Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 23 - ಕನ್ನಡ ಸತ್ಯವೇದವು J.V. (BSI)

1 ಆಗ ಬಿಳಾಮನು - ಇಲ್ಲಿ ನೀನು ಏಳು ಯಜ್ಞಪೀಠಗಳನ್ನು ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಪಡಿಸಬೇಕೆಂದು ಬಾಲಾಕನಿಗೆ ಹೇಳಿದನು.

2 ಬಾಲಾಕನು ಹಾಗೆಯೇ ಮಾಡಿದನು. ಬಾಲಾಕನೂ ಬಿಳಾಮನೂ ಪ್ರತಿಯಜ್ಞಪೀಠದ ಮೇಲೆ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗ ಹೋಮವಾಗಿ ಸಮರ್ಪಿಸಿದಾಗ

3 ಬಿಳಾಮನು ಬಾಲಾಕನಿಗೆ - ನೀನು ಸರ್ವಾಂಗಹೋಮ ಮಾಡಿದ ಸ್ಥಳದಲ್ಲೇ ಇರು; ನಾನು ಸ್ವಲ್ಪ ದೂರ ಹೋಗಿ ಬರುತ್ತೇನೆ; ಒಂದು ವೇಳೆ ಯೆಹೋವನು ನನಗೆ ದರ್ಶನ ಕೊಟ್ಟಾನು; ಆತನು ನನಗೆ ಸೂಚಿಸುವ ಸಂಗತಿಯನ್ನು ನಿನಗೆ ತಿಳಿಸುವೆನು ಎಂದು ಹೇಳಿ ಮರವಿಲ್ಲದ ಒಂದು ದಿನ್ನೆಗೆ ಹೋದನು.

4 ದೇವರು ಬಿಳಾಮನಿಗೆ ಎದುರಾಗಿ ಬಂದಾಗ ಬಿಳಾಮನು ಆತನಿಗೆ - ನಾನು ಆ ಏಳು ಯಜ್ಞಪೀಠಗಳನ್ನು ಕಟ್ಟಿಸಿ ಒಂದೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದ್ದೇನೆ ಎಂದು ಹೇಳಲಾಗಿ

5 ಯೆಹೋವನು ಬಿಳಾಮನಿಗೆ ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು - ನೀನು ಬಾಲಾಕನ ಬಳಿಗೆ ತಿರಿಗಿಹೋಗಿ ಹೀಗೆ ಹೀಗೆ ಹೇಳಬೇಕು ಎಂದು ಆಜ್ಞಾಪಿಸಿದನು.

6 ಬಿಳಾಮನು ಬಾಲಾಕನ ಬಳಿಗೆ ತಿರಿಗಿ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ್ದ ಪೀಠದ ಹತ್ತಿರ ನಿಂತಿದ್ದನು; ಮೋವಾಬ್ಯರ ಪ್ರಧಾನರೆಲ್ಲರೂ ಅವನ ಬಳಿಯಲ್ಲಿದ್ದರು.

7 ಆಗ ಬಿಳಾಮನು ಪದ್ಯರೂಪವಾಗಿ ನುಡಿದದ್ದೇನಂದರೆ - ಬಾಲಾಕನು ನನ್ನನ್ನು ಅರಾವಿುನಿಂದ ಕರಿಸಿದನು; ಮೋವಾಬ್ಯರ ಅರಸನು ಮೂಡಲಬೆಟ್ಟಗಳಿಂದ ನನ್ನನ್ನು ಬರಮಾಡಿದನು. ನೀನು ಬಂದು ಯಾಕೋಬವಂಶದವರನ್ನು ನನಗೋಸ್ಕರ ಶಪಿಸಬೇಕು; ಇಸ್ರಾಯೇಲ್ಯರಿಗೆ ದುರ್ಗತಿಯುಂಟಾಗಲಿ ಎಂದು ಆಕ್ರೋಶಿಸಬೇಕು ಎಂದು ನನಗೆ ಹೇಳಿದನು.

8 ನಾನು ಅವರನ್ನು ಏನೆಂದು ಶಪಿಸಲಿ; ದೇವರು ಶಪಿಸಲಿಲ್ಲವಲ್ಲಾ. ಏನೆಂದು ಆಕ್ರೋಶಿಸಲಿ; ಯೆಹೋವನು ಆಕ್ರೋಶಿಸಲಿಲ್ಲವಲ್ಲಾ.

9 ಬೆಟ್ಟದ ಶಿಖರದಿಂದ ನಾನು ಅವರನ್ನು ಕಂಡೆನು; ಗುಡ್ಡದಿಂದ ಅವರನ್ನು ನೋಡಿದೆನು. ಆ ಜನಾಂಗವು ತಾನು ಇತರ ಜನಾಂಗಗಳಂತಲ್ಲವೆಂದು ಭಾವಿಸಿಕೊಂಡು ಪ್ರತ್ಯೇಕವಾಗಿ ವಾಸಿಸುತ್ತದೆ.

10 ಧೂಳಿನಷ್ಟು ಅಸಂಖ್ಯವಾದ ಯಾಕೋಬ್ಯರನ್ನು ಲೆಕ್ಕಿಸುವದಕ್ಕೆ ಯಾರಿಂದಾದೀತು; ಇಸ್ರಾಯೇಲ್ಯರ ಕಾಲ್ಭಾಗವನ್ನಾದರೂ ಯಾರು ಹೇಳಬಲ್ಲರು. ಸಜ್ಜನರಾದ ಅವರು ಸಾಯುವ ರೀತಿಯಲ್ಲೇ ನಾನೂ ಸಾಯಬೇಕು. ಅವರಿಗುಂಟಾಗುವ ಅವಸಾನವು ನನಗೂ ಆಗಬೇಕು ಅಂದನು.

11 ಈ ಮಾತುಗಳನ್ನು ಕೇಳಿ ಬಾಲಾಕನು ಅವನಿಗೆ - ಇದೇನು ನೀನು ನನಗೆ ಮಾಡಿದ್ದು; ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರಿಸಿದೆನು; ನೀನು ಅವರನ್ನು ಶಪಿಸದೆ ಆಶೀರ್ವಾದವನ್ನೇ ಮಾಡಿಬಿಟ್ಟಿ ಎಂದು ಹೇಳಿದನು.

12 ಅದಕ್ಕೆ ಬಿಳಾಮನು - ಯೆಹೋವನು ನುಡಿಸುವ ಮಾತನ್ನೇ ನಾನು ಹೇಳಬೇಕಾಗಿದೆಯಲ್ಲವೇ ಅಂದನು.

13 ಆಗ ಬಾಲಾಕನು - ದಯಮಾಡಿ ನನ್ನ ಕೂಡ ಇನ್ನೊಂದು ಸ್ಥಳಕ್ಕೆ ಬಾ; ಅಲ್ಲಿಂದ ಅವರನ್ನು ನೋಡಬಹುದು; ಆದರೆ ಅವರೆಲ್ಲರೂ ಕಾಣಿಸದೆ ಕಡೇಭಾಗವು ಮಾತ್ರ ಕಾಣಿಸುವದು;

14 ಅಲ್ಲಿಂದ ನನಗೋಸ್ಕರ ಅವರನ್ನು ಶಪಿಸಬೇಕು ಎಂದು ಹೇಳಿ ಪಿಸ್ಗಾ ಬೆಟ್ಟದ ತುದಿಯಲ್ಲಿರುವ ಚೋಫೀಮ್ ಬೈಲು ಎಂಬ ಸ್ಥಳಕ್ಕೆ ಕರಕೊಂಡುಹೋಗಿ ಅಲ್ಲಿಯೂ ಏಳು ಯಜ್ಞಪೀಠಗಳನ್ನು ಕಟ್ಟಿಸಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.

15 ಬಿಳಾಮನು ಅವನಿಗೆ - ನೀನು ಇಲ್ಲೇ ಸರ್ವಾಂಗಹೋಮಮಾಡಿದ ಸ್ಥಳದಲ್ಲಿರು; ನಾನು ಅತ್ತಕಡೆ ಹೋಗಿ [ಯೆಹೋವನನ್ನು] ಎದುರುಗೊಳ್ಳುವೆನು ಎಂದು ಹೇಳಿದನು.

16 ಯೆಹೋವನು ಬಿಳಾಮನಿಗೆ ಎದುರಾಗಿ ಬಂದು ಅವನು ಹೇಳಬೇಕಾದ ಮಾತನ್ನು ಕಲಿಸಿಕೊಟ್ಟು - ನೀನು ಬಾಲಾಕನ ಬಳಿಗೆ ತಿರಿಗಿ ಹೋಗಿ ಹೀಗೆ ಹೀಗೆ ಹೇಳಬೇಕು ಅಂದನು.

17 ಬಿಳಾಮನು ಬಾಲಾಕನ ಬಳಿಗೆ ಬಂದಾಗ ಬಾಲಾಕನು ತಾನು ಸರ್ವಾಂಗಹೋಮವನ್ನು ಸಮರ್ಪಿಸಿದ ಪೀಠದ ಹತ್ತಿರ ನಿಂತಿದ್ದನು; ಮೋವಾಬ್ಯರ ಪ್ರಧಾನರು ಅವನ ಸಂಗಡ ಇದ್ದರು.

18 ಬಾಲಾಕನು - ಯೆಹೋವನು ಏನು ಹೇಳಿದ್ದಾನೆ ಎಂದು ಅವನನ್ನು ಕೇಳಲು ಬಿಳಾಮನು ಪದ್ಯರೂಪವಾಗಿ ನುಡಿದದ್ದೇನಂದರೆ - ಬಾಲಾಕನೇ, ಕಿವಿಗೊಟ್ಟು ಕೇಳು; ಚಿಪ್ಪೋರನ ಮಗನೇ, ನನ್ನ ಮಾತನ್ನು ಲಾಲಿಸು.

19 ದೇವರು ಮನುಷ್ಯನಂತೆ ಎರಡು ಮಾತಿನವನಲ್ಲ; ಮಾನವನಂತೆ ಮನಸ್ಸನ್ನು ಬೇರೆ ಮಾಡಿಕೊಳ್ಳುವವನಲ್ಲ. ತಾನು ಹೇಳಿದ ಮೇರೆಗೆ ನಡೆಯುವದಿಲ್ಲವೋ; ಮಾತು ಕೊಟ್ಟನಂತರ ನೆರವೇರಿಸುವದಿಲ್ಲವೋ.

20 ಅವರನ್ನು ಆಶೀರ್ವದಿಸುವದಕ್ಕೆ ನನಗೆ ಅಪ್ಪಣೆಯಾಯಿತು; ಆತನು ಆಶೀರ್ವದಿಸಿದ ನಂತರ ನಾನು ಬದಲಾಯಿಸಲಾರೆನು.

21 ಯಾಕೋಬ್ಯರಲ್ಲಿ ಯಾವ ಆಪತ್ತಿನ ಸೂಚನೆಯೂ ಇಲ್ಲ; ಇಸ್ರಾಯೇಲ್ಯರಿಗೆ ವಿಪತ್ತು ಸಂಭವಿಸುವ ಹಾಗೆ ತೋರುವದಿಲ್ಲ. ಅವರಿಗೆ ದೇವರಾಗಿರುವ ಯೆಹೋವನು ಅವರ ಸಂಗಡಲೇ ಇದ್ದಾನೆ; ಅವರು ತಮ್ಮ ಅರಸನಿಗೋಸ್ಕರ ಮಾಡುವ ಜಯಘೋಷವು ಕೇಳಿಸುತ್ತಲೇ ಇದೆ.

22 ಅವರನ್ನು ಐಗುಪ್ತದೇಶದಿಂದ ಕರಕೊಂಡು ಬಂದವನು ದೇವರೇ; ಅವರು ಕಾಡುಕೋಣದಷ್ಟು ಬಲವುಳ್ಳವರು.

23 ಯಾಕೋಬ್ಯರಲ್ಲಿ ಶಕುನನೋಡುವದು ಇಲ್ಲ; ಇಸ್ರಾಯೇಲ್ಯರಲ್ಲಿ ಕಣಿಕೇಳುವದು ಇಲ್ಲ. ದೇವರು ತಾನು ಮಾಡುವ ಕೆಲಸವನ್ನು ತತ್ಕಾಲದಲ್ಲೇ ಯಾಕೋಬ್ಯರಿಗೆ ತಿಳಿಸುತ್ತಾನೆ; ಸಮಯೋಚಿತವಾಗಿ ಅದನ್ನು ಇಸ್ರಾಯೇಲ್ಯರಿಗೆ ತೋರಿಸುತ್ತಾನೆ.

24 ಆ ಜನಾಂಗದವರು ಪ್ರಾಯದ ಸಿಂಹದಂತೆ ಎದ್ದು ಮೃಗೇಂದ್ರನಂತೆ ನಿಂತಿದ್ದಾರೆ; ಸಿಂಹವು ಮೃಗವನ್ನು ಕೊಂದು ರಕ್ತವನ್ನು ಕುಡಿದು ಮಾಂಸವನ್ನು ತಿಂದು ತೃಪ್ತಿಹೊಂದಿದ ಹೊರತು ಮಲಗುವದಿಲ್ಲವಷ್ಟೆ ಅಂದನು.

25 ಆಗ ಬಾಲಾಕನು ಅವನಿಗೆ - ನೀನು ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ ಎಂದು ಹೇಳಿದನು.

26 ಅದಕ್ಕೆ ಬಿಳಾಮನು - ಯೆಹೋವನು ಆಜ್ಞಾಪಿಸುವದನ್ನೇ ನಾನು ಮಾಡಬೇಕೆಂದು ನಾನು ನಿನಗೆ ಹೇಳಲಿಲ್ಲವೇ ಅಂದನು.

27 ತರುವಾಯ ಬಾಲಾಕನು ಬಿಳಾಮನಿಗೆ - ಬೇರೊಂದು ಸ್ಥಳಕ್ಕೆ ನಿನ್ನನ್ನು ಕರಕೊಂಡು ಹೋಗುತ್ತೇನೆ ಬಾ; ಅಲ್ಲಿಯಾದರೂ ನೀನು ಅವರನ್ನು ಶಪಿಸುವದಕ್ಕೆ ಒಂದು ವೇಳೆ ದೇವರು ಅನುಮತಿಸಾನು ಎಂದು ಹೇಳಿ

28 ಅವನನ್ನು ಪೆಗೋರ್ ಎಂಬ ಬೆಟ್ಟದ ತುದಿಗೆ ಕರಕೊಂಡು ಹೋದನು. ಆ ಬೆಟ್ಟದ ಮೇಲಿನಿಂದ ಕೆಳಗಿರುವ ಯೆಷೀಮೋನ್ ಎಂಬ ಅರಣ್ಯಪ್ರದೇಶವು ಕಾಣಿಸುತ್ತದೆ.

29 ಆಗ ಬಿಳಾಮನು ಬಾಲಾಕನಿಗೆ - ಇಲ್ಲಿಯೂ ಏಳು ಯಜ್ಞಪೀಠಗಳನ್ನು ಕಟ್ಟಿಸಿ ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಪಡಿಸು ಎಂದು ಹೇಳಲಾಗಿ

30 ಬಾಲಾಕನು ಅವನ ಅಪ್ಪಣೆಯ ಮೇರೆಗೆ ಮಾಡಿ ಪ್ರತಿಯೊಂದು ಪೀಠದಲ್ಲಿ ಒಂದು ಹೋರಿಯನ್ನೂ ಒಂದು ಟಗರನ್ನೂ ಸರ್ವಾಂಗಹೋಮವಾಗಿ ಸಮರ್ಪಿಸಿದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು