Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 19 - ಕನ್ನಡ ಸತ್ಯವೇದವು J.V. (BSI)


ಅರಣ್ಯ ಸಂಚಾರಚರಿತ್ರದ ಸಮಾಪ್ತಿ ( 19—21 ) ಮನುಷ್ಯ ಶವವು ಸೋಂಕಿದ ಹೊಲೆಯನ್ನು ಹೋಗಲಾಡಿಸುವ ಆಚಾರವನ್ನು ಕುರಿತದ್ದು

1 ಯೆಹೋವನು ಮೋಶೆ ಆರೋನರಿಗೆ ಹೀಗೆ ಆಜ್ಞಾಪಿಸಿದನು -

2 ಯೆಹೋವನಾದ ನಾನು ಒಂದು ವಿಧಿಯನ್ನು ನೇವಿುಸಿದ್ದೇನೆ; ಅದೇನಂದರೆ - ಎಂದೂ ನೊಗವನ್ನು ಹೊರದ ಮತ್ತು ಯಾವ ಕುಂದು ಕೊರತೆಯೂ ಇಲ್ಲದ ಕೆಂದಾಕಳನ್ನು ನಿನಗೆ ತಂದುಕೊಡಬೇಕೆಂದು ಇಸ್ರಾಯೇಲ್ಯರಿಗೆ ಆಜ್ಞಾಪಿಸು.

3 ಅದನ್ನು ನೀವು ಯಾಜಕನಾದ ಎಲ್ಲಾಜಾರನ ಕೈಗೆ ಒಪ್ಪಿಸಬೇಕು. ಅವನು ಅದನ್ನು ಪಾಳೆಯದ ಹೊರಗೆ ಹೊಡಿಸಿಕೊಂಡುಹೋಗಿ ತನಗೆ ಎದುರಾಗಿಯೇ ಒಬ್ಬನ ಕೈಯಿಂದ ವಧೆಮಾಡಿಸಬೇಕು.

4 ತರುವಾಯ ಅವನು ಅದರ ರಕ್ತದಲ್ಲಿ ಸ್ವಲ್ಪವನ್ನು ಬೆರಳಿನಿಂದ ದೇವದರ್ಶನದ ಗುಡಾರದ ಮುಂಭಾಗದ ಕಡೆಗೆ ಏಳು ಸಾರಿ ಚಿವಿುಕಿಸಬೇಕು.

5 ಆಗ ಅವನು ಆ ಆಕಳನ್ನು ಚರ್ಮಮಾಂಸ ರಕ್ತ ಕಲ್ಮಷಗಳು ಸಹಿತವಾಗಿ ತನ್ನ ಎದುರಿನಲ್ಲಿಯೇ ಸುಡಿಸಿಬಿಡಬೇಕು.

6 ಯಾಜಕನು ದೇವದಾರು ಮರದ ಕಟ್ಟಿಗೆಯನ್ನೂ ಹಿಸ್ಸೋಪ್ ಗಿಡದ ಬರಲನ್ನೂ ರಕ್ತವರ್ಣವುಳ್ಳ ದಾರವನ್ನೂ ತೆಗೆದುಕೊಂಡು ಆ ಆಕಳನ್ನು ಸುಡುವ ಬೆಂಕಿಯಲ್ಲಿ ಹಾಕಬೇಕು.

7 ಆ ಯಾಜಕನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿದನಂತರ ಪಾಳೆಯದೊಳಗೆ ಬರಬಹುದು, ಆದರೆ ಆ ದಿನದ ಸಾಯಂಕಾಲದವರೆಗೆ ಅವನು ಅಶುದ್ಧನಾಗಿರಬೇಕು.

8 ಆ ಆಕಳನ್ನು ಸುಟ್ಟವನೂ ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.

9 ಮತ್ತು ಶುದ್ಧನಾದವನೊಬ್ಬನು ಆ ಆಕಳಿನ ಬೂದಿಯನ್ನು ಕೂಡಿಸಿ ಪಾಳೆಯದ ಹೊರಗೆ ಶುದ್ಧವಾದ ಸ್ಥಳದಲ್ಲಿ ಇಡಬೇಕು. ಅದನ್ನು ಇಸ್ರಾಯೇಲ್ಯರ ಸಮೂಹದವರ ಉಪಯೋಗಕ್ಕಾಗಿ ನೀವು ಜೋಪಾನ ಮಾಡಬೇಕು. ಅದು ಹೊಲೆಗಳೆವ ನೀರನ್ನು ಸಿದ್ಧಪಡಿಸುವದಕ್ಕಾಗಿ ಅಲ್ಲೇ ಇಟ್ಟಿರಬೇಕು; ಅದು ದೋಷಪರಿಹಾರಕವಾದದ್ದು.

10 ಆ ಬೂದಿಯನ್ನು ಕೂಡಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು. ಇದು ಇಸ್ರಾಯೇಲ್ಯರಿಗೂ ಅವರಲ್ಲಿ ಇಳುಕೊಂಡಿರುವ ಇತರರಿಗೂ ಶಾಶ್ವತನಿಯಮ.

11 ಮನುಷ್ಯನ ಶವ ಸೋಂಕಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.

12 ಮೂರನೆಯ ದಿನದಲ್ಲಿ ಆ ಬೂದಿಯಿಂದ ದೋಷಪರಿಹಾರಮಾಡಿಕೊಂಡು ಏಳನೆಯ ದಿನದಲ್ಲಿ ಶುದ್ಧನಾಗುವನು. ಮೂರನೆಯ ದಿನದಲ್ಲಿ ಅವನು ದೋಷಪರಿಹಾರಮಾಡಿಕೊಳ್ಳದೆ ಹೋದರೆ ಏಳನೆಯ ದಿನದಲ್ಲಿಯೂ ಶುದ್ಧನಾಗುವದಿಲ್ಲ.

13 ಮನುಷ್ಯನ ಶವ ಸೋಂಕಿದವನು ದೋಷಪರಿಹಾರವನ್ನು ಮಾಡಿಕೊಳ್ಳದೆಹೋದರೆ ಅವನು ಯೆಹೋವನ ಗುಡಾರವನ್ನು ಅಪವಿತ್ರಪಡಿಸುವವನಾದನು. ಅಂಥವನನ್ನು ಇಸ್ರಾಯೇಲ್ಯರಿಂದ ತೆಗೆದುಹಾಕಬೇಕು. ಹೊಲೆಗಳೆವ ನೀರನ್ನು ತನ್ನ ಮೇಲೆ ಚಿವಿುಕಿಸಿಕೊಳ್ಳದೆ ಇರುವದರಿಂದ ಅವನು ಅಶುದ್ಧನು; ಅವನಿಗುಂಟಾದ ಅಪವಿತ್ರತೆಯು ಇದ್ದೇ ಇರುವದು.

14 [ಹೊಲೆಗಳೆವ] ಕಟ್ಟಳೆ ಹೇಗಂದರೆ - ಯಾರಾದರೂ ಡೇರೆಯೊಳಗೆ ಸತ್ತ ಸಂದರ್ಭದಲ್ಲಿ ಆ ಡೇರೆಯಲ್ಲಿರುವವರೆಲ್ಲರೂ ಅದರೊಳಗೆ ಬರುವವರೂ ಏಳು ದಿನಗಳವರೆಗೆ ಅಶುದ್ಧರಾಗಿರಬೇಕು.

15 ಮತ್ತು ಮುಚ್ಚಳ ಹಾಕಿ ಕಟ್ಟದಿರುವ ಎಲ್ಲಾ ಪಾತ್ರೆಗಳು ಅಶುದ್ಧವಾಗಿರುವವು.

16 ಬೈಲಿನಲ್ಲಿರುವ ಯಾವನಿಗಾದರೂ ಶಸ್ತ್ರಹತನ ಶವವಾಗಲಿ ಬೇರೆ ಯಾವ ಮನುಷ್ಯ ಶವವಾಗಲಿ ಮನುಷ್ಯನ ಎಲುಬಾಗಲಿ ಸಮಾಧಿಯಾಗಲಿ ಸೋಂಕಿದರೆ ಅವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.

17 ಅಂಥ ಅಶುದ್ಧನಾದವನನ್ನು ಪವಿತ್ರಪಡಿಸಬೇಕಾದರೆ ಆ ದೋಷಪರಿಹಾರಕವಾದ ಬೂದಿಯಲ್ಲಿ ಸ್ವಲ್ಪವನ್ನು ಪಾತ್ರೆಯಲ್ಲಿ ಇಟ್ಟು ಅದರ ಮೇಲೆ ಸೆಲೇನೀರನ್ನು ಹಾಕಬೇಕು.

18 ಆಗ ಶುದ್ಧನಾದವನೊಬ್ಬನು ಆ ನೀರನ್ನು ಹಿಸ್ಸೋಪ್‍ಗಿಡದ ಬರಲಿಂದ [ಮನುಷ್ಯನು ಸತ್ತ] ಆ ಡೇರೆಯ ಮೇಲೂ ಅದರಲ್ಲಿದ್ದ ಸಾಮಾನುಗಳ ಮತ್ತು ಮನುಷ್ಯರ ಮೇಲೂ ಚಿವಿುಕಿಸಬೇಕು; ಹಾಗೆಯೇ ಎಲುಬಾಗಲಿ ಹತವಾದವನ ಅಥವಾ ಬೇರೆ ಮನುಷ್ಯನ ಶವವಾಗಲಿ ಸಮಾಧಿಯಾಗಲಿ ಯಾವನಿಗೆ ಸೋಂಕಿತೋ ಅವನ ಮೇಲೆಯೂ ಚಿವಿುಕಿಸಬೇಕು.

19 ಅವನು ಮೂರನೆಯ ದಿನದಲ್ಲಿಯೂ ಏಳನೆಯ ದಿನದಲ್ಲಿಯೂ ಅಶುದ್ಧನಾದವನ ಮೇಲೆ ಅದನ್ನು ಚಿವಿುಕಿಸಬೇಕು. ಅಶುದ್ಧನಾದವನು ಏಳನೆಯ ದಿನದಲ್ಲಿ ದೋಷಪರಿಹಾರಹೊಂದಿದವನಾಗಿ ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿ ಸಾಯಂಕಾಲದಲ್ಲಿ ಶುದ್ಧನಾಗುವನು.

20 ಅಶುದ್ಧನಾಗಿ ದೋಷಪರಿಹಾರಮಾಡಿಕೊಳ್ಳದವನು ಯೆಹೋವನ ದೇವಸ್ಥಾನವನ್ನು ಅಪವಿತ್ರಪಡಿಸಿದ ಕಾರಣ ಸಭೆಯಿಂದ ತೆಗೆಯಲ್ಪಡಬೇಕು. ಹೊಲೆಗಳೆವ ನೀರನ್ನು ತನ್ನ ಮೇಲೆ ಚಿವಿುಕಿಸಿಕೊಳ್ಳದೆ ಹೋದದರಿಂದ ಅವನು ಅಶುದ್ಧನೇ.

21 ಇದು ಇಸ್ರಾಯೇಲ್ಯರಿಗೆ ಶಾಶ್ವತನಿಯಮ. ಹೊಲೆಗಳೆವ ಆ ನೀರನ್ನು ಚಿವಿುಕಿಸಿದವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು; ಮತ್ತು ಆ ನೀರು ಯಾರಿಗೆ ಸೋಂಕಿತೋ ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.

22 ಅಶುದ್ಧನಿಗೆ ಸೋಂಕಿದ ವಸ್ತು ಯಾವದೇ ಆಗಲಿ ಅಶುದ್ಧವೆಂದು ನೀವು ತಿಳಿದುಕೊಳ್ಳಬೇಕು; ಅದು ಯಾರಿಗೆ ಸೋಂಕಿತೋ ಅವನೂ ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರಬೇಕು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು