Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -

ಅರಣ್ಯಕಾಂಡ 10 - ಕನ್ನಡ ಸತ್ಯವೇದವು J.V. (BSI)


ದೇವಸ್ಥಾನದ ಬೆಳ್ಳಿತುತೂರಿಗಳ ವಿಷಯ

1 ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನಂದರೆ -

2 ನೀನು ಬೆಳ್ಳಿಯ ತಗಡಿನಿಂದ ಎರಡು ತುತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಕೂಡಕರಿಸುವದಕ್ಕೂ ದಂಡುಗಳನ್ನು ಹೊರಡಿಸುವದಕ್ಕೂ ಅವುಗಳನ್ನು ಉಪಯೋಗಿಸಬೇಕು.

3 ನೀನು ಎರಡನ್ನೂ ಊದಿಸುವಾಗ ಜನಸಮೂಹದರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಲಿಗೆ ಕೂಡಿಬರಬೇಕು.

4 ನೀನು ಒಂದನ್ನು ಮಾತ್ರ ಊದಿಸಿದರೆ ಇಸ್ರಾಯೇಲ್ಯರಲ್ಲಿ ಸಹಸ್ರಾಧಿಪತಿಗಳಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು.

5 ನೀನು ಆರ್ಭಟವಾಗಿ ಊದಿಸುವಾಗ ಮೂಡಣ ದಿಕ್ಕಿನ ದಂಡುಗಳು ಹೊರಡಬೇಕು.

6 ಎರಡನೆಯ ಸಾರಿ ಆರ್ಭಟವಾಗಿ ಊದಿಸುವಾಗ ತೆಂಕಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣಹೊರಡಬೇಕಾದಾಗ ಆರ್ಭಟವಾಗಿಯೇ ಊದಿಸಬೇಕು.

7 ಜನಸಮೂಹದವರು ಕೂಡಿಬರಬೇಕಾದಾಗ ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬೇಕಾಗಿಲ್ಲ.

8 ಆರೋನನ ವಂಶಸ್ಥರಾದ ಯಾಜಕರೇ ಆ ತುತೂರಿಗಳನ್ನು ಊದಬೇಕು; ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತನಿಯಮ.

9 ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಉಪದ್ರವಪಡಿಸುವ ಶತ್ರುಗಳನ್ನು ಎದುರಿಸುವದಕ್ಕಾಗಿ ಯುದ್ಧಕ್ಕೆ ಹೊರಡುವಾಗ ಆ ತುತೂರಿಗಳನ್ನು ಆರ್ಭಟವಾಗಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಕ್ಕೆ ತಂದುಕೊಂಡು ಶತ್ರುಗಳ ಕೈಯಿಂದ ಬಿಡಿಸುವನು.

10 ಇದಲ್ಲದೆ ನೀವು ಉತ್ಸವ ಕಾಲಗಳಲ್ಲಿಯೂ ಹಬ್ಬಗಳಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸರ್ವಾಂಗಹೋಮಗಳನ್ನೂ ಸಮಾಧಾನ ಯಜ್ಞಗಳನ್ನೂ ಸಮರ್ಪಿಸುವಾಗ ಆ ತುತೂರಿಗಳನ್ನು ಊದಿಸಬೇಕು. ಆ ಧ್ವನಿ ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವದು; ನಾನು ನಿಮ್ಮ ದೇವರಾದ ಯೆಹೋವನು.


ಅರಣ್ಯಪ್ರಯಾಣದಲ್ಲಿ ನಡೆದ ಸಂಗತಿಗಳು ( 10.11—21.35 ) ಇಸ್ರಾಯೇಲ್ಯರು ಸೈನ್ಯಸೈನ್ಯವಾಗಿ ಹೊರಟು ಸೀನಾಯಿ ಅರಣ್ಯವನ್ನು ಬಿಟ್ಟುಬಿಟ್ಟದ್ದು

11 ಎರಡನೆಯ ವರುಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ದೇವದರ್ಶನದ ಗುಡಾರದ ಮೇಲಿದ್ದ ಮೇಘವು ಮೇಲಕ್ಕೆ ಎದ್ದದರಿಂದ

12 ಇಸ್ರಾಯೇಲ್ಯರು ಸೀನಾಯಿ ಅರಣ್ಯವನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣಮಾಡಿದರು. ತರುವಾಯ ಆ ಮೇಘವು ಪಾರಾನ್ ಅರಣ್ಯದಲ್ಲಿ ನಿಂತಿತು.

13 ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ರೀತಿಯಲ್ಲಿ ಅವರು ಪ್ರಯಾಣ ಮಾಡಿದ್ದು ಇದು ಮೊದಲನೆಯ ಸಾರಿ.

14 ಮುಂಭಾಗದಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕನು ಅಮ್ಮೀನಾದಾಬನ ಮಗನಾದ ನಹಶೋನನು.

15 ಇಸ್ಸಾಕಾರ್ ಕುಲದ ಸೇನಾನಾಯಕನು ಚೂವಾರನ ಮಗನಾದ ನೆತನೇಲನು.

16 ಜೆಬುಲೂನ್ ಕುಲದ ಸೇನಾನಾಯಕನು ಹೇಲೋನನ ಮಗನಾದ ಎಲೀಯಾಬನು.

17 ತರುವಾಯ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನ್ಯರೂ ಮೆರಾರೀಯರೂ ಅದನ್ನು ಹೊತ್ತುಕೊಂಡು ಹೊರಟರು.

18 ಆಮೇಲೆ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕನು ಶೆದೇಯೂರನ ಮಗನಾದ ಎಲೀಚೂರನು.

19 ಸಿಮೆಯೋನ್ ಕುಲದ ಸೇನಾನಾಯಕನು ಚೂರೀಷದ್ದೈಯ ಮಗನಾದ ಶೆಲುಮೀಯೇಲನು.

20 ಗಾದ್ ಕುಲದ ಸೇನಾನಾಯಕನು ದೆಗೂವೇಲನ ಮಗನಾದ ಎಲ್ಯಾಸಾಫನು.

21 ಅವರ ಹಿಂದೆ ಕೆಹಾತ್ಯರು ದೇವಸ್ಥಾನದ ಸಾಮಾನುಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ವಿುಕ್ಕ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.

22 ಆಮೇಲೆ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕನು ಅಮ್ಮೀಹೂದನ ಮಗನಾದ ಎಲೀಷಾಮನು.

23 ಮನಸ್ಸೆ ಕುಲದ ಸೇನಾನಾಯಕನು ಪೆದಾಚೂರನ ಮಗನಾದ ಗಮ್ಲೀಯೇಲನು.

24 ಬೆನ್ಯಾಮೀನ್ ಕುಲದ ಸೇನಾನಾಯಕನು ಗಿದ್ಯೋನಿಯ ಮಗನಾದ ಅಬೀದಾನನು.

25 ಆಮೇಲೆ ಎಲ್ಲಾ ದಂಡುಗಳ ಹಿಂಭಾಗದಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕನು ಅಮ್ಮೀಷದ್ದೈಯ ಮಗನಾದ ಅಹೀಗೆಜೆರನು.

26 ಆಶೇರ್ ಕುಲದ ಸೇನಾನಾಯಕನು ಒಕ್ರಾನನ ಮಗನಾದ ಪಗೀಯೇಲನು.

27 ನಫ್ತಾಲಿ ಕುಲದ ಸೇನಾನಾಯಕನು ಏನಾನನ ಮಗನಾದ ಅಹೀರನು.

28 ಈ ರೀತಿಯಲ್ಲಿ ಇಸ್ರಾಯೇಲ್ಯರು ಸೈನ್ಯ ಸೈನ್ಯವಾಗಿ ಹೊರಟು ಪ್ರಯಾಣಮಾಡಿದರು.


ಮೋಶೆ ತನ್ನ ಮಾವನನ್ನು ದಾರಿತೋರಿಸುವದಕ್ಕೆ ಬರಬೇಕೆಂದು ಬೇಡಿಕೊಂಡದ್ದು ಯೆಹೋವನ ಮಂಜೂಷವು ಮುಂದಾಗಿ ಹೋದದ್ದು

29 ಮೋಶೆ ತನ್ನ ಮಾವನಾಗಿದ್ದ ವಿುದ್ಯಾನ್ಯನಾದ ರೆಗೂವೇಲನ ಮಗನಾದ ಹೋಬಾಬನಿಗೆ - ಯೆಹೋವನು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣಮಾಡುತ್ತಾ ಇದ್ದೇವೆ. ಇಸ್ರಾಯೇಲ್ಯರಿಗೆ ಮೇಲನ್ನುಂಟುಮಾಡುತ್ತೇನೆಂದು ಯೆಹೋವನು ತಾನೇ ಹೇಳಿದ್ದಾನೆ. ಆದದರಿಂದ ನೀನು ನಮ್ಮ ಜೊತೆಯಲ್ಲಿ ಬಾ; ನವ್ಮಿುಂದ ನಿನಗೂ ಮೇಲುಂಟಾಗುವದೆಂದು ಹೇಳಿದನು.

30 ಅದಕ್ಕೆ ಅವನು - ನಾನು ಬರುವದಿಲ್ಲ; ನನ್ನ ಸ್ವದೇಶಕ್ಕೆ, ಸ್ವಜನರ ಬಳಿಗೆ ಹೋಗುತ್ತೇನೆ ಅಂದನು.

31 ಆದರೆ ಮೋಶೆ ಅವನಿಗೆ - ನಮ್ಮನ್ನು ಬಿಟ್ಟು ಹೋಗಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ; ಈ ಅರಣ್ಯದಲ್ಲಿ ಡೇರೆಗಳನ್ನು ಹಾಕುವ ಸ್ಥಳಗಳು ನಿನಗೇ ಗೊತ್ತಿರುವದರಿಂದ ನೀನು ನಮಗೆ ಕಣ್ಣಿನಂತೆ ಇರಬೇಕು;

32 ನೀನು ನಮ್ಮ ಸಂಗಡ ಬಂದರೆ ಯೆಹೋವನು ನಮಗೆ ಮಾಡುವ ಮೇಲನ್ನೆಲ್ಲಾ ನಾವು ನಿನಗೂ ಉಂಟಾಗುವಂತೆ ಮಾಡುವೆವು ಎಂದು ಹೇಳಿದನು.

33 ಅವರು ಯೆಹೋವನ ಬೆಟ್ಟವನ್ನು ಬಿಟ್ಟು ಮೂರು ದಿನದ ಪ್ರಯಾಣದಷ್ಟು ದೂರ ಹೋದರು. ಇಳುಕೊಳ್ಳತಕ್ಕ ಸ್ಥಳವನ್ನು ನೋಡುವದಕ್ಕೋಸ್ಕರ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಮೂರು ದಿವಸ ಅವರ ಮುಂದಾಗಿ ಹೋಗುತ್ತಿತ್ತು.

34 ಅವರು ಪಾಳೆಯದಿಂದ ಹೊರಡುವಾಗ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಅವರ ಮೇಲೆ ಇತ್ತು.

35 ಯೆಹೋವನ ಮಂಜೂಷವು ಹೊರಡುವಾಗ ಮೋಶೆ - ಯೆಹೋವನೇ, ಎದ್ದು ಹೊರಡೋಣವಾಗಲಿ; ನಿನ್ನ ವೈರಿಗಳು ಚದರಿಹೋಗಲಿ; ನಿನ್ನ ಹಗೆಗಾರರು ಬೆಂಗೊಟ್ಟು ಓಡಿಹೋಗಲಿ ಎಂದು ಹೇಳುವನು.

36 ಅದು ನಿಂತಾಗ ಅವನು - ಯೆಹೋವನೇ, ಇಸ್ರಾಯೇಲ್ಯರ ಲಕ್ಷಾಂತರ ಕುಟುಂಬಗಳ ಮಧ್ಯದಲ್ಲಿ ತಿರಿಗಿ ಬರೋಣವಾಗಲಿ ಎಂದು ಹೇಳುವನು.

Kannada J.V. Bible © The Bible Society of India, 2016.

Used by permission. All rights reserved worldwide.

Bible Society of India
ನಮ್ಮನ್ನು ಅನುಸರಿಸಿ:



ಜಾಹೀರಾತುಗಳು