ಅರಣ್ಯಕಾಂಡ 2 - ಕನ್ನಡ ಸತ್ಯವೇದವು J.V. (BSI)ಇಸ್ರಾಯೇಲ್ಯರು ಪಾಳೆಯದಲ್ಲಿ ಡೇರೆಗಳನ್ನು ಹಾಕಿಕೊಳ್ಳುವ ಕ್ರಮ 1 ಯೆಹೋವನು ಮೋಶೆ ಆರೋನರಿಗೆ ಆಜ್ಞಾಪಿಸಿದ್ದೇನಂದರೆ - 2 ಇಸ್ರಾಯೇಲ್ಯರೆಲ್ಲರೂ ದೇವದರ್ಶನದ ಗುಡಾರದ ಸುತ್ತಲು ಸ್ವಲ್ಪ ದೂರವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪ್ರತಿಯೊಬ್ಬನು ತನ್ನ ತನ್ನ ಗೋತ್ರಧ್ವಜದ ಹತ್ತಿರ ತನ್ನ ತನ್ನ ದಂಡಿನಲ್ಲೇ ಇಳಿದುಕೊಳ್ಳಬೇಕು. 3 ಸೂರ್ಯೋದಯವಾಗುವ ದಿಕ್ಕಿನಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಯೆಹೂದ ಕುಲದವರ ನಾಯಕನು ಅಮ್ಮೀನಾದಾಬನ ಮಗನಾದ ನಹಶೋನನು; 4 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 74,600 ಮಂದಿ. 5 ಅವರ ಸಮೀಪದಲ್ಲಿ ಇಸ್ಸಾಕಾರ್ ಕುಲದವರೂ ಜೆಬುಲೂನ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಇಸ್ಸಾಕಾರ್ ಕುಲದ ನಾಯಕನು ಚೂವಾರನ ಮಗನಾದ ನೆತನೇಲ್; 6 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 54,400 ಮಂದಿ. 7 ಜೆಬುಲೂನ್ಯರ ನಾಯಕನು ಹೇಲೋನನ ಮಗನಾದ ಎಲೀಯಾಬ್; 8 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 57,400 ಮಂದಿ. 9 ಹೀಗೆ ಯೆಹೂದ ಕುಲದ ದಂಡಿಗೆ ಸೇರಿದವರೆಲ್ಲರೂ 186,400 ಮಂದಿ. ಇವರು ಮುಂಭಾಗದಲ್ಲಿ ಹೊರಡಬೇಕು. 10 ದಕ್ಷಿಣದಿಕ್ಕಿನಲ್ಲಿ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ರೂಬೇನ್ ಕುಲದ ನಾಯಕನು ಶೆದೇಯೂರನ ಮಗನಾದ ಎಲೀಚೂರನು; 11 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 46,500 ಮಂದಿ. 12 ಅವರ ಸಮೀಪದಲ್ಲಿ ಸಿಮೆಯೋನ್ ಕುಲದವರೂ ಗಾದ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಸಿಮೆಯೋನ್ಯರ ನಾಯಕನು ಚೂರೀಷದ್ದೈಯ ಮಗನಾದ ಶೆಲುಮೀಯೇಲನು; 13 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 59,300 ಮಂದಿ. 14 ಗಾದ್ಯರ ನಾಯಕನು ರೆಗೂವೇಲನ ಮಗನಾದ ಎಲ್ಯಾಸಾಫನು; 15 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 45,650 ಮಂದಿ. 16 ಹೀಗೆ ರೂಬೇನ್ ಕುಲದ ದಂಡಿಗೆ ಸೇರಿದವರೆಲ್ಲರೂ 151,450 ಮಂದಿ. ಇವರು ಎರಡನೆಯ ದಂಡಾಗಿ ಹೊರಡಬೇಕು. 17 ಅನಂತರ ಸೈನ್ಯಗಳ ನಟ್ಟನಡುವೆಯಲ್ಲಿ ದೇವದರ್ಶನದ ಗುಡಾರವೂ ಲೇವಿಯರ ಪಾಳೆಯದವರೂ ಹೊರಡಬೇಕು. ಅವರು ಹೇಗೆ ಇಳಿದುಕೊಂಡಿದ್ದರೋ ಹಾಗೆಯೇ ತಮ್ಮ ತಮ್ಮ ಧ್ವಜಗಳನ್ನು ಹಿಡುಕೊಂಡು ತಮ್ಮ ತಮ್ಮ ಗೊತ್ತಾದ ಸ್ಥಾನದಲ್ಲಿ ಹೊರಡಬೇಕು. 18 ಪಶ್ಚಿಮದಿಕ್ಕಿನಲ್ಲಿ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರ ನಾಯಕನು ಅಮ್ಮೀಹೂದನ ಮಗನಾದ ಎಲೀಷಾಮಾ; 19 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 40,500 ಮಂದಿ. 20 ಅವರ ಸಮೀಪದಲ್ಲಿ ಮನಸ್ಸೆ ಕುಲದವರೂ ಬೆನ್ಯಾಮೀನ್ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಮನಸ್ಸೆ ಕುಲದವರ ನಾಯಕನು ಪೆದಾಚೂರನ ಮಗನಾದ ಗಮ್ಲೀಯೇಲ್; 21 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 32,200 ಮಂದಿ. 22 ಬೆನ್ಯಾಮೀನ್ ಕುಲದವರ ನಾಯಕನು ಗಿದ್ಯೋನಿಯ ಮಗನಾದ ಅಬೀದಾನ್; 23 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 35,400 ಮಂದಿ. 24 ಹೀಗೆ ಎಫ್ರಾಯೀಮ್ಯರ ದಂಡಿಗೆ ಸೇರಿದವರೆಲ್ಲರೂ 108,100 ಮಂದಿ. ಇವರು ಮೂರನೆಯ ದಂಡಾಗಿ ಹೊರಡಬೇಕು. 25 ಉತ್ತರದಿಕ್ಕಿನಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅವರ ನಾಯಕನು ಅಮ್ಮೀಷದ್ದೈಯ ಮಗನಾದ ಅಹೀಗೆಜೆರ್; 26 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 62,700 ಮಂದಿ. 27 ಅವರ ಸಮೀಪದಲ್ಲಿ ಆಶೇರ್ ಕುಲದವರೂ ನಫ್ತಾಲಿ ಕುಲದವರೂ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಆಶೇರ್ ಕುಲದವರ ನಾಯಕನು ಒಕ್ರಾನನ ಮಗನಾದ ಪಗೀಯೇಲ್; 28 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 41,500 ಮಂದಿ. 29 ನಫ್ತಾಲಿ ಕುಲದವರ ನಾಯಕನು ಏನಾನನ ಮಗನಾದ ಅಹೀರನು; 30 ಅವರಲ್ಲಿ ಲೆಕ್ಕಿಸಲ್ಪಟ್ಟ ಸೈನಿಕರು 53,400 ಮಂದಿ. 31 ಹೀಗೆ ದಾನ್ ಕುಲದದಂಡಿಗೆ ಸೇರಿದವರೆಲ್ಲರೂ 157,600 ಮಂದಿ. ಇವರು ಕಡೇ ದಂಡಾಗಿ ಹೊರಡಬೇಕು. 32 ಇಸ್ರಾಯೇಲ್ಯರಲ್ಲಿ ಗೋತ್ರಗೋತ್ರಗಳ ಪ್ರಕಾರ ಲೆಕ್ಕಿಸಲ್ಪಟ್ಟವರು ಇವರೇ; ಆ ದಂಡುಗಳಲ್ಲಿ ಸೈನಿಕರಾಗಿ ಲೆಕ್ಕಿಸಲ್ಪಟ್ಟವರು 603,550 ಮಂದಿ. 33 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಲೇವಿಯರು ಇಸ್ರಾಯೇಲ್ಯರ ಸಂಗಡ ಲೆಕ್ಕಿಸಲ್ಪಡಲಿಲ್ಲ. 34 ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ಮಾಡಿದರು. ಹಾಗೆಯೇ ದಂಡುದಂಡಾಗಿ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು; ಹಾಗೆಯೇ ಗೋತ್ರ ಕುಟುಂಬಗಳ ಪ್ರಕಾರ ಹೊರಡುತ್ತಿದ್ದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India