Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 18 - ಕನ್ನಡ ಸತ್ಯವೇದವು J.V. (BSI)

1 ಆಗ ಯೆಹೋವನು ಆರೋನನಿಗೆ - ದೇವದರ್ಶನದ ಗುಡಾರದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ ನಿನ್ನ ಸಂತತಿಯವರೂ ನಿನ್ನ ಕುಲದವರೆಲ್ಲರೂ ಆ ದೋಷದ ಫಲವನ್ನು ಅನುಭವಿಸಬೇಕು. ಯಾಜಕತ್ವದ ವಿಷಯದಲ್ಲಿ ಅಕ್ರಮವೇನಾದರೂ ನಡೆದರೆ ನೀನೂ ನಿನ್ನ ಸಂತತಿಯವರೂ ಮಾತ್ರವೇ ಆ ದೋಷದ ಫಲವನ್ನು ಅನುಭವಿಸಬೇಕು.

2 ನಿನ್ನ ಕುಲದ ಮೂಲಪುರುಷನಾದ ಲೇವಿಯ ವಂಶದವರನ್ನು ನೀನು ಹತ್ತಿರಕ್ಕೆ ಕರೆದು ಜೊತೆಯಲ್ಲಿರಿಸಿಕೊಂಡು ನಿನ್ನ ಕೈಕೆಳಗೆ ಸೇವೆ ಮಾಡಿಸಬೇಕು; ಆದರೆ ಆಜ್ಞಾಶಾಸನಗಳಿರುವ ಗುಡಾರದ ಮುಂದೆ ನೀನೂ ನಿನ್ನ ಮಕ್ಕಳೂ ಮಾತ್ರ ಸೇವೆಮಾಡಬೇಕು.

3 ಲೇವಿಯರು ನಿನ್ನ ಅಪ್ಪಣೆಯ ಮೇರೆಗೆ ನಡೆದು ಗುಡಾರವನ್ನೆಲ್ಲಾ ಕಾಯಬೇಕು; ಆದರೆ ಪವಿತ್ರಸ್ಥಾನದ ಸಾಮಾನಿನ ಹತ್ತಿರವಾಗಲಿ ಯಜ್ಞವೇದಿಯ ಹತ್ತಿರವಾಗಲಿ ಅವರು ಬರಕೂಡದು; ಬಂದರೆ ಅವನು ಸಾಯುವದು ಮಾತ್ರವಲ್ಲದೆ ನೀವೂ ಸತ್ತೀರಿ.

4 ಅವರೇ ನಿನ್ನ ಜೊತೆಯಲ್ಲಿದ್ದು ದೇವದರ್ಶನದ ಗುಡಾರವನ್ನು ನೋಡಿಕೊಂಡು ಅದರ ಸಕಲ ಪರಿಚರ್ಯವನ್ನು ಮಾಡಬೇಕು; ಇತರ ಕುಲದವರು ನಿಮ್ಮ ಜೊತೆಯಲ್ಲಿರಕೂಡದು.

5 ಇನ್ನು ಮುಂದೆ ಇಸ್ರಾಯೇಲ್ಯರ ಮೇಲೆ ದೇವರ ಕೋಪವುಂಟಾಗದಂತೆ ನೀವೇ ದೇವಸ್ಥಾನದ ಸಾಮಾನನ್ನೂ ಯಜ್ಞವೇದಿಯನ್ನೂ ನೋಡಿಕೊಳ್ಳಬೇಕು.

6 ಇಗೋ ನಾನು ಇಸ್ರಾಯೇಲ್ಯರೊಳಗಿಂದ ನಿನ್ನ ಕುಲದವರಾದ ಲೇವಿಯರನ್ನು ತೆಗೆದುಕೊಂಡಿದ್ದೇನೆ; ಅವರು ಯೆಹೋವನಿಗೆ ಸಮರ್ಪಿಸಲ್ಪಟ್ಟ ಕಾಣಿಕೆಯಂತೆ ನಿನ್ನ ವಶದಲ್ಲಿಯೇ ಇದ್ದಾರೆ; ಅವರೇ ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಬೇಕು.

7 ನೀನೂ ನಿನ್ನ ಸಂತತಿಯವರೂ ಯಾಜಕೋದ್ಯೋಗವನ್ನು ಕೈಕೊಂಡವರಾಗಿ ಯಜ್ಞವೇದಿಯ ಮತ್ತು ತೆರೆಯೊಳಗಣ ಕಾರ್ಯಗಳನ್ನು ನಡಿಸಬೇಕು; ಅವುಗಳ ಪರಿಚರ್ಯವನ್ನು ನೀವೇ ಮಾಡಬೇಕು; ನಾನು ಯಾಜಕತ್ವವನ್ನು ನಿಮಗೇ ಅನುಗ್ರಹಿಸಿದ್ದೇನೆ; ಇತರರು ಅದಕ್ಕೆ ಕೈಹಾಕಿದರೆ ಅವರಿಗೆ ಮರಣಶಿಕ್ಷೆಯಾಗಬೇಕು.

8 ಯೆಹೋವನು ಆರೋನನಿಗೆ ಆಜ್ಞಾಪಿಸಿದ್ದೇನಂದರೆ - ಇಸ್ರಾಯೇಲ್ಯರು ನನಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ಪದಾರ್ಥಗಳನ್ನೆಲ್ಲಾ ಅಂದರೆ ದೇವರ ವಸ್ತುಗಳನ್ನೆಲ್ಲಾ ನಾನು ನಿನ್ನ ಮತ್ತು ನಿನ್ನ ಸಂತತಿಯವರ ಪಾಲಾಗುವದಕ್ಕೆ ದಾನಮಾಡಿದ್ದೇನೆ; ಅವು ಸದಾಕಾಲವೂ ನಿಮಗೇ ಸಲ್ಲಬೇಕು.

9 ಬೆಂಕಿಯಲ್ಲಿ ಹೋಮಮಾಡದೆ ಉಳಿಸಿರುವ ಮಹಾಪರಿಶುದ್ಧ ಪದಾರ್ಥಗಳೆಲ್ಲಾ ಅಂದರೆ ಇಸ್ರಾಯೇಲ್ಯರು ನನಗೆ ಸಮರ್ಪಿಸುವ ಎಲ್ಲಾ ಧಾನ್ಯದ್ರವ್ಯನೈವೇದ್ಯ ದ್ರವ್ಯ, ದೋಷಪರಿಹಾರಕಯಜ್ಞ, ಪ್ರಾಯಶ್ಚಿತ್ತಯಜ್ಞದ್ರವ್ಯ ಇವುಗಳಲ್ಲಿ ಹೋಮಶೇಷವು ಮಹಾಪರಿಶುದ್ಧವಾದದರಿಂದ ನಿನಗೂ ನಿನ್ನ ಸಂತತಿಯವರಿಗೂ ಸಲ್ಲಬೇಕು.

10 ನೀವು ಮಹಾಪರಿಶುದ್ಧವಾದ ಒಂದು ಸ್ಥಳದಲ್ಲಿ ಅವುಗಳನ್ನು ಊಟಮಾಡಬೇಕು; ನಿಮ್ಮಲ್ಲಿರುವ ಗಂಡಸರೆಲ್ಲರೂ ಅವುಗಳನ್ನು ತಿನ್ನಬಹುದು; ಅವು ಮಹಾಪರಿಶುದ್ಧವಾದವುಗಳೆಂದು ನೀವು ತಿಳಿದುಕೊಳ್ಳಬೇಕು.

11 ಅದಲ್ಲದೆ ಇಸ್ರಾಯೇಲ್ಯರು [ಮಾಡುವ ಸಮಾಧಾನಯಜ್ಞದ್ರವ್ಯಗಳಿಂದ] ನನಗೋಸ್ಕರ ಪ್ರತ್ಯೇಕಿಸಿಕೊಡುವ ದ್ರವ್ಯಗಳೂ ನೈವೇದ್ಯವಾಗಿ ನಿವಾಳಿಸುವ ದ್ರವ್ಯಗಳೂ ನಿಮಗೆ ಆಗಬೇಕು; ಇವು ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಶಾಶ್ವತವಾದ ನಿಯಮದಿಂದ ಸಲ್ಲಬೇಕೆಂದು ಅನುಗ್ರಹಿಸಿದ್ದೇನೆ. ಇವುಗಳನ್ನು ನಿಮ್ಮ ಮನೆಗಳಲ್ಲಿರುವ ಶುದ್ಧರಾದವರೆಲ್ಲರೂ ಊಟ ಮಾಡಬಹುದು.

12 ಇಸ್ರಾಯೇಲ್ಯರು ಯೆಹೋವನಿಗೆ ಸಮರ್ಪಿಸುವ ಪ್ರಥಮಫಲಗಳು ಅಂದರೆ ಎಣ್ಣೆ, ದ್ರಾಕ್ಷಾರಸ, ಧಾನ್ಯ ಇವುಗಳಲ್ಲಿ ಶ್ರೇಷ್ಠವಾದದ್ದು ನಿನಗೇ ಆಗಬೇಕೆಂದು ವಿಧಿಸಿದ್ದೇನೆ.

13 ಅವರು ತಮ್ಮ ದೇಶದ ಎಲ್ಲಾ ಬೆಳೆಗಳಲ್ಲಿ ಯೆಹೋವನಿಗೋಸ್ಕರ ತರುವ ಪ್ರಥಮಫಲಗಳು ನಿನಗೇ ಸಲ್ಲಬೇಕು; ನಿಮ್ಮ ಮನೆಗಳಲ್ಲಿ ಶುದ್ಧರಾಗಿರುವ ಎಲ್ಲರೂ ಅವುಗಳನ್ನು ಊಟಮಾಡಬಹುದು.

14 ಕೇವಲ ಯೆಹೋವನದಾಗಿಯೇ ಇರುವದಕ್ಕೆ ಇಸ್ರಾಯೇಲ್ಯರು ಹರಕೆಮಾಡಿಕೊಡುವದೆಲ್ಲವೂ ನಿನಗಾಗಬೇಕು.

15 ಮನುಷ್ಯರಲ್ಲಾಗಲಿ ಪಶುಗಳಲ್ಲಾಗಲಿ ಅವರು ಯೆಹೋವನಿಗೆ ಸಮರ್ಪಿಸುವ ಸಕಲಪ್ರಾಣಿಗಳಲ್ಲಿ ಚೊಚ್ಚಲಾದದ್ದು ನಿನಗೆ ಸಲ್ಲಬೇಕು. ಆದರೆ ಮನುಷ್ಯರ ಚೊಚ್ಚಲುಮಕ್ಕಳಿಗೂ ಅಪವಿತ್ರವಾದ ಪಶುಗಳ ಮರಿಗಳಿಗೂ ಬದಲಾಗಿ ನೀನು ಈಡನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.

16 ಬಿಟ್ಟುಬಿಡಬೇಕಾದ ಶಿಶುಗಳು ಒಂದು ತಿಂಗಳಿನ ಪ್ರಾಯಕ್ಕೆ ಬಂದಾಗಲೇ ನೀವು ಗೊತ್ತಾದ ಈಡನ್ನು ಅಂದರೆ ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ಐದು ರೂಪಾಯಿಯನ್ನು ತೆಗೆದುಕೊಂಡು ಅವುಗಳನ್ನು ಬಿಟ್ಟುಬಿಡಬೇಕು.

17 ಆಕಳಿನ ಮತ್ತು ಆಡುಕುರಿಗಳ ಚೊಚ್ಚಲುಮರಿಗಳು ದೇವರ ಸೊತ್ತಾಗಿರುವದರಿಂದ ಅವುಗಳನ್ನು ಬಿಡಕೂಡದು; ಅವುಗಳ ರಕ್ತವನ್ನು ಯಜ್ಞವೇದಿಗೆ ಎರಚಿ ಕೊಬ್ಬನ್ನು ಯೆಹೋವನಿಗೆ ಸುಗಂಧಹೋಮಮಾಡಬೇಕು.

18 ಅವುಗಳ ಮಾಂಸವು [ಸಮಾಧಾನಯಜ್ಞಗಳಲ್ಲಿ] ನೈವೇದ್ಯವಾಗಿ ನಿವಾಳಿಸುವ ಎದೆಯ ಭಾಗದಂತೆಯೂ ಬಲದೊಡೆಯಂತೆಯೂ ನಿನಗೇ ಸಲ್ಲಬೇಕು.

19 ಇಸ್ರಾಯೇಲ್ಯರು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸುವ ದೇವರ ವಸ್ತುಗಳೆಲ್ಲಾ ನಿನಗೂ ನಿನ್ನ ಸಂತತಿಯವರಾದ ಸ್ತ್ರೀಪುರುಷರೆಲ್ಲರಿಗೂ ಸದಾಕಾಲವೂ ಸಲ್ಲಬೇಕೆಂದು ನಾನು ಅನುಗ್ರಹಮಾಡಿದ್ದೇನೆ. ಇದು ಯೆಹೋವನ ಸನ್ನಿಧಿಯಲ್ಲಿ ನಿನ್ನೊಡನೆಯೂ ನಿನ್ನ ಸಂತತಿಯೊಡನೆಯೂ ಮಾಡಲ್ಪಟ್ಟ ಶಾಶ್ವತವಾದ ಉಪ್ಪಿನ ಒಡಂಬಡಿಕೆ.

20 ಇದಲ್ಲದೆ ಯೆಹೋವನು ಆರೋನನಿಗೆ ಹೇಳಿದ್ದೇನಂದರೆ - ಇಸ್ರಾಯೇಲ್ಯರ ದೇಶದಲ್ಲಿ ನಿನಗೆ ಸ್ವಂತಕ್ಕಾಗಿ ಭೂಸ್ಥಿತಿ ಆಗುವದಿಲ್ಲ; ಅವರೊಂದಿಗೆ ನಿನಗೆ ಪಾಲು ಇರುವದಿಲ್ಲ. ಇಸ್ರಾಯೇಲ್ಯರ ಮಧ್ಯದಲ್ಲಿ ನಾನೇ ನಿನಗೆ ಪಾಲಾಗಿಯೂ ಸ್ವಾಸ್ತ್ಯವಾಗಿಯೂ ಇದ್ದೇನೆ.

21 ಲೇವಿಯರು ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡುವದಕ್ಕಾಗಿ ಇಸ್ರಾಯೇಲ್ಯರಿಂದ [ಸಕಲಪದಾರ್ಥಗಳ] ಹತ್ತನೆಯ ಪಾಲನ್ನು ಗೊತ್ತುಮಾಡಿಕೊಟ್ಟಿದ್ದೇನೆ.

22 ಇನ್ನು ಮುಂದೆ ಇಸ್ರಾಯೇಲ್ಯರು ದೇವದರ್ಶನದ ಗುಡಾರದ ಹತ್ತಿರಕ್ಕೆ ಬರಕೂಡದು; ಬಂದರೆ ಅವರು ಆ ದೋಷದಿಂದ ಸತ್ತುಹೋದಾರು.

23 ಲೇವಿಯರೇ ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಬೇಕು; ಅದರ ಸಂಬಂಧವಾಗಿ ಅವರು ಮಾಡುವ ಪಾಪದ ಫಲವನ್ನು ತಾವೇ ಅನುಭವಿಸಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮ. ಆದರೆ ಇಸ್ರಾಯೇಲ್ಯರ ಮಧ್ಯದಲ್ಲಿ ಲೇವಿಯರಿಗೆ ಸ್ವಂತವಾದ ಭೂಸ್ಥಿತಿಯುಂಟಾಗುವದಿಲ್ಲ.

24 ಇಸ್ರಾಯೇಲ್ಯರು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸುವ ಹತ್ತನೆಯ ಪಾಲನ್ನೇ ಲೇವಿಯರಿಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದೇನಲ್ಲಾ. ಇವರಿಗೆ ಇಸ್ರಾಯೇಲ್ಯರೊಂದಿಗೆ ಪಾಲು ದೊರೆಯುವದಿಲ್ಲವೆಂದು ನಾನು ಹೇಳಿದ ಮಾತಿಗೆ ಇದೇ ಕಾರಣ.

25 ಯೆಹೋವನು ಮೋಶೆಗೆ ಹೇಳಿದ್ದೇನಂದರೆ -

26 ನೀನು ಲೇವಿಯರಿಗೆ ಹೀಗೆ ಆಜ್ಞಾಪಿಸಬೇಕು - ನಿಮ್ಮ ಸ್ವಂತಕ್ಕಾಗಿ ನಾನು ನೇವಿುಸಿರುವ ಹತ್ತನೆಯ ಪಾಲನ್ನು ನೀವು ಇಸ್ರಾಯೇಲ್ಯರಿಂದ ತೆಗೆದುಕೊಳ್ಳುವಾಗ ಅದರಲ್ಲಿ ಹತ್ತನೆಯ ಪಾಲನ್ನು ಪ್ರತ್ಯೇಕಿಸಿ ಯೆಹೋವನಿಗೆ ಸಮರ್ಪಿಸಬೇಕು.

27 ನೀವು ಹೀಗೆ ಸಮರ್ಪಿಸಿದ ಹತ್ತನೆಯ ಪಾಲು ಕಣದಲ್ಲಿನ ದವಸವನ್ನೂ ದ್ರಾಕ್ಷೇತೊಟ್ಟಿಯ ರಸವನ್ನೂ ಕೊಟ್ಟಂತೆ ನಿಮ್ಮ ಲೆಕ್ಕದಲ್ಲಿ ಎಣಿಸಲ್ಪಡುವದು.

28 ಇಸ್ರಾಯೇಲ್ಯರಿಂದ ನಿಮಗೆ ಸಲ್ಲುವ ಹತ್ತನೆಯ ಪಾಲಿನಲ್ಲಿ ನೀವು ಯೆಹೋವನಿಗೋಸ್ಕರ ಹತ್ತನೆಯ ಭಾಗವನ್ನು ಪ್ರತ್ಯೇಕಿಸಿ ಯಾಜಕನಾದ ಆರೋನನಿಗೆ ಒಪ್ಪಿಸಬೇಕು.

29 ನಿಮಗೆ ಕೊಡಲ್ಪಡುವ ಸಕಲಪದಾರ್ಥಗಳಲ್ಲಿಯೂ ನೀವು ಉತ್ತಮಭಾಗವನ್ನೇ ಅಂದರೆ ದೇವರ ವಸ್ತುವಾಗುವದಕ್ಕೆ ಯೋಗ್ಯಭಾಗವನ್ನೇ ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸಬೇಕು.

30 ಮತ್ತು ನೀನು ಲೇವಿಯರಿಗೆ ಹೀಗೆ ಹೇಳಬೇಕು - ನಿಮಗೆ ದೊರಕಿದ್ದರಲ್ಲಿ ನೀವು ಉತ್ತಮವಾದದ್ದನ್ನೇ ಪ್ರತ್ಯೇಕಿಸಿ ಸಮರ್ಪಿಸಿದ ಮೇಲೆ ವಿುಕ್ಕದ್ದನ್ನು ಕಣದಲ್ಲಿನ ದವಸದ ಹಾಗೂ ದ್ರಾಕ್ಷೇತೊಟ್ಟಿಯ ರಸದ ಹಾಗೂ ಭಾವಿಸಿ ಉಪಯೋಗಿಸಿಕೊಳ್ಳಬಹುದು.

31 ನೀವೂ ನಿಮ್ಮ ಮನೆಗಳವರೂ ಅದನ್ನು ಯಾವ ಸ್ಥಳದಲ್ಲಿಯಾದರೂ ಊಟಮಾಡಬಹುದು. ನೀವು ದೇವದರ್ಶನದ ಗುಡಾರದ ಪರಿಚರ್ಯವನ್ನು ಮಾಡಿದ್ದಕ್ಕೆ ಅದು ನಿಮಗೆ ಪ್ರತಿಫಲ.

32 ಅದರಲ್ಲಿ ಉತ್ತಮ ಭಾಗವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಿದ ನಂತರ ನೀವು ವಿುಕ್ಕದರ ವಿಷಯದಲ್ಲಿ ಯಾವ ದೋಷಕ್ಕೂ ಗುರಿಯಾಗುವದಿಲ್ಲ. ಇಸ್ರಾಯೇಲ್ಯರು ಸಮರ್ಪಿಸುವ ದೇವರ ವಸ್ತುಗಳನ್ನು ಸಾಧಾರಣವೆಂದೆಣಿಸಿ ಸಾಯಬೇಡಿರಿ ಎಂಬದೇ.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು