ಅರಣ್ಯಕಾಂಡ 14 - ಕನ್ನಡ ಸತ್ಯವೇದವು J.V. (BSI)1 ಅದನ್ನು ಕೇಳಿ ಜನಸಮೂಹದವರೆಲ್ಲರೂ ಗುಲ್ಲುಮಾಡಿ ಬಹಳ ಕೂಗಿಕೊಂಡರು; ಆ ರಾತ್ರಿಯೆಲ್ಲಾ ಜನರು ಅಳುತ್ತಿದ್ದರು. 2 ಇಸ್ರಾಯೇಲ್ಯರೆಲ್ಲರೂ ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟಿ - ನಾವು ಐಗುಪ್ತದೇಶದಲ್ಲಿಯೇ ಸತ್ತಿದ್ದರೆ ಎಷ್ಟೋ ಮೇಲಾಗಿತ್ತು; ಈ ಅರಣ್ಯದಲ್ಲಿಯಾದರೂ ಸತ್ತಿದ್ದರೆ ಮೇಲಾಗಿತ್ತು. 3 ಯೆಹೋವನು ನಮ್ಮನ್ನು ಯಾಕೆ ಕತ್ತಿಯ ಬಾಯಿಂದ ಸಾಯಿಸುವದಕ್ಕೆ ಈ ದೇಶಕ್ಕೆ ಬರಮಾಡುತ್ತಾನೆ; ನಮ್ಮ ಹೆಂಡರೂ ಮಕ್ಕಳೂ ಪರರ ಪಾಲಾಗುವರಲ್ಲಾ; ನಾವು ಐಗುಪ್ತದೇಶಕ್ಕೆ ತಿರಿಗಿ ಹೋಗುವದು ಒಳ್ಳೇದಲ್ಲವೇ ಎಂದು ಹೇಳಿಕೊಳ್ಳುತ್ತಾ ಒಬ್ಬರ ಸಂಗಡಲೊಬ್ಬರು - 4 ನಾವು ನಾಯಕನನ್ನು ನೇವಿುಸಿಕೊಂಡು ಐಗುಪ್ತದೇಶಕ್ಕೆ ತಿರಿಗಿ ಹೋಗೋಣ ಎಂದು ಮಾತಾಡಿಕೊಳ್ಳುತ್ತಿದ್ದರು. 5 ಆಗ ಮೋಶೆ ಆರೋನರು ಇಸ್ರಾಯೇಲ್ಯರ ಸರ್ವಸಮೂಹದವರ ಮುಂದೆ ಬೋರಲಬಿದ್ದರು. 6 ಮತ್ತು ದೇಶವನ್ನು ಸಂಚರಿಸಿ ನೋಡಿದವರಲ್ಲಿದ್ದ ನೂನನ ಮಗನಾದ ಯೆಹೋಶುವನೂ ಯೆಪುನ್ನೆಯ ಮಗನಾದ ಕಾಲೇಬನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು 7 ಇಸ್ರಾಯೇಲ್ಯರ ಸರ್ವಸಮೂಹದವರಿಗೆ ಹೀಗಂದರು - ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು; 8 ಅದು ಹಾಲೂ ಜೇನೂ ಹರಿಯುವ ದೇಶ; ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಅದರಲ್ಲಿ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು; 9 ಹೀಗಿರುವದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಅದಲ್ಲದೆ ಆ ದೇಶದ ಜನರಿಗೆ ದಿಗಿಲುಪಡಬೇಡಿರಿ; ನಾವು ಅವರನ್ನು ನುಂಗಿ ಪುಷ್ಟಿಯಾಗುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟನು; ನಮ್ಮ ಕಡೆ ಯೆಹೋವನು ಇದ್ದಾನೆ. ಅವರಿಗೆ ಭಯಪಡಬೇಡಿರಿ ಅಂದರು. 10 ಆದರೆ ಜನಸಮೂಹದವರೆಲ್ಲರೂ [ಕೇಳಲೊಲ್ಲದೆ] ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿಕೊಳ್ಳುತ್ತಿರಲಾಗಿ ಯೆಹೋವನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಹೊಳೆದು ಇಸ್ರಾಯೇಲ್ಯರೆಲ್ಲರಿಗೂ ಕಾಣಿಸಿತು. 11 ಯೆಹೋವನು ಮೋಶೆಗೆ - ಈ ಜನರು ಇನ್ನು ಎಷ್ಟರ ಮಟ್ಟಿಗೆ ನನ್ನನ್ನು ಅಲಕ್ಷ್ಯಮಾಡುವರೋ; ನಾನು ನಡಿಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರೋ. 12 ಆಗಲಿ, ನಾನು ಇವರಿಗೆ ವ್ಯಾಧಿಯನ್ನುಂಟುಮಾಡಿ ಇವರನ್ನು ನಿರ್ಮೂಲಮಾಡಿ ಈ ಜನಕ್ಕಿಂತ ಹೆಚ್ಚಾಗಿಯೂ ಬಲಿಷ್ಠವಾಗಿಯೂ ಇರುವ ಜನಾಂಗವನ್ನು ನಿನ್ನ ಮೂಲಕವೇ ಹುಟ್ಟಿಸುವೆನು ಎಂದು ಹೇಳಿದನು. 13 ಅದಕ್ಕೆ ಮೋಶೆ - ನೀನು ಹೀಗೆ ಮಾಡುವದಾದರೆ ಐಗುಪ್ತ್ಯರು ಈ ಸಮಾಚಾರವನ್ನು ಕೇಳುವರು. ನೀನು ತಮ್ಮ ಕೈಯೊಳಗಿಂದ ಈ ಜನವನ್ನು ಭುಜಪರಾಕ್ರಮದಿಂದ ತಪ್ಪಿಸಿದ ಸಂಗತಿಯನ್ನು ಈ [ಕಾನಾನ್] ದೇಶದ ನಿವಾಸಿಗಳಿಗೆ ತಿಳಿಸಿರುವರು. 14 ಅದಲ್ಲದೆ ಈ ದೇಶದವರು ನೀನು ಇಸ್ರಾಯೇಲ್ಯರ ಮಧ್ಯದಲ್ಲಿ ಇರುವ ಸಂಗತಿಯನ್ನು ಕೇಳಿದ್ದಾರೆ. ಹೇಗಂದರೆ ಯೆಹೋವನೇ, ನೀನು ಇಸ್ರಾಯೇಲ್ಯರಿಗೆ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುವವನಾಗಿ ಹಗಲಿನಲ್ಲಿ ಮೇಘಸ್ತಂಭದಲ್ಲಿಯೂ ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಇದ್ದು ಇವರ ಮುಂದೆ ನಡೆದುಹೋಗುತ್ತೀಯಲ್ಲಾ ; ಅದಲ್ಲದೆ ನೀನಿರುವ ಮೇಘವು ಇಸ್ರಾಯೇಲ್ಯರ ಮೇಲೆ ಇದೆಯಲ್ಲಾ. 15 ಹೀಗಿರಲಾಗಿ ನೀನು ಒಂದೇ ಪೆಟ್ಟಿನಿಂದ ಈ ಜನರನ್ನು ಸಾಯಿಸಿದರೆ ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗಗಳವರು ನಿನ್ನ ವಿಷಯದಲ್ಲಿ - 16 ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಆ ಜನರನ್ನು ಸೇರಿಸುವದಕ್ಕೆ ಶಕ್ತಿ ಸಾಲದೆ ಅವರನ್ನು ಅರಣ್ಯದಲ್ಲಿ ಕೊಂದು ಹಾಕಿಬಿಟ್ಟನು ಎಂದು ಮಾತಾಡಿಕೊಳ್ಳುವರು. 17 ನನ್ನ ಸ್ವಾವಿುಯೇ, ನೀನು ನಿನ್ನ ವಿಷಯದಲ್ಲಿ- 18 ಯೆಹೋವನು ದೀರ್ಘಶಾಂತನು, ಬಹು ಪ್ರೀತಿಯುಳ್ಳವನು, ಅಪರಾಧ ಪಾಪಗಳನ್ನು ಕ್ಷವಿುಸುವವನು; ಆದಾಗ್ಯೂ [ಅಪರಾಧಿಗಳನ್ನು] ಶಿಕ್ಷಿಸದೆ ಬಿಡದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರುನಾಲ್ಕು ತಲೆಗಳವರೆಗೆ ಬರಮಾಡುವವನು ಎಂದು ಹೇಳಿದಿಯಲ್ಲಾ. ಈ ಮಾತಿಗೆ ದೃಷ್ಟಾಂತವನ್ನು ಕೊಟ್ಟು ನಿನ್ನ ಮಹಿಮೆಯನ್ನು ದೃಢಪಡಿಸಬೇಕು. 19 ನಾವು ಐಗುಪ್ತದೇಶದಿಂದ ಬಂದದ್ದು ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷವಿುಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷವಿುಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಎಂದು ಪ್ರಾರ್ಥಿಸಿದನು. 20 ಅದಕ್ಕೆ ಯೆಹೋವನು - ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಕ್ಷವಿುಸಿದ್ದೇನೆ. 21 ಆದಾಗ್ಯೂ ನನ್ನ ಜೀವದಾಣೆ, ಮತ್ತು ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರಬೇಕೆಂಬುವ ನಿಶ್ಚಯ ವಾಕ್ಯದ ಆಣೆ, 22 ಈ ಮನುಷ್ಯರೆಲ್ಲರು ಐಗುಪ್ತದೇಶದಲ್ಲಿಯೂ ಅರಣ್ಯದಲ್ಲಿಯೂ ನಾನು ನಡಿಸಿರುವ ಮಹತ್ಕಾರ್ಯಗಳನ್ನೂ ನನ್ನ ಮಹಿಮೆಯನ್ನೂ ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ ಪದೇಪದೇ ನನ್ನನ್ನು ಪರೀಕ್ಷಿಸಿದದರಿಂದ 23 ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವದಿಲ್ಲ; ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ಅದನ್ನು ನೋಡುವದಿಲ್ಲ. 24 ನನ್ನ ದಾಸನಾದ ಕಾಲೇಬನು ಅಂಥ ಮನಸ್ಸುಳ್ಳವನಾಗಿರದೆ ಮನಃಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದದ್ದರಿಂದ ಅವನನ್ನೇ ಅವನು ಸಂಚರಿಸಿದ ಆ ದೇಶದಲ್ಲಿ ಸೇರಿಸುವೆನು; ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು. 25 ಅಮಾಲೇಕ್ಯರೂ ಕಾನಾನ್ಯರೂ ಆ ತಗ್ಗಿನಲ್ಲಿ ವಾಸವಾಗಿದ್ದಾರೆ. ನೀವು ನಾಳೆ ಹಿಂದಿರುಗಿಕೊಂಡು ಕೆಂಪುಸಮುದ್ರಕ್ಕೆ ಹೋಗುವ ದಾರಿಯಲ್ಲಿ ಅರಣ್ಯಕ್ಕೆ ಪ್ರಯಾಣಮಾಡಬೇಕು ಎಂದು ಹೇಳಿದನು. 26-27 ಯೆಹೋವನು ಮೋಶೆ ಆರೋನರಿಗೆ - ನನಗೆ ವಿರೋಧವಾಗಿ ಗುಣುಗುಟ್ಟುವ ಈ ದುಷ್ಟಸಮೂಹದವರನ್ನು ನಾನು ಎಷ್ಟು ದಿನ ಸಹಿಸಲಿ. ಇಸ್ರಾಯೇಲ್ಯರು ನನಗೆ ವಿರೋಧವಾಗಿ ಗುಣುಗುಟ್ಟುವ ಮಾತುಗಳು ನನಗೆ ಕೇಳಿಸಿದವು. 28 ನೀನು ಅವರಿಗೆ ಹೀಗೆ ಹೇಳಬೇಕು - ಯೆಹೋವನು ಹೇಳುವದೇನಂದರೆ - ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಅಂದುಕೊಂಡ ಪ್ರಕಾರವೇ ನಾನು ಮಾಡುತ್ತೇನೆ; 29 ನಿಮ್ಮ ಶವಗಳು ಈ ಅರಣ್ಯದಲ್ಲಿಯೇ ಬೀಳುವವು. ನೀವು ನನಗೆ ವಿರೋಧವಾಗಿ ಗುಣುಗುಟ್ಟಿದದರಿಂದ ನಿಮ್ಮಲ್ಲಿ ಲೆಕ್ಕಿಸಲ್ಪಟ್ಟವರೆಲ್ಲರೂ ಅಂದರೆ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ [ಅರಣ್ಯದಲ್ಲೇ ಸಾಯುವರು]. 30 ಯೆಫುನ್ನೆಯ ಮಗನಾದ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವ ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ನಿವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಸೇರುವದಿಲ್ಲ. 31 ಆದರೆ ಪರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಸೇರಿಸುವೆನು; ನೀವು ಬೇಡವೆಂದು ಹೇಳಿದ ದೇಶವನ್ನು ಅವರು ಅನುಭೋಗಿಸುವರು. 32 ನೀವಂತೂ ಈ ಅರಣ್ಯದಲ್ಲಿ ಸಾಯುವಿರಿ; ನಿಮ್ಮೆಲ್ಲರ ಶವಗಳು ಈ ಅರಣ್ಯದಲ್ಲಿ ಬೀಳುವ ಪರ್ಯಂತರ 33 ನೀವು ಮಾಡಿದ ದ್ರೋಹದ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನಾಲ್ವತ್ತು ವರುಷ ಅರಣ್ಯವಾಸಿಗಳಾಗಿರಬೇಕು. 34 ನೀವು ಆ ದೇಶವನ್ನು ಸಂಚರಿಸಿ ನೋಡಿದ ನಾಲ್ವತ್ತು ದಿನಗಳಿಗೆ ಸಮನಾಗಿ, ದಿನ ಒಂದಕ್ಕೆ ಒಂದು ಸಂವತ್ಸರದ ಮೇರೆಗೆ, ನಾಲ್ವತ್ತು ವರುಷ ನಿಮ್ಮ ಪಾಪದ ಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು. 35 ಇದು ಯೆಹೋವನೆಂಬ ನಾನೇ ಹೇಳಿದ ಮಾತು; ನನಗೆ ವಿರೋಧವಾಗಿ ಕೂಡಿಕೊಂಡಿರುವ ಈ ದುಷ್ಟಸಮೂಹದವರೆಲ್ಲರಿಗೆ ಈ ಮಾತಿನ ಮೇರೆಗೆ ಮಾಡಲೇ ಮಾಡುತ್ತೇನೆ; ಈ ಅರಣ್ಯದಲ್ಲಿಯೇ ಇವರೆಲ್ಲರೂ ಸಾಯಬೇಕು ಎಂದು ಹೇಳಿದನು. 36-37 ಆ ದೇಶವನ್ನು ಸಂಚರಿಸಿ ನೋಡುವದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟು ಹಿಂದಿರುಗಿ ಬಂದು ಆ ದೇಶದ ವಿಷಯದಲ್ಲಿ ಅಶುಭಸಮಾಚಾರವನ್ನು ಹೇಳಿ ಸರ್ವಸಮೂಹದವರನ್ನು ಅವನಿಗೆ ವಿರೋಧವಾಗಿ ಗುಣುಗುಟ್ಟುವಂತೆ ಮಾಡಿದ ಮನುಷ್ಯರು ಯೆಹೋವನ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು. 38 ಅವರಲ್ಲಿ ನೂನನ ಮಗನಾದ ಯೆಹೋಶುವನೂ ಯೆಫುನ್ನೆಯ ಮಗನಾದ ಕಾಲೇಬನೂ ಉಳಿದರು. 39 ಮೋಶೆ ಯೆಹೋವನ ಮಾತುಗಳನ್ನೆಲ್ಲಾ ಇಸ್ರಾಯೇಲ್ಯರಿಗೆ ತಿಳಿಸಲಾಗಿ ಅವರು ಬಹಳ ದುಃಖಪಟ್ಟರು. 40 ಮರುದಿನ ಬೆಳಿಗ್ಗೆ ಜನರು ಎದ್ದು - ನಾವು ಪಾಪಮಾಡಿರುವದು ನಿಜ; ಯೆಹೋವನು ವಾಗ್ದಾನಮಾಡಿದ ಸ್ಥಳಕ್ಕೆ ಹತ್ತೋಣ ಬನ್ನಿ ಎಂದು ಹೇಳಿಕೊಳ್ಳುತ್ತಾ ಆ ಬೆಟ್ಟದ ಮೇಲಕ್ಕೆ ಹತ್ತಿಹೋಗುವವರಾದರು. 41 ಆದರೆ ಮೋಶೆ ಅವರಿಗೆ - ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ; ಇದು ಕೈಗೂಡುವದಿಲ್ಲ; 42 ಯೆಹೋವನು ನಿಮ್ಮ ಸಂಗಡ ಇರುವದಿಲ್ಲ; ಹತ್ತಬೇಡಿರಿ; ನೀವು ಶತ್ರುಗಳ ಮುಂದೆ ನಿಲ್ಲಲಾರದೆ ಬಿದ್ದು ಸತ್ತೀರಿ; 43 ಅಲ್ಲಿ ಅಮಾಲೇಕ್ಯರೂ ಕಾನಾನ್ಯರೂ ನಿಮ್ಮ ಎದುರಿನಲ್ಲಿರುವದರಿಂದ ನೀವು ಅವರ ಕತ್ತಿಯಿಂದ ಸತ್ತೀರಿ; ನೀವು ಯೆಹೋವನ ಮಾತನ್ನು ಅನುಸರಿಸದೆ ತಿರುಗಿಬಿದ್ದ ಕಾರಣ ಆತನು ನಿಮ್ಮೊಂದಿಗೆ ಇರುವದಿಲ್ಲ ಎಂದು ಹೇಳಿದನು. 44 ಆದರೂ ಅವರು ಹಟಮಾಡಿ ಆ ಬೆಟ್ಟವನ್ನು ಹತ್ತೇ ಹತ್ತಿದರು. ಯೆಹೋವನ ಒಡಂಬಡಿಕೆಯ ಮಂಜೂಷವು ಮತ್ತು ಮೋಶೆಯು ಪಾಳೆಯವನ್ನು ಬಿಡಲಿಲ್ಲ. 45 ಆಗ ಆ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾನ್ಯರೂ ಇಳಿದುಬಂದು ಅವರನ್ನು ಹೊಡೆದು ಹೊರ್ಮಾ ಪಟ್ಟಣದವರೆಗೆ ಸಂಹರಿಸಿದರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India