ಅರಣ್ಯಕಾಂಡ 12 - ಕನ್ನಡ ಸತ್ಯವೇದವು J.V. (BSI)ಯೆಹೋವನು ವಿುರ್ಯಾಮಳಿಗೆ ತೊನ್ನನ್ನು ಉಂಟುಮಾಡಿ ಮೋಶೆಯು ಪ್ರವಾದಿಗಳಿಗಿಂತಲೂ ಹೆಚ್ಚಿನವನೆಂದು ದೃಢವಾಗಿ ತೋರ್ಪಡಿಸಿದ್ದು 1 ಮೋಶೆ ಕೂಷ್ ದೇಶದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ಅದರ ನಿವಿುತ್ತ ವಿುರ್ಯಾಮಳೂ ಆರೋನನೂ ಅವನಿಗೆ ವಿರೋಧವಾಗಿ ಮಾತಾಡುವವರಾಗಿ - 2 ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತಾಡಿದ್ದಾನೋ; ನಮ್ಮ ಮೂಲಕವೂ ಆತನು ಮಾತಾಡಲಿಲ್ಲವೇ ಎಂದು ಹೇಳಿಕೊಂಡರು. 3 ಆ ಮೋಶೆ ಭೂವಿುಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕನು. 4 ಹೀಗಿರಲಾಗಿ ಅವರು ಆಡಿದ ಮಾತನ್ನು ಯೆಹೋವನು ಕೇಳಿ ಫಕ್ಕನೆ ಮೋಶೆ ಆರೋನ್ ವಿುರ್ಯಾಮರಿಗೆ - ನೀವು ಮೂರು ಮಂದಿಯೂ ದೇವದರ್ಶನದ ಗುಡಾರಕ್ಕೆ ಬರಬೇಕೆಂದು ಆಜ್ಞಾಪಿಸಿದನು. 5 ಆ ಮೂವರು ಬಂದಾಗ ಯೆಹೋವನು ಮೇಘಸ್ತಂಭದೊಳಗೆ ಇಳಿದು ಬಂದು ದೇವದರ್ಶನದ ಗುಡಾರದ ಬಾಗಲಲ್ಲಿ ನಿಂತು ಆರೋನ್ ವಿುರ್ಯಾಮರನ್ನು ಹತ್ತಿರಕ್ಕೆ ಕರೆದನು. 6 ಅವರು ಬಂದಾಗ ಆತನು - ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಕಾಣಿಸಿಕೊಳ್ಳುವೆನು, ಇಲ್ಲವೆ ಸ್ವಪ್ನದಲ್ಲಿ ಅವನ ಸಂಗಡ ಮಾತಾಡುವೆನು. 7 ನನ್ನ ಸೇವಕನಾದ ಮೋಶೆ ಅಂಥವನಲ್ಲ; ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನು. 8 ಅವನ ಸಂಗಡ ನಾನು ಗೂಢವಾಗಿ ಅಲ್ಲ, ಪ್ರತ್ಯಕ್ಷದಲ್ಲಿ ಸ್ಪಷ್ಟವಾಗಿಯೇ ಮಾತಾಡುವೆನು. ಅವನು ಯೆಹೋವನ ಸ್ವರೂಪವನ್ನೇ ದೃಷ್ಟಿಸುವನು. ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತಾಡುವದಕ್ಕೆ ಭಯಪಡಬೇಕಾಗಿತ್ತು ಎಂದು ಹೇಳಿ ಕೋಪಗೊಂಡು ಹೋದನು. 9-10 ಆ ಮೇಘವು ದೇವದರ್ಶನದ ಗುಡಾರದ ಬಳಿಯಿಂದ ಹೋದಾಗ, ಆಹಾ, ವಿುರ್ಯಾಮಳಿಗೆ ತೊನ್ನು ಹತ್ತಿದದರಿಂದ ಆಕೆಯ ಚರ್ಮ ಹಿಮದಂತೆ ಬೆಳ್ಳಗಾಗಿಹೋಗಿತ್ತು. ಆರೋನನು ಆಕೆಯನ್ನು ನೋಡಲಾಗಿ ಆಕೆಗೆ ತೊನ್ನು ಪ್ರಾಪ್ತವಾಯಿತೆಂದು ತಿಳುಕೊಂಡನು. 11 ಆಗ ಆರೋನನು ಮೋಶೆಗೆ - ಅಯ್ಯಾ, ನಾವು ವಿವೇಕವಿಲ್ಲದೆ ನಡೆದು ದೋಷಿಗಳಾದರೂ ಈ ದೋಷದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ; 12 ಅರ್ಧಮಾಂಸ ಕೊಳೆತು ಹೋಗಿ ಹುಟ್ಟಿದ ಶಿಶು ಶವದಂತೆ ಈಕೆ ಆಗಬಾರದು ಎಂದು ಬೇಡಿದನು. 13 ಆಗ ಮೋಶೆ ಯೆಹೋವನಿಗೆ - ದೇವಾ, ಆಕೆಯನ್ನು ವಾಸಿಮಾಡಬೇಕೆಂದು ಬೇಡುತ್ತೇನೆ ಎಂದು ಮೊರೆಯಿಟ್ಟನು. 14 ಅದಕ್ಕೆ ಯೆಹೋವನು - ತಂದೆ ಮುಖದ ಮೇಲೆ ಉಗುಳಿದರೆ ಆಕೆ ಹೇಗೂ ಏಳು ದಿವಸ ನಾಚಿಕೆಯಿಂದ ಮರೆಯಾಗುವದಿಲ್ಲವೇ; ಹಾಗಾದರೆ ಆಕೆ ಏಳು ದಿವಸ ಪಾಳೆಯದ ಹೊರಗೆ ಇರಬೇಕು; ತರುವಾಯ ನೀನು ಆಕೆಯನ್ನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು ಎಂದು ಉತ್ತರಕೊಟ್ಟನು. 15 ಆದಕಾರಣ ವಿುರ್ಯಾಮಳು ಏಳು ದಿನದವರೆಗೆ ಪಾಳೆಯದ ಹೊರಗೆ ಇರಬೇಕಾಯಿತು. ಆಕೆಯು ತಿರಿಗಿ ಸೇರಿಕೊಳ್ಳುವ ಪರ್ಯಂತರ ಇಸ್ರಾಯೇಲ್ಯರು ಪ್ರಯಾಣಮಾಡಲಿಲ್ಲ. 16 ತರುವಾಯ ಅವರು ಹಚೇರೋತಿನಿಂದ ಹೊರಟು ಪಾರಾನ್ ಅರಣ್ಯದಲ್ಲಿ ಇಳುಕೊಂಡರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India