Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 16 - ಕನ್ನಡ ಸತ್ಯವೇದವು J.V. (BSI)


ಕೆಲವರು ಮೋಶೆ ಆರೋನರ ಮತ್ತು ಲೇವಿಯರ ಅಧಿಕಾರವನ್ನು ಎದುರಿಸಲಾಗಿ ಯೆಹೋವನು ಇವರ ಅಧಿಕಾರವನ್ನು ಸ್ಥಾಪಿಸಿದ್ದು ( 16—18 ) ಕೋರಹನೂ ದಾತಾನ್ ಅಬೀರಾಮರೂ ಮೋಶೆ ಆರೋನರಿಗೆ ತಿರುಗಿಬಿದ್ದು ನಾಶವಾದದು

1 ಲೇವಿಯ ಮರಿಮಗನೂ ಕೆಹಾತನ ಮೊಮ್ಮಗನೂ ಇಚ್ಹಾರನ ಮಗನೂ ಆದ ಕೋರಹನೂ - ಅವನಲ್ಲದೆ ರೂಬೇನ್ ಕುಲದವರಲ್ಲಿ ಎಲೀಯಾಬನ ಮಕ್ಕಳಾದ ದಾತಾನ್ ಅಬೀರಾಮರೂ ಪೆಲೆತನ ಮಗನಾದ ಓನನೂ

2 ಮತ್ತು ಸಮೂಹದವರಲ್ಲಿ ಮುಖ್ಯಸ್ಥರಾಗಿಯೂ ಆಲೋಚನಾಕರ್ತರಾಗಿಯೂ ಹೆಸರುಗೊಂಡವರಾಗಿಯೂ ಇದ್ದ ಇನ್ನೂರೈವತ್ತುಮಂದಿ ಇಸ್ರಾಯೇಲ್ಯರೂ ಮೋಶೆಗೆ ವಿರೋಧವಾಗಿ ತಿರುಗಿಬಿದ್ದರು.

3 ಅವರು ಒಟ್ಟಾಗಿ ಕೂಡಿಕೊಂಡು ಮೋಶೆ ಆರೋನರ ಬಳಿಗೆ ಬಂದು ಅವರಿಗೆ - ನಿವ್ಮಿುಂದ ಸಾಕಾಯಿತು; ಈ ಸಮೂಹದವರಲ್ಲಿ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ; ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನಲ್ಲವೇ; ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವದೇನು ಎಂದು ಹೇಳಿದರು.

4 ಮೋಶೆ ಆ ಮಾತನ್ನು ಕೇಳಿ ಅಡ್ಡಬಿದ್ದು ಕೋರಹನಿಗೂ ಅವನ ಎಲ್ಲಾ ಸಮೂಹದವರಿಗೂ -

5 ತನ್ನವರು ಯಾರಾರೆಂಬದನ್ನು ಯೆಹೋವನು ನಾಳೆ ತಿಳಿಸುವನು. ಯಾರನ್ನು ಯೆಹೋವನು ಪ್ರತಿಷ್ಠಿಸಿದ್ದಾನೋ ಯಾರನ್ನು ತಾನೇ ಆದು ಕೊಂಡಿದ್ದಾನೋ ಅವರನ್ನು ಮಾತ್ರ ಆತನು ತನ್ನ ಹತ್ತಿರಕ್ಕೆ ಬರಗೊಡಿಸುವನು.

6 ನೀವು ಹೀಗೆ ಮಾಡಿರಿ - ನೀವೆಲ್ಲರೂ ಅಂದರೆ ಕೋರಹನೂ ಅವನ ಸಮೂಹದವರೆಲ್ಲರೂ ಧೂಪಾರತಿಗಳನ್ನು ತೆಗೆದುಕೊಂಡು

7 ಅವುಗಳಲ್ಲಿ ಕೆಂಡಗಳನ್ನಿಟ್ಟು ನಾಳೆ ಯೆಹೋವನ ಸನ್ನಿಧಿಯಲ್ಲಿ ಧೂಪಹಾಕಿರಿ. ಆಗ ಯೆಹೋವನು ಯಾರನ್ನು ಮೆಚ್ಚುವನೋ ಅವನೇ ದೇವರಿಗೆ ಪ್ರತಿಷ್ಠಿತನೆಂದು ತಿಳುಕೊಳ್ಳುವಿರಿ. ಲೇವಿಯರೇ, ನಿವ್ಮಿುಂದ ಸಾಕಾಯಿತು ಎಂದು ಹೇಳಿದನು.

8 ಮೋಶೆ ಕೋರಹನಿಗೆ - ಲೇವಿಯರೇ, ಕೇಳಿರಿ.

9 ಇಸ್ರಾಯೇಲ್ಯರ ದೇವರು ಅವರ ಸಮೂಹದವರಿಂದ ನಿಮ್ಮನ್ನು ಪ್ರತ್ಯೇಕಿಸಿ ತನ್ನ ಗುಡಾರದ ಪರಿಚರ್ಯವನ್ನು ಮಾಡಲೂ ಸರ್ವಸಮೂಹದವರಿಗೋಸ್ಕರ ಸೇವೆಯನ್ನು ಮಾಡಲೂ [ಕೋರಹನೇ,] ನಿನ್ನನ್ನೂ

10 ನಿನ್ನ ಸ್ವಕುಲದವರಾದ ಲೇವಿಯರನ್ನೂ ತನ್ನ ಹತ್ತಿರ ಇಟ್ಟುಕೊಂಡದ್ದು ಅಲ್ಪಕಾರ್ಯವೆಂದು ನಿಮಗೆ ಕಾಣುತ್ತದೋ? ಯಾಜಕತ್ವವೂ ನಿಮಗೆ ಆಗಬೇಕೆಂದು ಕೋರುತ್ತೀರಾ?

11 ನೀನೂ ನಿನ್ನ ಸಮೂಹದವರೆಲ್ಲರೂ ಯೆಹೋವನಿಗೆ ವಿರೋಧವಾಗಿ ಕೂಡಿಕೊಂಡವರು; ಆರೋನನಿಗೆ ವಿರೋಧವಾಗಿ ಗುಣಗುಟ್ಟುವದೇನು ಎಂದು ಹೇಳಿದನು.

12 ಮೋಶೆಯು ಎಲೀಯಾಬನ ಮಕ್ಕಳಾದ ದಾತಾನ್ ಅಬೀರಾಮರನ್ನು ಕರೇಕಳುಹಿಸಲಾಗಿ ಅವರು ಅವನಿಗೆ -

13 ನಾವು ಬರುವದಿಲ್ಲ, ನೀನು ಹಾಲೂ ಜೇನೂಹರಿಯವ ದೇಶದಿಂದ ನಮ್ಮನ್ನು ಕರಕೊಂಡು ಬಂದು ಮರಳುಕಾಡಿನಲ್ಲಿ ಸಾಯಿಸುವದು ಅಲ್ಪಕಾರ್ಯವೆಂದು ಎಣಿಸಿ ನಮ್ಮ ಮೇಲೆ ದೊರೆತನ ಮಾಡಬೇಕೆಂದು ಕೋರುತ್ತೀಯೋ?

14 ಅಷ್ಟು ಮಾತ್ರವೇ ಅಲ್ಲ, ಹಾಲೂ ಜೇನೂ ಹರಿಯುವ ದೇಶಕ್ಕೆ ನಮ್ಮನ್ನು ಸೇರಿಸಲಿಲ್ಲವಲ್ಲಾ; ಹೊಲಗಳನ್ನೂ ದ್ರಾಕ್ಷೇತೋಟಗಳನ್ನೂ ನಮಗೆ ಸ್ವಂತಕ್ಕೆ ಕೊಡಲೇ ಇಲ್ಲ ; ಈ ಜನರ ಕಣ್ಣಿಗೆ ಮಣ್ಣು ಹಾಕಬೇಕೆಂದಿದ್ದೀಯೋ? ನಾವು ಬರುವದಿಲ್ಲ ಎಂದು ಹೇಳಿದರು.

15 ಅದಕ್ಕೆ ಮೋಶೆ ಬಹು ಕೋಪಗೊಂಡು ಯೆಹೋವನಿಗೆ - ನೀನು ಅವರ ನೈವೇದ್ಯವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಡ; ನಾನು ಅವರಿಂದ ಒಂದು ಕತ್ತೆಯನ್ನಾದರೂ ತೆಗೆದುಕೊಂಡವನಲ್ಲ; ಅವರಲ್ಲಿ ಒಬ್ಬನಿಗಾದರೂ ಹಾನಿ ಮಾಡಿದವನಲ್ಲ ಎಂದು ಮನವಿಮಾಡಿದನು.

16 ಮೋಶೆ ಕೋರಹನಿಗೆ - ನಾಳೆ ನೀನೂ ನಿನ್ನ ಸಮೂಹದವರೆಲ್ಲರೂ ಆರೋನನೂ ಯೆಹೋವನ ಸನ್ನಿಧಿಗೆ ಬರಬೇಕು;

17 ಅವರಲ್ಲಿ ಒಬ್ಬೊಬ್ಬನು ತನ್ನ ತನ್ನ ಧೂಪಾರತಿಯನ್ನು, ಅಂದರೆ ಒಟ್ಟಾಗಿ ಇನ್ನೂರೈವತ್ತು ಧೂಪಾರತಿಗಳನ್ನು ತೆಗೆದುಕೊಂಡು ಧೂಪಹಾಕಿ ಯೆಹೋವನ ಸನ್ನಿಧಿಗೆ ಬರಬೇಕು; ಹಾಗೆಯೇ ನೀನೂ ಆರೋನನೂ ನಿಮ್ಮ ನಿಮ್ಮ ಧೂಪಾರತಿಗಳನ್ನು ತೆಗೆದುಕೊಂಡು ಬರಬೇಕು ಎಂದು ಹೇಳಿದನು.

18 ಅದಕ್ಕನುಸಾರವಾಗಿ ಅವರೆಲ್ಲರೂ ತಮ್ಮ ತಮ್ಮ ಧೂಪಾರತಿಗಳನ್ನು ಕೈಯಲ್ಲಿ ತೆಗೆದುಕೊಂಡು ಅವುಗಳಲ್ಲಿ ಕೆಂಡಗಳನ್ನಿಟ್ಟು ಧೂಪದ್ರವ್ಯಗಳನ್ನು ಹಾಕಿ ಮೋಶೆ ಆರೋನರ ಜೊತೆಯಲ್ಲಿ ದೇವದರ್ಶನದ ಗುಡಾರದ ಬಾಗಲಲ್ಲಿ ನಿಂತುಕೊಂಡರು.

19 ಅದಲ್ಲದೆ ಕೋರಹನು ತಮಗೆ ಎದುರಾಗಿ ಸರ್ವಸಮೂಹದವರನ್ನು ದೇವದರ್ಶನದ ಗುಡಾರದ ಬಾಗಲಿನ ಹತ್ತಿರಕ್ಕೆ ಕೂಡಿಸಿದನು. ಆಗ ಯೆಹೋವನ ತೇಜಸ್ಸು ಸಮೂಹದವರೆಲ್ಲರಿಗೂ ಹೊಳೆಯಿತು.

20-21 ಯೆಹೋವನು ಮೋಶೆ ಆರೋನರಿಗೆ - ನೀವು ಈ ಸಮೂಹದವರಿಂದ ಪ್ರತ್ಯೇಕವಾಗಿ ನಿಲ್ಲಿರಿ; ನಾನು ಇವರನ್ನು ಒಂದು ಕ್ಷಣದಲ್ಲಿ ಭಸ್ಮಮಾಡುತ್ತೇನೆ ಎಂದು ಆಜ್ಞಾಪಿಸಲಾಗಿ

22 ಅವರು ಅಡ್ಡಬಿದ್ದು - ದೇವರೇ, ಎಲ್ಲಾ ಮನುಷ್ಯರ ಆತ್ಮಗಳಿಗೆ ದೇವರಾಗಿರುವವನೇ,

23 ಇವರಲ್ಲಿ ದೋಷಿಯಾದವನು ಒಬ್ಬನೇ ಆಗಿರಲಾಗಿ ಸಮೂಹದವರೆಲ್ಲರ ಮೇಲೆ ಕೋಪಗೊಳ್ಳಬಹುದೋ ಎಂದು ಬಿನ್ನೈಸಲಾಗಿ ಯೆಹೋವನು ಮೋಶೆಗೆ -

24 ಇಸ್ರಾಯೇಲ್ಯರ ಸಮೂಹದವರು ಕೋರಹ ದಾತಾನ್ ಅಬೀರಾಮರ ಗುಡಾರದ ಸುತ್ತಲಿರದೆ ದೂರವಿರಬೇಕೆಂದು ಅವರಿಗೆ ಆಜ್ಞಾಪಿಸು ಎಂದು ಹೇಳಿದನು.

25 ಆಗ ಮೋಶೆ ಎದ್ದು ದಾತಾನ್ ಅಬೀರಾಮರ ಬಳಿಗೆ ಹೋದನು; ಇಸ್ರಾಯೇಲ್ಯರ ಹಿರಿಯರು ಅವನ ಹಿಂದೆ ಹೋದರು.

26 ಅವನು [ಇಸ್ರಾಯೇಲ್ಯರ] ಸಮೂಹದವರಿಗೆ - ಈ ದುಷ್ಟರ ಡೇರೆಗಳ ಬಳಿಯಲ್ಲಿ ಇರದೆ ದೂರ ಹೋಗಬೇಕು; ಇವರ ಸೊತ್ತಿನಲ್ಲಿ ಯಾವದನ್ನೂ ಮುಟ್ಟಬಾರದು; ಇವರ ದೋಷಗಳಿಗಾಗಿ ಉಂಟಾಗುವ ಶಿಕ್ಷೆ ನಿಮ್ಮನ್ನೂ ಕೊಚ್ಚಿಕೊಂಡು ಹೋದೀತು ಎಂದು ಹೇಳಿದನು.

27 ಆದಕಾರಣ ಅವರೆಲ್ಲರೂ ಕೋರಹ ದಾತಾನ್ ಅಬೀರಾಮರ ಗುಡಾರದ ಸುತ್ತಲಿರದೆ ಬೇರೆ ಹೋದರು. ದಾತಾನ್ ಅಬೀರಾಮರೂ ಅವರ ಹೆಂಡರೂ ಮಕ್ಕಳೂ ಅವರಿಗೆ ಸಂಬಂಧಪಟ್ಟವರೆಲ್ಲರೂ ಹೊರಗೆ ಬಂದು ತಮ್ಮ ತಮ್ಮ ಡೇರೆಗಳ ಬಾಗಲುಗಳಲ್ಲಿ ನಿಂತು ಕೊಂಡರು.

28 ಆಗ ಮೋಶೆ ಜನರಿಗೆ - ಈ ಕಾರ್ಯಗಳೆಲ್ಲಾ ನನ್ನ ಆಲೋಚನೆಯಿಂದ ಆಗಲಿಲ್ಲವೆಂದೂ ಯೆಹೋವನೇ ಇವುಗಳನ್ನು ನಡಿಸುವದಕ್ಕೆ ನನ್ನನ್ನು ಕಳುಹಿಸಿದನೆಂದೂ ನೀವು ತಿಳುಕೊಳ್ಳುವದು ಹೇಗಂದರೆ -

29 ಎಲ್ಲರೂ ಸಾಯುವ ರೀತಿಯಲ್ಲೇ ಇವರು ಸತ್ತರೆ ಇಲ್ಲವೆ ಎಲ್ಲರಿಗೂ ಸಂಭವಿಸುವ ಗತಿ ಇವರಿಗುಂಟಾದರೆ ಯೆಹೋವನು ನನ್ನನ್ನು ಕಳುಹಿಸಲಿಲ್ಲವೆಂದು ತಿಳುಕೊಳ್ಳಬೇಕು.

30 ಆದರೆ ಯೆಹೋವನು ಇವರಿಗೋಸ್ಕರ ಅಪೂರ್ವವಾದ ಶಿಕ್ಷೆಯನ್ನು ಕಲ್ಪಿಸಿದರೆ ಅಂದರೆ ಭೂವಿುಯು ಬಾಯ್ದೆರೆದು ಇವರನ್ನೂ ಇವರ ಸರ್ವಸ್ವವನ್ನೂ ನುಂಗುವದರಿಂದ ಇವರೆಲ್ಲರೂ ಸಜೀವಿಗಳಾಗಿ ಪಾತಾಳಕ್ಕೆ ಹೋಗಿಬಿಟ್ಟರೆ ಇವರು ಯೆಹೋವನನ್ನು ಉಲ್ಲಂಘಿಸಿದವರೆಂದು ನೀವು ತಿಳಿದುಕೊಳ್ಳಬೇಕು ಎಂದು ಹೇಳಿದನು.

31 ಮೋಶೆ ಈ ಮಾತುಗಳನ್ನು ಹೇಳಿ ಮುಗಿಸಿದ ಕೂಡಲೆ ಆ ಮನುಷ್ಯರ ಕೆಳಗಿದ್ದ ನೆಲವು ಸೀಳಿತು;

32 ಭೂವಿುಯು ಬಾಯ್ದೆರೆದು ಅವರನ್ನೂ ಅವರ ಮನೆಯವರನ್ನೂ ಕೋರಹನಿಗೆ ಸೇರಿದ ಮನುಷ್ಯರೆಲ್ಲರನ್ನೂ ಅವರ ಸರ್ವಸ್ವವನ್ನೂ ನುಂಗಿಬಿಟ್ಟಿತು;

33 ಅವರು ಸಜೀವಿಗಳಾಗಿ ತಮ್ಮ ಸರ್ವಸ್ವವು ಸಹಿತ ಪಾತಾಳಕ್ಕೆ ಹೋಗಿಬಿಟ್ಟರು; ಭೂವಿುಯು ಅವರನ್ನು ಮುಚ್ಚಿಕೊಂಡಿತು.

34 ಹೀಗೆ ಅವರು ಸಮೂಹದವರೊಳಗಿಂದ ನಾಶವಾದರು. ಅವರ ಸುತ್ತಲಿದ್ದ ಇಸ್ರಾಯೇಲ್ಯರೆಲ್ಲರೂ ಸಾಯುವವರ ಹಾಹಾಕಾರವನ್ನು ಕೇಳಿ - ಭೂವಿುಯು ನಮ್ಮನ್ನೂ ನುಂಗೀತೆಂದು ಓಡಿಹೋದರು.

35 ಮತ್ತು ಯೆಹೋವನ ಬಳಿಯಿಂದ ಬೆಂಕಿ ಹೊರಟು ಧೂಪವನ್ನು ಅರ್ಪಿಸುತ್ತಿದ್ದ ಆ ಇನ್ನೂರೈವತ್ತು ಮಂದಿಯನ್ನು ಭಸ್ಮ ಮಾಡಿತು.

36-37 ಆಗ ಯೆಹೋವನು ಮೋಶೆಗೆ - ಮಹಾಯಾಜಕ ಆರೋನನ ಮಗನಾದ ಎಲ್ಲಾಜಾರನು ಸುಟ್ಟುಹೋದವರ ನಡುವೆಯಿಂದ ಆ ಧೂಪಾರತಿಗಳನ್ನು ಎತ್ತಬೇಕೆಂದು ಆಜ್ಞಾಪಿಸು; ಮತ್ತು ನೀನು ಅವುಗಳಲ್ಲಿರುವ ಕೆಂಡಗಳನ್ನು ದೂರಕ್ಕೆ ಚೆಲ್ಲು; ಆ ಧೂಪಾರತಿಗಳು ದೇವರ ವಸ್ತುವಾದವಲ್ಲಾ.

38 ಪ್ರಾಣವನ್ನು ಹೋಗಲಾಡಿಸಿಕೊಂಡ ಆ ದೋಷಿಗಳ ಧೂಪಾರತಿಗಳು ಯೆಹೋವನ ಸನ್ನಿಧಿಗೆ ತರಲ್ಪಟ್ಟ ಕಾರಣ ಪರಿಶುದ್ಧವಾದವು; ಆದದರಿಂದ ಅವುಗಳನ್ನು ತಗಡುಗಳಾಗಿ ಹೊಡೆದು ಯಜ್ಞವೇದಿಗೆ ಮುಚ್ಚಳವನ್ನು ಮಾಡಿಸಬೇಕು; ಹಾಗೆ ಅವು ಇಸ್ರಾಯೇಲ್ಯರಿಗೆ ನೆನಪುಹುಟ್ಟಿಸುವವು ಎಂದು ಹೇಳಿದನು.

39 ಯೆಹೋವನು ಮೋಶೆಯ ಮೂಲಕ ಹೇಳಿದ ಅಪ್ಪಣೆಯ ಮೇರೆಗೆ ಯಾಜಕನಾದ ಎಲ್ಲಾಜಾರನು ಸುಟ್ಟುಹೋದವರಿಂದ ಮೊದಲು ತರಲ್ಪಟ್ಟಿದ್ದ ಆ ತಾಮ್ರದ ಧೂಪಾರತಿಗಳನ್ನು ತೆಗೆದುಕೊಂಡು ತಗಡುಗಳಾಗಿ ಹೊಡಿಸಿ ಯಜ್ಞವೇದಿಗೆ ಮುಚ್ಚಳವನ್ನು ಮಾಡಿಸಿದನು.

40 ಆರೋನನ ಸಂತತಿಯವರಲ್ಲದ ಇತರರಲ್ಲಿ ಯಾರೂ ಯೆಹೋವನ ಸನ್ನಿಧಿಗೆ ಬಂದು ಧೂಪವನ್ನು ಸಮರ್ಪಿಸಬಾರದು; ಸಮರ್ಪಿಸಿದರೆ ಕೋರಹನಿಗೂ ಅವನ ಜೊತೆಗಾರರಿಗೂ ಉಂಟಾದ ಗತಿಗೆ ಗುರಿಯಾದಾರೆಂದು ಇಸ್ರಾಯೇಲ್ಯರಿಗೆ ನೆನಪು ಹುಟ್ಟಿಸುವದಕ್ಕಾಗಿ ಅದು ಗುರುತಾಯಿತು.


ಕೋರಹನ ಕಡೆಯವರು ಸತ್ತದ್ದಕ್ಕಾಗಿ ಜನರು ಗುಣುಗುಟ್ಟಲಾಗಿ ಅವರಲ್ಲಿ ಅನೇಕರು ಘೋರವ್ಯಾಧಿಯಿಂದ ಸತ್ತದ್ದು; ಆರೋನನು ಅದನ್ನು ಶಮನಮಾಡಿದ್ದು

41 ಮರುದಿನ ಇಸ್ರಾಯೇಲ್ಯರ ಸರ್ವಸಮೂಹದವರು ಮೋಶೆ ಆರೋನರ ಮೇಲೆ ಗುಣುಗುಟ್ಟುತ್ತಾ - ನೀವೇ ಯೆಹೋವನ ಜನರನ್ನು ಸಾಯಿಸಿದಿರಿ ಎಂದು ಹೇಳುವವರಾದರು.

42 ಸಮೂಹದವರೆಲ್ಲರೂ ಹೀಗೆ ಮೋಶೆ ಆರೋನರಿಗೆ ವಿರೋಧವಾಗಿ ಕೂಡಿದ್ದಾಗ ದೇವದರ್ಶನದ ಗುಡಾರದ ಕಡೆಗೆ ನೋಡಲಾಗಿ ಆಹಾ, ಮೇಘವು ಅದನ್ನು ಮುಚ್ಚಿಕೊಂಡಿತು, ಮತ್ತು ಯೆಹೋವನ ತೇಜಸ್ಸು ಹೊಳೆಯಿತು.

43 ಮೋಶೆ ಆರೋನರು ದೇವದರ್ಶನದ ಗುಡಾರದ ಮುಂಭಾಗಕ್ಕೆ ಬಂದಾಗ ಯೆಹೋವನು ಮೋಶೆಗೆ -

44-45 ನೀವಿಬ್ಬರೂ ಸಮೂಹದವರಲ್ಲಿ ಇರದೆ ಬೇರೆ ನಿಲ್ಲಬೇಕು; ನಾನು ಒಂದು ಕ್ಷಣದಲ್ಲಿ ಅವರನ್ನು ಭಸ್ಮಮಾಡಿಬಿಡುತ್ತೇನೆ ಎಂದು ಹೇಳಿದನು. ಆಗ ಮೋಶೆ ಆರೋನರು ಅಡ್ಡಬಿದ್ದರು; ಮತ್ತು ಮೋಶೆಯು ಆರೋನನಿಗೆ -

46 ಯೆಹೋವನಿಗೆ ಕೋಪವುಂಟಾಗಿ ಈ ಜನರೊಳಗೆ ಘೋರವ್ಯಾಧಿ ಪ್ರಾರಂಭವಾಯಿತು; ನೀನು ಧೂಪಾರತಿಯನ್ನು ತೆಗೆದುಕೊಂಡು ಅದರಲ್ಲಿ ಯಜ್ಞವೇದಿಯಿಂದ ಕೆಂಡಗಳನ್ನು ಇಟ್ಟು ಧೂಪ ಹಾಕಿ ಸಮೂಹದವರ ಬಳಿಗೆ ಬೇಗ ಹೋಗಿ ಅವರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು ಎಂದು ಹೇಳಿದನು.

47 ಮೋಶೆ ಹೇಳಿದಂತೆ ಆರೋನನು ಧೂಪಾರತಿಯನ್ನು ತೆಗೆದುಕೊಂಡು ಸಮೂಹದವರ ಮಧ್ಯಕ್ಕೆ ಓಡಿದಾಗ ಘೋರವ್ಯಾಧಿ ಆ ಜನರಲ್ಲಿ ಹರಡಿಕೊಳ್ಳುತ್ತಾ ಇತ್ತು. ಆದದರಿಂದ ಅವನು ಧೂಪಹಾಕಿ ಜನರಿಗೋಸ್ಕರ ದೋಷಪರಿಹಾರವನ್ನು ಮಾಡಿದನು.

48 ಅವನು ಸತ್ತವರಿಗೂ ಬದುಕುವವರಿಗೂ ನಡುವೆ ನಿಂತಿರುವಾಗಲೇ ಆ ವಿಪತ್ತು ಶಮನವಾಯಿತು.

49 ಕೋರಹನನ್ನು ಕೂಡಿಕೊಂಡು ಸತ್ತವರಲ್ಲದೆ ಆ ವಿಪತ್ತಿನಿಂದ ಸತ್ತವರು ಹದಿನಾಲ್ಕು ಸಾವಿರದ ಏಳುನೂರು ಮಂದಿ.

50 ವಿಪತ್ತು ಶಮನವಾದಾಗ ಆರೋನನು ದೇವದರ್ಶನದ ಗುಡಾರದ ಬಾಗಲಿಗೆ ಮೋಶೆಯ ಬಳಿಗೆ ತಿರಿಗಿ ಬಂದನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು