ಅರಣ್ಯಕಾಂಡ 11 - ಕನ್ನಡ ಸತ್ಯವೇದವು J.V. (BSI)ತಬೇರದಲ್ಲಿ ಕೆಲವರು ಬೆಂಕಿಯಿಂದ ಸತ್ತದ್ದು; ಜನರ ಭಾರ ಹೆಚ್ಚಾಗಿದೆ ಎಂದು ಮೋಶೆ ಯೆಹೋವನಿಗೆ ಮೊರೆಯಿಟ್ಟದ್ದು; ಮೋಶೆಯ ಜೊತೆಯಲ್ಲಿರುವದಕ್ಕೆ ನೇವಿುಸಲ್ಪಟ್ಟ ಎಪ್ಪತ್ತು ಮಂದಿ ಹಿರಿಯರು ಪರವಶರಾಗಿ ಪ್ರವಾದಿಸಿದ್ದು; ಕಿಬ್ರೋತ್ ಹತಾವದಲ್ಲಿ ಮಾಂಸವನ್ನು ಅತ್ಯಾಶೆಯಿಂದ ತಿಂದು ಬಹು ಜನ ಸತ್ತದ್ದು 1 ಇಸ್ರಾಯೇಲ್ಯರು ತಮಗೆ ದುರವಸ್ಥೆ ಪ್ರಾಪ್ತವಾಯಿತೆಂದು ಯೆಹೋವನಿಗೆ ಕೇಳಿಸುವಂತೆ ಗುಣುಗುಟ್ಟುವವರಾದರು. ಅದಕ್ಕೆ ಆತನು ಕೋಪಗೊಂಡು ಅವರ ಮಧ್ಯದಲ್ಲಿ ಬೆಂಕಿಯನ್ನುಂಟುಮಾಡಿದ್ದರಿಂದ ಪಾಳೆಯದ ಕಡೇ ಭಾಗದಲ್ಲಿದ್ದವರು ಸುಟ್ಟುಹೋದರು. 2 ಆಗ ಜನರು ಮೋಶೆಯ ಬಳಿಗೆ ಬಂದು ಮೊರೆಯಿಟ್ಟರು. ಮೋಶೆ ಅವರಿಗೋಸ್ಕರ ಯೆಹೋವನಿಗೆ ಪ್ರಾರ್ಥಿಸಲಾಗಿ ಆ ಬೆಂಕಿ ಆರಿಹೋಯಿತು. 3 ಯೆಹೋವನು ಉಂಟುಮಾಡಿದ ಬೆಂಕಿ ಅವರ ಮಧ್ಯದಲ್ಲಿ ಉರಿದದ್ದರಿಂದ ಆ ಸ್ಥಳಕ್ಕೆ ತಬೇರ ಎಂದು ಹೆಸರಾಯಿತು. 4 ಅವರ ಮಧ್ಯದಲ್ಲಿದ್ದ ಇತರ ಜನರು ಮಾಂಸವನ್ನು ಆಶಿಸಿದರು. ಇಸ್ರಾಯೇಲ್ಯರು ಕೂಡ ತಿರಿಗಿ ಅತ್ತುಕೊಂಡು - ಮಾಂಸವು ನಮಗೆ ಹೇಗೆ ಲಭಿಸೀತು; 5 ಐಗುಪ್ತದೇಶದಲ್ಲಿ ನಾವು ಬಿಟ್ಟಿಯಾಗಿ ತಿನ್ನುತ್ತಿದ್ದ ಮೀನು, ಸವತೆಕಾಯಿ, ಕರ್ಬೂಜು, ಉಳ್ಳಿಗಡ್ಡೆ, ನೀರುಳ್ಳಿ, ಬೆಳ್ಳುಳ್ಳಿ ಇವು ನೆನಪಿಗೆ ಬರುತ್ತವಲ್ಲಾ; 6 ಇಲ್ಲಿಯಾದರೋ ನಮ್ಮ ಜೀವ ಬತ್ತಿಹೋಯಿತು; ಈ ಮನ್ನವೇ ಹೊರತು ನಮಗೆ ಇನ್ನೇನೂ ಸಿಕ್ಕಲಿಕ್ಕಿಲ್ಲ ಅಂದುಕೊಳ್ಳುತ್ತಿದ್ದರು. 7 ಆ ಮನ್ನವು ಕೊತ್ತುಂಬರಿ ಕಾಳಿನಂತಿತ್ತು; ಬದೋಲಖಧೂಪದಂತೆ ಕಾಣಿಸಿತು. 8 ಜನರು ತಿರುಗಾಡುತ್ತಾ ಅದನ್ನು ಕೂಡಿಸಿಕೊಂಡು ಬೀಸುವ ಕಲ್ಲುಗಳಿಂದ ಬೀಸಿ ಇಲ್ಲವೆ ಒರಳಲ್ಲಿ ಕುಟ್ಟಿ ಪಾತ್ರೆಗಳಲ್ಲಿ ಬೇಯಿಸಿ ರೊಟ್ಟಿಗಳನ್ನು ಮಾಡಿಕೊಂಡರು. 9 ಅದರ ರುಚಿ ಎಣ್ಣೆ ಬೆರಸಿ ಮಾಡಿದ ಭಕ್ಷ್ಯಗಳಂತಿತ್ತು. ರಾತ್ರಿಕಾಲದಲ್ಲಿ ಮಂಜು ಪಾಳೆಯದಲ್ಲಿ ಬೀಳುತ್ತಿದ್ದಾಗ ಅದರೊಂದಿಗೆ ಮನ್ನವೂ ಬೀಳುತ್ತಿತ್ತು. 10 ಎಲ್ಲಾ ಕುಟುಂಬದವರೂ ತಮ್ಮ ತಮ್ಮ ಡೇರೇಬಾಗಲುಗಳಲ್ಲಿ ನಿಂತು ಅಳುತ್ತಿರಲಾಗಿ ಆ ಶಬ್ದವು ಮೋಶೆಗೆ ಕೇಳಿಸಿತು. ಆಗ ಯೆಹೋವನು ಬಹಳ ಕೋಪಗೊಂಡನು. ಮೋಶೆಗೆ ಬೇಸರವಾಯಿತು. 11 ಆಗ ಮೋಶೆ ಯೆಹೋವನಿಗೆ - ಈ ಜನರನ್ನು ನಡಿಸಿಕೊಂಡು ಹೋಗುವ ಭಾರವನ್ನು ನನ್ನ ಮೇಲೆ ಹೊರಿಸಿ ನೀನು ಯಾಕೆ ನಿನ್ನ ದಾಸನಿಗೆ ಅಪಕಾರ ಮಾಡುತ್ತೀಯೇ? 12 ನಿನ್ನ ದಯೆಗೆ ನಾನು ಯಾಕೆ ಅಪಾತ್ರನಾದೆ? ನೀನು ನನಗೆ - ಕೂಸನ್ನು ಎತ್ತಿಕೊಂಡು ಹೋಗುವವನಂತೆ ಈ ಜನವನ್ನು ಉಡಿಲಲ್ಲಿಟ್ಟುಕೊಂಡು ನಾನು ಅವರ ಪಿತೃಗಳಿಗೆ ಪ್ರಮಾಣಮಾಡಿ ಕೊಟ್ಟ ದೇಶಕ್ಕೆ ಒಯ್ಯಿ ಎಂದು ಹೇಳುತ್ತೀಯಲ್ಲಾ. ನಾನು ಇವರಿಗೆ ಹೆತ್ತ ತಾಯಿಯೋ? 13 ಇವರು ನನ್ನ ಬಳಿಗೆ ಅಳುತ್ತಾ ಬಂದು - ಮಾಂಸವನ್ನು ನಮಗೆ ತಿನ್ನಲಿಕ್ಕೆ ಕೊಡು ಎಂದು ಕೇಳಿಕೊಳ್ಳುತ್ತಾರಲ್ಲಾ; ಇಷ್ಟು ಜನಕ್ಕೆ ಬೇಕಾದ ಮಾಂಸವು ನನಗೆ ಎಲ್ಲಿಂದ ದೊರಕೀತು. 14 ಇಷ್ಟು ಜನರ ಭಾರವನ್ನು ನಾನೊಬ್ಬನೇ ಹೊರುವದು ಅಸಾಧ್ಯ; ಅದು ನನ್ನ ಶಕ್ತಿಗೆ ಮೀರಿದ ಕೆಲಸ. 15 ನೀನು ಹೀಗೆ ಮಾಡುವದಕ್ಕಿಂತಲೂ ನನ್ನನ್ನು ಈಗಲೇ ಕೊಂದುಹಾಕಿಬಿಟ್ಟರೆ ಉಪಕಾರ; ನನಗಾಗುವ ದುರವಸ್ಥೆಯನ್ನು ನಾನು ನೋಡಲಾರೆನು ಅಂದನು. 16 ಆಗ ಯೆಹೋವನು ಮೋಶೆಗೆ ಹೇಳಿದ್ದೇನಂದರೆ - ಇಸ್ರಾಯೇಲ್ಯರಲ್ಲಿ ಹಿರಿಯರೆಂದೂ ಅಧಿಪತಿಗಳೆಂದೂ ನೀನು ತಿಳುಕೊಂಡಿರುವ ಎಪ್ಪತ್ತು ಮಂದಿಯನ್ನು ಕೂಡ ಕರಿಸಿ ದೇವದರ್ಶನದ ಗುಡಾರದ ಬಾಗಲಿಗೆ ಕರತಂದು ಅಲ್ಲೇ ನಿನ್ನೊಡನೆ ನಿಲ್ಲಿಸಿಕೋ. 17 ನಾನು ಅಲ್ಲಿಗೆ ಇಳಿದುಬಂದು ನಿನ್ನ ಸಂಗಡ ಮಾತಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿರುವ ಆತ್ಮೀಯ ವರಗಳಲ್ಲಿ ಕೆಲವನ್ನು ಅವರಿಗೂ ಪಾಲುಕೊಡುವೆನು. ಆಗ ನೀನೊಬ್ಬನೇ ಈ ಜನರ ಭಾರವನ್ನು ವಹಿಸಬೇಕಾಗಿರುವದಿಲ್ಲ; ನಿನ್ನ ಜೊತೆಯಲ್ಲಿ ಇವರೂ ವಹಿಸುವರು. 18 ಅದಲ್ಲದೆ ಇಸ್ರಾಯೇಲ್ಯರಿಗೆ ಹೀಗೆ ಹೇಳು - ನಾಳೆಗೆ ನಿಮ್ಮನ್ನು ಶುದ್ಧಪಡಿಸಿಕೊಳ್ಳಿರಿ; ನಾಳೆ ನಿಮಗೆ ಮಾಂಸಾಹಾರವು ದೊರೆಯುವದು. ನೀವು ಯೆಹೋವನಿಗೆ ಕೇಳಿಸುವಂತೆ - ನಮಗೆ ಮಾಂಸವನ್ನು ಕೊಡುವವರೇ ಇಲ್ಲ ; ಐಗುಪ್ತದೇಶದಲ್ಲಿ ಎಷ್ಟೋ ಸುಖವಾಗಿದ್ದೆವಲ್ಲಾ ಎಂದು ಅಳುತ್ತಾ ಹೇಳಿದ್ದರಿಂದ ಯೆಹೋವನೇ ನಿಮಗೆ ಮಾಂಸವನ್ನು ತಿನ್ನಲಿಕ್ಕೆ ಕೊಡುವನು. 19 ನಿಮ್ಮ ಮಧ್ಯದಲ್ಲಿರುವ ಯೆಹೋವನನ್ನು ನೀವು ಉಲ್ಲಂಘಿಸಿ - ಅಯ್ಯೋ! ನಾವು ಐಗುಪ್ತದೇಶವನ್ನು ಬಿಟ್ಟುಬಂದದ್ದು ಮೋಸವಾಯಿತೆಂದು ಆತನ ಮುಂದೆ ಅತ್ತದ್ದರಿಂದ ನೀವು ಒಂದು ದಿನವಲ್ಲ, ಎರಡು ದಿನವಲ್ಲ, ಐದು ದಿನವಲ್ಲ, ಹತ್ತು ದಿನವಲ್ಲ, ಇಪ್ಪತ್ತು ದಿನವಲ್ಲ, 20 ಪೂರಾ ಒಂದು ತಿಂಗಳು ಮಾಂಸವನ್ನು ಊಟಮಾಡುವಿರಿ. ಅದು ಓಕರಿಕೆಯಾಗಿ ನಿಮ್ಮ ಮೂಗಿನಲ್ಲಿ ಹೊರಟು ನಿಮಗೆ ಅಸಹ್ಯವಾಗುವ ತನಕ ಅದನ್ನು ಊಟಮಾಡುವಿರಿ ಅಂದನು. 21 ಅದಕ್ಕೆ ಮೋಶೆ - ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು; ಆದಾಗ್ಯೂ ನೀನು - ಇವರು ಪೂರಾ ಒಂದು ತಿಂಗಳು ತಿನ್ನುವಷ್ಟು ಮಾಂಸವನ್ನು ಕೊಡುತ್ತೇನೆ ಎಂದು ಹೇಳಿದ್ದೀ. 22 ಅವರಿಗೆ ಬೇಕಾದಷ್ಟು ಸಿಕ್ಕುವಂತೆ ನಾವು ಆಡುಕುರಿಗಳನ್ನೂ ದನಗಳನ್ನೂ ಕೊಯ್ಯಬೇಕನ್ನುತ್ತಿಯೋ? ಇಲ್ಲವೆ ಸಮುದ್ರದಲ್ಲಿರುವ ಎಲ್ಲಾ ಮೀನುಗಳನ್ನೂ ಹಿಡುಕೊಳ್ಳಬೇಕೋ? ಎಂದು ಹೇಳಲಾಗಿ 23 ಯೆಹೋವನು ಅವನಿಗೆ - ಯೆಹೋವನ ಕೈ ಮೋಟುಗೈಯೋ; ನನ್ನ ಮಾತು ನೆರವೇರುತ್ತದೋ ಇಲ್ಲವೋ ಈಗ ನೀನು ನೋಡುವಿ ಎಂದು ಹೇಳಿದನು. 24 ಮೋಶೆ ಹೊರಟು ಹೋಗಿ ಯೆಹೋವನ ಮಾತುಗಳನ್ನು ಜನರಿಗೆ ತಿಳಿಸಿದನು. ಮತ್ತು ಅವನು ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದಾಗ 25 ಯೆಹೋವನು ಆ ಮೇಘದಲ್ಲಿ ಇಳಿದು ಬಂದು ಅವನ ಸಂಗಡ ಮಾತಾಡಿ ಅವನಲ್ಲಿದ್ದ ಆತ್ಮೀಯವರಗಳಲ್ಲಿ ಆ ಎಪ್ಪತ್ತು ಮಂದಿ ಹಿರಿಯರಿಗೂ ಪಾಲುಕೊಟ್ಟನು; ಆ ವರಗಳು ಅವರಿಗೆ ದೊರಕಿದಾಗ ಅವರು ಪರವಶರಾಗಿ ಪ್ರವಾದಿಸಿದರು; ಆಮೇಲೆ ಅವರು ತಿರಿಗಿ ಪ್ರವಾದಿಸಲಿಲ್ಲ. 26 ಆದರೆ ಎಲ್ದಾದ್, ಮೇದಾದ್ ಎಂಬವರಿಬ್ಬರು ಪಾಳೆಯದೊಳಗೆ ನಿಂತಿದ್ದರು. ಅವರ ಹೆಸರುಗಳು ಬರೆಯಲ್ಪಟ್ಟಿದ್ದಾಗ್ಯೂ ಅವರು ದೇವದರ್ಶನದ ಗುಡಾರಕ್ಕೆ ಹೊರಟುಹೋಗಲಿಲ್ಲ. ಆ ಆತ್ಮೀಯವರಗಳು ಅವರಿಗೂ ದೊರೆತದರಿಂದ ಅವರು ಪಾಳೆಯದೊಳಗೆ ಪರವಶರಾಗಿ ಪ್ರವಾದಿಸಿದರು. 27 ಹೀಗಿರಲು ಒಬ್ಬ ಹುಡುಗನು ಮೋಶೆಯ ಬಳಿಗೆ ಓಡಿಬಂದು - ಎಲ್ದಾದ್ ಮೇದಾದರು ಪಾಳೆಯದಲ್ಲಿ ಪರವಶರಾಗಿ ಪ್ರವಾದಿಸುತ್ತಿದ್ದಾರೆಂದು ತಿಳಿಸಲಾಗಿ 28 ಯೌವನದಿಂದ ಮೋಶೆಗೆ ಶಿಷ್ಯನಾದ ನೂನನ ಮಗ ಯೆಹೋಶುವನು ಮೋಶೆಗೆ - ಸ್ವಾಮೀ, ಅವರಿಗೆ ಬೇಡವೆನ್ನಬೇಕು ಎಂದು ಹೇಳಿದನು. 29 ಅದಕ್ಕೆ ಮೋಶೆ - ನನ್ನ ಗೌರವವನ್ನು ಕಾಪಾಡಬೇಕೆಂದಿದ್ದೀಯೇ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮೀಯವರಗಳನ್ನು ಹೊಂದಿದವರೂ ಪ್ರವಾದಿಸುವರೂ ಆದರೆ ಎಷ್ಟೋ ಒಳ್ಳೇದು ಅಂದನು. 30 ತರುವಾಯ ಮೋಶೆಯೂ ಇಸ್ರಾಯೆಲ್ಯರ ಹಿರಿಯರೂ ಪಾಳೆಯಕ್ಕೆ ಬಂದುಬಿಟ್ಟರು. 31 ಆಗ ಯೆಹೋವನ ಬಳಿಯಿಂದ ಗಾಳಿಹೊರಟು ಸಮುದ್ರದಿಂದ ಲಾವಕ್ಕಿಗಳನ್ನು ಹೊಡೆದುಕೊಂಡು ಪಾಳೆಯದ ಸುತ್ತಲೂ ಒಂದು ದಿನದ ಪ್ರಯಾಣದಷ್ಟು ದೂರದವರೆಗೆ ಭೂವಿುಗಿಂತ ಎರಡು ಮೊಳ ಎತ್ತರದಲ್ಲಿ ಹಾರುತ್ತಾ ಬರುವಂತೆ ಮಾಡಿತು. 32 ಇಸ್ರಾಯೇಲ್ಯರು ಎದ್ದು ಆ ದಿನ ಹಗಲಿರುಳೂ ಮರುದಿನ ಹಗಲೂ ಆ ಲಾವಕ್ಕಿಗಳನ್ನು ಕೂಡಿಸಿಕೊಳ್ಳುತ್ತಿದ್ದರು; ಸ್ವಲ್ಪವಾಗಿ ಕೂಡಿಸಿಕೊಂಡವರು ಹದಿನೆಂಟು ಖಂಡುಗ ಕೂಡಿಸಿದರು. ಅವುಗಳನ್ನು ಪಾಳೆಯದ ಸುತ್ತಲೂ ಹರವಿ ಒಣಗಿಸಿಕೊಂಡರು. 33 ಆದರೆ ಅವರು ಆ ಮಾಂಸವನ್ನು ಇನ್ನೂ ಆಹಾರಮಾಡಿಕೊಳ್ಳುತ್ತಿರುವಾಗ ಅದು ಮುಗಿದುಹೋಗುವದರೊಳಗಾಗಿಯೇ ಯೆಹೋವನು ಅವರ ಮೇಲೆ ಕೋಪಗೊಂಡು ಬಹಳ ಜನರನ್ನು ಘೋರವ್ಯಾಧಿಯಿಂದ ಸಾಯಿಸಿದನು. 34 ಆಶೆಪಟ್ಟವರನ್ನು ಅಲ್ಲಿ ಹೂಳಿಟ್ಟದರಿಂದ ಆ ಸ್ಥಳಕ್ಕೆ ಕಿಬ್ರೋತ್ ಹತಾವಾ ಎಂದು ಹೆಸರಾಯಿತು. 35 ತರುವಾಯ ಇಸ್ರಾಯೇಲ್ಯರು ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿಗೆ ಬಂದು ಅಲ್ಲಿ ಇಳುಕೊಂಡರು. |
Kannada J.V. Bible © The Bible Society of India, 2016.
Used by permission. All rights reserved worldwide.
Bible Society of India