Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 27 - ಕನ್ನಡ ಸತ್ಯವೇದವು J.V. (BSI)


ಗಂಡುಮಕ್ಕಳಿಲ್ಲದವರ ಸ್ವಾಸ್ತ್ಯದ ವಿಷಯದಲ್ಲಿ ನಡೆಯತಕ್ಕ ಕ್ರಮ

1 ಯೋಸೇಫನ ಕುಮಾರ ಮನಸ್ಸೆಯ ವಂಶದವರೊಳಗೆ ಮನಸ್ಸೆಗೆ ಹುಟ್ಟಿದ ಮಾಕೀರನ ಮರಿಮಗನೂ ಗಿಲ್ಯಾದನ ಮೊಮ್ಮಗನೂ ಹೇಫೆರನ ಮಗನೂ ಆದ ಚಲ್ಪಹಾದನ ಹೆಣ್ಣುಮಕ್ಕಳಾದ ಮಹ್ಲಾ, ನೋವಾ, ಹೊಗ್ಲಾ, ವಿುಲ್ಕಾ, ತಿರ್ಚಾಎಂಬವರು ಒಂದು ವಿಜ್ಞಾಪನೆಯನ್ನು ಮಾಡಿಕೊಳ್ಳುವದಕ್ಕೆ ಬಂದರು.

2 ಅವರು ದೇವದರ್ಶನದ ಗುಡಾರದ ಬಾಗಲಿನ ಬಳಿಯಲ್ಲಿ ಮೋಶೆ, ಮಹಾಯಾಜಕನಾದ ಎಲ್ಲಾಜಾರ್, ಕುಲಾಧಿಪತಿಗಳು, ಸರ್ವಸಮೂಹದವರು ಇವರೆಲ್ಲರ ಮುಂದೆ ನಿಂತು ಅವರಿಗೆ -

3 ನಮ್ಮ ತಂದೆ ಅರಣ್ಯದಲ್ಲಿ ಸತ್ತುಹೋದನು; ಅವನು ಕೋರಹನ ಜೊತೆಯಲ್ಲಿ ಯೆಹೋವನಿಗೆ ವಿರೋಧವಾಗಿ ತಿರುಗಿಬಿದ್ದವರೊಳಗೆ ಸೇರಿದವನಲ್ಲ; ಅವನು ಸತ್ತದ್ದು ಸ್ವಂತ ಕರ್ಮಫಲವೇ. ಅವನಿಗೆ ಗಂಡು ಮಕ್ಕಳಿರಲಿಲ್ಲ.

4 ನಮ್ಮ ತಂದೆಗೆ ಗಂಡುಮಗನಿಲ್ಲದ ಮಾತ್ರದಿಂದ ಅವನ ಹೆಸರು ಕುಲದಿಂದ ತೆಗೆಯಲ್ಪಡುವದು ನ್ಯಾಯವೋ? ತಂದೆಯ ಕುಲದವರೊಂದಿಗೆ ನಮಗೂ ಸ್ವಾಸ್ತ್ಯವನ್ನು ಕೊಡಬೇಕೆಂದು ಕೇಳಿಕೊಂಡರು.

5 ಮೋಶೆಯು ಅವರ ಪ್ರಾರ್ಥನೆಯನ್ನು ಯೆಹೋವನ ಬಳಿಯಲ್ಲಿ ವಿಚಾರಿಸಲಾಗಿ ಆತನು ಅವನಿಗೆ ಆಜ್ಞಾಪಿಸಿದ್ದೇನಂದರೆ -

6-7 ಚಲ್ಪಹಾದನ ಹೆಣ್ಣು ಮಕ್ಕಳು ಹೇಳುವದು ನ್ಯಾಯ. ಅವರ ತಂದೆಯ ಕುಲದವರೊಂದಿಗೆ ಅವರಿಗೂ ನೀನು ಸ್ವಾಸ್ತ್ಯವನ್ನು ಕೊಡಬೇಕು; ತಂದೆಯ ಸ್ವಾಸ್ತ್ಯವು ಅವರಿಗೆ ಬರಲಿ.

8 ಮತ್ತು ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸು - ಯಾವನಾದರೂ ಮಗನಿಲ್ಲದೆ ಸತ್ತರೆ ಅವನ ಸ್ವಾಸ್ತ್ಯವು ಅವನ ಮಗಳಿಗೆ ಆಗಬೇಕು.

9 ಮಗಳು ಇಲ್ಲದ ಪಕ್ಷಕ್ಕೆ ಅವನ ಸ್ವಾಸ್ತ್ಯವನ್ನು ಅವನ ಅಣ್ಣತಮ್ಮಂದಿರಿಗೆ ಕೊಡಬೇಕು;

10 ಅಣ್ಣತಮ್ಮಂದಿರಿಲ್ಲದ ಪಕ್ಷಕ್ಕೆ ತಂದೆಯ ಅಣ್ಣತಮ್ಮಂದಿರಿಗೆ ಕೊಡಬೇಕು;

11 ಇವರೂ ಇಲ್ಲದಿದ್ದರೆ ಕುಲದವರಲ್ಲಿ ಸಮೀಪ ಬಂಧುವಿಗೆ ಕೊಡಬೇಕು; ಇವನೇ ಅದನ್ನು ಅನುಭೋಗಿಸಲಿ. ಯೆಹೋವನು ಮೋಶೆಗೆ ಅಪ್ಪಣೆಮಾಡಿದ ಈ ತೀರ್ಮಾನವು ಇಸ್ರಾಯೇಲ್ಯರಿಗೆ ನ್ಯಾಯವಿಧಿಯಾಗಿರಬೇಕು.


ಮೋಶೆಯ ತರುವಾಯ ಇಸ್ರಾಯೇಲ್ಯರ ಮೇಲೆ ಇರುವದಕ್ಕೆ ಯೆಹೋವನು ಯೆಹೋಶುವನನ್ನು ನೇವಿುಸಿದ್ದು

12 ಯೆಹೋವನು ಮೋಶೆಗೆ - ನೀನು ಈ ಅಬಾರೀಮ್ ಬೆಟ್ಟವನ್ನು ಹತ್ತಿ ನಾನು ಇಸ್ರಾಯೇಲ್ಯರಿಗೆ ವಾಗ್ದಾನಮಾಡಿದ ದೇಶವನ್ನು ನೋಡು.

13 ನಿನ್ನ ಅಣ್ಣನಾದ ಆರೋನನು ಪಿತೃಗಳ ಬಳಿಗೆ ಸೇರಿದಂತೆಯೇ ನೀನೂ ಆ ದೇಶವನ್ನು ನೋಡಿದ ಮೇಲೆ ಸೇರಬೇಕು.

14 ಚಿನ್ ಅರಣ್ಯದಲ್ಲಿ ಇಸ್ರಾಯೇಲ್ಯರ ಸಮೂಹದವರು ನನ್ನೊಡನೆ ವಿವಾದಿಸಿದಾಗ ನೀವಿಬ್ಬರೂ ನನ್ನ ಗೌರವವನ್ನು ಅವರ ಎದುರಿನಲ್ಲಿ ಕಾಪಾಡದೆ ನನ್ನ ಆಜ್ಞೆಯನ್ನು ಉಲ್ಲಂಘಿಸಿದದರಿಂದ ಆ ದೇಶವನ್ನು ಸೇರಬಾರದು ಎಂದು ಹೇಳಿದನು. ಚಿನ್ ಅರಣ್ಯದಲ್ಲಿ ಮೆರೀಬಾ ಕಾದೇಶಿನ ಪ್ರವಾಹದ ಹತ್ತಿರ ನಡೆದ ಸಂಗತಿಯನ್ನು ಸೂಚಿಸಿ ಇದನ್ನು ಹೇಳಿದನು.

15-16 ಆಗ ಮೋಶೆಯು ಯೆಹೋವನಿಗೆ - ಯೆಹೋವನೇ, ಎಲ್ಲಾ ಮನುಷ್ಯರ ಆತ್ಮಗಳ ದೇವರೇ, ನಿನ್ನವರಾದ ಈ ಸಮೂಹದವರು ಕುರುಬನಿಲ್ಲದ ಕುರಿಗಳಂತೆ ಆಗಬಾರದು.

17 ಆದದರಿಂದ ಅವರ ಕಾರ್ಯಗಳನ್ನು ನಿರ್ವಹಿಸುವದಕ್ಕೂ ನಾಯಕನಾಗಿ ಅವರ ಮುಂದೆ ಹೊರಡುವದಕ್ಕೂ ಅವರನ್ನು ಹಿಂದಕ್ಕೆ ಕರಕೊಂಡು ಬರುವದಕ್ಕೂ ಒಬ್ಬ ಪುರುಷನನ್ನು ನೇವಿುಸಬೇಕೆಂದು ಬೇಡಿದನು.

18 ಅದಕ್ಕೆ ಯೆಹೋವನು - ನೂನನ ಮಗನಾದ ಯೆಹೋಶುವನು ಆತ್ಮವರ ಸಂಪನ್ನನು;

19 ಅವನನ್ನು ಮಹಾಯಾಜಕನಾದ ಎಲ್ಲಾಜಾರನ ಮತ್ತು ಸಮೂಹದವರೆಲ್ಲರ ಮುಂದೆ ನಿಲ್ಲಿಸಿ ಅವನ ಮೇಲೆ ಕೈಯಿಟ್ಟು ಅವರ ಎದುರಿನಲ್ಲೇ ಅಧಿಕಾರವನ್ನು ಕೊಡಬೇಕು.

20 ಸಮೂಹದವರೆಲ್ಲರೂ ಅವನಿಗೆ ವಿಧೇಯರಾಗುವಂತೆ ನಿನಗಿರುವ ಗೌರವವನ್ನು ಅವನಿಗೆ ಕೊಡಬೇಕು.

21 [ಯೆಹೋವನ ಚಿತ್ತವನ್ನು ತಿಳುಕೊಳ್ಳುವದಕ್ಕೆ] ಅವನು ಮಹಾಯಾಜಕನಾದ ಎಲ್ಲಾಜಾರನ ಹತ್ತಿರ ಬರಬೇಕು. ಎಲ್ಲಾಜಾರನು ಯೆಹೋವನ ಸನ್ನಿಧಿಯಲ್ಲಿ ಊರೀಮ್ ಎಂಬ ವಸ್ತುವಿನ ಮೂಲಕ ಅವನಿಗೋಸ್ಕರ ವಿಚಾರಣೆಮಾಡುವನು. ಯೆಹೋಶುವನೂ ಇಸ್ರಾಯೇಲ್ಯರ ಸರ್ವಸಮೂಹದವರೂ ಅವನ ಮಾತಿನಂತೆ ಹೊರಡಲೂಬೇಕು ಬರಲೂಬೇಕು ಎಂದು ಆಜ್ಞಾಪಿಸಿದನು.

22 ಯೆಹೋವನ ಅಪ್ಪಣೆಯ ಮೇರೆಗೆ ಮೋಶೆಯು ಯೆಹೋಶುವನನ್ನು ಮಹಾಯಾಜಕನಾದ ಎಲ್ಲಾಜಾರನ ಮತ್ತು ಸರ್ವಸಮೂಹದವರ ಮುಂದೆ ನಿಲ್ಲಿಸಿ

23 ಅವನ ಮೇಲೆ ಕೈಯಿಟ್ಟು ಅಧಿಕಾರವನ್ನು ಕೊಟ್ಟನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು