲದೆ ಇವುಗಳನ್ನು ಹೆಚ್ಚಾಗಿ ಸಮರ್ಪಿಸಬೇಕು. 24 ಆ ಏಳು ದಿನಗಳಲ್ಲಿಯೂ ನಿತ್ಯಸರ್ವಾಂಗಹೋಮವನ್ನೂ ಅದಕ್ಕೆ ಸೇರಿದ ಪಾನದ್ರವ್ಯನೈವೇದ್ಯವನ್ನೂ ಸಮರ್ಪಿಸುವದಲ್ಲದೆ ಮೇಲೆ ಕಂಡ ಕ್ರಮದ ಮೇರೆಗೆ ಪ್ರತಿದಿನವೂ ಹೋಮರೂಪವಾಗಿ ಯೆಹೋವನಿಗೆ ಆಹಾರವನ್ನು ಸಮರ್ಪಿಸಿ ಆತನಿಗೋಸ್ಕರ ಸುವಾಸನೆಯನ್ನುಂಟುಮಾಡಬೇಕು. 25 ಏಳನೆಯ ದಿನದಲ್ಲೂ ಸಭೆಕೂಡಬೇಕು; ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡಿಸಬಾರದು. 26 [ಪಸ್ಕವಾದ ಏಳು] ವಾರಗಳ ಮೇಲೆ ನೀವು ಹೊಸ ಬೆಳೆಯ ಗೋದಿಯನ್ನು ಯೆಹೋವನಿಗೆ ನೈವೇದ್ಯಮಾಡುವಾಗ ಪ್ರಥಮ ಫಲಾರ್ಪಣೆಯ ದಿನದಲ್ಲಿ ನೀವು ಯಾವ ಉದ್ಯೋಗವನ್ನೂ ನಡಿಸದೆ ದೇವಾರಾಧನೆಗಾಗಿ ಸಭೆಕೂಡಬೇಕು. 27 ಆ ದಿನದಲ್ಲಿ ನೀವು ಯೆಹೋವನಿಗೆ ಸುವಾಸನೆಯನ್ನುಂಟುಮಾಡುವದಕ್ಕೋಸ್ಕರ ಸರ್ವಾಂಗಹೋಮಕ್ಕಾಗಿ ಎರಡು ಹೋರಿ, ಒಂದು ಟಗರು, ವರುಷದ ಏಳು ಕುರಿ ಇವುಗಳನ್ನೂ; 28 ಧಾನ್ಯನೈವೇದ್ಯಕ್ಕಾಗಿ ಎಣ್ಣೆ ಬೆರಸಿದ ಗೋದಿಹಿಟ್ಟನ್ನು ಅಂದರೆ ಪ್ರತಿಯೊಂದು ಹೋರಿಗೆ ಒಂಭತ್ತು ಸೇರು, 29 ಟಗರಿಗೆ ಆರು ಸೇರು, ಕುರಿಗೆ ಮೂರು ಸೇರು ಹಿಟ್ಟನ್ನೂ; 30 ದೋಷಪರಿಹಾರಕಯಜ್ಞಕ್ಕಾಗಿ ಒಂದು ಹೋತವನ್ನೂ ಸಮರ್ಪಿಸಬೇಕು. 31 ಈ ಪಶುಗಳೆಲ್ಲಾ ಪೂರ್ಣಾಂಗವಾಗಿಯೇ ಇರಬೇಕು. ನಿತ್ಯಸರ್ವಾಂಗಹೋಮ ಮತ್ತು ಅದಕ್ಕೆ ಸೇರಿದ ಧಾನ್ಯದ್ರವ್ಯನೈವೇದ್ಯ ಇವುಗಳನ್ನಲ್ಲದೆ ಮೇಲೆ ಕಂಡ ಯಜ್ಞಗಳನ್ನೂ ಅವುಗಳೊಡನೆ ಕೊಡಬೇಕಾದ ಪಾನದ್ರವ್ಯ ನೈವೇದ್ಯಗಳನ್ನೂ ಹೆಚ್ಚಾಗಿ ಸಮರ್ಪಿಸಬೇಕು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India